Video: ಬಾಲ್ಕನಿಯಲ್ಲಿ ಟಾಯ್ಲೆಟ್ ಅಳವಡಿಸಿದ ಮನೆ ಮಾಲೀಕ; ನೋಡಿ ದಂಗಾದ ಯುವತಿಯರು, ವೈರಲ್
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ಏರಿಕೆ ಆಗುತ್ತಿದೆ. ಅದರ ನಡುವೆ ಮನೆ ಬಾಡಿಗೆ ಪಡೆಯುವವರ ಸಂಖ್ಯೆಯು ಹೆಚ್ಚಿದೆ. ಸೂಕ್ತ ಮತ್ತು ಬಜೆಟ್ ಸ್ನೇಹಿ ಬಾಡಿಗೆ ಮನೆ ಹುಡುಕುವುದು ಒಂದು ದೊಡ್ಡ ಸವಾಲಾಗಿದೆ. ಉದ್ಯೋಗಿಗಳು ಮನೆ ಹುಡುಕುವಾಗ ಉತ್ತಮ ಗಾಳಿ, ಬೆಳಕು ಹಾಗೂ ಸುಂದರ ಬಾಲ್ಕನಿ ನಿರೀಕ್ಷಿಸುತ್ತಾರೆ. ಆದರೆ ಬೆಂಗಳೂರಿನ ಮನೆ ಮಾಲೀಕರೊಬ್ಬರು ಮಾಡಿರುವ ವಿಚಿತ್ರ ಪ್ರಯೋಗ ಮಾಡಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ನೆಟ್ಟಿಗರು ವಿಡಿಯೋ ನೋಡಿ ನಕ್ಕು ನಕ್ಕು ಸುಸ್ತಾಗುತ್ತಿದ್ದಾರೆ.
ತ್ರಿಶಾ ಎಂಬ ಯುವತಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ತಮಾಷೆಯಾಗಿದ್ದು, ಜೊತೆಗೆ ಆಘಾತಕಾರಿಯಾಗಿದೆ. ತ್ರಿಶಾ ಅವರು ತಮ್ಮ ಸ್ನೇಹಿತೆಯೊಂದಿಗೆ ಫ್ಲ್ಯಾಟ್ ಒಂದನ್ನು ವೀಕ್ಷಿಸಲು ತೆರಳಿದ್ದರು. ಆ ಮನೆ ಒಳಗಿನಿಂದ ಉತ್ತಮವಾಗಿ ವಿನ್ಯಾಸ ಹೊಂದಿದ್ದು ಕಂಡು ಬಂದಿದೆ. ಸಾಮಾನ್ಯವಾಗಿ ಎಲ್ಲರು ಮನೆ ನೋಡುವಂತೆ ನೋಡುತ್ತಾರೆ. ಅಡುಗೆ ಮನೆ, ರೂಮ್, ಹಾಲ್ ಎಲವನ್ನು ನೋಡುತ್ತಾರೆ. ಈ ಯುವತಿಯರು ಬಾಲ್ಕನಿಯ ಬಾಗಿಲು ತೆರೆದರೋ, ಅಲ್ಲಿನ ದೃಶ್ಯ ನೋಡುತ್ತಿದ್ದಂತೆ ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದಾರೆ. ಖಾಲಿ ಬಾಲ್ಕನಿ, ಬಟ್ಟೆ ಒಣಗಿಸುವ ಜಾಗ ನೋಡಿರುತ್ತೀರಾ ಆದರೆ ಈ ಮನೆಯಲ್ಲಿ ಬಾಲ್ಕನಿಯಲ್ಲಿ ಓಪನ್ ಶೌಚಾಲಯದ ಸೀಟ್ ಅಳವಡಿಸಲಾಗಿದ್ದು ಕಂಡು ಬಂದಿದೆ.

ಮನೆ ಬಾಲ್ಕನಿಯಲ್ಲಿ ಮುಚ್ಚು ಮರೆ ಇಲ್ಲದ ಟಾಯ್ಲೆಟ್!
ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆಗೆ ಸೃಷ್ಟಿಸಿರುವ ಈ ವಿಡಿಯೋದಲ್ಲಿ ಮನೆ ನೋಡುತ್ತಿರುವ ಯುವತಿಯರು ಬಾಲ್ಕನಿಗೆ ಬರುತ್ತಾರೆ. ಬಾಲ್ಕನಿ ಮಧ್ಯದಲ್ಲೇ ಈ ವೆಸ್ಟರ್ನ್ ಕಮೋಡ್ ಅಳವಡಿಸಲಾಗಿದೆ. ಯುವತಿಯರು ಈ ವಿಚಿತ್ರ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು, "ಬಾಲ್ಕನಿಯಲ್ಲಿ ಏನಿದೆ ಎಂದು ಕೊನೆವರೆಗೂ ನೋಡಿ" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಮುಚ್ಚು ಮರೆ ಇಲ್ಲದೇ ಟಾಯ್ಲೆಟ್ ಸ್ಥಳದಿಂದ ಇತರರ ಮನೆಯ ಟೆರೆಸ್ , ಬೇರೆಯವರ ಮನೆ ಕಿಟಕಿಗಳು ಕಾಣಿಸುತ್ತವೆ. ತ್ರಿಶಾ ಅವರು ವಿಡಿಯೋವನ್ನು ಹಂಚಿಕೊಂಡಿದ್ದು, ವೇಗವಾಗಿ ವಿಡಿಯೋ ವೈರಲ್ ಆಗಿದೆ.
