10ನೇ ತರಗತಿಯಲ್ಲಿ ಫೇಲ್ ಆಗಿದ್ದ ಹುಡುಗ ಇಂದು ಪೊಲೀಸ್ ಇಲಾಖೆಯ ರಿಯಲ್ ಸಿಂಗಂ: ಇದು ASP ಅರ್ಲಾ ಶ್ರೀನಿವಾಸುಲು ಕಥೆ
ಪ್ರತಿಯೊಬ್ಬರು ಜೀವನದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸೋಲು ಕಂಡಿರುತ್ತಾರೆ. ಹಾಗೆಯೇ ಈ ಸೋಲನ್ನೇ ಮೆಟ್ಟಿ ನಿಂತು ಯಶಸ್ಸಿನ ಶಿಖರವೇರಿದವರ ಕಥೆಗಳು ಯಾವಗ್ಲೂ ಎಲ್ಲರಿಗೂ ಸ್ಫೂರ್ತಿಯಾಗಿರುತ್ತದೆ. ಶಾಲಾ ದಿನಗಳಲ್ಲಿ 10ನೇ ತರಗತಿಯ ಗಣಿತ ವಿಷಯದಲ್ಲಿ ಫೇಲ್ ಆಗಿದ್ದ ಹುಡುಗನೊಬ್ಬ, ಇಂದು ಅಂತರರಾಜ್ಯ ದರೋಡೆಕೋರರು, ನಕಲಿ ನೋಟು ದಂಧೆಕೋರರ ಪಾಲಿಗೆ ಸಿಂಹಸ್ವಪ್ನವಾಗಿರುವ ಖ್ಯಾತ ಪೊಲೀಸ್ ಅಧಿಕಾರಿಯಾಗಿ ರೂಪುಗೊಂಡಿದ್ದಾರೆ.
ಹೌದು, ಅವರೇ ಆಂಧ್ರಪ್ರದೇಶ ಪೊಲೀಸ್ ಇಲಾಖೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅರ್ಲಾ ಶ್ರೀನಿವಾಸುಲು. ಕಡುಬಡತನದಲ್ಲಿ ಬೆಳೆದು, ಛಲದಿಂದ ವಿದ್ಯಾಭ್ಯಾಸ ಮುಗಿಸಿ ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಇವರ ವೃತ್ತಿಜೀವನವು ಪರಿಶ್ರಮ, ದೃಢಸಂಕಲ್ಪ ಮತ್ತು ವೃತ್ತಿಪರತೆಗೆ ಅತ್ಯುತ್ತಮ ಉದಾಹರಣೆ ಎನ್ನಬಹುದು.

ತಿರುಪತಿಯಲ್ಲಿ 1.5 ಕೋಟಿ ರೂ. ಮೊಬೈಲ್ ಕಳ್ಳತನ ಭೇದಿಸಿದ ಸಾಧನೆ
ಅರ್ಲಾ ಶ್ರೀನಿವಾಸುಲು ಅವರು ಆಂಧ್ರಪ್ರದೇಶ ಪೊಲೀಸ್ ಇಲಾಖೆಯ ಅತ್ಯಂತ ನುರಿತ ತನಿಖಾಧಿಕಾರಿಗಳಲ್ಲಿ ಒಬ್ಬರೆಂದು ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗಷ್ಟೇ, ಅಂದರೆ ಆಗಸ್ಟ್ 2026ರಲ್ಲಿ ತಿರುಪತಿಯ ಏರ್ ಬೈಪಾಸ್ ರಸ್ತೆಯಲ್ಲಿದ್ದ ಪ್ರಸಿದ್ಧ ಬ್ರಾಂಡೆಡ್ ಮೊಬೈಲ್ ಶೋರೂಮ್‌ನ ಗೋಡೆ ಕೊರೆದು ಕಳ್ಳರು ನುಗ್ಗಿದ್ದರು. ಸುಮಾರು 1.50 ಕೋಟಿ ರೂ. ಮೌಲ್ಯದ 195 ಮೊಬೈಲ್ ಹಾಗೂ ಟ್ಯಾಬ್ಲೆಟ್‌ಗಳನ್ನು ದೋಚಲಾಗಿತ್ತು.
