ಕಾರ್ಪೊರೇಟ್ ಕೆಲಸ ಬಿಟ್ಟು ಬೆಟ್ಟದಲ್ಲಿ ಹೋಂಸ್ಟೇ ಆರಂಭಿಸಿದ ಮಹಿಳೆ: 'ಇದು ನೀವು ಅಂದುಕೊಂಡಷ್ಟು ಸುಲಭವಲ್ಲ' ಎಂದಿದ್ದೇಕೆ?

ನಗರದ ಗದ್ದಲದಿಂದ ದೂರ ಉಳಿದು, ಪ್ರಶಾಂತ ವಾತಾವರಣದಲ್ಲಿ ನೆಮ್ಮದಿಯ ಉಸಿರೆಳೆಯಲು ಪ್ರವಾಸಿಗರು ಬೆಟ್ಟಗುಡ್ಡಗಳ ನಡುವಿನ ಹೋಂಸ್ಟೇಗಳನ್ನ ಆಯ್ಕೆ ಮಾಡುತ್ತಾರೆ. ಹಾಗಾಗಿ ಹಲವರಿಗೆ ಈ ಪ್ರಕೃತಿಯ ಮಡಿಲಲ್ಲಿ ಒಂದು ಸುಂದರವಾದ ಹೋಂಸ್ಟೇ ನಡೆಸಬೇಕು ಎಂಬ ಕನಸಾಗಿರುತ್ತದೆ. ಹೊರಗಿನಿಂದ ನೋಡಲು ಈ ಜೀವನ ಅತ್ಯಂತ ಆಕರ್ಷಕವಾಗಿ, ಶಾಂತಿಯುತವಾಗಿ ಕಾಣುತ್ತದೆ. ಆದರೆ, ಇದರ ಹಿಂದಿನ ವಾಸ್ತವವೇ ಬೇರೆ.

ಹೌದು, ಹಿಮಾಚಲ ಪ್ರದೇಶದಲ್ಲಿ ಹೋಂಸ್ಟೇ ನಡೆಸುತ್ತಿರುವ ಮಹಿಳೆಯೊಬ್ಬರು ಇತ್ತೀಚೆಗೆ ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದು, ಪರ್ವತಗಳಲ್ಲಿ ಹೋಂಸ್ಟೇ ಅಥವಾ ಇತರೆ ಉದ್ಯೋಗ ನಡೆಸುವುದು ನೀವು ಅಂದುಕೊಂಡಷ್ಟು ಸುಲಭವಲ್ಲ ಎಂದು ಹೇಳಿದ್ದಾರೆ.

Reality of Running Homestay in the Mountains Why It Is Not as Glamorous as You Might Think

ವೈರಲ್‌ ವಿಡಿಯೋದಲ್ಲಿ ಏನಿದೆ?

ಹಿಮಾಚಲ ಪ್ರದೇಶದಲ್ಲಿ ನಿರ್ವಾಣ ಹೋಮ್ಸ್ ರಾರ್ತಾ ಎಂಬ ಹೋಂಸ್ಟೇ ನಡೆಸುತ್ತಿರುವ ತರಾನಾ ಚೌಹಾಣ್ ಅವರು ತಮ್ಮ ದೈನಂದಿನ ದಿನಚರಿಯ ತುಣುಕನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. "ಬೆಟ್ಟಗಳಲ್ಲಿ ಹೋಂಸ್ಟೇ ಹೊಂದುವುದು ತುಂಬಾ ಗ್ಲಾಮರಸ್ ಮತ್ತು ನೀವು ತುಂಬಾ ಅದೃಷ್ಟವಂತರು ಎಂದು ಬಹಳಷ್ಟು ಜನರು ಭಾವಿಸುತ್ತಾರೆ. ಆದರೆ ನಾನು ಅದರ ನಿಜವಾದ ವಾಸ್ತವವನ್ನ ನಿಮಗೆ ತೋರಿಸುತ್ತೇನೆ," ಎಂದು ಚೌಹಾಣ್ ವಿಡಿಯೋದಲ್ಲಿ ಹೇಳಿದ್ದಾರೆ.