ವಿಲಕ್ಷಣ ವಿನ್ಯಾಸ ಎಂದ ನೆಟ್ಟಿಗರು ಹೇಳಿದ್ದೇನು?
ಈ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ತಮಾಷೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಇದೆಂಥಾ ವೈವಿಧ್ಯಮಯ ವಿಚಿತ್ರ ಐಡಿಯಾ ಎಂದು ಕಾಮಿಡಿಯಾಗಿ ಪ್ರಶ್ನಿಸಿದ್ದಾರೆ. ಇದ್ಯಾವ ರೀತಿಯ ವಾಸ್ತುಶಿಲ್ಪಿ ಅಥವಾ ಈ ಆಲೋಚನೆ ಮಾಲೀಕನಿಗೆ ಹೇಗೆ ಬಂದಿರಬಹುದು ಎಂದು ಜನರು ಚರ್ಚಿಸುತ್ತಿದ್ದಾರೆ. ವಿಲಕ್ಷಣ ವಿನ್ಯಾಸ ಎಂದಿರುವ ನೆಟ್ಟಿಗರು ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯವಸ್ಥೆಯ ಬಗ್ಗೆ ಹಾಸ್ಯ ಮಾಡುತ್ತಿದ್ದಾರೆ.
ಇದು ಕೇವಲ ಸಾಮಾನ್ಯ ಬಾಲ್ಕನಿಯಲ್ಲ, ಅದ್ಭುತ ನೋಟ ಹಾಗೂ ಅತ್ಯುತ್ತಮ ಗಾಳಿ ಸೌಲಭ್ಯ ಹೊಂದಿರುವ ಐಷಾರಾಮಿ ಶೌಚಾಲಯ" ಎಂದು ನೆಟ್ಟಿಗರೊಬ್ಬರು ಲೇವಡಿ ಮಾಡಿದ್ದಾರೆ. ಈ ವಿಶಿಷ್ಟ ವೈಶಿಷ್ಟ್ಯದಿಂದಾಗಿ ಮನೆ ಮಾಲೀಕರು ಇನ್ನು ಮುಂದೆ ಬಾಡಿಗೆ ದರವನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಎರಡನೇಯ ಬಳಕೆದಾರರು ತಮಾಷೆ ವ್ಯಕ್ತಪಡಿಸಿದ್ದಾರೆ. ಕೆಲವರು ಈ ರೀತಿ ಶೌಚಾಲಯ ಬಳಕೆ ಮಾಡುವುದಾದರೂ ಹೇಗೆ? ಎಂದೆಲ್ಲ ಬಗೆ ಬಗೆಯ ಕಾಮಿಡಿ ಕಾಮೆಂಟ್ ಹಾಕಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ರಾಜಧಾನಿಯಲ್ಲಿ ಮನೆಗಳ ಬಾಡಿಗೆ ದಿನೇ ದಿನೇ ಗಗನಕ್ಕೇರುತ್ತಿವೆ. ಸೂಕ್ತ ಬೆಲೆಯ ಬಾಡಿಗೆ ಮನೆ ಹುಡುಕುವುದು ಸವಾಲಾಗಿದೆ. ಅದರಲ್ಲಿ ಕೆಲವು ಮನೆ ಮಾಲೀಕರ ವಿಚಿತ್ರ ಷರತ್ತುಗಳು ಇರುತ್ತವೆ. ಬ್ಯಾಚುಲರ್ಸ್‌ಗೆ ಮನೆ ಕೊಡುವುದಿಲ್ಲ, ಗದ್ದಲ ಮಾಡದಂತೆ, ನಾನ್ ವೆಜ್ ಮಾಡದಂತೆ ಹೀಗೆ ಅನೇಕ ನಿಯಮಗಳಿರುತ್ತವೆ. ಕೆಲವು ಅಸಹಜ ವಿನ್ಯಾಸದ ಮನೆಗಳಿಗೆ ಬಾಡಿಗೆಯೂ ಹೆಚ್ಚಿರುತ್ತದೆ. ಕೆಲವರಿಗೆ ಇದೆಲ್ಲವು ಮಾನಸಿಕ, ಆರ್ಥಿಕ ತಲೆನೋವು ತರುತ್ತಿವೆ. ಇದೀಗ ವೈರಲ್ ಆದ ವಿಡಿಯೋ ಬೆಂಗಳೂರಿನಲ್ಲಿ ಮನೆ ಬಾಡಿಗೆ ಹುಡುಕುವವರ ಪರದಾಟವನ್ನು ಹಾಸ್ಯಮಯವಾಗಿ ತೋರಿಸಿದಂತಿದೆ.













Click it and Unblock the Notifications