ಕ್ಯಾರಿ ಬ್ಯಾಗ್‌ಗೆ 30 ರೂ. ಪಡೆದ ರೆಡ್‌ ಟೇಪ್‌ಗೆ ಬಿತ್ತು 26,000 ದಂಡ: ಗ್ರಾಹಕನಿಗೆ ಭರ್ಜರಿ ಜಯ

ನಾವು ಮಾಲ್‌ ಅಥವಾ ಶೋರೂಮ್‌ಗಳಿಗೆ ಶಾಪಿಂಗ್‌ಗೆ ಹೋದಾಗ ಸಾವಿರಾರು ರೂಪಾಯಿ ಬೆಲೆಯ ವಸ್ತುಗಳನ್ನ ಖರೀದಿಸುತ್ತೇವೆ. ಆದರೆ, ಬಿಲ್ ಮಾಡುವಾಗ ಆ ವಸ್ತುಗಳನ್ನ ಹಾಕಿಕೊಂಡು ಬರಲು ಕ್ಯಾರಿ ಬ್ಯಾಗ್ ಕೇಳಿದರೆ ಅದಕ್ಕೆ 10 ರೂಪಾಯಿ, 20 ರೂಪಾಯಿ ಎಂದು ಪ್ರತ್ಯೇಕ ಹಣ ವಸೂಲಿ ಮಾಡುತ್ತಾರೆ. ಬಹುತೇಕರು ಇದರ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳದೆ ಕೇಳಿದಷ್ಟು ಹಣ ಕೊಟ್ಟು ಬರುತ್ತಾರೆ.

ಆದರೆ, ಇಲ್ಲೊಬ್ಬ ಗ್ರಾಹಕ ಕ್ಯಾರಿ ಬ್ಯಾಗ್‌ಗೆ ಹಣ ಪಡೆದ ಜನಪ್ರಿಯ ಶೂ ಬ್ರ್ಯಾಂಡ್ ರೆಡ್ ಟೇಪ್ ವಿರುದ್ಧ ಕಾನೂನು ಹೋರಾಟ ಮಾಡಿ, ಬರೋಬ್ಬರಿ 26,000 ರೂಪಾಯಿ ಪರಿಹಾರ ಪಡೆದಿದ್ದಾರೆ ಎಂದರೆ ನೀವು ನಂಬುತ್ತೀರಾ? ಹೌದು, ಈ ಕುರಿತಾದ ಆಸಕ್ತಿದಾಯಕ ಮಾಹಿತಿಯನ್ನ ನಳಿನಿ ಉನಗರ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Red Tape

ರೆಡ್‌ ಟೇಪ್ ಶೋರೂಮ್‌ನಲ್ಲಿ ನಡೆದಿದ್ದೇನು?

ಇತ್ತೀಚೆಗೆ ಗ್ರಾಹಕರೊಬ್ಬರು ಶೂ ಖರೀದಿಸುವ ಉದ್ದೇಶದಿಂದ ರೆಡ್ ಟೇಪ್ ಶೋರೂಮ್‌ಗೆ ಭೇಟಿ ನೀಡಿದ್ದರು. ತಮಗೆ ಇಷ್ಟವಾದ ಶೂಗಳನ್ನ ಆಯ್ಕೆ ಮಾಡಿದ ಅವರು, ಒಟ್ಟು 4,713 ರೂಪಾಯಿ ಬಿಲ್ ಸಹ ಪೇ ಮಾಡಿದ್ದರು. ಬಳಿಕ ತಾವು ಖರೀದಿಸಿದ ವಸ್ತುಗಳನ್ನ ಮನೆಗೆ ತೆಗೆದುಕೊಂಡು ಹೋಗಲು ಕ್ಯಾರಿ ಬ್ಯಾಗ್ ಕೊಡುವಂತೆ ಗ್ರಾಹಕ ಶೋರೂಮ್‌ ಸಿಬ್ಬಂದಿಯನ್ನಾ ಕೇಳಿದ್ದಾರೆ.

ಆದರೆ ಆ ಶೋರೂಮ್ ಸಿಬ್ಬಂದಿ, "ಕ್ಯಾರಿ ಬ್ಯಾಗ್ ಉಚಿತವಾಗಿ ನೀಡಲು ಆಗುದಿಲ್ಲ, ಇದು ಕಂಪನಿಯ ನಿಯಮ. ಬ್ಯಾಗ್ ಬೇಕಿದ್ದರೆ ಹಣ ನೀಡಬೇಕು" ಎಂದು ಹೇಳಿ, ಮೂರು ಕ್ಯಾರಿ ಬ್ಯಾಗ್‌ಗಳಿಗೆ ತಲಾ 10 ರೂಪಾಯಿಯಂತೆ ಒಟ್ಟು 30 ರೂಪಾಯಿ ಹೆಚ್ಚುವರಿ ಶುಲ್ಕ ತೆಗೆದುಕೊಂಡರು.

ಕ್ಯಾರಿ ಬ್ಯಾಗ್‌ಗೆ ಶುಲ್ಕ ವಿಧಿಸಿದ್ದಕ್ಕೆ ಕೋರ್ಟ್ ಮೆಟ್ಟಿಲೇರಿದ ಗ್ರಾಹಕ

ಕಂಪನಿಯ ಲೋಗೋ ಮುದ್ರಿಸಿರುವ ಕ್ಯಾರಿ ಬ್ಯಾಗ್‌ಗಳಿಗೆ ಗ್ರಾಹಕರಿಂದಲೇ ಹಣ ವಸೂಲಿ ಮಾಡುವುದು ಕಾನೂನುಬಾಹಿರ ಎಂಬುದು ಗ್ರಾಹಕನಿಗೆ ಮೊದಲೇ ತಿಳಿದಿತ್ತು. ಕೇವಲ 30 ರೂಪಾಯಿ ತಾನೇ ಎಂದು ನಮ್ಮ ನಿಮ್ಮ ತರ ಸುಮ್ಮನಾಗಲಿಲ್ಲ ಈ ಗ್ರಾಹಕ. ಬದಲಿಗೆ ಕಂಪನಿಯ ಈ ಅನ್ಯಾಯದ ವಿರುದ್ಧ ಹೋರಾಡಲು ನಿರ್ಧರಿಸಿದರು.

