ಐಷಾರಾಮಿ ಜೀವನದ ವ್ಯಾಮೋಹ: ಮಾಜಿ ಕ್ರಿಕೆಟಿಗನಿಂದ ರಿಷಬ್ ಪಂತ್‌ಗೆ ₹1.63 ಕೋಟಿ ವಂಚನೆ
ನವದೆಹಲಿ, ಡಿಸೆಂಬರ್ 29: ಐಪಿಎಲ್ ತಂಡದ ಆಟಗಾರ ಮತ್ತು ಕರ್ನಾಟಕ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಹಲವರಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಮೃಣಾಂಕ್ ಸಿಂಗ್ ಎಂಬಾತ ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಸೇರಿದಂತೆ ಅನೇಕರಿಂದ ಕೋಟಿ ಕೋಟಿ ಹಣ ಪಡೆದು ವಂಚಿಸಿದ್ದು, ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.
ಆರೋಪಿ ಈ ಹಿಂದೆ ಹರಿಯಾಣದ ಅಂಡರ್ 19 ಟೀಂನಲ್ಲಿ ಕ್ರಿಕೆಟಿಗನಾಗಿದ್ದ ಎನ್ನಲಾಗಿದೆ. ಮೃಣಾಂಕ್ ಸಿಂಗ್ ಐಷಾರಾಮಿ ಜೀವನದ ವ್ಯಾಮೋಹ ಹೊಂದಿದ್ದ, ದುಬಾರಿ ರೆಸ್ಟೋರೆಂಟ್‌ಗಳಲ್ಲಿ ಊಟ, ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಜೀವನ ನಡೆಸಬೇಕು ಎಂದು ವಂಚನೆಯ ದಾರಿ ಹಿಡಿದಿದ್ದಾನೆ ಎನ್ನಲಾಗಿದೆ.

ಆರೋಪಿ 2014ರಿಂದ 2018ರಲ್ಲಿ ಮುಂಬೈ ಇಂಡಿಯನ್ಸ್‌ನಲ್ಲಿ ಆಡುತ್ತಿದ್ದೆ ಎಂದು ಹೇಳಿಕೊಂಡು ದುಬಾರಿ ರೆಸ್ಟೋರೆಂಟ್‌ಗಳ ವೈಭೋಗವನ್ನು ಸವಿದು ಐಷಾರಾಮಿ ಪಂಚತಾರಾ ಹೋಟೆಲ್‌ಗಳಲ್ಲಿ ಉಳಿದುಕೊಂಡು ಬಿಲ್ ನೀಡದೇ ಪರಾರಿಯಾಗುತ್ತಿದ್ದ. ಅಲ್ಲದೇ ತಾನು ಮುಂಬೈ ಇಂಡಿಯನ್ಸ್ ತಂಡದ ಸದಸ್ಯ, ಅಂತರಾಷ್ಟ್ರೀಯ ಕ್ರೀಡಾ ಪರಿಕರಗಳ ಬ್ರ್ಯಾಂಡ್‌ಗಳ ಪ್ರತಿನಿಧಿ ಎಂದು ಹೇಳಿಕೊಂಡು ಮಹಿಳೆಯರಿಗೂ ವಂಚಿಸಿದ್ದಾನೆ.
ಈತನಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 40,000ಕ್ಕೂ ಹೆಚ್ಚು ಫಾಲೋವರ್‌ಗಳಿದ್ದು, ಇದನ್ನೂ ಈತ ವಂಚನೆಗೆ ಬಳಸಿಕೊಂಡಿದ್ದಾನೆ. ಕರ್ನಾಟಕದ ಉನ್ನತ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಈತ ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಸೇರಿದಂತೆ ಹಲವಾರು ವ್ಯಕ್ತಿಗಳಿಗೆ ವಂಚಿಸಿದ್ದಾನೆ. 2020-2021ರ ಅವಧಿಯಲ್ಲಿ ಪಂತ್‌ಗೆ 1.63 ಕೋಟಿ ರೂಪಾಯಿ ವಂಚಿಸಿರುವುದು ತನಿಖೆಯಿಂದ ವೇಳೆ ಬೆಳಕಿಗೆ ಬಂದಿದೆ.
ಜುಲೈ 22 ರಿಂದ 29, 2022ರವರೆಗೆ ಈತ ದಿಲ್ಲಿಯ ಖ್ಯಾತ ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ. ತಾನು ಪ್ರತಿಷ್ಠಿತ ಕ್ರೀಡಾ ಬ್ರ್ಯಾಂಡ್‌ಗೆ ಸೇರಿದ್ದು, ಕಂಪನಿ ಹಣ ಪಾವತಿಸುತ್ತದೆ ಎಂದು ಹೇಳಿದ್ದ. ಅಲ್ಲದೇ 2 ಲಕ್ಷ ರೂಪಾಯಿ ಆನ್‌ಲೈನ್ ಪಾವತಿಯ ನಕಲಿ ಪುರಾವೆ ತೋರಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಬಳಿಕ ಹೋಟೆಲ್‌ನವರು ಆತ ಮತ್ತು ಆತನ ಮ್ಯಾನೇಜರ್ ಎಂದಿದ್ದವರನ್ನು ಸಂಪರ್ಕಿಸಿದರೂ ಹಣ ಪಾವತಿಸರಲಿಲ್ಲ. ಕೊನೆಗೆ ಹೋಟೆಲ್ ಆತನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ಮೃಣಾಂಕ್ ಸಿಂಗ್ ನಿವಾಸಕ್ಕೆ ನೋಟಿಸ್ ಜಾರಿ ಮಾಡಿದ್ದರು. ಆತ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಕಣ್ಮರೆ ಆಗಿದ್ದಾನೆ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಜಾಮೀನು ರಹಿತ ವಾರೆಂಟ್ ಮತ್ತು ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿತ್ತು.
ಈವರೆಗೂ ದುಬೈನಲ್ಲಿದ್ದ ಆರೋಪಿ ಡಿಸೆಂಬರ್ 25 ರಂದು ಹಾಂಗ್ ಕಾಂಗ್‌ಗೆ ತೆರಳಲು ಸಜ್ಜಾಗಿದ್ದಾನೆ. ಈ ವೇಳೆ ಪೊಲೀಸರು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿ ಆತನನ್ನು ಬಂಧಿಸಿದ್ದಾರೆ. ಈತನಿಂದ ವಂಚನೆಗೆ ಒಳಗಾದವರಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳು, ಟ್ಯಾಕ್ಸಿ ಡ್ರೈವರ್‌ಗಳು, ಯುವತಿಯರು, ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರು ಸೇರಿದ್ದಾರೆ.












Click it and Unblock the Notifications