Vastu Tips for Home: ಮನೆಗೆ ಎರಡು ಮುಖ್ಯ ಪ್ರವೇಶ ದ್ವಾರಗಳು ಇರಬಹುದೇ? ವಾಸ್ತು ಹೇಳುವುದು ಏನು
ಈಗಿನ ಕಾಲದಲ್ಲಿ ಮನೆ ನಿರ್ಮಾಣ ವಿಷಯದಲ್ಲಿ ವಾಸ್ತು ಶಾಸ್ತ್ರಕ್ಕೆ ಮಹತ್ವ ನೀಡುವವರು ಹೆಚ್ಚಾಗಿದ್ದಾರೆ. ಅದರಲ್ಲೂ ವಿಶೇಷವಾಗಿ ಮನೆಗೆ ಎರಡು ಮುಖ್ಯ ದ್ವಾರಗಳು ಮಾಡಬಹುದೆ? ಎಂಬ ಪ್ರಶ್ನೆ ಬಹುತೇಕ ಜನರಲ್ಲಿ ಹುಟ್ಟುತ್ತದೆ. ಸಾಮಾನ್ಯವಾಗಿ ಮನೆ ಕಟ್ಟುವಾಗ ಸಾಕಷ್ಟು ಜಾಗ ಇರುವ ಕಾರಣದಿಂದ ಹಲವರು ಎರಡು ಪ್ರವೇಶ ದ್ವಾರಗಳನ್ನು ನಿರ್ಮಾಣ ಮಾಡುತ್ತಾರೆ. ಆದರೆ ಇದು ವಾಸ್ತು ಶಾಸ್ತ್ರದ ಪ್ರಕಾರ ಸರಿಯೇ ಅಥವಾ ತಪ್ಪೇ ಎಂಬುದು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ.
ವಾಸ್ತು ತಜ್ಞರ ಪ್ರಕಾರ, ಮನೆಗೆ ಎರಡು ಮುಖ್ಯ ದ್ವಾರಗಳು ಮಾಡಬಹುದು. ಆದರೆ ಅವುಗಳ ದಿಕ್ಕು ಮತ್ತು ಸ್ಥಾನಮಾನ ಅತ್ಯಂತ ಮಹತ್ವದ ವಿಷಯವಾಗಿದೆ. ಸಾಮಾನ್ಯವಾಗಿ ಪೂರ್ವ ಮತ್ತು ಪಶ್ಚಿಮ ಅಥವಾ ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ಮುಖ್ಯ ದ್ವಾರಗಳನ್ನು ಹೊಂದಿರುವುದು ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಒಂದು ಮುಖ್ಯದ್ವಾರ ಮನೆಯ ಮುಂಭಾಗದಲ್ಲಿದ್ದರೆ ಮತ್ತೊಂದು ದ್ವಾರ ಅದಕ್ಕೆ ವಿರುದ್ಧವಾಗಿ ಹಿಂಭಾಗದಲ್ಲಿ ಇರಬೇಕು.

ಯಾವ ದಿಕ್ಕುಗಳು ಉತ್ತಮ?
ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ದ್ವಾರಗಳನ್ನು ಹೊಂದಿರುವುದು ತುಂಬಾ ಒಳ್ಳೆಯದು ಎಂದು ವಾಸ್ತು ತಜ್ಙರ ಅಭಿಪ್ರಾಯ ಆಗಿದೆ. ಈ ದಿಕ್ಕುಗಳಲ್ಲಿ ಮನೆಯ ಮುಖ್ಯ ದ್ವಾರಗಳು ಇದ್ದರೆ ಮನೆಯೊಳಗೆ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ, ಆರ್ಥಿಕ ಪರಿಸ್ಥಿತಿ ಸ್ಥಿರತೆಯಿಂದ ಇರುತ್ತದೆ ಮತ್ತು ಸಮೃದ್ಧಿಯತ್ತ ಕೊಂಡೊಯುತ್ತದೆ ಎಂದು ನಂಬಲಾಗಿದೆ.
ತಪ್ಪು ದಿಕ್ಕುಗಳಲ್ಲಿ ದ್ವಾರ ಇದ್ದರೆ?
ನೈಋತ್ಯ (ದಕ್ಷಿಣ ಮತ್ತು ಪಶ್ಚಿಮ) ಮೂಲೆಯಲ್ಲಿ ದ್ವಾರವನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಇದು ನಮ್ಮ ಆರ್ಥಿಕ ನಷ್ಟಕ್ಕೆ, ಆರೋಗ್ಯದ ಸಮಸ್ಯೆಗಳಿಗೆ ಹಾಗೂ ಅನಿರೀಕ್ಷಿತ ಅಪಘಾತಗಳಿಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ಎರಡು ಮುಖ್ಯ ದ್ವಾರಗಳ ನಡುವಿನ ಹೊಂದಾಣಿಕೆ
ಮನೆಯ ಎರಡು ಮುಖ್ಯ ದ್ವಾರಗಳನ್ನು ನೇರವಾಗಿ ಎದುರಾ ಎದುರಾಗಿ ಇಡುವುದನ್ನು ಮಾಡಬಾರದು. ಹೀಗೆ ಮಾಡಿದರೆ ಮನೆಯೊಳಗೆ ಪ್ರವೇಶಿಸುವ ಸಕಾರತ್ಮಕ ಶಕ್ತಿ ಸರಿಯಾಗಿ ಪ್ರವೇಶಿಸದೆ ನೇರವಾಗಿ ಹೊರಗಡೆ ಹೋಗುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಹಣವು ಸಂಗ್ರಹವಾಗದೇ ಹೋಗಬಹುದು ಎಂಬುದು ವಾಸ್ತು ಶಾಸ್ತ್ರ ತಜ್ಞರು ಹೇಳುತ್ತಾರೆ.
