ದೇಶದ ಮೊಟ್ಟಮೊದಲ ಡೆಂಗ್ಯೂ ಲಸಿಕಾ ಅಭಿಯಾನಕ್ಕೆ ತಮಿಳುನಾಡಿನಲ್ಲಿ ಚಾಲನೆ

ಡೆಂಗ್ಯೂ ಮಹಾಮಾರಿಯನ್ನ ನಿಯಂತ್ರಿಸಲು ಭಾರತ ಇದೀಗ ಹೊಸದೊಂದು ಹೆಜ್ಜೆಯಿಟ್ಟಿದೆ ನೋಡಿ. ಕೇವಲ ಸೊಳ್ಳೆಗಳ ನಿಯಂತ್ರಣ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಷ್ಟೇ ಸೀಮಿತವಾಗಿದ್ದ ಆರೋಗ್ಯ ಇಲಾಖೆ, ಇದೀಗ ರೋಗ ನಿರೋಧಕ ಲಸಿಕೆಯ ಮೊರೆ ಹೋಗಿದೆ.

ಹೌದು, ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಕಡಯನಲ್ಲೂರಿನಲ್ಲಿ ಭಾರತದ ಮೊಟ್ಟಮೊದಲ ಡೆಂಗ್ಯೂ ಲಸಿಕಾ ಪ್ರಾಯೋಗಿಕ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

India s First Dengue Vaccination Pilot Trial Begins in Tamil Nadu Using Japan developed Qdenga

ತಮಿಳುನಾಡು ಕಡಯನಲ್ಲೂರ್ ಆಯ್ಕೆ ಏಕೆ?

ಕಡಯನಲ್ಲೂರ್ ಪ್ರದೇಶದಲ್ಲಿ ಡೆಂಗ್ಯೂ ಪ್ರಕರಣಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಈ ಕಾರಣಕ್ಕಾಗಿ ಪ್ರಾಯೋಗಿಕವಾಗಿ ಈ ಸ್ಥಳವನ್ನ ಆಯ್ಕೆ ಮಾಡಲಾಗಿದೆ. ರೋಗದ ತೀವ್ರತೆ ಹೆಚ್ಚಿರುವ ಪ್ರದೇಶದಲ್ಲಿ ಲಸಿಕೆ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನ ಪರೀಕ್ಷಿಸಲು ಇದು ಸೂಕ್ತ ಸ್ಥಳವಾಗಿದೆ.

ಈ ಪ್ರಾಯೋಗಿಕ ಯೋಜನೆಯು ಲಸಿಕೆ ವಿತರಣೆ, ನಿಗದಿತ ಡೋಸ್‌ಗಳನ್ನ ಪೂರ್ಣಗೊಳಿಸುವುದು ಹಾಗೂ ಅಡ್ಡಪರಿಣಾಮಗಳ ಮೇಲ್ವಿಚಾರಣೆಯಂತಹ ಸವಾಲುಗಳನ್ನ ಅರ್ಥಮಾಡಿಕೊಳ್ಳಲು ವೈದ್ಯಕೀಯ ಅಧಿಕಾರಿಗಳಿಗೆ ಸಹಾಯ ಮಾಡಲಿದೆ.

ಜಪಾನ್ ಅಭಿವೃದ್ಧಿಪಡಿಸಿದ ಕ್ಯುಡೆಂಗಾ ಲಸಿಕೆ ಪ್ರಯೋಗ

ಈ ಅಭಿಯಾನದಲ್ಲಿ ಜಪಾನ್ ಮೂಲದ ಟಕೆಡಾ ಫಾರ್ಮಾಸ್ಯುಟಿಕಲ್ ಕಂಪನಿಯು ಅಭಿವೃದ್ಧಿಪಡಿಸಿರುವ ಕ್ಯುಡೆಂಗಾ ಲಸಿಕೆಯನ್ನ (Qdenga vaccine) ಬಳಸಲಾಗುತ್ತಿದೆ. ಇದು ಎಲ್ಲಾ 4 ಡೆಂಗ್ಯೂ ವೈರಸ್ ಪ್ರಭೇದಗಳನ್ನ (DENV-1, 2, 3, 4) ಗುರಿಯಾಗಿಸಿ ಕಾರ್ಯನಿರ್ವಹಿಸುವ 'ಲೈವ್-ಅಟೆನ್ಯುವೇಟೆಡ್, ಟೆಟ್ರಾವಲೆಂಟ್' ಲಸಿಕೆಯಾಗಿದೆ.

ಭಾರತದ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (CDSCO) 2026ರ ಜುಲೈನಲ್ಲಿ 4 ರಿಂದ 60 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಈ ಲಸಿಕೆ ನೀಡಲು ಅನುಮೋದನೆ ನೀಡಿದೆ. ಮೂರು ತಿಂಗಳ ಅಂತರದಲ್ಲಿ ಇದರ ಎರಡು ಡೋಸ್‌ಗಳನ್ನ ನೀಡಲಾಗುತ್ತದೆ.