ಆ ಸಮಯದಲ್ಲಿ ಹೆಚ್ಚುವರಿ ಎಸ್‌ಪಿ (ಕ್ರೈಂ) ಆಗಿ ಸೇವೆ ಸಲ್ಲಿಸುತ್ತಿದ್ದ ಶ್ರೀನಿವಾಸುಲು ಅವರು, ವಿಶೇಷ ತಂಡವನ್ನ ರಚಿಸಿ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಕಳ್ಳರನ್ನ ಪತ್ತೆಹಚ್ಚಿದರು. ಪಶ್ಚಿಮ ಬಂಗಾಳದ ಫರಕ್ಕಾ ಬಳಿ ಬಾಂಗ್ಲಾದೇಶದ ಗಡಿಯಲ್ಲಿ ಅಂತರರಾಜ್ಯ ಗ್ಯಾಂಗ್ ಅನ್ನಾ ಅಡ್ಡಗಟ್ಟಿ, ಕೇವಲ ಆರೇ ದಿನಗಳಲ್ಲಿ ಕದ್ದ ಎಲ್ಲಾ ವಸ್ತುಗಳನ್ನ ವಶಪಡಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರು.
ನಕಲಿ ನೋಟು ದಂಧೆ ಮತ್ತು ಹೈದರಾಬಾದ್ ಬ್ಲಾಸ್ಟ್ ಕ್ರೈಂ ಕೇಸ್
ತಮ್ಮ ಮೂರು ದಶಕಗಳ ಸುದೀರ್ಘ ವೃತ್ತಿಜೀವನದಲ್ಲಿ ಶ್ರೀನಿವಾಸುಲು ಅವರು ಭೇದಿಸಿದ ಕ್ರೈಂ ಕೇಸ್‌ಗಳು ಒಂದೆರಡಲ್ಲ. 1996-97ರಲ್ಲಿ ನಡೆದ ಹೈದರಾಬಾದ್‌ನ ಹೈ-ಪ್ರೊಫೈಲ್ ಜುಬಿಲಿ ಹಿಲ್ಸ್ ಕಾರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಪೆನುಕೊಂಡದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದಾಗ, ಆಂಧ್ರಪ್ರದೇಶ, ಕರ್ನಾಟಕ, ಮಹಾರಾಷ್ಟ್ರ ಮತ್ತು ತಮಿಳುನಾಡಿಗೆ ವಿಸ್ತರಿಸಿದ್ದ ಅಂತರರಾಜ್ಯ ನಕಲಿ ನೋಟು ಜಾಲವನ್ನು ಭೇದಿಸಿದ್ದರು.
ಸತತ ಮೂರು ತಿಂಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಕರ್ನಾಟಕದ ಓರ್ವ ಸಿನಿಮಾ ನಟ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸೇರಿದಂತೆ 15 ಆರೋಪಿಗಳನ್ನು ಬಂಧಿಸಿ, 75 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳನ್ನ ವಶಪಡಿಸಿಕೊಂಡಿದ್ದರು.
3ನೇ ವಯಸ್ಸಿಗೆ ತಂದೆ ಸಾವು
ಅರ್ಲಾ ಶ್ರೀನಿವಾಸುಲು ಅವರ ಈ ಯಶೋಗಾಥೆಯ ಹಿಂದಿರುವುದು ಕಡುಬಡತನ ಮತ್ತು ಬಾಲ್ಯ ಅನುಭವಿಸಿದ ಕಷ್ಟಗಳು. ನಂದ್ಯಾಲ್ ಜಿಲ್ಲೆಯ ಉಡುಮಲಪುರಂ ಗ್ರಾಮದ ಕೃಷಿಕರ ಕುಟುಂಬದಲ್ಲಿ ಜನಿಸಿದ ಇವರು, ತಮ್ಮ 3ನೇ ವಯಸ್ಸಿನಲ್ಲೇ ತಂದೆಯನ್ನ ಕಳೆದುಕೊಂಡರು. ನಂತರ ಅವರನ್ನ ಅಜ್ಜಿ ಮೂರ್ತಿಯಮ್ಮ ಬೆಳೆಸಿದರು.
