• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ-ಮರಾಠಿ ಸಾಹಿತ್ಯ ಸೇತುವೆ ಮೀನಾ ವಾಂಗೀಕರ್ ಇನ್ನಿಲ್ಲ

By ಜಯಂತ್ ಕಾಯ್ಕಿಣಿ
|

ಪುಣೆ, ಅಕ್ಟೋಬರ್ 27 : ಕಳೆದ ನಲವತ್ತು ವರ್ಷಗಳಿಂದ ಕನ್ನಡದ ಮಹತ್ವದ ಕಾದಂಬರಿಗಳನ್ನು, ನೂರಾರು ಕಥೆಗಳನ್ನು ಮರಾಠಿಗೆ ಅನುವಾದಿಸುತ್ತ ಬಂದಿದ್ದ ಅನುವಾದಕಿ, ಸಂವೇದನಾಶೀಲ ಬರಹಗಾರ್ತಿ ಮೀನಾ ವಾಂಗೀಕರು ಅವರು ಅಕ್ಟೋಬರ್ 22ರಂದು, ಮಹಾನವಮಿ ದಿನದಂದು ಪುಣೆಯಲ್ಲಿ ನಿಧನರಾದರು.

ಪುಣೆಯಲ್ಲಿ ನೆಲೆಸಿದ್ದ ಮೀನಾ, ಕನ್ನಡದ ಖ್ಯಾತ ಲೇಖಕ ವಿ.ಎಂ. ಇನಾಂದಾರ್ ಅವರ ಮಗಳು. ಇನಾಂದಾರ್ ಅವರ 'ವಿಜಯಯಾತ್ರೆ', 'ತ್ರಿಶಂಕು' ಕಾದಂಬರಿಗಳ ಜೊತೆ ಡಾ. ಶಿವರಾಮ್ ಕಾರಂತ್ ಅವರ 'ಮೂಕಜ್ಜಿಯ ಕನಸುಗಳು', ವ್ಯಾಸರಾಯ ಬಲ್ಲಾಳ ಅವರ 'ಬಂಡಾಯ', ಅನುಪಮಾ ನಿರಂಜನ್ ಅವರ 'ಮೂಲಮುಖಿ', ರಾವ್ ಬಹಾದ್ದೂರ್ ಅವರ 'ಧೂಮಕೇತು' - ಇವು ಮೀನಾ ಅವರ ಸಂವೇದನಾಶೀಲ ಅನುವಾದದಿಂದ ಮರಾಠಿಯಲ್ಲಿ ಪ್ರಸಿದ್ಧ ಕಾದಂಬರಿಗಳಾಗಿ ಜನಜನಿತವಾಗಿವೆ.

ಮರಾಠಿಯಲ್ಲಿ ದೀಪಾವಳಿ ವಿಶೇಷಾಂಕಗಳಲ್ಲಿ ನಿಯಮಿತವಾಗಿ ಕನ್ನಡದ ಕಥೆಗಳನ್ನು ಅನುವಾದಿಸಿ ಪ್ರಕಟಿಸುತ್ತ ಬಂದಿದ್ದ ಮೀನಾ, ಕನ್ನಡ ಕಥನದ ವೈವಿಧ್ಯ, ವಿಸ್ತಾರವನ್ನು ಮರಾಠಿ ಓದುಗರಿಗೆ ತಲುಪಿಸಿದ ಸದ್ದಿರದ ಕೆಲಸಗಾರ್ತಿ. ಯಶವಂತ ಚಿತ್ತಾಲ, ರಾಘವೇಂದ್ರ ಖಾಸನೀಸ, ನಿರಂಜನ, ಶಾಂತಾರಾಮ ಸೋಮಯಾಜಿ, ಜಯಂತ್ ಕಾಯ್ಕಿಣಿ, ನೇಮಿಚಂದ್ರ, ಶಾಂತಾದೇವಿ ಕಣವಿ ಮುಂತಾದ ವಿವಿಧ ಶೈಲಿ, ದೃಷ್ಟಿಕೋನಗಳ ಬರಹಗಾರರ ಕಥೆಗಳನ್ನು ಮರಾಠಿಯ ಕಿರ್ಲೋಸ್ಕರ್, ಸಕಾಳ್, ಸ್ತ್ರೀ, ಆಯುಧ, ಮಾನಿನಿ, ಮಹೇರ್ ಇತ್ಯಾದಿ ವಿಶೇಷಾಂಕಗಳಲ್ಲಿ ಪ್ರಕಟಿಸಿದ ಉತ್ಸಾಹಿ ಅನುವಾದಕಿ ಮೀನಾ.

