ಪರೀಕ್ಷಾ ದಿನ ಅನಾರೋಗ್ಯವಾಗಿ ಪರೀಕ್ಷೆ ಮಿಸ್ ಆದ್ರೆ ಮುಂದೇನು? CBSE ನಿಯಮದಲ್ಲೇನಿದೆ? ಇಲ್ಲಿದೆ ಉತ್ತರ
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯ (ಸಿಬಿಎಸ್ಇ) 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಸಮೀಪಿಸುತ್ತಿವೆ. ವಿದ್ಯಾರ್ಥಿಗಳು ಸಿಲಬಸ್, ರಿವಿಷನ್, ಪರೀಕ್ಷೆ ವೇಳಾಪಟ್ಟಿಯ ಬಗ್ಗೆ ತಲೆಕೆಡಿಸಿಕೊಳ್ಳುವುದು ಸಹಜ. ಆದರೆ, ಚರ್ಚೆಯಾಗದ ಒಂದು ಮಹತ್ವದ ವಿಷಯವೆಂದರೆ, "ಒಂದು ವೇಳೆ ಪರೀಕ್ಷೆಯ ದಿನದಂದೇ ವಿದ್ಯಾರ್ಥಿ ತೀವ್ರ ಅನಾರೋಗ್ಯಕ್ಕೆ ಒಳಗಾದರೆ ಅಥವಾ ಅನಿವಾರ್ಯ ಕಾರಣಗಳಿಂದ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದಿದ್ದರೆ ಏನಾಗುತ್ತದೆ?" ಎಂಬುದು. ಜ್ವರದಿಂದ ಬಳಲುತ್ತಾ ಆಸ್ಪತ್ರೆ ಸೇರುವುದಿರಲಿ ಅಥವಾ ಕುಟುಂಬದಲ್ಲಿನ ತುರ್ತು ಪರಿಸ್ಥಿತಿಯೇ ಇರಲಿ, ಇಂತಹ ಸಂದರ್ಭಗಳು ಯಾರಿಗೆ, ಯಾವಾಗ ಬೇಕಾದರೂ ಎದುರಾಗಬಹುದು.
ಅನೇಕ ಪೋಷಕರು ಮತ್ತು ವಿದ್ಯಾರ್ಥಿಗಳು, "ಮೆಡಿಕಲ್ ಸರ್ಟಿಫಿಕೇಟ್ (ವೈದ್ಯಕೀಯ ಪ್ರಮಾಣಪತ್ರ) ಕೊಟ್ಟರೆ ಸಾಕು, ಮಂಡಳಿಯು ನಮಗೆ ಬೇರೆ ದಿನ ಪರೀಕ್ಷೆ ನಡೆಸುತ್ತದೆ" ಎಂಬ ತಪ್ಪು ಕಲ್ಪನೆಯಲ್ಲಿರುತ್ತಾರೆ. ಆದರೆ ಸಿಬಿಎಸ್ಇ ನಿಯಮ ಹೇಳುವುದೇ ಬೇರೆ. ಅನಿರೀಕ್ಷಿತವಾಗಿ ಪರೀಕ್ಷೆ ತಪ್ಪಿಸಿಕೊಂಡರೆ ಎದುರಾಗುವ ಸವಾಲುಗಳೇನು ಮತ್ತು ಅದಕ್ಕೆ ಇರುವ ಪರಿಹಾರಗಳೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

'ಮರುಪರೀಕ್ಷೆ' ಎಂಬುದೇ ಇಲ್ಲ
ಹೌದು, ಅನಾರೋಗ್ಯ ಅಥವಾ ಯಾವುದೇ ವೈಯಕ್ತಿಕ ಕಾರಣಗಳಿಂದ ವಿದ್ಯಾರ್ಥಿಯು ಬೋರ್ಡ್ ಪರೀಕ್ಷೆಯ ಮುಖ್ಯ ವಿಷಯದ (Main Subject) ಪರೀಕ್ಷೆಯನ್ನು ತಪ್ಪಿಸಿಕೊಂಡರೆ, ಸಿಬಿಎಸ್ಇ ಆ ವಿದ್ಯಾರ್ಥಿಗೆ ತಕ್ಷಣವೇ ಯಾವುದೇ "ಮರುಪರೀಕ್ಷೆ" ನಡೆಸುವುದಿಲ್ಲ. ನೀವು ಎಷ್ಟೇ ಗಂಭೀರವಾದ ವೈದ್ಯಕೀಯ ಪ್ರಮಾಣಪತ್ರವನ್ನು ಸಲ್ಲಿಸಿದರೂ ಸರಿ, 10 ಅಥವಾ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ "ಮರುಪರೀಕ್ಷೆ" ನಡೆಸುವ ವ್ಯವಸ್ಥೆ ಇಲ್ಲ. ಇಲ್ಲಿಯೇ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪು ತಿಳುವಳಿಕೆ ಹೊಂದುತ್ತಾರೆ.
