IMD Weather Forecast: ದೇಶದ ಈ ಭಾಗಗಳಲ್ಲಿ ಮುಂದಿನ ಜೂ.26ರವರೆಗೆ ಬಿರುಗಾಳಿ ಸಹಿತ ಮಳೆ
IMD Weather Forecast: ದೇಶಾದ್ಯಂತ ಮುಂಗಾರು ಮಳೆ ಸುರಿಸುವ ಮಾರುತಗಳು ಉತ್ತರ ಭಾರತದಾದ್ಯಂತ ಚಲಿಸುತ್ತಿವೆ. ಕಳೆದ ಎರಡು ವಾರಗಳಿಂದ ದುರ್ಬಲವಾಗಿದ್ದ ಮುಂಗಾರು ಮಳೆ ಮತ್ತೆ ಚುರುಕಾಗುವ ಲಕ್ಷಣ ಕಂಡು ಬಂದಿದೆ. ಇದು ಕೃಷಿ ವಲಯದಲ್ಲಿ ಹೊಸ ಭರವಸೆ ಮೂಡಿಸಿದೆ. ಕರ್ನಾಟಕ ಒಳಗೊಂಡಂತೆ ದೇಶದ ವಿವಿಧ ಭಾಗಗಳಲ್ಲಿ ಜೂನ್ 22 ರಿಂದ ಮುಂಗಾರು ಮಳೆ ಸಂಭವವಿದೆ. ದೇಶದ ಇತರ ಭಾಗಗಳಿಗೆ ಪರಿಣಾಮಕಾರಿಯಾಗಿ ಮುಂಗಾರು ಆವರಿಸುತ್ತಿವೆ. ಇದರೊಂದಿಗೆ ಅರಬ್ಬಿ ಸಮುದ್ರದ ಕರಾವಳಿ ಭಾಗಗಳು, ಮಹಾರಾಷ್ಟ್ರ, ತೆಲಂಗಾಣ, ಛತ್ತೀಸ್‌ಗಢ, ಒಡಿಶಾ, ಜಾರ್ಖಂಡ್ ಮತ್ತು ಬಿಹಾರದ ಕೆಲವು ಹೊಸ ಪ್ರದೇಶಗಳಿಗೂ ಮಳೆ ಸುರಿಯಲಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಮುಂಗಾರು ಸಂಪೂರ್ಣ ವಿಸ್ತರಣೆ
ಮುಂಗಾರು ಮಳೆ ಅಲಿಬಾಗ್, ಪುಣೆ, ನಿಜಾಮಾಬಾದ್, ದಂತೇವಾಡ, ಬಲಂಗೀರ್, ಸುಂದರ್‌ಗಢ್, ಚಾತ್ರಾ, ಗಯಾ ಮತ್ತು ಮುಜಾಫರ್‌ಪುರ್ ಮಾರ್ಗವಾಗಿ ಸಾಗಿದೆ. ಮುಂದಿನ 48 ಗಂಟೆಗಳ ಅವಧಿಯಲ್ಲಿ ಮಹಾರಾಷ್ಟ್ರದ ರಾಜಧಾನಿ ಮುಂಬೈ ಸೇರಿದಂತೆ ಹಲವು ಪ್ರಮುಖ ಭಾಗಗಳಿಗೆ ಮುಂಗಾರು ವಿಸ್ತರಿಸುತ್ತಿದೆ.

ಮುಂದಿನ ಎರಡು ದಿನಗಳಲ್ಲಿ ಅರಬ್ಬಿ ಸಮುದ್ರದ ಮಧ್ಯಭಾಗದ ಇನ್ನುಳಿದ ಭಾಗಗಳು, ತೆಲಂಗಾಣ ಮತ್ತು ಒಡಿಶಾದ ಸಂಪೂರ್ಣ ಪ್ರದೇಶಗಳಿಗೆ ಮುಂಗಾರು ಮಾರುತಗಳು ವ್ಯಾಪಿಸಲಿವೆ. ಇದರ ಜೊತೆಗೆ ಛತ್ತೀಸ್‌ಗಢ, ಜಾರ್ಖಂಡ್ ಹಾಗೂ ಬಿಹಾರದ ಮತ್ತಷ್ಟು ಜಿಲ್ಲೆಗಳು ಮುಂಗಾರಿನ ವ್ಯಾಪ್ತಿಗೆ ಬರಲಿವೆ. ಇದರಿಂದಾಗಿ ನದಿ ಮೂಲಗಳಲ್ಲಿ ನೀರಿನ ಹರಿವು ಉತ್ತಮಗೊಳ್ಳಲಿವೆ. ತಾಪಮಾನದ ತೀವ್ರತೆಯು ಗಣನೀಯವಾಗಿ ಇಳಿಕೆಯಾಗಲಿದೆ. ಕೃಷಿ ವಿಚಾರದಲ್ಲಿ ಕೊಂಚ ಹಿನ್ನಡೆ ಆಗಿದ್ದು, ಬಿತ್ತನೆ ಮತ್ತಷ್ಟು ವೇಗ ಪಡೆಯಲಿದೆ.
