ವರ್ಷದ ಹಿಂದೆ ಹೊರಟಿದ್ದ 32 ಟ್ರಕ್ ಸರ್ಕಾರಿ ಅಕ್ಕಿ ಎಲ್ಲಿ ಹೋಯ್ತು? ದಾರಿ ಮಧ್ಯೆಯೇ ಮಾಯವಾದ ಸಾವಿರಾರು ಕ್ವಿಂಟಲ್ ಅಕ್ಕಿ
ಭೋಪಾಲ್: ಸಿನಿಮಾದ ಕಥೆಯನ್ನೂ ಮೀರಿಸುವಂತಹ ಭಾರಿ ಅಕ್ರಮವೊಂದು ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಒಂದು ವರ್ಷದ ಹಿಂದೆ ರಾಜ್ಯದ ಕಟ್ನಿ ಜಿಲ್ಲೆಯಿಂದ ಇಂದೋರ್, ಹರ್ದಾ ಮತ್ತು ನೀಮುಚ್ ಜಿಲ್ಲೆಗಳಿಗೆ ಹೊರಟಿದ್ದ ಬರೋಬ್ಬರಿ 4 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ 32 ಟ್ರಕ್ ಅಕ್ಕಿ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ತಡವಾಗಿ ಬಯಲಾಗಿದೆ.
ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಬಡವರಿಗೆ ಹಂಚಬೇಕಿದ್ದ ಸಾವಿರಾರು ಕ್ವಿಂಟಲ್ ಪೌಷ್ಟಿಕಾಂಶಯುಕ್ತ ಅಕ್ಕಿ ಹೊತ್ತ ಲಾರಿಗಳು ವರ್ಷ ಕಳೆದರೂ ನಿಗದಿತ ಗೋದಾಮುಗಳನ್ನ ತಲುಪದಿರುವುದು ಭಾರಿ ಅನುಮಾನಕ್ಕೆ ಕಾರಣವಾಗಿದೆ.

ನಾಗರಿಕ ಸರಬರಾಜು ನಿಗಮದ ದಾಖಲೆ ಪರಿಶೀಲನೆಯಲ್ಲಿ ಬಯಲಾಯ್ತು ಹಗರಣ
ಕಟ್ನಿಯಿಂದ ಇಂದೋರ್‌ಗೆ 544 ಕಿ.ಮೀ., ಹರ್ದಾಗೆ 457 ಕಿ.ಮೀ. ಹಾಗೂ ನೀಮುಚ್‌ಗೆ 856 ಕಿ.ಮೀ. ದೂರವಿದೆ. ಇಷ್ಟು ದೂರ ಸಾಗಲು ಕೆಲವೇ ದಿನಗಳು ಸಾಕಾಗಿದ್ದರೂ, 2025ರಲ್ಲಿ ಹೊರಟ 32 ಟ್ರಕ್‌ಗಳು ವರ್ಷವಾದರೂ ತಲುಪದ ಬಗ್ಗೆ ಯಾರೂ ಗಮನ ಹರಿಸಿರಲಿಲ್ಲ. ಇತ್ತೀಚೆಗೆ ಮಧ್ಯಪ್ರದೇಶ ರಾಜ್ಯ ನಾಗರಿಕ ಸರಬರಾಜು ನಿಗಮದ ಅಧಿಕಾರಿಗಳು 2025-26ನೇ ಸಾಲಿನ ಅಕ್ಕಿ ಸಾಗಣೆ ದಾಖಲೆಗಳನ್ನ ಫಲಾನುಭವಿ ಜಿಲ್ಲೆಗಳ ದಾಖಲೆಗಳೊಂದಿಗೆ ತಾಳೆ ಹಾಕಿದಾಗ ಈ ಭಾರಿ ವ್ಯತ್ಯಾಸ ಪತ್ತೆಯಾಗಿದೆ.
ಅಧಿಕೃತ ಮಾಹಿತಿಯ ಪ್ರಕಾರ, ಒಟ್ಟು 32 ಟ್ರಕ್‌ಗಳ ಪೈಕಿ ಇಂದೋರ್‌ಗೆ ಕೇವಲ ಒಂದು ಟ್ರಕ್ ಮಾತ್ರ ತಲುಪಿದ್ದು, ಉಳಿದ 31 ಟ್ರಕ್‌ಗಳಲ್ಲಿದ್ದ ಸುಮಾರು 21,765 ಚೀಲ ಅಂದರೆ 10,797 ಕ್ವಿಂಟಲ್‌ಗೂ ಅಧಿಕ ಸರ್ಕಾರಿ ಅಕ್ಕಿ ದಾರಿ ಮಧ್ಯೆಯೇ ನಾಪತ್ತೆಯಾಗಿದೆ. ಇದರಲ್ಲಿ ಹರ್ದಾದ 14 ಟ್ರಕ್, ನೀಮುಚ್‌ನ 10 ಟ್ರಕ್ ಹಾಗೂ ಇಂದೋರ್‌ನ 7 ಟ್ರಕ್‌ಗಳ ಅಕ್ಕಿಯ ಲೆಕ್ಕವೇ ಸಿಗುತ್ತಿಲ್ಲ.
