• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಂಥ ದುರ್ವಿಧಿ; ಉತ್ತರಾಖಂಡ ಹಿಮಪ್ರವಾಹದಲ್ಲಿ ಕಳೆದುಹೋದವರ ಮನಕಲಕುವ ಕಥೆಗಳು...

|

"ನನ್ನ ಮಗ ಮನೆಯಲ್ಲಿ ತಿಂಡಿ ತಿನ್ನುತ್ತಾ ಕೂತಿದ್ದನಷ್ಟೆ. ಆಗ ಮೇಲ್ವಿಚಾರಕರಿಂದ ಫೋನ್ ಕರೆ ಬಂತು. ಸುರಂಗ ಕಾಮಗಾರಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು ತುರ್ತಾಗಿ ಸುರಂಗದ ಕಡೆ ಬರುವಂತೆ ತಿಳಿಸಿದರು. ಆ ಕ್ಷಣವೇ ಅರ್ಧ ತಿಂಡಿಯನ್ನೂ ಬಿಟ್ಟು, ಇನ್ನು ಹತ್ತೇ ನಿಮಿಷದಲ್ಲಿ ವಾಪಸ್ ಬರುತ್ತೇನೆ ಎಂದು ಗಡಿಬಿಡಿಯಲ್ಲಿಯೇ ಹೊರಟ. ಆದರೆ ಮೂರು ದಿನ ಕಳೆಯಿತು. ಆತ ಮತ್ತೆ ಬರುವ ಯಾವ ಸೂಚನೆಯೂ ಸಿಗುತ್ತಿಲ್ಲ..."

ಉತ್ತರಾಖಂಡದ ಚಾಮೋಲಿ ಜಿಲ್ಲೆಯಲ್ಲಿ ಭಾನುವಾರ ಸಂಭವಿಸಿದ ಹಿಮಪ್ರವಾಹದಲ್ಲಿ ಕಣ್ಮರೆಯಾಗಿರುವ 24 ವರ್ಷದ ಎನ್‌ಟಿಪಿಸಿ ತಪೋವನ ಯೋಜನೆಯ ಎಲೆಕ್ಟ್ರಿಕಲ್ ಎಂಜಿನಿಯರ್ ಅಕ್ಷಯ್ ಸಿಂಗ್ ತಂದೆ ರಿಷಿ ಪ್ರಸಾದ್ ಹೀಗೆ ಮಗನ ನೆನಪಿನಲ್ಲಿ ಕಣ್ಣೀರಾದರು.

ನಾಲ್ಕು ಗಂಟೆಗಳ ಕಾಲ ಕಂಬಿ ಹಿಡಿದೇ ತೂಗಾಡುತ್ತಿದ್ದೆವು; ದುರಂತದಲ್ಲಿ ಬದುಕಿ ಬಂದವರ ಕಥೆ

ಉತ್ತರಾಖಂಡದಲ್ಲಿ ಭಾನುವಾರ ಹಿಮಪ್ರವಾಹ ಸಂಭವಿಸಿದ್ದು, ಈ ಘಟನೆಯಲ್ಲಿ ಇದುವರೆಗೂ 32 ಮಂದಿಯ ಮೃತದೇಹಗಳು ದೊರೆತಿವೆ. ಇನ್ನೂ 197 ಮಂದಿ ನಾಪತ್ತೆಯಾಗಿದ್ದಾರೆ. 25 ರಿಂದ 30 ಮಂದಿ ಸುರಂಗದಲ್ಲಿ ಸಿಲುಕಿರುವ ಸಾಧ್ಯತೆಯಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಆದರೆ ಸತ್ತವರ ಕುಟುಂಬದ ರೋಧನೆ ಒಂದೆಡೆಯಾದರೆ, ನಮ್ಮವರು ಬದುಕಿರುವ ಸುದ್ದಿ ಬಂದರೆ ಸಾಕು ಎಂದು ಆಸೆಗಣ್ಣಿನಿಂದ ಎದುರುನೋಡುತ್ತಿರುವ ಕುಟುಂಬದವರು ಇನ್ನೊಂದೆಡೆ... ಅಂಥ ಕುಟುಂಬದ ಕೆಲವು ಕಥೆಗಳು ಇಲ್ಲಿವೆ ನೋಡಿ...

