NEET PG ಪರೀಕ್ಷೆಯಲ್ಲಿ ಭಾರಿ ಬದಲಾವಣೆ: ಪ್ರಶ್ನೆಪತ್ರಿಕೆಗಳ 24x7 ರಕ್ಷಣೆಗೆ 7.5 ಕೋಟಿ ರೂ. ಟೆಂಡರ್ ಕರೆದ ಎನ್‌ಟಿಎ

ನವದೆಹಲಿ: ದೇಶಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದ್ದ ನೀಟ್ ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಅವಾಂತರದಿಂದ ಈಗ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ. ಹಾಗೆಯೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ), ಮುಂಬರುವ ನೀಟ್-ಪಿಜಿ ವೈದ್ಯಕೀಯ ಪರೀಕ್ಷೆಯಲ್ಲಿ ಯಾವುದೇ ಅವಾಂತರ ಅಥವಾ ಲೋಪವಾಗದಂತೆ ತಡೆಯಲು ಭರ್ಜರಿ ಸರ್ಜರಿಗೆ ಮುಂದಾಗಿದೆ. ಪರೀಕ್ಷಾ ಕೇಂದ್ರಗಳ ಆಯ್ಕೆ, ಸಮಯ ಬದಲಾವಣೆ, ಪ್ರಶ್ನೆಪತ್ರಿಕೆ ರಕ್ಷಣೆ ಮತ್ತು ಡಿಜಿಟಲ್ ಎನ್‌ಕ್ರಿಪ್ಷನ್ ಅಳವಡಿಕೆ ಸೇರಿದಂತೆ ಇಡೀ ಪರೀಕ್ಷಾ ವ್ಯವಸ್ಥೆಯಲ್ಲಿಯೇ ಬದಲಾವಣೆಗಳನ್ನ ತರಲಾಗಿದೆ.

ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನೀಟ್-ಪಿಜಿ ಪರೀಕ್ಷಾ ಸಿದ್ಧತೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲಾಯಿತು. ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ಆಗಸ್ಟ್ 30ರಂದು ನಡೆಯಲಿರುವ ಈ ಪರೀಕ್ಷೆಗೆ ದೇಶಾದ್ಯಂತ ಒಟ್ಟು 2,73,183 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು 340 ನಗರಗಳ 1,300 ಕೇಂದ್ರಗಳಲ್ಲಿ ಒಂದೇ ಪಾಳಿಯಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.

NEET PG Exam

ಪ್ರಶ್ನೆಪತ್ರಿಕೆಗಳ 24x7 ಭದ್ರತೆಗೆ 7.5 ಕೋಟಿ ರೂ. ಟೆಂಡರ್

ಪ್ರಶ್ನೆಪತ್ರಿಕೆ ಸೋರಿಕೆ ಹಗರಣದಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಎನ್‌ಟಿಎ, ಇದೀಗ ಭದ್ರತೆಯನ್ನ ಹೆಚ್ಚಿಸಲು ಮುಂದಾಗಿದೆ. ದೆಹಲಿಯಲ್ಲಿರುವ ತನ್ನ ಪ್ರಧಾನ ಕಚೇರಿ, 9 ಪ್ರಾದೇಶಿಕ ಕಚೇರಿಗಳು, ಸರ್ವರ್ ಕೊಠಡಿಗಳು, ಸ್ಟ್ರಾಂಗ್ ರೂಮ್‌ಗಳು ಹಾಗೂ ರಹಸ್ಯ ಪರೀಕ್ಷಾ ಸಾಮಗ್ರಿಗಳನ್ನ ದಾಸ್ತಾನು ಮಾಡುವ ಕೇಂದ್ರಗಳಿಗೆ ದಿನದ 24 ಗಂಟೆಯೂ ವೃತ್ತಿಪರ ಭದ್ರತೆ ಒದಗಿಸಲು ಅಂದಾಜು 7.5 ಕೋಟಿ ರೂ. ಮೊತ್ತದ ಟೆಂಡರ್ ಆಹ್ವಾನಿಸಿದೆ.

ಸರ್ಕಾರಿ ಇಲಾಖೆಗಳಲ್ಲಿ ಸಾಮಾನ್ಯವಾಗಿ ಕಡಿಮೆ ವೆಚ್ಚದ ಬಿಡ್‌ದಾರರಿಗೆ ಟೆಂಡರ್ ನೀಡುವ ಸಂಪ್ರದಾಯವನ್ನ ಬದಿಗಿಟ್ಟಿರುವ ಎನ್‌ಟಿಎ, ಈ ಬಾರಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ವಿಮಾನ ನಿಲ್ದಾಣ, ಮೆಟ್ರೋ ಅಥವಾ ಸರ್ಕಾರಿ ಸಂಸ್ಥೆಗಳಲ್ಲಿ ಕನಿಷ್ಠ 5 ವರ್ಷಗಳ ಕಾಲ ಭದ್ರತೆ ಒದಗಿಸಿದ ಅನುಭವ ಹಾಗೂ ವಾರ್ಷಿಕ 10 ಕೋಟಿ ರೂ. ವಹಿವಾಟು ಹೊಂದಿರುವ ವೃತ್ತಿಪರ ಸಂಸ್ಥೆಗಳಿಗೆ ಮಾತ್ರ ಬಿಡ್ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಯ್ಕೆಯಾಗುವ ಸಂಸ್ಥೆಗೆ ಆರಂಭದಲ್ಲಿ 2 ವರ್ಷಗಳ ಒಪ್ಪಂದ ನೀಡಲಾಗುತ್ತದೆ.

