ವಿದ್ಯುತ್ ಇಲ್ಲದೆಯೇ ಲಸಿಕೆ ಸಂರಕ್ಷಣೆ; ಭಾರತದ ವಿದ್ಯಾರ್ಥಿಗಳ ಸಾಧನೆಗೆ $12,500 ಡಾಲರ್ ಅನುದಾನ & ಪ್ರತಿಷ್ಠಿತ ಅವಾರ್ಡ್‌

Inspirational Story: ವಿದ್ಯುತ್ ಸರಬರಾಜು ಇಲ್ಲದ ಪ್ರದೇಶಗಳಲ್ಲೂ ಲಸಿಕೆಗಳನ್ನು ಸುರಕ್ಷಿತವಾಗಿ ಇಡಲು ಸಾಧ್ಯವೇ? ಹೌದು ಇಂದೋರ್‌ನ ಶಿಶುಕುಂಜ್ ಶಾಲೆಯ ಮೂವರು ವಿದ್ಯಾರ್ಥಿಗಳು ಇದನ್ನ ಮಾಡಿ ತೋರಿಸಿ ಇಡೀ ದೇಶದ ಗಮನ ಸೆಳೆದಿದ್ದಾರೆ. $12,500 ಡಾಲರ್ ಅನುದಾನ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿ ಗಿಟ್ಟಿಸಿಕೊಂಡ ಈ ರಿಸೈಕಲೇಬಲ್ ತಂತ್ರಜ್ಞಾನದ ಸಂಪೂರ್ಣ ವಿವರ ಇಲ್ಲಿದೆ.

ಕೋಲ್ಡ್ ಚೈನ್ ಕೊರತೆ ಮತ್ತು ವಿದ್ಯುತ್ ಅಭಾವದಿಂದಾಗಿ ಜೀವ ರಕ್ಷಕ ಲಸಿಕೆಗಳು ಹಾಳಾಗುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮಧ್ಯಪ್ರದೇಶದ ಇಂದೋರ್‌ನ ಮೂವರು ಶಾಲಾ ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಇಂದೋರ್‌ನ ಶಿಶುಕುಂಜ್ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳಾದ ಧ್ರುವ ಚೌಧರಿ, ಮಿತ್ರನ್ ಲಧಾನಿಯಾ ಮತ್ತು ಮೃದುಲ್ ಜೈನ್ 'ಥರ್ಮಾವಾಲ್ಟ್' (Thermavault) ಎಂಬ ಹೊಸ ಸಾಧನವನ್ನು ಆವಿಷ್ಕರಿಸಿದ್ದಾರೆ.

Inspirational Indore Students Invent Electricity-Free Vaccine Cooler Win 12 500 Earth Prize Grant

ವಿದ್ಯಾರ್ಥಿಗಳ ಸಾಧನೆಗೆ ದೊರೆಯಿತು ಪ್ರತಿಷ್ಠಿತ ಪ್ರಶಸ್ತಿ

ಈ ಹೊಸ ತಂತ್ರಜ್ಞಾನವು ವಿದ್ಯುತ್ ಇಲ್ಲದೆಯೇ, ಕೇವಲ ಉಪ್ಪಿನ ಸಹಾಯದಿಂದ ಕಾರ್ಯನಿರ್ವಹಿಸುವ ಪೋರ್ಟಬಲ್ ಶೀತಲ ಸಂಗ್ರಹಣಾ ಸಾಧನವಾಗಿದೆ. ಲಸಿಕೆಗಳನ್ನು ಸುರಕ್ಷಿತವಾಗಿ ತಂಪಾಗಿಡಲು ಮತ್ತು ಅವುಗಳನ್ನು ಗ್ರಾಮೀಣ ಪ್ರದೇಶಗಳಿಗೆ ಸಾಗಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ಸಾಧನಕ್ಕಾಗಿ ತಂಡಕ್ಕೆ ಏಷ್ಯಾ ಪ್ರಾಂತ್ಯದ 2025ರ ಪ್ರತಿಷ್ಠಿತ Earth Prize ಪ್ರಶಸ್ತಿ ದೊರೆತಿದ್ದು, 12,500 ಅಮೆರಿಕನ್ (ಯುಎಸ್‌) ಡಾಲರ್ ಅನುದಾನ ಲಭಿಸಿದೆ.

ಇದರ ಉದ್ದೇಶ ಮತ್ತು ಕಾರ್ಯವೈಖರಿ

* ಕೊರೊನಾ ಸಂದರ್ಭದಲ್ಲಿ ಗ್ರಾಮೀಣ ಭಾಗಗಳಿಗೆ ಲಸಿಕೆಗಳನ್ನು ಸಾಗಿಸಲು ಎದುರಾದ ಸವಾಲುಗಳನ್ನು ಕಂಡ ಈ ವಿದ್ಯಾರ್ಥಿಗಳು ಇದರ ವಿನ್ಯಾಸಕ್ಕೆ ಮುಂದಾದರು.

