ಕಾವೇರಿ ಕದನಕ್ಕೆ ಬೀಳುತ್ತಾ ಬ್ರೇಕ್? ಆ.3ಕ್ಕೆ ಬೆಂಗಳೂರಿನಲ್ಲಿ ಡಿ.ಕೆ. ಶಿವಕುಮಾರ್-ವಿಜಯ್ ದ್ವಿಪಕ್ಷೀಯ ಮಾತುಕತೆ
ದಶಕಗಳಿಂದ ಕರ್ನಾಟಕ ಮತ್ತು ತಮಿಳುನಾಡು ನಡುವೆ ಬಗೆಹರಿಯದೆ ಹಾಗೆಯೇ ಉಳಿದಿರುವ ಕಾವೇರಿ ಜಲ ವಿವಾದವನ್ನ ಸೌಹಾರ್ದಯುತವಾಗಿ ಪರಿಹರಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಬೆಳವಣಿಗೆ ನಡೆದಿದೆ. ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ನಡುವೆ ಆಗಸ್ಟ್ 3ರಂದು ಬೆಂಗಳೂರಿನಲ್ಲಿ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಯುವ ಸಾಧ್ಯತೆ ಹೆಚ್ಚಿದೆ.
ನಾಯಕರು ತಮ್ಮ ಭಿನ್ನಾಭಿಪ್ರಾಯಗಳನ್ನ ಬದಿಗಿಟ್ಟು, ಈ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವತ್ತ ಹೆಜ್ಜೆ ಇಡುತ್ತಿರುವುದು ಎಲ್ಲರಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಹಲವು ದಶಕಗಳ ಬಳಿಕ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಇಂತಹ ದ್ವಿಪಕ್ಷೀಯ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು.

ತಮಿಳುನಾಡು ಸಿಎಂ ವಿಜಯ್ ಅವರಿಂದಲೇ ಮಾತುಕತೆಗೆ ಆಸಕ್ತಿ
ವಿಶೇಷವೆಂದರೆ, ಈ ಬಾರಿ ತಮಿಳುನಾಡು ಕಡೆಯಿಂದಲೇ ಮಾತುಕತೆಗೆ ಅಧಿಕೃತ ಕೋರಿಕೆ ಬಂದಿದೆ. ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರು ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ದ್ವಿಪಕ್ಷೀಯ ಬಾಂಧವ್ಯ ಹೆಚ್ಚಿಸಲು ಹಾಗೂ ಜಲ ವಿವಾದದ ಕುರಿತು ಚರ್ಚಿಸಲು ಸಮಯ ಕೇಳಿದ್ದಾರೆ ಎನ್ನಲಾಗಿದೆ. ಈ ಮನವಿಗೆ ತಕ್ಷಣವೇ ಸ್ಪಂದಿಸಿರುವ ಡಿ.ಕೆ. ಶಿವಕುಮಾರ್, ಆಗಸ್ಟ್ 3ರಂದು ಮಾತುಕತೆಗಾಗಿ ಬೆಂಗಳೂರಿಗೆ ಆಗಮಿಸುವಂತೆ ತಮಿಳುನಾಡು ಮುಖ್ಯಮಂತ್ರಿಗೆ ಆಹ್ವಾನ ನೀಡಿದ್ದಾರೆ. ಇತ್ತೀಚೆಗಷ್ಟೇ ನದಿ ನೀರು ಹಂಚಿಕೆ ವಿಚಾರದಲ್ಲಿ ನೆರೆಯ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ಸಿಎಂಗಳ ಜೊತೆ ಮಾತುಕತೆ ನಡೆಸಿ ಗಮನ ಸೆಳೆದಿದ್ದ ಡಿ.ಕೆ. ಶಿವಕುಮಾರ್, ಇದೀಗ ತಮಿಳುನಾಡು ಜೊತೆಗಿನ ದಶಕಗಳ ಹಳೆಯ ಸಂಘರ್ಷಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ.
