ರೈಲು ಪ್ರಯಾಣಿಕರೇ ಎಚ್ಚರ! ಸ್ಪೀಕರ್ ಆನ್ ಮಾಡಿ ಹಾಡು ಕೇಳಿದರೆ ಬೀಳುತ್ತೆ ಭಾರೀ ದಂಡ, ಜೈಲು ಫಿಕ್ಸ್
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಬಳಕೆ ಹೆಚ್ಚಾದಂತೆ ಸಾರ್ವಜನಿಕ ಸ್ಥಳಗಳಲ್ಲಿ, ಅದರಲ್ಲೂ ವಿಶೇಷವಾಗಿ ರೈಲು, ಬಸ್ಸಗಳಲ್ಲಿ ಇತರರಿಗೆ ಕಿರಿಕಿರಿಯಾಗುವಂತೆ ಮೊಬೈಲ್ ಬಳಸುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ರೈಲಿನಲ್ಲಿ ಪ್ರಯಾಣಿಸುವಾಗ ಪಕ್ಕದ ಸೀಟಿನವರು ಮೊಬೈಲ್ ಸ್ಪೀಕರ್ ಆನ್ ಮಾಡಿ ಜೋರಾಗಿ ಹಾಡು ಕೇಳುವುದು, ಸಿನಿಮಾ ನೋಡುವುದು ಅಥವಾ ಫೋನ್‌ನಲ್ಲಿ ಜೋರಾಗಿ ಮಾತನಾಡುವುದು ಸಾಮಾನ್ಯ ಎನ್ನುವಂತಾಗಿದೆ. ಇದರಿಂದ ಸಹ ಪ್ರಯಾಣಿಕರಿಗೆ ತೀವ್ರ ಮುಜುಗರ ಹಾಗೂ ಕಿರಿಕಿರಿಯಾಗುತ್ತದೆ. ಈ ಸಮಸ್ಯೆಯನ್ನು ಇದೀಗ ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಇಲಾಖೆಯು, ಇಂತಹ ಅಶಿಸ್ತಿನ ವರ್ತನೆಗಳಿಗೆ ಬ್ರೇಕ್ ಹಾಕಲು ಕಠಿಣ ಕ್ರಮ ಕೈಗೊಂಡಿದೆ.

ಹೌದು, ಸಹ ಪ್ರಯಾಣಿಕರ ನೆಮ್ಮದಿ ಹಾಳು ಮಾಡುವವರ ವಿರುದ್ಧ ದಕ್ಷಿಣ ರೈಲ್ವೆಯು ಕಟ್ಟುನಿಟ್ಟಿನ ಸುತ್ತೋಲೆ ಹೊರಡಿಸಿದೆ. ರೈಲ್ವೆ ನಿಲ್ದಾಣಗಳಲ್ಲಿ ಅಥವಾ ರೈಲಿನ ಬೋಗಿಗಳಲ್ಲಿ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ಗಳನ್ನ ಸ್ಪೀಕರ್ ಮೋಡ್‌ನಲ್ಲಿ ಇಟ್ಟುಕೊಂಡು ಆಡಿಯೋ ಅಥವಾ ವಿಡಿಯೋಗಳನ್ನ ಪ್ಲೇ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಅಷ್ಟೇ ಅಲ್ಲದೆ, ಗುಂಪುಗೂಡಿ ಜೋರಾಗಿ ಮಾತನಾಡುವುದು, ಕಿರುಚುವುದು ಅಥವಾ ಇತರರಿಗೆ ಕಿರಿಕಿರಿ ಮಾಡುವ ಯಾವುದೇ ನಡವಳಿಕೆಗಳನ್ನ ಉಪದ್ರವ (Nuisance) ಎಂದು ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಈ ಹೊಸ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಿಲ್ದಾಣಗಳಲ್ಲಿ ನಿರಂತರವಾಗಿ ಧ್ವನಿವರ್ಧಕಗಳ ಮೂಲಕ ಪ್ರಕಟಣೆಗಳನ್ನ ನೀಡುವಂತೆ ಎಲ್ಲಾ ವಿಭಾಗಗಳಿಗೂ ಇಗಾಗಲೇ ರೈಲ್ವೆ ಪ್ರಧಾನ ಕಚೇರಿಯು ಸೂಚನೆ ನೀಡಿದೆ.
ರೈಲ್ವೆ ಕಾಯ್ದೆ ಪ್ರಕಾರ ಜೈಲು ಶಿಕ್ಷೆ
'ಜನ್ ವಿಶ್ವಾಸ್ ಕಾಯ್ದೆ'ಯ ಮೂಲಕ ತಿದ್ದುಪಡಿಯಾದ 'ರೈಲ್ವೆ ಕಾಯ್ದೆ'ಯ ಸೆಕ್ಷನ್ 145 (2) (ಎ) ಅಡಿಯಲ್ಲಿ ಈ ಹೊಸ ದಂಡದ ನಿಯಮಗಳನ್ನ ಜಾರಿಗೊಳಿಸಲಾಗಿದೆ. ಈ ನಿಯಮದ ಪ್ರಕಾರ, ರೈಲಿನಲ್ಲಿ ಮೊಬೈಲ್ ಸ್ಪೀಕರ್ ಆನ್ ಮಾಡಿ ಇತರರಿಗೆ ಕಿರಿಕಿರಿ ಉಂಟುಮಾಡಿದರೆ, ಅಶ್ಲೀಲ ಪದಗಳನ್ನ ಬಳಸಿದರೆ ಅಥವಾ ಅಸಭ್ಯವಾಗಿ ವರ್ತಿಸಿದರೆ, ಅಂತವರನ್ನ ತಕ್ಷಣವೇ ರೈಲ್ವೆ ಆವರಣದಿಂದ ಅಥವಾ ರೈಲಿನಿಂದ ಹೊರಹಾಕಲಾಗುತ್ತದೆ.