* ಕೆಲ ನಿರ್ದಿಷ್ಟ ಉಪ್ಪಿನ ಹರಳುಗಳು ನೀರಿನಲ್ಲಿ ಕರಗುವಾಗ ಸುತ್ತಲಿನ ಶಾಖವನ್ನು ಹೀರಿಕೊಳ್ಳುತ್ತವೆ. ಈ ಪ್ರಕ್ರಿಯೆಯು ಯಾವುದೇ ವಿದ್ಯುತ್ ಇಲ್ಲದೆ ಸಾಧನದ ಒಳಗಿನ ತಾಪಮಾನವನ್ನು ಕಡಿಮೆ ಮಾಡುತ್ತದೆ.

* ಬಳಸಿದ ನೀರನ್ನು ಕಾಯಿಸಿ ಆವಿಯಾಗಿಸುವುದರ ಮೂಲಕ ಉಪ್ಪನ್ನು ಮರಳಿ ಪಡೆಯಬಹುದು. ಹೀಗಾಗಿ ಇದನ್ನು ಪದೇ ಪದೇ ಮರುಬಳಕೆ ಮಾಡಲು ಸಾಧ್ಯವಿದೆ.

* ಹಗುರವಾದ ಮತ್ತು ಇನ್ಸುಲೇಟ್ ಮಾಡಲಾದ ಈ ಪೋರ್ಟಬಲ್ ಪೆಟ್ಟಿಗೆಯಲ್ಲಿ ಲಸಿಕೆಗಳು, ಔಷಧಗಳು ಮತ್ತು ತುರ್ತು ವೈದ್ಯಕೀಯ ಸಾಮಗ್ರಿಗಳನ್ನು ಸುಲಭವಾಗಿ ಸಾಗಿಸಬಹುದು.

ಈ ಸಾಧನದ ಪ್ರಾಮುಖ್ಯತೆ ಏನು?

* ನಿರಂತರ ವಿದ್ಯುತ್ ಸರಬರಾಜು ಇಲ್ಲದ ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಲಸಿಕೆಗಳನ್ನು ಸುರಕ್ಷಿತವಾಗಿ ತಲುಪಿಸಲು ಇದು ವರದಾನವಾಗಲಿದೆ.

* ವಿದ್ಯುತ್ ಮತ್ತು ಒಮ್ಮೆ ಮಾತ್ರ ಬಳಸಿ ಬಿಸಾಡುವ ಪ್ಲಾಸ್ಟಿಕ್ ಪ್ಯಾಕಿಂಗ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದರಿಂದ ಇದು ಪರಿಸರಕ್ಕೂ ಪೂರಕವಾಗಿದೆ.

ಮುಂದಿನ ಹಂತದ ಯೋಜನೆಗಳ ವಿವರ

ತಂಡವು ಮುಂಬರುವ ದಿನಗಳಲ್ಲಿ ಸುಮಾರು 200 ಸಾಧನಗಳನ್ನು ಸಿದ್ಧಪಡಿಸಿ, 120 ಆಸ್ಪತ್ರೆಗಳಲ್ಲಿ ಪ್ರಾಯೋಗಿಕವಾಗಿ ಪರೀಕ್ಷಿಸಲು ಯೋಜಿಸಿದೆ. ಜಾಗತಿಕವಾಗಿ ಈ ಸಾಧನವನ್ನು ಬಳಸಲು ವಿಶ್ವ ಆರೋಗ್ಯ ಸಂಸ್ಥೆಯ (WHO) ವೈದ್ಯಕೀಯ ಮಾನದಂಡಗಳ ಪ್ರಮಾಣಪತ್ರವನ್ನು ಪಡೆಯುವ ಗುರಿಯನ್ನೂ ಹೊಂದಿದೆ.

ಲಸಿಕೆಗಳನ್ನು ಕಟ್ಟುನಿಟ್ಟಾದ ತಾಪಮಾನದಲ್ಲಿಯೇ ಇಡಬೇಕಾಗಿರುವುದರಿಂದ, ವಿಭಿನ್ನ ಹವಾಮಾನಗಳಲ್ಲಿ ಇದರ ತಾಪಮಾನ ನಿಯಂತ್ರಣ ಮತ್ತು ಬಾಳಿಕೆಯನ್ನು ಪರೀಕ್ಷಿಸುವುದು ಅತ್ಯಗತ್ಯವಾಗಿದೆ. ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಶೀತಲ ಉಪಕರಣಗಳಿಗೆ ಹೋಲಿಸಿದರೆ ಇದರ ವೆಚ್ಚ, ತೂಕ ಮತ್ತು ಬಳಕೆಯ ಸರಳತೆ ಇದರ ಯಶಸ್ಸನ್ನು ನಿರ್ಧರಿಸಲಿವೆ. ವಿದ್ಯಾರ್ಥಿಗಳ ಈ ಸಾಹಸವು ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲ ಸಿಕ್ಕರೆ ಯುವಕರ ಆಲೋಚನೆಗಳು ಸಮಾಜದ ದೊಡ್ಡ ಸಮಸ್ಯೆಗಳಿಗೆ ಪರಿಹಾರವಾಗಬಲ್ಲವು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ ಅಂದರೆ ತಪ್ಪಾಗಲಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+