ಅತಿಥಿಗಳು ಚೆಕ್ ಔಟ್ ಮಾಡಿದ ಬಳಿಕ ಸೋಮವಾರ ಅವರಿಗೆ ಸ್ವಲ್ಪ ಬಿಡುವು ಸಿಕ್ಕಿತ್ತು. ಆದರೆ, ಆರಾಮಾಗಿ ವಿಶ್ರಾಂತಿ ಪಡೆಯುವ ಬದಲು ಅವರು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಅಡುಗೆಮನೆಯನ್ನ ಡೀಪ್ ಕ್ಲೀನಿಂಗ್ ಮಾಡುತ್ತಿದ್ದರು. ಪಾತ್ರೆಗಳು, ಡಬ್ಬಿಗಳು ಮತ್ತು ಇತರ ವಸ್ತುಗಳು ಅಸ್ತವ್ಯಸ್ತವಾಗಿ ಹರಡಿಕೊಂಡಿರುವ ಅಡುಗೆಮನೆಯನ್ನು ತೋರಿಸುತ್ತಾ, "ಇದು ನೀವು ಅಂದುಕೊಂಡಷ್ಟು ಆಕರ್ಷಕವಾಗಿಲ್ಲ" ಎಂದು ಅವರು ಹೇಳಿದ್ದಾರೆ.

ಕಾರ್ಪೊರೇಟ್ ಕೆಲಸ ಬಿಟ್ಟು ಬೆಟ್ಟದತ್ತ ಪಯಣ

ತರಾನಾ ಚೌಹಾಣ್ ಅವರು ಪರ್ವತಗಳಲ್ಲಿ ಶಾಂತಿಯುತ ಜೀವನವನ್ನ ಅರಸಿ ತಮ್ಮ ಉತ್ತಮ ಕಾರ್ಪೊರೇಟ್ ಕೆಲಸವನ್ನ ಬಿಟ್ಟಿದ್ದರು. ವಿಡಿಯೋದ ಶೀರ್ಷಿಕೆಯಲ್ಲಿ ಈ ಬಗ್ಗೆ ವಿವರಿಸಿರುವ ಅವರು, ತನಗೆ ತಾಂತ್ರಿಕವಾಗಿ ಆ ಶಾಂತಿಯುತ ಜೀವನ ಸಿಕ್ಕಿದೆ, ಆದರೆ ಸುಂದರವಾದ ಪ್ರಾಕೃತಿಕ ನೋಟಗಳ ಹಿಂದೆ ಹೋಂಸ್ಟೇ ನಡೆಸುವ ದೊಡ್ಡ ಜವಾಬ್ದಾರಿಗಳು ಮರೆಯಾಗಿವೆ ಎಂದು ಒಪ್ಪಿಕೊಂಡಿದ್ದಾರೆ. ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮುಗಿದ ತಕ್ಷಣ ಲ್ಯಾಪ್‌ಟಾಪ್ ಮುಚ್ಚಿ ನೆಮ್ಮದಿಯಾಗಿರಬಹುದು, ಆದರೆ ಸ್ವಂತ ಉದ್ಯಮದಲ್ಲಿ ಹಾಗಲ್ಲ ಎಂಬುದನ್ನ ಅವರು ವಿವರಿಸಿದ್ದಾರೆ.

ಪರ್ವತಗಳಲ್ಲಿ ಹೋಂಸ್ಟೇ ನಿರ್ವಹಣೆಯ ಸವಾಲುಗಳು

ರಜೆಯ ದಿನಗಳಲ್ಲಿಯೂ ಅತಿಥಿಗಳನ್ನ ಉಪಚರಿಸುವುದು, ಅನಾರೋಗ್ಯದ ನಡುವೆಯೂ ಗ್ರಾಹಕರ ಕರೆಗಳಿಗೆ ಉತ್ತರಿಸುವುದು, ಸೋರುತ್ತಿರುವ ಪೈಪ್ ಸರಿಪಡಿಸುವುದು, ಮುಚ್ಚಿಹೋದ ಚರಂಡಿಗಳನ್ನು ಸ್ವಚ್ಛಗೊಳಿಸುವುದು ಮತ್ತು ಗ್ಯಾಸ್ ಸಿಲಿಂಡರ್ ತರುವುದು ಸೇರಿದಂತೆ ಹಲವಾರು ಜವಾಬ್ದಾರಿಗಳನ್ನ ಅವರು ಏಕಾಂಗಿಯಾಗಿ ನಿಭಾಯಿಸಬೇಕಾಗುತ್ತದೆ.

