ಚುನಾವಣೆ: ಮತದಾರರಿಗೆ ವೇತನ ಸಹಿತ ರಜೆ ಕಡ್ಡಾಯ, ತಪ್ಪಿದರೆ ಮಾಲೀಕರಿಗೆ ಶಿಕ್ಷೆ!
ಮಹಾರಾಷ್ಟ್ರ ಚುನಾವಣೆ ದಿನಾಂಕ ಸಮೀಪಿಸುತ್ತಿದ್ದು, ಮತದಾರರಿಗೆ ಅಲ್ಲಿನ ಸರ್ಕಾರ ಹಾಗೂ ಪಾಲಿಕೆ ವಿಶೇಷ ವಿನಾಯಿತಿ ಹಾಗೂ ಸೌಲಭ್ಯವನ್ನು ಕಲ್ಪಿಸಿದೆ. ಈ ರೀತಿಯ ವಿಶೇಷ ಸೌಲಭ್ಯವು ಉಳಿದ ಯಾವುದೇ ರಾಜ್ಯದಲ್ಲೂ ಚುನಾವಣೆ ಸಮಯದಲ್ಲಿ ಅಥವಾ ಮತದಾನದ ದಿನ ನೀಡುವ ಸೌಲಭ್ಯಕ್ಕಿಂತಲೂ ಭಿನ್ನವಾಗಿದೆ. ಮಹಾರಾಷ್ಟ್ರದಲ್ಲಿ ನವೆಂಬರ್ 20ಕ್ಕೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ಮಹಾರಾಷ್ಟ್ರ ಚುನಾವಣೆ ಸಮೀಪಿಸುತ್ತಿರುವಾಗಲೇ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ವಿಶೇಷ ಕೊಡುಗೆಯನ್ನು ಅಲ್ಲಿನ ಪಾಲಿಕೆ ಕೊಟ್ಟಿದೆ. ಬೃಹನ್‌ಮುಂಬೈ ಮುನಿಸಿಪಲ್ ಕಾರ್ಪೊರೇಷನ್ (BMC) ಮುಂಬೈ ಅಲ್ಲಿರುವ ವ್ಯಾಪಾರಗಳು, ಸಂಸ್ಥೆಗಳು ಮತ್ತು ವಿವಿಧ ವಲಯಗಳಲ್ಲಿ ಕೆಲಸ ಮಾಡುವ ಎಲ್ಲಾ ಉದ್ಯೋಗಿಗಳಿಗೆ ಮತದಾನದ ದಿನ ಮತ ಚಲಾಯಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ವೇತನ ಸಹಿತ ರಜೆ ನೀಡುವುದನ್ನು ಕಡ್ಡಾಯಗೊಳಿಸಿದೆ. ಇದರಿಂದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚೆಚ್ಚು ಜನ ಭಾಗವಹಿಸಿ ಮತದಾನ ಮಾಡಲು ಪೋತ್ಸಾಹಿಸುವ ಉದ್ದೇಶದಿಂದ ಈ ಆದೇಶ ಮಾಡಲಾಗಿದೆ.

ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯ ಮತದಾನದ ದಿನ ಮುಂಬೈ ಮಹಾನಗರದ ಎಲ್ಲಾ ನೌಕರರಿಗೂ ವೇತನ ಸಹಿತ ರಜೆ ನೀಡಬೇಕು. ಇದು ಕಡ್ಡಾಯವಾಗಿರುತ್ತದೆ ಎಂದು ಮುಂಬೈ ಮಹಾನಗರ ಪಾಲಿಕೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಆದೇಶ ನಗರದ ಎಲ್ಲಾ ವಲಯದ ಕಾರ್ಮಿಕರಿಗೂ ಅನ್ವಯಿಸಲಿದೆ. ಅದರಲ್ಲಿ ಕೈಗಾರಿಕೆ, ವಾಣಿಜ್ಯ ಹಾಗೂ ಸೇವಾ-ಆಧಾರಿತ ಸಂಸ್ಥೆಗಳ ಉದ್ಯೋಗಿಗಳಿಗೂ ಅನ್ವಯಿಸಲಿದೆ.
ಮಾಲೀಕರ ಮೇಲೆ ಕ್ರಮದ ಎಚ್ಚರಿಕೆ: ನವೆಂಬರ್ 20ರಂದು ಒಂದೊಮ್ಮೆ ಕೆಲಸ ಮಾಡುವ ಉದ್ಯೋಗಿಗಳಿಗೆ ಮತದಾನ ಮಾಡಲು ರಜೆ ಹಾಗೂ ವೇತನ ನೀಡದೆ ಇದ್ದರೆ, ಆಯಾ ಸಂಸ್ಥೆಯ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿಯೂ ಮುಂಬೈ ಪಾಲಿಕೆಯ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಮತದಾನ ಹೆಚ್ಚಿಸುವ ಗುರಿ: ಸಾಮಾನ್ಯವಾಗಿ ದೇಶದ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ, ಆಯಾ ರಾಜ್ಯ ಮಹಾನಗರಗಳಲ್ಲಿ ಮತದಾನದ ಪ್ರಮಾಣ ಕಡಿಮೆ ಇರುತ್ತದೆ. ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯುವ ಸಂದರ್ಭದಲ್ಲೂ ಬೆಂಗಳೂರಲ್ಲಿ ಮತದಾನ ಕಡಿಮೆ ಇರುವುದು ವರದಿಯಾಗಿದೆ. ಈ ರೀತಿ ನಗರ ಪ್ರದೇಶಗಳಲ್ಲಿ ಕಡಿಮೆ ಮತದಾನ ಪ್ರಮಾಣವನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮ ಅನುಸರಿಸಲಾಗುತ್ತಿದೆ.
ಮುಂಬೈ ಮಹಾನಗರದಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಅಲ್ಲಿನ ಪಾಲಿಕೆಗೆ ಭಾರತೀಯ ಚುನಾವಣಾ ಆಯೋಗ ನೀಡಿದೆ. ಮುಂಬೈನಲ್ಲಿ ಇತ್ತೀಚಿನ ವರ್ಷಗಳಲ್ಲಿ ಮತದಾನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ. 2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮುಂಬೈನಲ್ಲಿ 51.5% ರಷ್ಟು ಮತದಾನ ನಡೆದಿತ್ತು. ಇನ್ನು ಅದಕ್ಕೂ ಮುಂಚೆ ಅಂದರೆ 2014ರಲ್ಲಿ ಶೇಕಡ 53%ಕ್ಕೂ ಕಡಿಮೆ ಮತದಾನ ಆಗಿದೆ. ಮತದಾನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
20ಕ್ಕೆ ಚುನಾವಣೆ: ಮಹಾರಾಷ್ಟ್ರದಲ್ಲಿ ನವೆಂಬರ್ 20ಕ್ಕೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರದಲ್ಲಿ 288 ವಿಧಾನಸಭಾ ಕ್ಷೇತ್ರಗಳಿದ್ದು, 145 ಮ್ಯಾಜಿಕ್ ನಂಬರ್ ಆಗಿದೆ. ಮಹಾಯುತಿ ಹಾಗೂ ಮಹಾವಿಕಾಸ್ ಅಘಾಡಿ ಮೈತ್ರಿ ಪಕ್ಷಗಳು ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡುತ್ತಿವೆ.












Click it and Unblock the Notifications