IMD Weather Forecast: ಉತ್ತರ ಭಾರತದ ರಾಜ್ಯಗಳಲ್ಲಿ ಭಾರೀ ಚಳಿ, ಹಿಮಪಾತ! 10 ರಾಜ್ಯಗಳಿಗೆ ಮಳೆ ಎಚ್ಚರಿಕೆ
IMD Weather Forecast: ದೇಶದಲ್ಲಿ ಈ ಬಾರಿ ಹವಾಮಾನವು ವಿಭಿನ್ನವಾಗಿ ಬದಲಾಗುತ್ತಿದೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದ ಅನೇಕ ಬಯಲು ಪ್ರದೇಶಗಳಲ್ಲಿನ ತಾಪಮಾನವು ಗಿರಿಧಾಮಗಳ ತಾಪಮಾನಕ್ಕಿಂತಲೂ ಕಡಿಮೆ. ಎಲ್ಲೆಡೆ ಚಳಿ ಹೆಚ್ಚುತ್ತಿದ್ದು, ಕೆಲವೆಡೆ ಒಣಹವೆ ಸಹ ನಿರ್ಮಾಣವಾಗುತ್ತಿದೆ. ಮುಂದಿನ 6 ದಿನಗಳಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಕನಿಷ್ಠ 3.3 ಡಿಗ್ರಿ ಸೆಲ್ಸಿಯಸ್ ತಾಪಮಾನ! ವಿವಿಧೆಡೆ ಚಳಿ
ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿರುವ ಫತೇಪುರ್‌ನಲ್ಲಿ ಶನಿವಾರ (ನ.28) ಕನಿಷ್ಠ 3.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಮೂಲಕ ಶೀತಲ ಪ್ರದೇಶವಾಗಿ ಬದಲಾಗಿದೆ. ಸಿಕಾರ್‌ನಲ್ಲಿ ಕನಿಷ್ಠ 5 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡು ಬಂದಿದೆ.

ಇನ್ನೂ ಮಧ್ಯಪ್ರದೇಶ ರಾಜ್ಯದ ದಾಮೋಹ್‌ನಲ್ಲಿ 6.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶಿಮ್ಲಾದಲ್ಲಿ ಕನಿಷ್ಠ ತಾಪಮಾನ 8 ಡಿಗ್ರಿ ಸೆಲ್ಸಿಯಸ್ ಮತ್ತು ನೈನಿತಾಲ್‌ನಲ್ಲಿ 9 ಡಿಗ್ರಿ ಸೆಲ್ಸಿಯಸ್ ನಷ್ಟು ಕಡಿಮೆ ತಾಪಮಾನ ಕಂಡು ಬಂದಿದೆ. ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಮೈಕೊರೆವ ಚಳಿ ಮುಂದುವರಿಯಲಿದೆ ಎಂದು ಹವಾಮಾನ ತಜ್ಞ ಎಚ್ಚರಿಸಿದ್ದಾರೆ.
ಸದ್ಯದ ಹವಾಮಾನ ಇಲಾಖೆಯ ಪ್ರಕಾರ, 2026 ಡಿಸೆಂಬರ್ 2ರ ರಾತ್ರಿಯಿಂದ ಹೊಸ 'ವೆಸ್ಟರ್ನ್ ಡಿಸ್ಟರ್ಬೆನ್ಸ್' (ಪಶ್ಚಿಮದ ಅಡಚಣೆ) ಸಕ್ರಿಯವಾಗುವ ಸಾಧ್ಯತೆ ಇದೆ. ದಿಢೀರ್ ಹವಾಮಾನ ಬದಲಾವಣೆ ಸಾಧ್ಯತೆ ಹಿನ್ನೆಲೆಯಲ್ಲಿ ಡಿಸೆಂಬರ್ 3 ಮತ್ತು 4ರಂದು ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಎತ್ತರದ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆ ಆಗಲಿದೆ. ಕೆಲವೆಡೆ ಹಿಮಪಾತವಾಗಬಹುದು.
ದಕ್ಷಿಣ ಭಾರತದ ರಾಜ್ಯಗಳ ಹವಾಮಾನ
ನವೆಂಬರ್ 29 ರಿಂದ ಡಿಸೆಂಬರ್ 4ರ ನಡುವೆ ತಮಿಳುನಾಡು, ಪುದುಚೇರಿ, ಕೇರಳ, ಕರಾವಳಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ಲಕ್ಷದ್ವೀಪಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಭಾರತದ ರಾಜ್ಯಗಳ ಬಯಲು ಪ್ರದೇಶಗಳಲ್ಲಿ ಮುಂದಿನ 5 ದಿನಗಳಲ್ಲಿ ಕನಿಷ್ಠ ತಾಪಮಾನವು 2 ರಿಂದ 4 ಡಿಗ್ರಿ ಸೆಲ್ಸಿಯಸ್ ಇಳಿಕೆ ಆಗುವ ಸಾಧ್ಯತೆ ಇದೆ.