ಸ್ವದೇಶಿ ಡೆಂಗ್ಯೂ ಲಸಿಕೆ ಡೆಂಗಿಆಲ್ ಹಾಗೂ ಕ್ಯುಡೆಂಗಾ ನಡುವಿನ ವ್ಯತ್ಯಾಸ

ಭಾರತವು ತನ್ನದೇ ಆದ ಸ್ವದೇಶಿ ಡೆಂಗ್ಯೂ ಲಸಿಕೆಯನ್ನ ಅಭಿವೃದ್ಧಿಪಡಿಸುತ್ತಿದೆ ಎಂಬುದನ್ನ ಇಲ್ಲಿ ನೆನಪಿಕೊಳ್ಳಬಹುದು. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಸಹಯೋಗದೊಂದಿಗೆ ಪನೇಶಿಯಾ ಬಯೋಟೆಕ್ ಸಂಸ್ಥೆಯು 'ಡೆಂಗಿಆಲ್' (DengiAll) ಎಂಬ ಲಸಿಕೆಯನ್ನ ಸಿದ್ಧಪಡಿಸುತ್ತಿದ್ದು, ಆಗಸ್ಟ್ 2024ರಲ್ಲಿ ಇದರ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳು ಆರಂಭವಾಗಿವೆ.

ಅಮೆರಿಕದ ಎನ್‌ಐಹೆಚ್ ಪರವಾನಗಿ ಪಡೆದ ಡೆಂಗ್ಯೂ ತಳಿಗಳನ್ನ ಇದರಲ್ಲಿ ಬಳಸಲಾಗುತ್ತಿದೆ. ಆದರೆ, ಪ್ರಸ್ತುತ ಕಡಯನಲ್ಲೂರಿನಲ್ಲಿ ನಡೆಯುತ್ತಿರುವುದು ಜಪಾನ್‌ನ 'ಕ್ಯುಡೆಂಗಾ' ಲಸಿಕೆಯ ಪ್ರಾಯೋಗಿಕ ಬಳಕೆಯಾಗಿದೆ.

ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಲಸಿಕೆಯ ಅಗತ್ಯತೆ

ಸೋಂಕಿತ ಈಡಿಸ್ ಸೊಳ್ಳೆಗಳ ಕಡಿತದಿಂದ ಡೆಂಗ್ಯೂ ಹರಡುತ್ತದೆ. ವಿಪರೀತ ಜ್ವರ, ತಲೆನೋವು, ಸ್ನಾಯು ಮತ್ತು ಕೀಲು ನೋವು ಇದರ ಪ್ರಮುಖ ಲಕ್ಷಣಗಳು. ರೋಗ ಉಲ್ಬಣಗೊಂಡರೆ ಆಂತರಿಕ ರಕ್ತಸ್ರಾವ ಹಾಗೂ ಅಂಗಾಂಗ ವೈಫಲ್ಯ ಕೂಡ ಸಂಭವಿಸಿ ಪ್ರಾಣಾಪಾಯ ಎದುರಾಗಬಹುದು.

ಮಳೆ, ನಗರೀಕರಣ ಮತ್ತು ನೀರು ಶೇಖರಣಾ ವಿಧಾನಗಳಿಂದಾಗಿ ಭಾರತದಲ್ಲಿ ಡೆಂಗ್ಯೂ ಪ್ರಕರಣಗಳು ಆಗಾಗ ಸ್ಫೋಟಗೊಳ್ಳುತ್ತಿರುತ್ತವೆ. ಹೀಗಾಗಿ ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಲಸಿಕೆಯು ಭವಿಷ್ಯದಲ್ಲಿ ಪ್ರಬಲ ಅಸ್ತ್ರವಾಗಲಿದೆ.

ಮುಂದಿನ ಸವಾಲುಗಳು

ಈ ಲಸಿಕಾ ಅಭಿಯಾನದ ಯಶಸ್ಸನ್ನ ಕೇವಲ ಲಸಿಕೆ ಪಡೆದವರ ಸಂಖ್ಯೆಯಿಂದ ಅಳೆಯಲಾಗುವುದಿಲ್ಲ. ಬದಲಾಗಿ, ಎಷ್ಟು ಜನರು ಎರಡು ಡೋಸ್‌ಗಳನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ,ಈ ಲಸಿಕೆಯಿಂದ ಅಡ್ಡಪರಿಣಾಮಗಳೇನಾದರೂ ಇವೆಯೇ, ಹಾಗೂ ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ತಗ್ಗಿದೆಯೇ ಎಂಬುದನ್ನ ವಿಶ್ಲೇಷಿಸಲಾಗುತ್ತದೆ.

ಈ ಪ್ರಯೋಗದ ಮೇಲೆ ನಿಗಾವಹಿಸಲು ಮತ್ತು ಲಸಿಕೆಯ ಪರಿಣಾಮವನ್ನ ಅಧ್ಯಯನ ಮಾಡಲು ಐಸಿಎಂಆರ್‌ನ ಇಬ್ಬರು ಹಿರಿಯ ವಿಜ್ಞಾನಿಗಳನ್ನ ಕಡಯನಲ್ಲೂರಿಗೆ ನಿಯೋಜಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+