ಎಲ್ಪಿಜಿ ಸಿಲಿಂಡರ್ ಬೆಲೆ 250 ರು ಏರಿಕೆ?
ನವದೆಹಲಿ, ಜು.4: ಕಳೆದ ಬುಧವಾರವಷ್ಟೇ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದ ನರೇಂದ್ರ ಮೋದಿ ಅವರ ಎನ್ಡಿಎ ಸರ್ಕಾರ ಮತ್ತೊಮ್ಮೆ ಸಿಲಿಂಡರ್ ಬೆಲೆ ಏರಿಕೆಗೆ ಮುಂದಾಗಿರುವ ಸುದ್ದಿ ಬಂದಿದೆ. ಸಿಲಿಂಡರ್ ಹಾಗೂ ಸೀಮೆಎಣ್ಣೆ ಬೆಲೆ ಏರಿಕೆಗೆ ಕಿರೀಟ್ ಪಾರೇಖ್ ಸಮಿತಿ ಶಿಫಾರಸು ಮಾಡಿದೆ
ಇರಾಕಿನ ಆಂತರಿಕ ಯುದ್ಧದ ಪರಿಣಾಮವಾಗಿ ಜಾಗತಿಕವಾಗಿ ಕಚ್ಚಾತೈಲದ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಡೀಸೆಲ್ ದರ ಏರಿಕೆ ಮಾಡಲಾಗಿತ್ತು. ನಂತರ ಸಬ್ಸಿಡಿ ರಹಿತ ಸಿಲಿಂಡರ್ ದರ ಏರಿಕೆ ಹೊರೆ ಹೊತ್ತಿದ್ದ ಜನ ಸಾಮಾನ್ಯರಿಗೆ ಈಗ ಭಾರಿ ಪ್ರಮಾಣ ಹೆಬ್ಬಂಡೆಯನ್ನು ಎತ್ತಿ ಹಾಕಲು ಸರ್ಕಾರ ನಿರ್ಧರಿಸಿದೆ ಎಂಬ ಸುದ್ದಿ ಬಂದಿದೆ. [ಕರ್ನಾಟಕದಲ್ಲಿ ಎಲ್‌ಪಿಜಿ ಬೆಲೆ ಇಳಿಕೆ]
ಪ್ರತಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಹೆಚ್ಚಿಗೆ 250 ರುಪಾಯಿ ಹಾಗೂ ಪ್ರತಿ ಲೀಟರ್ ಸೀಮೆಎಣ್ಣೆ ಬೆಲೆಯನ್ನು 4 ರಿಂದ 5 ರುಪಾಯಿಗೆ ಏರಿಕೆ ಮಾಡಬೇಕು ಎಂದು ಕಿರೀಟ್ ಪಾರೇಖ್ ಸಮಿತಿ ಶಿಫಾರಸು ಮಾಡಿದೆ.

ಪ್ರತಿ ತಿಂಗಳು ಡೀಸೆಲ್ ಬೆಲೆ ಲೀಟರಿಗೆ 40 ರಿಂದ 50 ಪೈಸೆ ಏರಿಸುವುದನ್ನೇ ಮುಂದುವರಿಸಿಕೊಂಡು ಹೋಗುವುದನ್ನು ತೈಲ ಸಚಿವಾಲಯವು ಪ್ರಸ್ತಾಪಿಸಲಿದೆ.
ಎಲ್‌ಪಿಜಿ ಹಾಗೂ ಸೀಮೆಎಣ್ಣೆ ದರ ಏರಿಕೆ ಕುರಿತ ತಜ್ಞನ ಸಮಿತಿಯ ಈ ಶಿಫಾರಸನ್ನು ಇಂಧನ ಸಚಿವಾಲಯ ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಗೆ ಕಳಿಸುವ ಸಾಧ್ಯತೆ ಇದೆ. [ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆ]
ಯೋಜನಾ ಆಯೋಗದ ಸದಸ್ಯರಾದ ಕಿರೀಟ್ ಪಾರೇಖ್ ಅವರ ಸಮಿತಿ ನೀಡಿರುವ ಶಿಫಾರಸ್ಸನ್ನು ಸರ್ಕಾರ ಮಾನ್ಯ ಮಾಡುವ ಸಾಧ್ಯತೆ ಹೆಚ್ಚಿದೆ ಎಂಬುದು ಇತಿಹಾಸದಿಂದ ತಿಳಿದು ಬರುತ್ತದೆ. 2013ರ ಅಕ್ಟೋಬರ್ ನಲ್ಲಿ ಪೆಟ್ರೋಲ್ ದರ 5 ರು ಪ್ರತಿ ಲೀಟರ್ ಏರಿಕೆ ಹಾಗೂ ಸೀಮೆಎಣ್ಣೆ ದರ ಪ್ರತಿ ಲೀಟರ್ ಗೆ 4 ರು ಏರಿಕೆಗೆ ಮತ್ತು ಎಲ್ಪಿಜಿ ಸಿಲಿಂಡರ್ ದರ 250 ರು ಪ್ರತಿ ಸಿಲಿಂಡರ್ ಗೆ ಏರಿಕೆ ಮಾಡುವಂತೆ ಸಮಿತಿ ಶಿಫಾರಸು ಮಾಡಿತ್ತು. [ಸಬ್ಸಿಡಿ ಸಿಲಿಂಡರ್ ವರ್ಷಕ್ಕೆ 12ಕ್ಕೇರಿತು!]
ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಪಡಿತರ ವಿತರಣಾ ವ್ಯವಸ್ಥೆಯಿಂದ ನೀಡಲಾಗುವ ಸೀಮೆಎಣ್ಣೆಯಿಂದ ಪ್ರತಿ ಲೀಟರ್ ಗೆ 33.07 ರು ಹಾಗೂ ಎಲ್ ಪಿಜಿ ಪ್ರತಿ ಸಿಲಿಂಡರ್ ನಿಂದ 449.17 ರು ಕಳೆದುಕೊಳ್ಳುತ್ತಿವೆ.
ಡೀಸೆಲ್ ಸಬ್ಸಿಡಿ ಕಡಿತ, ಸಿಲಿಂಡರ್ ಸಬ್ಸಿಡಿ ವಾರ್ಷಿಕ 12 ರಿಂದ 6ಕ್ಕೆ ಇಳಿಕೆ ಶಿಫಾರಸ್ಸನ್ನು ಸಮಿತಿ ನೀಡಿದ್ದರೂ ಪೆಟ್ರೋಲಿಯಂ ಖಾತೆ ಸಚಿವಾಲಯ ಇದಕ್ಕೆ ಒಪ್ಪಿಲ್ಲ. ಒಟ್ಟಾರೆ ದರ ಏರಿಕೆ ಆಗದಿದ್ದರೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಕನಿಷ್ಠ 1,07,850 ಕೋಟಿ ರು ಆದಾಯ ನಷ್ಟ ಅನುಭವಿಸಲಿದೆ.












Click it and Unblock the Notifications