ಪರೀಕ್ಷಾ ಕೇಂದ್ರಕ್ಕೆ ಹೋಗಿಯೂ ಹುಷಾರು ತಪ್ಪಿದರೆ?
ಒಂದು ವೇಳೆ ವಿದ್ಯಾರ್ಥಿಗೆ ಹುಷಾರಿಲ್ಲದಿದ್ದರೂ, ಧೈರ್ಯ ಮಾಡಿ ಪರೀಕ್ಷಾ ಕೇಂದ್ರಕ್ಕೆ ತಲುಪಿದರೆ ಏನಾಗುತ್ತದೆ?
1. ಅನಾರೋಗ್ಯವಿದ್ದರೂ ವಿದ್ಯಾರ್ಥಿ ಕೇಂದ್ರಕ್ಕೆ ಬಂದರೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ.
2. ಮೇಲ್ವಿಚಾರಕರು (Invigilators) ಕುಡಿಯಲು ನೀರು ಅಥವಾ ಆಸನದ ವ್ಯವಸ್ಥೆಯಲ್ಲಿ ಸ್ವಲ್ಪ ಅನುಕೂಲ ಮಾಡಿಕೊಡಬಹುದು. ಆದರೆ, ಪೂರ್ವಾನುಮತಿ ಇಲ್ಲದೆ ಯಾವುದೇ ಕಾರಣಕ್ಕೂ "ಹೆಚ್ಚುವರಿ ಸಮಯ" ನೀಡುವುದಿಲ್ಲ.
3. ಒಮ್ಮೆ ನೀವು ಪರೀಕ್ಷಾ ಹಾಲ್ನಲ್ಲಿ ಕುಳಿತು, ಉತ್ತರ ಪತ್ರಿಕೆಯಲ್ಲಿ ನಿಮ್ಮ ಹಾಜರಾತಿಯನ್ನು ನಮೂದಿಸಿದರೆ, ಆ ಪತ್ರಿಕೆಯನ್ನು "ಪ್ರಯತ್ನಿಸಲಾಗಿದೆ" (Attempted) ಎಂದೇ ಪರಿಗಣಿಸಲಾಗುತ್ತದೆ. ಪರೀಕ್ಷೆ ಮುಗಿದ ನಂತರ, "ನನಗೆ ಹುಷಾರಿರಲಿಲ್ಲ, ಹಾಗಾಗಿ ನನಗೆ ಕಡಿಮೆ ಅಂಕ ಬಂದಿದೆ, ಮರು ಮೌಲ್ಯಮಾಪನ ಮಾಡಿ" ಎಂದು ಕೇಳಲು ಬರುವುದಿಲ್ಲ.
ಆಸ್ಪತ್ರೆಗೆ ಸೇರಿದರೆ ಅಥವಾ ಗೈರಾದರೆ ಮುಂದೇನು?
ತೀವ್ರ ಅನಾರೋಗ್ಯದಿಂದ ವಿದ್ಯಾರ್ಥಿಯು ಪರೀಕ್ಷೆಗೆ ಬಾರದೇ ಇದ್ದರೆ ಆ ವಿದ್ಯಾರ್ಥಿಯನ್ನು "ಗೈರುಹಾಜರು" (Absent) ಎಂದು ಗುರುತಿಸಲಾಗುತ್ತದೆ. ಮೆಡಿಕಲ್ ಸರ್ಟಿಫಿಕೇಟ್ ಇದ್ದರೂ ಅವರನ್ನು ಪಾಸು ಮಾಡಲಾಗುವುದಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಇರುವ ಏಕೈಕ ದಾರಿ "ಕಂಪಾರ್ಟ್ಮೆಂಟ್ ಪರೀಕ್ಷೆ" (Compartment Examination). ಫಲಿತಾಂಶ ಬಂದ ಕೆಲವು ತಿಂಗಳ ನಂತರ ಮಂಡಳಿಯು ಕಂಪಾರ್ಟ್ಮೆಂಟ್ ಪರೀಕ್ಷೆಯನ್ನು ನಡೆಸುತ್ತದೆ. ಅದರಲ್ಲಿ ತೇರ್ಗಡೆಯಾಗುವ ಮೂಲಕ ವಿದ್ಯಾರ್ಥಿ ತಮ್ಮ ವರ್ಷವನ್ನು ಉಳಿಸಿಕೊಳ್ಳಬಹುದು. ಸಿಬಿಎಸ್ಇ ಮೌಲ್ಯಮಾಪನ ನೀತಿಯ ಅಡಿಯಲ್ಲಿ ಅನಾರೋಗ್ಯ ಮತ್ತು ಸಾಮಾನ್ಯ ಗೈರುಹಾಜರಿಯನ್ನು ಒಂದೇ ರೀತಿಯಲ್ಲಿ ಪರಿಗಣಿಸಲಾಗುತ್ತದೆ.