"ರಾತ್ರಿ 10 ಗಂಟೆಗೆ ವಿದ್ಯುತ್ ಹೋದಾಗ ನೀವೇ ನಿರ್ವಹಣಾ ಇಲಾಖೆಯಾಗುತ್ತೀರಿ. ಇಲ್ಲಿ ಯಾವುದೇ ಪ್ರತ್ಯೇಕ ಇಲಾಖೆಗಳಿಲ್ಲ, ನಾನೊಬ್ಬಳೇ ಎಲ್ಲವನ್ನೂ ಮಾಡಬೇಕು" ಎಂದು ಅವರು ಬರೆದುಕೊಂಡಿದ್ದಾರೆ. ರಿಸೆಪ್ಷನ್‌ನಿಸ್ಟ್‌, ವೆಲ್‌ಕಮರ್, ಹೌಸ್‌ಕೀಪರ್, ಗ್ರಾಹಕ ಸೇವಾ ಪ್ರತಿನಿಧಿ, ನಿರ್ವಹಣಾ ಕೆಲಸಗಾರ್ತಿ ಮತ್ತು ಕೆಲವೊಮ್ಮೆ ಪ್ಲಂಬರ್ ಆಗಿಯೂ ಅವರು ಕಾರ್ಯನಿರ್ವಹಿಸಬೇಕಾಗುತ್ತದೆ.

ಸ್ವಂತ ಕನಸನ್ನ ನನಸು ಮಾಡಿಕೊಳ್ಳುವ ತೃಪ್ತಿ‌

ಕೆಲವೊಮ್ಮೆ ಇಷ್ಟೆಲ್ಲಾ ಕೆಲಸಗಳಿಂದ ಸುಸ್ತಾದಾಗ, ಕಾರ್ಪೊರೇಟ್ ಕೆಲಸವೇ ಚೆನ್ನಾಗಿತ್ತು ಎನಿಸುವುದೂ ಉಂಟಂತೆ. ಆದರೆ, ಮತ್ತೊಬ್ಬರ ಕನಸು ಅಥವಾ ಗುರಿಗಳಿಗಾಗಿ ದುಡಿಯುವ ಬದಲು, ತನ್ನದೇ ಆದ ಕನಸೊಂದನ್ನ ಕಟ್ಟುತ್ತಿರುವುದಕ್ಕೆ ಅವರಿಗೆ ಅಪಾರ ಹೆಮ್ಮೆ ಇದೆ.

"ನಾನು ಸುಲಭದ ಜೀವನ ಬೇಕು ಎಂದು ಕಾರ್ಪೊರೇಟ್ ಜೀವನವನ್ನ ಬಿಡಲಿಲ್ಲ. ನನ್ನದೇ ಆದ ಜೀವನ ಬೇಕು ಎಂದು ಬಿಟ್ಟೆ. ಬೇರೆಯವರ ಕನಸಿಗಾಗಿ ಬದುಕುವುದಕ್ಕಿಂತ, ನನ್ನದೇ ಕನಸಿಗಾಗಿ ದುಡಿದು ಸುಸ್ತಾಗುವುದನ್ನೇ ನಾನು ಆಯ್ದುಕೊಳ್ಳುತ್ತೇನೆ," ಎಂದು ತರಾನಾ ಚೌಹಾಣ್ ಅತ್ಯಂತ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯವಾಗಿ ಪ್ರವಾಸೋದ್ಯಮ ಮತ್ತು ಹೋಂಸ್ಟೇಗಳ ಸುಂದರ ಮುಖವನ್ನ ಮಾತ್ರ ತೋರಿಸಲಾಗುತ್ತದೆ. ಆದರೆ ತರಾನಾ ಅವರ ಈ ವಿಡಿಯೋ, ಯಾವುದೇ ಉದ್ಯಮವನ್ನು ಬೆಳೆಸುವಾಗ ಎದುರಾಗುವ ತೆರೆಯ ಹಿಂದಿನ ಶ್ರಮವನ್ನ ಕಣ್ಣಿಗೆ ಕಟ್ಟುವಂತೆ ವಿವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+