ಕಣಿವೆ ರಾಜ್ಯದಲ್ಲಿ ಅತ್ಯಧಿಕ ಮೈನಸ್ ಚಳಿ
ಕಾಶ್ಮೀರ ಕಣಿವೆಯಲ್ಲಿ ಅಧಿಕ ಚಳಿ ಮುಂದುವರಿಯಲಿದೆ. ಪಹಲ್ಗಾಮ್‌ನಲ್ಲಿ ಕನಿಷ್ಠ ತಾಪಮಾನವು (ಮೈನಸ್) -3.2 ಡಿಗ್ರಿ ಸೆಲ್ಸಿಯಸ್ ನಷ್ಟು ಇಳಿಕೆ ಆಗಿದೆ. ಶ್ರೀನಗರದಲ್ಲಿ 2.4 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಎತ್ತರದ ಪ್ರದೇಶಗಳಲ್ಲಿನ ಜಲಮೂಲಗಳು ಹೆಪ್ಪುಗಟ್ಟಲಿವೆ. ಐಸ್ ಗಡ್ಡೆಯಂತಾಗಿವೆ. ಕಳೆದ 24 ಗಂಟೆಗಳಲ್ಲಿ ಪಂಜಾಬ್‌ನ ಅಮೃತಸರ ಮತ್ತು ಒಡಿಶಾದ ರೂರ್ಕೆಲಾದಲ್ಲಿ ಗೋಚರತೆ ತೀವ್ರ ಮಂಜಿನಿಂದಾಗಿ ಗೋಚರತೆ ಕಡಿಮೆ ಆಗಿದೆ. ಭಾರಿ ಹಿಮಪಾತ, ಪ್ರತಿಕೂಲ ಹವಾಮಾನ ನಿರ್ಮಾಣವಾಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಹಿಮಾಚಲ ಪ್ರದೇಶದ ಪ್ರಸಿದ್ಧ ಚುರ್ಧಾರ್ ದೇವಾಲಯದ ಡಿಸೆಂಬರ್ 1 ರಿಂದ ಮುಂದಿನ ಆದೇಶದವರೆಗೆ ಭಕ್ತರಿಗೆ ಪ್ರವೇಶ ಸ್ಥಗಿತಗೊಳಿಸಲಾಗಿದೆ.
ದೆಹಲಿ ಪರಿಸ್ಥಿತಿ ಹೇಗಿದೆ?
ದೇಶದ ರಾಜಧಾನಿ ನವದೆಹಲಿಯಲ್ಲಿ ಇಂದು ಬೆಳಗ್ಗೆ (ಭಾನುವಾರ) ಸಾಮಾನ್ಯವಾದ ಮಂಜು ಕವಿದಿದೆ. ಮಧ್ಯಾಹ್ನದ ಬಿಸಿಲು ಕೊಂಚ ಚಳಿ ವಾತಾವರಣ ಕಂಡು ಬರಲಿದೆ. ದೆಹಲಿಯ ಗರಿಷ್ಠ ತಾಪಮಾನವು 25 ರಿಂದ 27 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನವು 9 ರಿಂದ 11 ಡಿಗ್ರಿ ಸೆಲ್ಸಿಯಸ್ ಕಂಡು ಬರುವ ನಿರೀಕ್ಷೆ ಇದೆ.
ಇಲ್ಲಿನ ಸಫ್ದರ್‌ಜಂಗ್‌ನಲ್ಲಿ ಕನಿಷ್ಠ ತಾಪಮಾನ 10.6 ಡಿಗ್ರಿ ಸೆಲ್ಸಿಯಸ್, ಪಾಲಂನಲ್ಲಿ 10.9 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಗಲು ಒಣಹವೆ, ಬೆಳಗ್ಗೆ ರಾತ್ರಿ ಚಳಿ ವಾತಾವರಣ ಕಂಡು ಬರುತ್ತಿದೆ. ಉತ್ತರ ಭಾರತದ ಕಡೆಗೆ ಮಳೆ ಕಡಿಮೆ ಆಗಿದ್ದು, ಕೆಲವೆಡೆ ತೀವ್ರ ಚಳಿ ಸೃಷ್ಟಿಯಾಗಿದೆ ಎಂದು ಐಎಂಡಿ ಮುನ್ಸೂಚನೆ ವರದಿ ತಿಳಿಸಿದೆ.




Click it and Unblock the Notifications