ಒಂದು ವಿಷಯ ತಪ್ಪಿದರೂ ಫಲಿತಾಂಶ ತಡೆ
ವಿದ್ಯಾರ್ಥಿಯು ಕೇವಲ ಒಂದೇ ಒಂದು ವಿಷಯದ ಪರೀಕ್ಷೆಗೆ ಗೈರಾದರೂ, ಅವರ ಮುಖ್ಯ ಫಲಿತಾಂಶದಲ್ಲಿ "ತೇರ್ಗಡೆ" ಎಂದು ಬರುವುದಿಲ್ಲ. ಬದಲಿಗೆ ಫಲಿತಾಂಶದ ಸ್ಥಿತಿಯು "ಕಂಪಾರ್ಟ್ಮೆಂಟ್" (Compartment) ಅಥವಾ "ಎಸೆನ್ಶಿಯಲ್ ರಿಪೀಟ್" (Essential Repeat) ಎಂದು ತೋರಿಸಬಹುದು. ಆ ವಿಷಯವನ್ನು ನಂತರದ ದಿನಗಳಲ್ಲಿ ಬರೆದು ಪಾಸ್ ಮಾಡಿದ ನಂತರವೇ ಅಂತಿಮ ಅಂಕಪಟ್ಟಿ ಕೈ ಸೇರುತ್ತದೆ.
ಕುಟುಂಬದಲ್ಲಿ ಅಹಿತಕರ ಘಟನೆ ಸಂಭವಿಸಿದರೆ?
ದುರದೃಷ್ಟವಶಾತ್, ಪರೀಕ್ಷೆಯ ದಿನದಂದು ಕುಟುಂಬದಲ್ಲಿ ಯಾರಾದರೂ ತೀರಿಕೊಂಡರೆ ಅಥವಾ ತುರ್ತು ಪರಿಸ್ಥಿತಿ ಎದುರಾದರೆ, ಸಿಬಿಎಸ್ಇ ನಿಯಮಗಳಲ್ಲಿ ಇದಕ್ಕೆ ವಿನಾಯಿತಿ ಇದೆಯೇ? ಇಲ್ಲ. ಸಿಬಿಎಸ್ಇ ನೀತಿಗಳು ತುಂಬಾ ಕಟ್ಟುನಿಟ್ಟಾಗಿವೆ. ಕುಟುಂಬದ ತುರ್ತುಸ್ಥಿತಿ ಅಥವಾ ಶೋಕಾಚರಣೆಯ ಸಂದರ್ಭಗಳಿಗೂ ಯಾವುದೇ ವಿಶೇಷ ಪರೀಕ್ಷೆ ನಡೆಸಲಾಗುವುದಿಲ್ಲ. ಶಾಲೆಗಳು ದಾಖಲಾತಿ ಮತ್ತು ಮಾರ್ಗದರ್ಶನಕ್ಕೆ ಸಹಾಯ ಮಾಡಬಹುದು, ಆದರೆ ಮಂಡಳಿಯ ನಿಲುವು ಒಂದೇ ಆಗಿರುತ್ತದೆ.
ಹೆಚ್ಚುವರಿ ಅಂಕ(Grace Marks) ಸಿಗುತ್ತಾ?
ಅನೇಕರು ಅಂದುಕೊಂಡಂತೆ, ಅನಾರೋಗ್ಯದ ಕಾರಣ ಪರೀಕ್ಷೆ ಬರೆಯದಿದ್ದವರಿಗೆ ಹೆಚ್ಚುವರಿ ಅಂಕ ಸಿಗುವುದಿಲ್ಲ. ವಿದ್ಯಾರ್ಥಿಯು ಪರೀಕ್ಷೆಗೆ ಹಾಜರಾಗಿರಲೇಬೇಕು. ಪೇಪರ್ ಬರೆದು, ತೇರ್ಗಡೆ ಆಗಲು ಕೇವಲ ಕೆಲವೇ ಅಂಕಗಳ ಕೊರತೆ ಇದ್ದರೆ ಮಾತ್ರ ಮಂಡಳಿಯು ನಿಯಮಾನುಸಾರ ಹೆಚ್ಚುವರಿ ಅಂಕ ನೀಡುತ್ತದೆ. ಗೈರಾದವರಿಗೆ ಸೊನ್ನೆ ಅಂಕವೇ ಅಂತಿಮ.