ಮೀನಾ ಮೂಲತಃ ಇಂಗ್ಲಿಷ್ ಸಾಹಿತ್ಯದಲ್ಲಿ ಅಧ್ಯಯನ ಮಾಡಿದವರು. ಕಥನವಷ್ಟೇ ಅಲ್ಲ, ಮರಾಠಿಯ ವಿವಿಧ ವೇದಿಕೆ, ಸಂಕಿರಣ, ಪತ್ರಿಕೆಗಳಲ್ಲಿ ಕನ್ನಡ ಸಾಹಿತ್ಯದ ಸ್ಥಿತಿಗತಿಯ ಕುರಿತು ನಿರಂತರ ಜಿಜ್ಞಾಸೆ ನಡೆಸಿದ ಶ್ರೇಯ ಅವರದು. ಇವರ ಪ್ರಭಾವ ಎಷ್ಟಿತ್ತೆಂದರೆ, 'ಪ್ರಪಂಚ' ಎಂಬ ಜನಪ್ರಿಯ ಪತ್ರಿಕೆ ತನ್ನ ಏಪ್ರಿಲ್ 2000 ಮತ್ತು ಜೂನ್ 2004 ಸಂಚಿಕೆಗಳನ್ನು ಮೀನಾ ವಾಂಗೀಕರರು ಅನುವಾದಿಸಿದ ಕನ್ನಡ ಕಥೆಗಳಿಗಾಗಿ ಮೀಸಲಿಟ್ಟಿತ್ತು.

ಮೀನಾ ಸ್ವತಂತ್ರವಾಗಿ ಮರಾಠಿಯಲ್ಲಿ ಬರೆದ '1500 ವರುಷಗಳ ಭಾರತೀಯ ಮಹಿಳಾ ಸಾಹಿತ್ಯ' ಉದ್‌ಗ್ರಂಥವು ಎರಡು ಸಂಪುಟಗಳಲ್ಲಿ ಪ್ರಕಟವಾಗಿದ್ದು, ಇದರ ಒಂದು ಸಂಪುಟ 'ಕನ್ನಡ ಮಹಿಳಾ ಸಾಹಿತ್ಯ'ಕ್ಕೆ ಮೀಸಲಾಗಿದೆ. ಈ ಸಂಪುಟಗಳು ಪುಣೆಯ ಸಾಹಿತ್ಯಪ್ರೇಮಿ ಭಗಿನಿ ಮಂಡಳದಿಂದ ಇಂಗ್ಲಿಷಿನಲ್ಲೂ ಪ್ರಕಟಗೊಂಡಿದೆ. ಅಲ್ಲದೆ, ಮರಾಠಿ ಸಾಹಿತ್ಯದ ಬಗ್ಗೆ ಅವರು ಕನ್ನಡದಲ್ಲೂ ಬರೆದಿದ್ದಾರೆ.

ಮರಾಠಿ ಸಾಹಿತ್ಯ ಸಮ್ಮೇಲನಗಳಲ್ಲಿ ಮತ್ತೆ ಮತ್ತೆ ಕನ್ನಡ ಸಾಹಿತ್ಯ ಗರಿಮೆಯನ್ನು ಹಿರಿಮೆಯನ್ನು ಪ್ರತಿಪಾದಿಸುತ್ತಲೇ ಬಂದಿದ್ದ ಮೀನಾರನ್ನು ಕರ್ನಾಟಕದ ವೇದಿಕೆಗಳು ಬಳಸಿಕೊಂಡಿದ್ದು ಕಡಿಮೆಯೇ ಎನ್ನಬೇಕು. ಕನ್ನಡ ಮತ್ತು ಮರಾಠಿ ನಡುವಿನ ಸಂವೇದನಾಶೀಲ ಸೇತುವೆಯಾಗಿದ್ದ ಮೀನಾ ವಾಂಗೀಕರ್ ಅವರಿಗೆ, ಮುಂಬಯಿ ಕರ್ನಾಟಕ ಸಂಘದ ವರದರಾಜ ಆದ್ಯ ಪ್ರಶಸ್ತಿ, ಮರಾಠಿ ಸಾಹಿತ್ಯ ಪರಿಷತ್ತಿನ ಅನುವಾದ ಪ್ರಶಸ್ತಿ, ಪುಣೆ ಕನ್ನಡ ಮರಾಠಿ ಸ್ನೇಹ ವರ್ಧನ ಕೇಂದ್ರದ ಸನ್ಮಾನಗಳು ಸಂದಿವೆ.

English summary
One of the most prominent women translator of India Meena Vangikar, who has translated many Kannada novels, stories of Shivaram Karanth, Jayanth Kaikini and other writers to Marathi language breathed her last on 22nd October, 2015 in Pune. She was the bridge between Kannada and Marathi literature. Tribute by writer Jayanth Kaikini.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X