Butterfruit Farming: ಕರ್ನಾಟಕದ 'ಬಟರ್ ಫ್ರೂಟ್' ಬೆಳೆಗಾರರ ಯಶಸ್ಸು ಕೊಂಡಾಡಿದ ಪ್ರಧಾನಿ ಮೋದಿ
Butterfruit Farming: ಸಾಮಾನ್ಯವಾಗಿ ಬಟರ್ ಫ್ರೂಟ್ (ಆವಕಾಡೊ) ಹಣ್ಣಿನ ಬಗ್ಗೆ ದೇಶದಲ್ಲಿ ಬಹುತೇಕ ಮಂದಿಗೆ ಈಗಲೂ ಗೊತ್ತಿಲ್ಲ. ಒಂದು ಕಾಲದಲ್ಲಿ ವಿದೇಶಗಳಿಂದ ಆಮದಾಗುತ್ತಿದ್ದ ಈ ಹಣ್ಣು ಇಂದು ಭಾರತದ ರೈತರ ಪಾಲಿಗೆ ಬಂಪರ್ ಆದಾಯ ತಂದುಕೊಡುವ ಹೊಸ ಭರವಸೆಯ ಬೆಳೆಯಾಗಿ ಹೊರಹೊಮ್ಮಿದೆ. ಅದರಲ್ಲೂ ದಕ್ಷಿಣದಲ್ಲಿ ಹೆಚ್ಚಾಗಿ ಬೆಳೆಯುವುದಲ್ಲದೆ, ಉತ್ತಮ ಆದಾಯವನ್ನು ಕೂಡ ಪಡೆಯುತ್ತಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪ ಮಾಡಿ ಗಮನ ಸೆಳೆದಿದ್ದಾರೆ.
'ಮನ್ ಕೀ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ ಈ ವಿಷಯ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರೈತರು ಬಟ್ಟರ್ ಫ್ರೂಟ್ ಮರಗಳನ್ನ ಬೆಳೆದು ಈ ಕೃಷಿಯಲ್ಲಿ ಸಾಧಿಸುತ್ತಿರುವ ಯಶಸ್ಸನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅತ್ಯಧಿಕ ಪೌಷ್ಟಿಕಾಂಶ ಮತ್ತು ಮಾರುಕಟ್ಟೆಯಲ್ಲಿನ ಅಪಾರ ಬೇಡಿಕೆಯಿಂದಾಗಿ ಈ ಬೆಳೆಯು 'ಆತ್ಮನಿರ್ಭರ ಭಾರತ'ದ ಕನಸಿಗೆ ಹೊಸ ಮೆರಗು ನೀಡಿದ್ದು, ಕೃಷಿಕರ ಆದಾಯ ಹೆಚ್ಚಿಸಲು ಹೊಸ ಹಾದಿಯಾಗಿದೆ ಎಂದು ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ.

ಬಟರ್ ಫ್ರೂಟ್ ಕೃಷಿ.. ದಕ್ಷಿಣ ಭಾರತದಲ್ಲೇ ಹೆಚ್ಚು
ಆವಕಾಡೊ ಹಣ್ಣಿನ ಕೃಷಿಯ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 'ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಈ ಹಣ್ಣಿನ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ. ಇದನ್ನು ಹೆಚ್ಚಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇಂದು ನಮ್ಮ ದೇಶದ ರೈತರು, ವಿಶೇಷವಾಗಿ ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು ಹಾಗೂ ಕೇರಳದ ಕೆಲ ಪ್ರದೇಶಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಿರುವುದು ಸಂತಸದ ವಿಚಾರಚಾಗಿದೆ,' ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?