ಸಾಗಣೆದಾರರಿಂದ ನಕಲಿ ರಸೀದಿ ಸಲ್ಲಿಕೆ: ಮಧ್ಯಪ್ರದೇಶ ಅಕ್ಕಿ ಹಗರಣದಲ್ಲಿ ಎಫ್‌ಐಆರ್ ದಾಖಲು
ಅಧಿಕಾರಿಗಳು ನೋಟಿಸ್ ನೀಡಿದಾಗ, ಅಕ್ಕಿ ಸಾಗಣೆಯ ಗುತ್ತಿಗೆ ಪಡೆದಿದ್ದ ಭಾಗ್ಯಲಕ್ಷ್ಮಿ ರೋಡ್ ಲೈನ್ಸ್ ಸಂಸ್ಥೆಯು ಎಲ್ಲಾ 32 ಟ್ರಕ್‌ಗಳ ಅಕ್ಕಿಯನ್ನ ತಲುಪಿಸಲಾಗಿದೆ ಎಂದು ವಾದಿಸಿ ರಸೀದಿಗಳನ್ನ ಸಲ್ಲಿಸಿತ್ತು. ಆದರೆ, ಇಂದೋರ್, ಹರ್ದಾ ಮತ್ತು ನೀಮುಚ್ ಜಿಲ್ಲಾ ವ್ಯವಸ್ಥಾಪಕರು ಈ ರಸೀದಿಗಳನ್ನು ಭೌತಿಕವಾಗಿ ಪರಿಶೀಲಿಸಿದಾಗ ಅವು ನಕಲಿ ಎಂಬುದು ಬಯಲಾಗಿದೆ.
ರಸೀದಿಗಳ ಮೇಲೆ ಅಧಿಕಾರಿಗಳ ಸೀಲ್ ಮತ್ತು ಸಹಿಯನ್ನ ಕಂಪ್ಯೂಟರ್ ಮೂಲಕ ಅಂಟಿಸಲಾಗಿತ್ತು ಹಾಗೂ ಗೋದಾಮುಗಳ ದಾಖಲೆಯಲ್ಲಿ ಅಕ್ಕಿ ಸ್ವೀಕರಿಸಿದ ಯಾವುದೇ ಮಾಹಿತಿ ಇರಲಿಲ್ಲ.
ಈ ಅಕ್ಕಿ ಹಗರಣದ ಗಂಭೀರತೆಯನ್ನ ಪರಿಗಣಿಸಿ, ಕಟ್ನಿಯ ರಂಗನಾಥ ನಗರ ಪೊಲೀಸ್ ಠಾಣೆಯಲ್ಲಿ ಸಾಗಣೆ ಸಂಸ್ಥೆಯ ನಾಲ್ವರು ಪಾಲುದಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಹಾಗೂ ಸಂಸ್ಥೆಯನ್ನು ಕಟ್ನಿ ಜಿಲ್ಲೆಯ ಸಾಗಣೆ ಕಾರ್ಯದಿಂದ ನಿಷೇಧಿಸಲಾಗಿದೆ.
7 ದಿನಗಳಲ್ಲಿ ವರದಿ ಸಲ್ಲಿಸಲು ಗೋವಿಂದ್ ಸಿಂಗ್ ರಜಪೂತ್ ಆದೇಶ
ಪ್ರಕರಣವು ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದಂತೆಯೇ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋವಿಂದ್ ಸಿಂಗ್ ರಜಪೂತ್ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಭೋಪಾಲ್‌ನ ಹಿರಿಯ ಅಧಿಕಾರಿಗಳ ತಂಡದಿಂದ ಸಮಗ್ರ ತನಿಖೆ ನಡೆಸಿ, ಏಳು ದಿನಗಳ ಒಳಗಾಗಿ ವಿವರವಾದ ವರದಿ ಸಲ್ಲಿಸುವಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ.ಸಿ. ಗುಪ್ತಾ ಅವರಿಗೆ ಸೂಚಿಸಿದ್ದಾರೆ.
ಅಕ್ಕಿಯನ್ನು ಬೇರೆಡೆ ಅಕ್ರಮವಾಗಿ ಮಾರಾಟ ಮಾಡಲಾಗಿದೆಯೇ ಅಥವಾ ಇದರ ಹಿಂದೆ ಇಲಾಖೆಯ ಅಧಿಕಾರಿಗಳ ಕೈವಾಡವಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಿಮಿನಲ್ ಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಕೆ ನೀಡಿದ್ದಾರೆ.




Click it and Unblock the Notifications