ಕಂಪಾರ್ಟ್ಮೆಂಟ್ vs ಇಂಪ್ರೂವ್ಮೆಂಟ್
ಗೊಂದಲ ಬೇಡ ವಿದ್ಯಾರ್ಥಿಗಳು ಇವೆರಡರ ನಡುವೆ ವ್ಯತ್ಯಾಸ ತಿಳಿಯುವುದು ಮುಖ್ಯ:
ಕಂಪಾರ್ಟ್ಮೆಂಟ್ ಪರೀಕ್ಷೆ (Compartment Exam): ಯಾರು ಒಂದು ವಿಷಯದಲ್ಲಿ ಫೇಲ್ ಆಗಿದ್ದಾರೋ ಅಥವಾ ಪರೀಕ್ಷೆಗೆ ಗೈರಾಗಿದ್ದಾರೋ ಅವರಿಗೆ ನಡೆಸುವ ಪರೀಕ್ಷೆ. ಇದನ್ನು ಪಾಸ್ ಮಾಡಿದರೆ ಮುಂದಿನ ತರಗತಿಗೆ ಹೋಗಲು ಅರ್ಹತೆ ಸಿಗುತ್ತದೆ.
ಇಂಪ್ರೂವ್ಮೆಂಟ್ ಪರೀಕ್ಷೆ (Improvement Exam): ಯಾರು ಈಗಾಗಲೇ ಪರೀಕ್ಷೆ ಬರೆದು ತೇರ್ಗಡೆ ಆಗಿದ್ದಾರೋ, ಆದರೆ ತಮ್ಮ ಅಂಕಗಳನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಾರೋ ಅವರಿಗೆ ಇದು ಅನ್ವಯಿಸುತ್ತದೆ. ಇದರಲ್ಲಿ ಬರುವ ಅಂಕಗಳು ಹಿಂದಿನದಕ್ಕಿಂತ ಹೆಚ್ಚಿದ್ದರೆ ಮಾತ್ರ ಪರಿಗಣಿಸಲಾಗುತ್ತದೆ.
ವಿದ್ಯಾರ್ಥಿಗಳು ಏನು ಮಾಡಬೇಕು?
ಒಂದು ವೇಳೆ ಪರೀಕ್ಷಾ ಸಮಯದಲ್ಲಿ ಅನಾರೋಗ್ಯ ಕಾಡಿದರೆ ತಕ್ಷಣವೇ ಶಾಲೆಗೆ ಮಾಹಿತಿ ನೀಡಿ. ವೈದ್ಯಕೀಯ ದಾಖಲೆಗಳನ್ನು ಜೋಡಿಸಿಟ್ಟುಕೊಳ್ಳಿ. ಇದು ಮುಂದಿನ ಪ್ರಕ್ರಿಯೆಗೆ ಬೇಕಾಗಬಹುದು.
ಕಂಪಾರ್ಟ್ಮೆಂಟ್ ಪರೀಕ್ಷೆ ಬರೆದು ಎಷ್ಟೋ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಹೋಗಿದ್ದಾರೆ. ಗಾಬರಿಯಾಗುವ ಅವಶ್ಯಕತೆಯಿರುವುದಿಲ್ಲ. ತೀವ್ರ ಅಸ್ವಸ್ಥರಾಗಿದ್ದಾಗ ಪರೀಕ್ಷೆ ಬರೆಯಲು ಒತ್ತಾಯಿಸುವುದಕ್ಕಿಂತ, ಚೇತರಿಸಿಕೊಂಡು ಕಂಪಾರ್ಟ್ಮೆಂಟ್ ಪರೀಕ್ಷೆ ಎದುರಿಸುವುದು ಉತ್ತಮ.
"ಸಿಬಿಎಸ್ಇ ಬೋರ್ಡ್ ಪರೀಕ್ಷೆಗಳು ನಿಮ್ಮ ಸಿದ್ಧತೆಯನ್ನು ಗೌರವಿಸುತ್ತವೆಯೇ ಹೊರತು, ಪರೀಕ್ಷೆಯ ನಂತರ ನೀಡುವ ವಿವರಣೆಗಳನ್ನಲ್ಲ" ಎಂಬ ಮಾತು ಇಲ್ಲಿ ಅಕ್ಷರಶಃ ಸತ್ಯ.
-
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
8 ವರ್ಷ ಕೆಲಸ ಮಾಡಿದರೂ ಕ್ಷಣಾರ್ಧದಲ್ಲಿ ವಜಾ: ವೈರಲ್ ಪೋಸ್ಟ್ ನೋಡಿ ನೆಟ್ಟಿಗರು ಶಾಕ್ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Vastu Tips for Home: ಮನೆಗೆ ಎರಡು ಮುಖ್ಯ ಪ್ರವೇಶ ದ್ವಾರಗಳು ಇರಬಹುದೇ? ವಾಸ್ತು ಹೇಳುವುದು ಏನು -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ?












Click it and Unblock the Notifications