"10 ನಿಮಿಷದಲ್ಲಿ ವಾಪಸ್ ಬರುತ್ತೇನೆಂದ"

"ನನ್ನ ಮಗ ತಿಂಡಿ ತಿನ್ನುತ್ತಿದ್ದಾಗ ಇದ್ದಕ್ಕಿದ್ದಂತೆ ಕರೆ ಬಂತು. ರಿಷಿಗಂಗಾ ಹೈಡಲ್ ಪ್ರಾಜೆಕ್ಟ್‌ ಸಮೀಪವೇ ಮನೆ ಇದ್ದು, ಅಲ್ಲಿಗೆ ತರಾತುರಿಯಿಂದ ಓಡಿದ. ಹತ್ತೇ ನಿಮಿಷದಲ್ಲಿ ವಾಪಸ್ ಬರುವುದಾಗಿ ಹೇಳಿ ಹೋದ. ಆದರೆ ಮೂರು ದಿನವಾದರೂ ಆತನ ಸುಳಿವೇ ಇಲ್ಲ. ಆತ ಬರುವ ಸಣ್ಣದೊಂದು ಆಸೆಯೊಂದಿಗೆ ಕಾಯುತ್ತಿದ್ದೇವೆ" ಎಂದು ಅಕ್ಷಯ್ ಸಿಂಗ್ ತಂದೆ ಕಣ್ಣೀರು ಹಾಕಿದರು.

ಈ ಬಗ್ಗೆ ಇನ್ನಷ್ಟು ವಿವರ ನೀಡಿದ ಅವರು, "ನಾನು ರಿಷಿ ಗಂಗಾ ನದಿ ಉಕ್ಕಿ ಸುರಂಗ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ರಭಸದಿಂದ ಹರಿಯುತ್ತಿರುವುದನ್ನು ನೋಡಿದೆ. ನನ್ನ ಮಗನ ಹಿಂದೆಯೇ ಓಡಿದೆ. ಆದರೆ ಅಷ್ಟರಲ್ಲಾಗಲೇ ಅವನು ಹೊರಟುಬಿಟ್ಟಿದ್ದ. ನೋಡನೋಡುತ್ತಿದ್ದಂತೆ ಸುರಂಗದಲ್ಲಿ ನೀರು ಸೇರಿಯಾಗಿತ್ತು" ಎಂದು ದುಃಖದಿಂದ ವಿವರಿಸಿದರು. ಸುರಂಗದಲ್ಲಿ ಸಿಲುಕಿದವರೆಲ್ಲಾ ಅತಿ ಆಳದಲ್ಲಿ ಹೋಗಿರುವ ಸಾಧ್ಯತೆಯಿಲ್ಲ. ಆದರೆ ಆಡಳಿತ ಸಾಕಷ್ಟು ಪ್ರಯತ್ನ ಮಾಡುತ್ತಿಲ್ಲ. ಒಂದು ಜೆಸಿಬಿಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

"ಮೂರು ಗಂಟೆಗಳ ಸೆಣಸಾಟದ ನಂತರ ಕೊನೆಗೂ ಸೋತರು"

ತಪೋವನ ಬಿಹಾಗ್ ಗ್ರಾಮದಿಂದ ಕೆಲವೇ ಕಿಲೋಮೀಟರ್ ಗಳ ದೂರದಲ್ಲಿ ನರೇಂದ್ರ ಕುಮಾರ್ ಖನೇರಾ ಎಂಬುವರ ಅಂತಿಮ ವಿಧಿಯನ್ನು ಪೂರೈಸಲಾಗಿದೆ. ಖನೇರಾ ತನ್ನ ಜೀವ ಉಳಿಸಿಕೊಳ್ಳಲು ಸಹಾಯಕ್ಕೆ ಅಂಗಲಾಚಿದ್ದನ್ನು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. "ಖನೇರಾ ಮೂರು ಗಂಟೆಗಳ ಕಾಲ ಎನ್ ಟಿಪಿಸಿ ಬ್ಯಾರೇಜ್ ಬಳಿ ಕೆಸರು, ನೀರು, ಮಣ್ಣಿನ ನಡುವೆ ಒದ್ದಾಡುತ್ತಿದ್ದರು. ಅವರೆಡೆಗೆ ಹಗ್ಗ ಎಸೆದು ಕಾಪಾಡಲು ನೋಡಿದೆವು. ಆದರೆ ನಾವು ಏನು ಮಾಡಿದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೂರು ಗಂಟೆಗಳ ಸೆಣಸಾಟದ ನಂತರ ಕೊನೆಗೂ ಅವರು ಸೋತರು" ಎಂದು ಪ್ರತ್ಯಕ್ಷ ದರ್ಶಿ ಬಿರೇಂದರ್ ಸಿಂಗ್ ರಾವತ್ ಕೂಡ ದುಃಖಭರಿತರಾದರು. ಖನೇರಾ ಜೊತೆಗೆ ಆತನ ಸಂಬಂಧಿ ಅನಿಲ್ ಕೂಡ ಇದ್ದು, ಆತನೂ ನಾಪತ್ತೆಯಾಗಿರುವುದಾಗಿ ಖನೇರಾ ಕುಟುಂಬದವರು ಹೇಳಿದ್ದಾರೆ.