ಮೇಕೆದಾಟು ಯೋಜನೆ ಕುರಿತು ಪ್ರಮುಖ ಚರ್ಚೆ
ಈ ಭೇಟಿಯ ವೇಳೆ ಕೇವಲ ಕಾವೇರಿ ನೀರು ಹಂಚಿಕೆ ಮಾತ್ರವಲ್ಲದೆ ಇನ್ನೂ ಹಲವು ಪ್ರಮುಖ ವಿಷಯಗಳು ಚರ್ಚೆಗೆ ಬರಲಿವೆ. ಪ್ರಮುಖವಾಗಿ ಕರ್ನಾಟಕದ ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ಹೊಂದಿರುವ ಅನುಮಾನ ಮತ್ತು ಆತಂಕಗಳನ್ನ ನಿವಾರಿಸಲು ಕರ್ನಾಟಕ ಪ್ರಯತ್ನಿಸಲಿದೆ. ಮಳೆ ಕಡಿಮೆಯಾದಾಗ ಉಭಯ ರಾಜ್ಯಗಳಿಗೆ ಅನುಕೂಲವಾಗುವಂತೆ ನೀರನ್ನು ಹೇಗೆ ಹಂಚಿಕೊಳ್ಳಬಹುದು ಎಂಬ ಬಗ್ಗೆ ಸ್ಪಷ್ಟ ರೂಪುರೇಷೆ ಸಿದ್ಧಪಡಿಸುವ ನಿರೀಕ್ಷೆ ಇದೆ. ಇದಲ್ಲದೆ, ಗಡಿ ಭಾಗದ ಉದ್ಯೋಗಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು-ಹೊಸೂರು ಮೆಟ್ರೋ ಮಾರ್ಗದ ವಿಸ್ತರಣೆ ಬಗ್ಗೆಯೂ ಉಭಯ ನಾಯಕರು ಪರಸ್ಪರ ಸಹಕಾರ ನೀಡುವ ಬಗ್ಗೆ ಚರ್ಚಿಸಲಿದ್ದಾರೆ.
ಹಿಂದೆ ನೆರವೇರದ ಸಂಧಾನ ಈಗ್ಲಾದರೂ ಆಗುತ್ತಾ?
1997ರಲ್ಲಿ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಚೆನ್ನೈನಲ್ಲಿ ಅಂದಿನ ತಮಿಳುನಾಡು ಸಿಎಂ ಎಂ. ಕರುಣಾನಿಧಿ ಹಾಗೂ ಕರ್ನಾಟಕದ ಸಿಎಂ ಜೆ.ಎಚ್. ಪಟೇಲ್ ನಡುವೆ ನೇರ ಮಾತುಕತೆ ನಡೆದಿತ್ತಾದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ನಂತರ 2012ರಲ್ಲಿ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಖುದ್ದು ಬೆಂಗಳೂರಿಗೆ ಆಗಮಿಸಿ ಜಗದೀಶ್ ಶೆಟ್ಟರ್ ಅವರೊಂದಿಗೆ ಸಭೆ ನಡೆಸಿದ್ದರು. ಆ ಪ್ರಯತ್ನವೂ ಮುರಿದುಬಿದ್ದಿತ್ತು. ಇನ್ನು 2021ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮೇಕೆದಾಟು ಯೋಜನೆ ಬಗ್ಗೆ ಚರ್ಚಿಸಲು ಪತ್ರ ಬರೆದಿದ್ದಾಗ, ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅದನ್ನು ತಿರಸ್ಕರಿಸಿದ್ದರು.
ದಶಕಗಳ ಕಾಲ ಕಾವೇರಿ ತೀರ್ಪು ಮತ್ತು ಸುಪ್ರೀಂಕೋರ್ಟ್ ಆದೇಶವನ್ನೇ ಮುಂದಿಟ್ಟುಕೊಂಡು ಮಾತುಕತೆಗೆ ಹಿಂದೇಟು ಹಾಕುತ್ತಿದ್ದ ತಮಿಳುನಾಡು, ಇದೀಗ ವಿಜಯ್ ನೇತೃತ್ವದಲ್ಲಿ ಮತ್ತೆ ಮಾತುಕತೆಗೆ ಮುಂದಾಗಿರುವುದು ಹೊಸ ಆಶಾವಾದ ಹುಟ್ಟುಹಾಕಿದೆ. ಈ ಬಾರಿಯಾದರೂ ಸಂಧಾನ ಯಶಸ್ವಿಯಾಗುತ್ತಾ ಕಾದು ನೋಡಬೇಕಿದೆ.
ಸಾಮಾನ್ಯವಾಗಿ ಉಭಯ ರಾಜ್ಯಗಳ ಸಭೆ ಎಂದರೆ ಅಲ್ಲಿ ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರಗಳೇ ಮೇಲುಗೈ ಸಾಧಿಸುತ್ತಿದ್ದವು. ಆದರೆ ದಕ್ಷಿಣ ಭಾರತದ ಆರ್ಥಿಕತೆಯ ಬೆನ್ನೆಲುಬಾಗಿರುವ ಕರ್ನಾಟಕ ಮತ್ತು ತಮಿಳುನಾಡು ಈಗ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದರೆ, ಎರಡೂ ರಾಜ್ಯಗಳ ಆರ್ಥಿಕ ಶಕ್ತಿ ಇಮ್ಮಡಿಯಾಗಲಿದೆ ಎನ್ನುವುದು ವಿಶ್ಲೇಷಕರ ಅಭಿಪ್ರಾಯ.


Click it and Unblock the Notifications