ಜೊತೆಗೆ 1,000 ರೂಪಾಯಿಗಳ ದಂಡವನ್ನು ವಿಧಿಸಲಾಗುತ್ತದೆ. ಸಂಬಂಧಪಟ್ಟ ರೈಲ್ವೆ ಅಧಿಕಾರಿಯ ಎಚ್ಚರಿಕೆಯ ನಡುವೆಯೂ ಅದೇ ತಪ್ಪನ್ನ ಮರುಕಳಿಸಿದರೆ, ಅಂತವರಿಗೆ ಆರು ತಿಂಗಳ ಸಾಧಾರಣ ಜೈಲು ಶಿಕ್ಷೆ ಅಥವಾ 5,000 ರೂ. ದಂಡ ಅಥವಾ ಇವೆರಡನ್ನೂ ಒಟ್ಟಿಗೆ ವಿಧಿಸುವ ಅವಕಾಶ ಕಾಯ್ದೆಯಲ್ಲಿದೆ.
ಟಿಕೆಟ್ ಪರೀಕ್ಷಕರಿಗಿಂತ (TTE) ಮೇಲಿನ ದರ್ಜೆಯ ವಾಣಿಜ್ಯ ಸಿಬ್ಬಂದಿಗೆ ಈ ದಂಡ ವಿಧಿಸುವ ಅಧಿಕಾರವನ್ನ ನೀಡಲಾಗಿದೆ.
ಸಾರ್ವಜನಿಕ ನಡವಳಿಕೆ ಬಗ್ಗೆ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಬೇಸರ
ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ವರ್ತಿಸಬೇಕು ಎಂಬ ಕನಿಷ್ಠ ಜ್ಞಾನವಿಲ್ಲದ ಅನೇಕ ಜನರಿಂದಾಗಿ ಇಂತಹ ಕಠಿಣ ನಿಯಮಗಳು ಅನಿವಾರ್ಯವಾಗಿವೆ. ಕಳೆದ ತಿಂಗಳು ಕರ್ನಾಟಕ ಸಂಗೀತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರು ತಮ್ಮ ರೈಲು ಪ್ರಯಾಣದ ವೇಳೆ ಅನುಭವಿಸಿದ ಕಹಿ ಘಟನೆಯನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
56 ಸೀಟುಗಳಿದ್ದ ಎಸಿ 2-ಟೈರ್ ಕೋಚ್‌ನಲ್ಲಿ ಸುಮಾರು 40 ಮಂದಿಯ ಗುಂಪೊಂದು ಜೋರಾಗಿ ಮಾತನಾಡುತ್ತಾ, ಗದ್ದಲ ಮಾಡುತ್ತಾ ಇತರರ ನಿದ್ದೆ ಮತ್ತು ನೆಮ್ಮದಿಗೆ ಕಿರಿಕಿರಿ ಉಂಟುಮಾಡಿತ್ತು.
ಈ ವೇಳೆ ಟಿಟಿಇ ಬಳಿ ಕೋಚ್ ಬದಲಾಯಿಸಲು ವಿನಂತಿಸಿದರೂ ಸೀಟು ಲಭ್ಯವಿರಲಿಲ್ಲ. ಮತ್ತೊಂದು ಗುಂಪು 'ಯುನೊ' ಕಾರ್ಡ್ ಆಟವಾಡುತ್ತಾ ವಿಪರೀತ ಗದ್ದಲ ಮಾಡುತ್ತಿತ್ತು. ಟಿಟಿಇ ಮಧ್ಯಪ್ರವೇಶಿಸಿ ಎಚ್ಚರಿಕೆ ನೀಡಿದ ನಂತರವಷ್ಟೇ ಅವರು ಆಟ ನಿಲ್ಲಿಸಿದ್ದರು. ಈ ಘಟನೆಯನ್ನ ವಿವರಿಸಿದ್ದ ಗಾಯಕಿ, "ನಮ್ಮ ದೇಶದಲ್ಲಿ ಜನರ ಸಾರ್ವಜನಿಕ ನಡವಳಿಕೆ ಯಾವಾಗ ಸುಧಾರಿಸುತ್ತದೆಯೋ?" ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದರು.
ಒಟ್ಟಾರೆಯಾಗಿ, ರೈಲು ಪ್ರಯಾಣಿಕರು ಇತರರಿಗೆ ತೊಂದರೆಯಾಗದಂತೆ ಇಯರ್‌ಫೋನ್ ಬಳಸುವುದು ಮತ್ತು ಶಾಂತಿಯನ್ನ ಕಾಪಾಡುವುದು ಪ್ರತಿಯೊಬ್ಬರ ನಾಗರಿಕ ಕರ್ತವ್ಯವಾಗಿದೆ. ನಿಯಮ ಉಲ್ಲಂಘಿಸಿದರೆ ದಂಡ ಮತ್ತು ಜೈಲು ಶಿಕ್ಷೆ ಎದುರಿಸುವುದು ಖಚಿತ.


Click it and Unblock the Notifications