ಈ ಭಾಗಗಳಿಗೆ ಭಾರೀ ಮಳೆ ಎಚ್ಚರಿಕೆ
ವಾಯುವ್ಯ ಭಾರತದ ವಿವಿಧ ರಾಜ್ಯಗಳಲ್ಲಿಯೂ ಮುಂಗಾರು ಮಳೆಯ ಚಟುವಟಿಕೆಗಳು ಬಿರುಸುಗೊಂಡಿವೆ. ಜೂನ್ 23 ರಂದು ಜಮ್ಮು-ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಮುಜಾಫರಾಬಾದ್ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದೆ. ಇನ್ನು ಜೂನ್ 24 ರಿಂದ 28 ರವರೆಗೆ ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ಕೆಲವು ಕಡೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಇಂದು ಜೂನ್ 22 ರಂದು ಹಿಮಾಚಲ ಪ್ರದೇಶ ಮತ್ತು ಜಮ್ಮು ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಯಾಗುವ ಸಂಭವವಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಬಿರುಗಾಳಿ ಸಹಿತ ಭಾರೀ ಮಳೆ
ಇದಲ್ಲದೆ ಹರಿಯಾಣ, ಚಂಡೀಗಢ, ರಾಷ್ಟ್ರ ರಾಜಧಾನಿ ದೆಹಲಿ, ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಜೂನ್ 22 ರಿಂದ 26 ರವರೆಗೆ ಗುಡುಗು, ಮಿಂಚು ಹಾಗೂ ಬಲವಾದ ಗಾಳಿ ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಈ ಮೈದಾನ ಪ್ರದೇಶಗಳಲ್ಲಿ ಗಾಳಿಯ ವೇಗ ಗಂಟೆಗೆ 40 ರಿಂದ 50 ಕಿಲೋಮೀಟರ್ ತಲುಪಬಹುದು. ವಿಶೇಷವಾಗಿ ರಾಜಸ್ಥಾನದ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲಿ ಜೂನ್ 22 ಮತ್ತು 23 ರಂದು ಭಾರಿ ಬಿರುಗಾಳಿ ಬೀಸಲಿದೆ. ಇಲ್ಲಿದೆ ಗಾಳಿಯ ವೇಗ ಗಂಟೆಗೆ 70 ಕಿಲೋಮೀಟರ್ ತಲುಪಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೃಷಿ ಚಟುವಟಿಕೆಗಳಿಗೂ ಮುಂಗಾರು ಚುರುಕು
ಇನ್ನೊಂದೆಡೆ ಮಧ್ಯ ಭಾರತದ ಪ್ರಾಂತ್ಯಗಳಾದ ಛತ್ತೀಸ್‌ಗಢ, ವಿದರ್ಭ ಮತ್ತು ಮಧ್ಯಪ್ರದೇಶದಲ್ಲಿ ಜೂನ್ 22 ರಿಂದ 28 ರವರೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಯನ್ನು ನೀಡಲಾಗಿದೆ. ಈ ಅವಧಿಯಲ್ಲಿ ಗುಡುಗು ಮತ್ತು ಮಿಂಚಿನ ಆರ್ಭಟ ಜೋರಾಗಿರಲಿದ್ದು, ಭಾರಿ ಗಾಳಿಯೂ ಬೀಸಲಿದೆ. ದೇಶದ ಬಹುಭಾಗಗಳಲ್ಲಿ ಮುಂಗಾರು ಸಕ್ರಿಯವಾಗಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕಾಗಲಿದೆ. ಸಮುದ್ರ ತೀರದಲ್ಲಿ ಕೊಂಚ ಬದಲಾವಣೆ ಸಾಧ್ಯತೆ ಇದೆ. ಆದ್ದರಿಂದ ಮೀನುಗಾರಿಕೆಗೆ ತೆರಳಲಿರುವ ಮೀನುಗಾರರು ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.













Click it and Unblock the Notifications