ಎರಡು ಮುಖ್ಯ ದ್ವಾರಗಳ ಪ್ರಾಯೋಗಿಕ ಲಾಭ
ಎರಡು ಮುಖ್ಯ ದ್ವಾರಗಳಿದ್ದರೆ ಮನೆಗೆ ಗಾಳಿ ಮತ್ತು ಬೆಳಕು ಹೆಚ್ಚು ಬರುತ್ತದೆ. ಜೊತೆಗೆ, ಒಂದು ದ್ವಾರವನ್ನು ಅತಿಥಿಗಳಿಗೆ ಮತ್ತು ಇನ್ನೊಂದನ್ನು ಕುಟುಂಬದವರ ಬಳಕೆಗಾಗಿ ಬಳಸಬಹುದು. ಇದರಿಂದ ನಮಗೆ ದಿನನಿತ್ಯದ ಕೆಲಸಗಳಿಗೂ ಅನುಕೂಲಕರ ಆಗಿರುತ್ತದೆ.
ಗಮನಿಸಬೇಕಾದ ಪ್ರಮುಖ ನಿಯಮಗಳು
* ಮುಖ್ಯ ದ್ವಾರ (ಸಿಂಹದ್ವಾರ) ದೊಡ್ಡದಾಗಿರಬೇಕು
* ದ್ವಿತೀಯ ದ್ವಾರ ಅದಕ್ಕಿಂತ ಚಿಕ್ಕದಾಗಿರಬೇಕು
* ದ್ವಾರವನ್ನು ಮನೆಯ ಮಧ್ಯದಲ್ಲಿ ಇಡಬಾರದು
* ಮೂಲೆಗಳಲ್ಲಿ ಮುಖ್ಯ ದ್ವಾರ ಮತ್ತು ದ್ವಿತೀಯ ದ್ವಾರ ಇರಬಾರದು
* ನೈಋತ್ಯ ದಿಕ್ಕಿನಲ್ಲಿ ಮುಖ್ಯ ದ್ವಾರ ಮತ್ತು ದ್ವಿತೀಯ ದ್ವಾರ ಇರಬಾರದು
ವಾಸ್ತು ದೋಷ ಇದ್ದರೆ ಏನು ಮಾಡಬೇಕು?
ಇದಾಗಲೆ ಮನೆಯನ್ನು ನಿರ್ಮಾಣ ಮಾಡಿದ್ದರೆ ಮತ್ತು ಮುಖ್ಯ ದ್ವಾರ ವಾಸ್ತು ಪ್ರಕಾರ ಸರಿಯಾದ ಜಾಗದಲ್ಲಿ ಮಾಡದೆ ಇದ್ದರೆ, ಆ ದ್ವಾರವನ್ನು ಅಗತ್ಯವಿದ್ದಾಗ ಮಾತ್ರ ಬಳಸಬೇಕು ಇಲ್ಲವಾದಲ್ಲಿ ಅದನ್ನು ಬಳಸದೆ ಇರುವುದೆ ಉತ್ತಮ ಎಂದು ಹೇಳುತ್ತಾರೆ. ಜೊತೆಗೆ ಬಾಗಿಲಿನ ಮೇಲೆ ಮಂಗಳ ತೋರಣ ಅಥವಾ ದೃಷ್ಟಿ ವಿನಾಯಕನ ಚಿತ್ರವನ್ನು ಇಡುವುದರಿಂದ ಮನೆಯ ಒಳಗೆ ಬರುವ ದೋಷಗಳನ್ನು ಕಡಿಮೆ ಮಾಡಬಹುದು ಎಂದು ನಂಬಲಾಗಿದೆ.
ಮನೆಗೆ ಎರಡು ದ್ವಾರಗಳನ್ನು ಹೊಂದುವುದು ತಪ್ಪಲ್ಲ. ಆದರೆ ಅವು ಸರಿಯಾದ ದಿಕ್ಕು ಮತ್ತು ನಿಯಮಗಳನ್ನು ಅನುಸರಿಸಿದಾಗ ಮಾತ್ರ ಉತ್ತಮ ಫಲಿತಾಂಶ ನೀಡುತ್ತದೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ.











Click it and Unblock the Notifications