ಹಸೆಮಣೆ ಏರಬೇಕಿದ್ದ ಯುವತಿ ಸೇರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ಡೆತ್ನೋಟ್ನಲ್ಲಿ ಬಯಲಾಯ್ತು ಅಸಲಿ ಸತ್ಯ
ಮೈಸೂರು ಜಿಲ್ಲೆಯಲ್ಲಿ ಅತ್ಯಂತ ಕರುಣಾಜನಕ ಘಟನೆಯೊಂದು ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ನೇಣಿಗೆ ಶರಣಾಗಿದ್ದಾರೆ. ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಇಡೀ ಗ್ರಾಮವೇ ಕಣ್ಣೀರಿನಲ್ಲಿ ಮುಳುಗಿದೆ. ಬ್ಲ್ಯಾಕ್ಮೇಲ್ ಹಾಗೂ ಮಾನಸಿಕ ಕಿರುಕುಳವೇ ಈ ಆತ್ಮಹತ್ಯೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಮನೆಯ ಮುಖ್ಯಸ್ಥ ಶಿವಣ್ಣ, ಅವರ ಪತ್ನಿ ನಾಗರತ್ನ ಹಾಗೂ ಮಗಳು ರಕ್ಷಿತಾ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಮೂವರೂ ತಮ್ಮ ನಿವಾಸದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಡೆತ್ನೋಟ್ನಲ್ಲಿ ಏನಿದೆ?
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರಿಗೆ ಮಹತ್ವದ 'ಡೆತ್ ನೋಟ್ ಒಂದು ಲಭ್ಯವಾಗಿದೆ. ಮೃತರು ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿರುವ ಪತ್ರದಲ್ಲಿ ಗ್ರಾಮದ ಉಲ್ಲಾಸ್ ಗೌಡ ಎಂಬ ಯುವಕನ ಹೆಸರನ್ನು ಉಲ್ಲೇಖಿಸಿದ್ದಾರೆ. ಮಗಳು ಈ ಹಿಂದೆ ಕಳುಹಿಸಿದ್ದ ಸಂದೇಶಗಳು ಹಾಗೂ ಫೋಟೋಗಳನ್ನು ದುರುಪಯೋಗಪಡಿಸಿಕೊಂಡು ಉಲ್ಲಾಸ್ ಗೌಡ ಆಕೆಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಅಲ್ಲದೆ ಇತ್ತೀಚೆಗಷ್ಟೇ ಮಗಳಿಗೆ ಮದುವೆ ನಿಶ್ಚಯವಾಗಿದ್ದು, ಆಕೆಯ ಭಾವಿ ಪತಿಗೂ ಈ ಫೋಟೋಗಳನ್ನು ಕಳುಹಿಸಿ ಮದುವೆ ಮುರಿಯಲು ಯತ್ನಿಸಿದ್ದ ಎನ್ನಲಾಗಿದೆ. ಇದರಿಂದ ನೊಂದ ಇಡೀ ಕುಟುಂಬ ಈ ಕಠಿಣ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಟಿ.ನರಸೀಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಲಭ್ಯವಾಗಿರುವ ಡೆತ್ನೋಟ್ ಆಧಾರದ ಮೇಲೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಆರೋಪಿ ಉಲ್ಲಾಸ್ ಗೌಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಯುವತಿಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿದ್ದರಿಂದ, ಆಕೆಯ ಬದುಕಿನೊಂದಿಗೆ ಆಟವಾಡಲು ಮುಂದಾದ ಉಲ್ಲಾಸ್ ಈ ಕ್ರೂರ ಹಾದಿ ತುಳಿದಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಮದುವೆಗೆ ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿದ್ದವು. ಆದರೆ ರಕ್ಷಿತಾ ಈ ಹಿಂದೆ ತನಗೆ ಕಳುಹಿಸಿದ್ದ ಖಾಸಗಿ ಫೋಟೋ ಹಾಗೂ ಸಂದೇಶಗಳನ್ನು ಉಲ್ಲಾಸ್ ಗೌಡ ಆಕೆಯ ಭಾವಿ ಪತಿಗೆ ಕಳುಹಿಸಿಕೊಟ್ಟಿದ್ದ. ಈ ಮೂಲಕ ಮದುವೆ ಮುರಿಯಲು ಆತ ಯತ್ನಿಸಿದ್ದಾನೆ. ಇದರಿಂದ ಗ್ರಾಮದಲ್ಲಿ ತಮ್ಮ ಇಡೀ ಕುಟುಂಬದ ಮಾನ-ಮರ್ಯಾದೆ ಹರಾಜಾಗಿದೆ ಎಂದು ತೀವ್ರವಾಗಿ ನೊಂದ ಶಿವಣ್ಣ, ನಾಗರತ್ನ ಹಾಗೂ ಮಗಳು ಈ ನಿರ್ಧಾರಕ್ಕೆ ಶರಣಾಗಿದ್ದಾರೆ. ಉಲ್ಲಾಸ್ ನೀಡಿದ ಮಾನಸಿಕ ಕಿರುಕುಳ ಮತ್ತು ಜೀವ ಬೆದರಿಕೆಯೇ ಈ ಸಾವುಗಳಿಗೆ ನೇರ ಕಾರಣ ಎಂದು ಕುಟುಂಬಸ್ಥರು ದೂರಿದ್ದಾರೆ.
ಘಟನೆಯಿಂದ ಕೆರಳಿರುವ ಕೆಂಪಯ್ಯನಹುಂಡಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯ ಆರೋಪಿ ಉಲ್ಲಾಸ್ ಗೌಡನನ್ನು ತಕ್ಷಣವೇ ಬಂಧಿಸುವವರೆಗೂ ಮೃತದೇಹಗಳ ಶವಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಯತ್ನಿಸಿದಾಗ ಗ್ರಾಮಸ್ಥರು ತಡೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ತೀವ್ರ ವಾಗ್ವಾದ ನಿರ್ಮಾಣವಾಗಿದೆ. ಸದ್ಯ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದು, ತನಿಖೆ ಮುಂದುವರಿದಿದೆ.












Click it and Unblock the Notifications