ಬಟರ್ ಫ್ರೂಟ್ ಎಂದೇ ಪ್ರಸಿದ್ಧಯಾಗಿರುವ ಆವಕಾಡೊ, ಅತ್ಯಅಧಿಕ ಪೌಷ್ಟಿಕಾಂಶ ಮತ್ತು ಆರೋಗ್ಯಕರ ಕೊಬ್ಬಿನಾಂಶದಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಪಡೆದುಕೊಂಡಿದೆ. ನಗರ ಪ್ರದೇಶಗಳಲ್ಲಿ ಮತ್ತು ಆರೋಗ್ಯ ಜಾಗೃತಿ ಹೊಂದಿರುವ ಜನರಲ್ಲಿ ಈ ಹಣ್ಣಿಗೆ ಉತ್ತಮ ಬೆಲೆ ಸಿಗುತ್ತಿದ್ದು, ಇದನ್ನು ಅರಿತ ನಮ್ಮ ರೈತರು ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಈ ಕೃಷಿಯತ್ತ ಗಮನಹರಿಸುತ್ತಿದ್ದಾರೆ. ಇದು ರೈತರ ಆದಾಯವನ್ನು ದ್ವಿಗುಣಗೊಳಿಸಲು ಹೊಸ ಹಾದಿಯಾಗಿದೆ ಎಂದು ಮೋದಿ ಹೇಳಿದರು.
ಸ್ಥಳೀಯ ಕೃಷಿಗೆ ಪ್ರೋತ್ಸಾಹ
ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಹೊಸ ಪ್ರಯೋಗಗಳನ್ನು ಶ್ಲಾಘಿಸಿದ ಪ್ರಧಾನಿ, ಭಾರತೀಯ ಕೃಷಿಕರು ತಂತ್ರಜ್ಞಾನ ಮತ್ತು ಹೊಸ ತಳಿಯ ಬೆಳೆಗಳನ್ನು ಅಳವಡಿಸಿಕೊಳ್ಳುವಲ್ಲಿ ತೋರಿಸುತ್ತಿರುವುದನ್ನು ಶ್ಲಾಘಿಸಿದರು. ದೇಶದಲ್ಲೇ ಆವಕಾಡೊ ಉತ್ಪಾದನೆ ಹೆಚ್ಚಾಗುತ್ತಿರುವುದರಿಂದ ವಿದೇಶಗಳಿಂದ ಆಮದು ಮಾಡಿಕೊಳ್ಳುವುದು ಕಡಿಮೆ ಆಗಲಿದ್ದು, 'ಆತ್ಮನಿರ್ಭರ ಭಾರತ' ಮತ್ತು 'ವೋಕಲ್ ಫಾರ್ ಲೋಕಲ್' ಕಲ್ಪನೆಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ ಎಂದರು.
'ಸ್ಥಳೀಯ ಮಾರುಕಟ್ಟೆ ಅಷ್ಟೇ ಅಲ್ಲದೆ, ಗುಣಮಟ್ಟದ ಆವಕಾಡೊ ಹಣ್ಣುಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಭಾರತೀಯ ರೈತರು ಇದನ್ನು ರಫ್ತು ಮಾಡುವ ಹಂತಕ್ಕೆ ಬೆಳೆಯಲಿದ್ದಾರೆ,' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಾಂಪ್ರದಾಯಿಕ ಕೃಷಿಗೆ ಪರ್ಯಾಯವಾಗಿ ಇಂತಹ ಹೆಚ್ಚು ಮೌಲ್ಯಯುತ ಬೆಳೆಗಳನ್ನು ಬೆಳೆಯುವ ಮೂಲಕ ಭಾರತದ ಕೃಷಿ ಕ್ಷೇತ್ರವು ಆಧುನಿಕತೆ ಮತ್ತು ಆರ್ಥಿಕ ಪ್ರಗತಿಯತ್ತ ಹೆಜ್ಜೆ ಇಡುತ್ತಿದೆ ಎಂಬುದಕ್ಕೆ ಆವಕಾಡೊ ಕೃಷಿಯ ಯಶಸ್ಸು ಉತ್ತಮ ಉದಾಹರಣೆಯಾಗಿದೆ. ಒಟ್ಟಿನಲ್ಲಿ ಈ ಹಣ್ಣುಗಳನ್ನು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಬೆಳೆಲಾಗುತ್ತಿದೆ ಎಂದು ಪ್ತಸ್ತಾಪ ಮಾಡಿರುವುದೇನೋ ಖುಷಿಯ ವಿಚಾರ. ಆದರೆ, ಇದಕ್ಕೆ ಉತ್ತಮ ಮಾರುಕಟ್ಟೆ ಒದಗಿಸಿದರೆ ಒಳಿತು ಎನ್ನುವುದು ಈ ಬೆಳೆ ಬೆಳೆಯುವವರ ವಿಶೇಷ ಮನವಿಯಾಗಿದೆ.


Click it and Unblock the Notifications