ಕೂಡಲೇ ಈ ಬಗ್ಗೆ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ ಅವರು, ಕಂಪನಿಯು ಕ್ಯಾರಿ ಬ್ಯಾಗ್‌ಗೆ ಶುಲ್ಕ ವಸೂಲಿ ಮಾಡುವ ಮೂಲಕ ತಮಗೆ ಮಾನಸಿಕ ಕಿರುಕುಳ ನೀಡಿದೆ ಹಾಗೂ ಈ ವ್ಯಾಪಾರ ಪದ್ಧತಿ ಸರಿಯಿಲ್ಲ ಎಂದು ದೂರಿದರು.

ಗ್ರಾಹಕ ನ್ಯಾಯಾಲಯದ ಆದೇಶ

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, ಗ್ರಾಹಕನ ಪರವಾಗಿ ಮಹತ್ವದ ತೀರ್ಪು ನೀಡಿದೆ. ಕ್ಯಾರಿ ಬ್ಯಾಗ್‌ಗಳಿಗೆ ಹಣ ವಸೂಲಿ ಮಾಡಿದ್ದು ತಪ್ಪು ಎಂದು ಅಭಿಪ್ರಾಯಪಟ್ಟಿರುವ ಕೋರ್ಟ್, ರೆಡ್ ಟೇಪ್ ಕಂಪನಿಗೆ ಭಾರಿ ದಂಡ ವಿಧಿಸಿದೆ. ಗ್ರಾಹಕನಿಂದ ಪಡೆದಿದ್ದ 30 ರೂಪಾಯಿಗಳನ್ನ ವಾರ್ಷಿಕ ಶೇ.9ರಷ್ಟು ಬಡ್ಡಿಯೊಂದಿಗೆ ಹಿಂದಿರುಗಿಸುವಂತೆ ಆದೇಶಿಸಿದೆ.

ಇದಲ್ಲದೆ, ಗ್ರಾಹಕನಿಗೆ ಉಂಟಾದ ಮಾನಸಿಕ ಕಿರುಕುಳ ಮತ್ತು ನೋವಿಗಾಗಿ 15,000 ರೂಪಾಯಿ ಹಾಗೂ ಕೋರ್ಟ್ ಅಲೆದಾಟದ ಖರ್ಚು-ವೆಚ್ಚಗಳಿಗಾಗಿ 11,000 ರೂಪಾಯಿ ಸೇರಿ ಒಟ್ಟು 26,000 ರೂಪಾಯಿಗಳನ್ನ ಪರಿಹಾರವಾಗಿ ನೀಡುವಂತೆ ನಿರ್ದೇಶಿಸಿದೆ.

ಗ್ರಾಹಕನಿಗೆ ನೀಡಬೇಕಾದ ಈ ಪರಿಹಾರದ ಮೊತ್ತವನ್ನ ಕೇವಲ 45 ದಿನಗಳ ಒಳಗೆ ಪಾವತಿಸುವಂತೆ ಕೋರ್ಟ್ ರೆಡ್ ಟೇಪ್‌ಗೆ ಕಟ್ಟುನಿಟ್ಟಿನ ಗಡುವು ನೀಡಿದೆ. ಒಂದು ವೇಳೆ ನಿಗದಿತ 45 ದಿನಗಳ ಒಳಗೆ ಪರಿಹಾರ ಮೊತ್ತವನ್ನ ಪಾವತಿಸಲು ವಿಫಲವಾದರೆ, ಒಟ್ಟು ಮೊತ್ತದ ಮೇಲೆ ವಾರ್ಷಿಕ ಶೇ. 12ರಷ್ಟು ಹೆಚ್ಚುವರಿ ಬಡ್ಡಿ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ತಮ್ಮದೇ ಬ್ರ್ಯಾಂಡ್‌ನ ಜಾಹೀರಾತು ಇರುವ ಕ್ಯಾರಿ ಬ್ಯಾಗ್‌ಗಳನ್ನ ನೀಡಿ ಅದಕ್ಕೆ ಗ್ರಾಹಕರಿಂದಲೇ ಶುಲ್ಕ ವಸೂಲಿ ಮಾಡುವ ಕಾರ್ಪೊರೇಟ್ ಮಳಿಗೆಗಳಿಗೆ ಈ ತೀರ್ಪು ದೊಡ್ಡ ಎಚ್ಚರಿಕೆಯಾಗಿದೆ. ಪ್ರತಿಯೊಬ್ಬ ಗ್ರಾಹಕನೂ ತನ್ನ ಹಕ್ಕುಗಳ ಬಗ್ಗೆ ಅರಿವು ಹೊಂದಿದ್ದರೆ ಇಂತಹ ಹಗಲು ದರೋಡೆಗಳಿಗೆ ಬ್ರೇಕ್ ಹಾಕಬಹುದು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ.

ನಳಿನಿ ಉನಗರ್ ಅವರ ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಗ್ರಾಹಕನ ದಿಟ್ಟ ಹೋರಾಟಕ್ಕೆ ನೆಟ್ಟಿಗರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+