10ನೇ ತರಗತಿಯಲ್ಲಿ ಗಣಿತದಲ್ಲಿ ಅನುತ್ತೀರ್ಣರಾದರೂ ಛಲ ಬಿಡದೆ, ಟ್ಯೂಷನ್ ಹೋಗಿ ಕಠಿಣ ಪರಿಶ್ರಮದಿಂದ ಎರಡನೇ ಪ್ರಯತ್ನದಲ್ಲಿ ಪಾಸಾದರು. ಆ ಬಳಿಕ 1987-88ರಲ್ಲಿ ಪದವಿ ಮುಗಿಸಿ, ಬಿ.ಎಡ್ ಹಾಗೂ ಇತಿಹಾಸದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನ ಪೂರ್ಣಗೊಳಿಸಿದರು.
1991ರಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ವೃತ್ತಿ ಆರಂಭ
1991ರಲ್ಲಿ ಸಬ್ ಇನ್ಸ್‌ಪೆಕ್ಟರ್ (SI) ಆಗಿ ಪೊಲೀಸ್ ಇಲಾಖೆ ಸೇರಿದ ಇವರು, ತಮ್ಮ ದಕ್ಷತೆಯಿಂದಲೇ ಮೇಲೇರಿದರು. 2002ರಲ್ಲಿ ಇನ್ಸ್‌ಪೆಕ್ಟರ್, 2014ರಲ್ಲಿ ಡಿವೈಎಸ್‌ಪಿ ಹಾಗೂ 2024ರಲ್ಲಿ ಹೆಚ್ಚುವರಿ ಎಸ್‌ಪಿ ಆಗಿ ಬಡ್ತಿ ಪಡೆದರು. ಪುಟ್ಟಪರ್ತಿ, ಅನಂತಪುರ, ಕರ್ನೂಲ್, ರಾಜಂಪೇಟೆ, ನೆಲ್ಲೂರು ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿರುವ ಈ ದಕ್ಷ ಪೊಲೀಸ್ ಅಧಿಕಾರಿ, ತಮ್ಮ ಸೇವಾವಧಿಯಲ್ಲಿ ಉತ್ತಮ ಸೇವಾ ಪದಕ, 82 ನಗದು ಬಹುಮಾನಗಳು ಸೇರಿದಂತೆ ಬರೋಬ್ಬರಿ 558 ಮನ್ನಣೆಗಳಿಗೆ ಪಾತ್ರರಾಗಿದ್ದಾರೆ.
ವಿಶೇಷವೆಂದರೆ, 2014ರಲ್ಲಿ ಪ್ರಸಾರವಾಗುತ್ತಿದ್ದ ಮೀಲೋ ಎವರು ಕೋಟೀಶ್ವರುಡು ಟಿವಿ ಶೋನಲ್ಲಿ ಭಾಗವಹಿಸಿ 12.50 ಲಕ್ಷ ರೂಪಾಯಿ ಗೆದ್ದಿದ್ದರು.
ಒಟ್ಟಾರೆಯಾಗಿ, ಸೋಲು ಎಂಬುದು ಎಂದಿಗೂ ಶಾಶ್ವತವಲ್ಲ, ಸತತ ಪರಿಶ್ರಮವಿದ್ದರೆ ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಗೆದ್ದು ತೋರಿಸಬಹುದು ಎಂಬುದಕ್ಕೆ ಅರ್ಲಾ ಶ್ರೀನಿವಾಸುಲು ಅವರ ಬದುಕೇ ನಿಜವಾದ ಉದಾಹರಣೆ




Click it and Unblock the Notifications