ರೋಚಕ ಸುದ್ದಿ: ಉತ್ತರಾಖಂಡ್ ಹಿಮಪಾತದ ಹಿಂದೆ 46 ವರ್ಷಗಳ ಹಿಂದಿನ ಕಥೆ!?

 ಹಸುವಿಗೆ ಮೇವು ತರಲು ಹೋದ ಅಮ್ಮ ಮಗಳನ್ನು ಕಬಳಿಸಿದ ನೀರು

ಹಸುವಿಗೆ ಮೇವು ತರಲು ಹೋದ ಅಮ್ಮ ಮಗಳನ್ನು ಕಬಳಿಸಿದ ನೀರು

ಸರೋಜಿನಿ ದೇವಿ ಹಾಗೂ ಅವರ 18 ವರ್ಷದ ಮಗಳು ತಮ್ಮ ಹಸುಗಳಿಗಾಗಿ ಗುಡ್ಡಗಾಡಿಗೆ ಮೇವು ತರಲು ಹೋಗಿದ್ದರು. ಆದರೆ ಇದ್ದಕ್ಕಿದ್ದಂತೆ ಜೋರು ಶಬ್ದವಾಗಿದೆ. ಗಾಬರಿಗೊಂಡ ಮನೆಯವರು ಇವರು ಹೋದ ಗುಡ್ಡದ ಕಡೆಗೆ ಚಿತ್ತ ನೆಟ್ಟಿದ್ದಾರೆ. ಆದರೆ ಮನೆಯಿಂದ ಆ ಬೆಟ್ಟದೆಡೆಗೆ ನೋಡುವಷ್ಟರಲ್ಲೇ ನುಗ್ಗಿ ಬಂದ ನೀರು ಎಲ್ಲವನ್ನೂ ಕಬಳಿಸಿಹಾಕಿದೆ. ಅಮ್ಮ ಮಗಳಿಬ್ಬರೂ ಹೇಗಾದರೂ ಬದುಕಿದ್ದರೆ ಸಾಕು ಎಂಬ ಸಣ್ಣ ನಿರೀಕ್ಷೆ ಈ ಕುಟುಂಬದ್ದು.

"ಓದಿಗೆ ದುಡ್ಡು ಹೊಂದಿಸಿಕೊಳ್ಳಲು ಕೆಲಸಕ್ಕೆ ಸೇರಿದ್ದ"

ರೆಂಗಿ ಜಿಲ್ಲೆಯ ಮನೋಜ್ ಸಿಂಗ್ ನೇಗಿ ಎಂಬ ವಿದ್ಯಾರ್ಥಿಯದ್ದು ಮತ್ತೊಂದು ಕಥೆ. ವಿಜ್ಞಾನದ ಪದವಿ ವಿದ್ಯಾರ್ಥಿಯಾದ ನೇಗಿ ತನ್ನ ಶಿಕ್ಷಣಕ್ಕಾಗಿ ಹಣವನ್ನು ಒಟ್ಟುಮಾಡಲು ಬ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದ. ಆದರೆ ಈ ಹಿಮಪ್ರವಾಹ ಆತನ ಕನಸನ್ನೂ ಕಸಿದುಕೊಂಡಿದೆ.

ತಮ್ಮ ಮನೆಯವರು ಬದುಕಿರುವ ಸುದ್ದಿ ಕೇಳಲು ಕಾತರಿಸುತ್ತಿರುವ 39 ಕುಟುಂಬಗಳಲ್ಲಿ ಮನೀಶ್ ಕುಮಾರ್ ಕುಟುಂಬವೂ ಒಂದು. ಎನ್ ಟಿಪಿಸಿ ಇಂಜಿನಿಯರ್ ಮನೀಶ್ ಕುಮಾರ್ ಕುಟುಂಬ ಪಾಟ್ನಾದಿಂದ ಜೋಶಿಮಠಕ್ಕೆ ಬಂದಿದೆ. ಮನೀಶ್ ಕುಮಾರ್ ಬದುಕಿರುವ ಸಾಧ್ಯತೆಯ ಬಗ್ಗೆ ಭರವಸೆ ಇಟ್ಟುಕೊಂಡು ರಕ್ಷಣಾ ಕಾರ್ಯಾಚರಣೆಯೆಡೆಗೆ ಕಣ್ಣು ನೆಟ್ಟಿದೆ.

English summary
39 families are waiting for some piece of good news about missing people at uttarakhand disaster
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X