ಮೂರು ರಾಜ್ಯಗಳ ಆಯ್ಕೆಗೆ ಅವಕಾಶ

ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ಆಯ್ಕೆಯಲ್ಲಿ ಈ ಬಾರಿ ರಿಯಾಯಿತಿ ನೀಡಲಾಗಿದೆ. ಈ ಹಿಂದಿನ 'ಮೊದಲು ಬಂದವರಿಗೆ ಮೊದಲ ಆದ್ಯತೆ' ನಿಯಮವನ್ನ ರದ್ದುಗೊಳಿಸಿದ್ದು, ಅಭ್ಯರ್ಥಿಗಳು ತಮಗೆ ಅನುಕೂಲವಾಗುವ 3 ರಾಜ್ಯಗಳನ್ನ ತಮ್ಮ ಆದ್ಯತೆಯ ಮೇರೆಗೆ ಆಯ್ಕೆ ಮಾಡಿಕೊಳ್ಳಬಹುದು. ಅದರಲ್ಲಿ ತವರು ರಾಜ್ಯವನ್ನ ಮೊದಲ ಆದ್ಯತೆಯನ್ನಾಗಿ ಪರಿಗಣಿಸಲಾಗುತ್ತದೆ. ಇದರಿಂದ ವೈದ್ಯಕೀಯ ವಿದ್ಯಾರ್ಥಿಗಳು ದೂರದ ರಾಜ್ಯಗಳಿಗೆ ಪ್ರಯಾಣಿಸುವುದು ತಪ್ಪಲಿದೆ.ಇದರ ಜೊತೆಗೆ, ಈ ಬಾರಿ ಪರೀಕ್ಷೆ ನಡೆಯುವ 3 ವಾರಗಳ ಮೊದಲೇ ಪರೀಕ್ಷಾ ಕೇಂದ್ರದ ಮಾಹಿತಿಯನ್ನ ತಿಳಿಸಲು ನಿರ್ಧರಿಸಲಾಗಿದೆ.

ಪರೀಕ್ಷಾ ಮಾದರಿಯಲ್ಲಿ ಮಾರ್ಪಾಡು

ನೀಟ್-ಪಿಜಿ ಪರೀಕ್ಷಾ ಮಾದರಿಯಲ್ಲೂ ಪ್ರಮುಖ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಇದ್ದ 200 ಪ್ರಶ್ನೆಗಳ ಬದಲಿಗೆ 180 ಪ್ರಶ್ನೆಗಳನ್ನ ರೂಪಿಸಲಾಗಿದ್ದು, 210 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಇದರಿಂದ ಅಭ್ಯರ್ಥಿಗಳಿಗೆ ಉತ್ತರಿಸಲು ಹೆಚ್ಚು ಸಮಯ ಸಿಗಲಿದೆ.

ಪರೀಕ್ಷಾ ದಿನದಂದು ಆಧಾರ್ ಆಧಾರಿತ ಬಯೋಮೆಟ್ರಿಕ್ ಹಾಗೂ ಐರಿಸ್ ಸ್ಕ್ಯಾನ್ ಕಡ್ಡಾಯಗೊಳಿಸಲಾಗಿದೆ. ಪರೀಕ್ಷೆ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಮತ್ತು ಮೊಬೈಲ್ ಜ್ಯಾಮರ್‌ಗಳನ್ನ ಅಳವಡಿಸಲಾಗುತ್ತಿದೆ. ಪ್ರಶ್ನೆಪತ್ರಿಕೆ ತಯಾರಿಕೆಯಿಂದ ಹಿಡಿದು ಪರೀಕ್ಷೆ ಆರಂಭವಾಗುವ ಕೊನೆಯ ಕ್ಷಣದವರೆಗೆ ಸಂಪೂರ್ಣ ಡಿಜಿಟಲ್ ಎನ್‌ಕ್ರಿಪ್ಷನ್ ವ್ಯವಸ್ಥೆ ಜಾರಿಯಲ್ಲಿರಲಿದೆ.

ನಾಳೆಯಿಂದ ನೀಟ್-ಯುಜಿ ಕೌನ್ಸೆಲಿಂಗ್ ಆರಂಭ

ಇನ್ನೊಂದೆಡೆ, ಅಖಿಲ ಭಾರತ ಕೋಟಾದಡಿ ಎಂಬಿಬಿಎಸ್ ಹಾಗೂ ಇತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಕೌನ್ಸೆಲಿಂಗ್ ಪ್ರಕ್ರಿಯೆ ಆಗಸ್ಟ್ 4ರಿಂದ ಆರಂಭವಾಗಲಿದೆ ಎಂದು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (MCC) ವೇಳಾಪಟ್ಟಿ ಬಿಡುಗಡೆ ಮಾಡಿದೆ.

ಮೊದಲ ಸುತ್ತಿನ ಕೌನ್ಸೆಲಿಂಗ್ ಆಗಸ್ಟ್ 4ರಿಂದ 17ರವರೆಗೆ ನಡೆಯಲಿದ್ದು, ಪ್ರವೇಶ ಪಡೆಯಲು ಆಗಸ್ಟ್ 22 ಕೊನೆಯ ದಿನವಾಗಿದೆ. ಎರಡನೇ ಸುತ್ತು ಆಗಸ್ಟ್ 24ರಿಂದ ಸೆಪ್ಟೆಂಬರ್ 2ರವರೆಗೆ ಮತ್ತು ಮೂರನೇ ಸುತ್ತು ಸೆಪ್ಟೆಂಬರ್ 10ರಿಂದ 18ರವರೆಗೆ ನಡೆಯಲಿದ್ದು, ಸೆಪ್ಟೆಂಬರ್ 8ರಿಂದಲೇ ಶೈಕ್ಷಣಿಕ ವರ್ಷ ಅಧಿಕೃತವಾಗಿ ಪ್ರಾರಂಭವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+