ಬಿಹಾರದ ಆದರ್ಶ್‌ಗೆ ಕತಾರ್ ಜಾರ್ಜ್‌ಟೌನ್ ವಿ.ವಿಯಲ್ಲಿ ಉಚಿತ ವಿದ್ಯಾರ್ಥಿ ವೇತನ; 22 ವಿ.ವಿಗಳಿಂದ ರಿಜೆಕ್ಟ್ ನೋವು - ಯಶಸ್ಸಿನ ಪಯಣ
ಬಿಹಾರ ರಾಜ್ಯದ ಪೂರ್ವ ಚಂಪಾರನ್ ಜಿಲ್ಲೆಯ ಮೋತಿಹರಿಯು ನಗರದಲ್ಲಿ ಅತ್ಯಂತ ಆರ್ಥಿಕ ಸಂಕಷ್ಟದಲ್ಲಿ ಬೆಳೆದ ವಿದ್ಯಾರ್ಥಿ ಆದರ್ಶ್‌ಗೆ ಜಾರ್ಜ್‌ಟೌನ್ (ಕತಾರ್) ವಿಶ್ವವಿದ್ಯಾಲಯದಲ್ಲಿ ಪ್ರವೇಶ ಸಿಕ್ಕಿದೆ. ಇದು ಭಾರತೀಯ ವಿದ್ಯಾರ್ಥಿಯೊಬ್ಬರು ಮಾಡಿರುವ ಅತ್ಯಂತ ದೊಡ್ಡ ಸಾಧನೆಯಾಗಿದೆ. ಆದರೆ ಇದು ಅವರಿಗೆ ಒಂದೇ ದಿನದಲ್ಲಿ ಸಿಕ್ಕ ಯಶಸ್ಸು ಆಗಿರಲಿಲ್ಲ. ಹಲವು ವರ್ಷಗಳ ಪರಿಶ್ರಮ, ಸೋಲು, ವಿದ್ಯಾರ್ಥಿವೇತನ, ಮಾರ್ಗದರ್ಶನ ಮತ್ತು ತಮ್ಮಂತಹ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಪ್ರಯತ್ನದ ಫಲವಾಗಿ ಈ ಯಶಸ್ಸು ಸಿಕ್ಕಿದೆ ಎಂದು ಆದರ್ಶ್ ಅವರು ಹೇಳಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿ ಬೆಳೆದ ಮೋತಿಹರಿಯ ಆದರ್ಶ್ ಎನ್ನುವ ವಿದ್ಯಾರ್ಥಿಗೆ ಸಿಕ್ಕ ಅವಕಾಶಗಳು ಅತ್ಯಲ್ಪ ಆದರೆ ಜಾರ್ಜ್‌ಟೌನ್ ಪ್ರವೇಶವು ರಾತ್ರೋರಾತ್ರಿ ಯಶಸ್ಸಿನ ಕಥೆಯಲ್ಲ. ಇದರ ಹಿಂದೆ ವರ್ಷಗಳ ಕಾಲದ ಪರಿಶ್ರಮವಿದೆ. ತಾಯಿಯ ಆಸರೆಯಲ್ಲಿ ಆದರ್ಶ್ ಅವರ ಆರ್ಥಿಕ ಪರಿಸ್ಥಿತಿಗಳು ಶಿಕ್ಷಣದಿಂದ ವಂಚಿತಗೊಳಿಸುವ ಹಂತದಲ್ಲಿತ್ತು. 14ನೇ ವಯಸ್ಸಿನಲ್ಲಿಯೇ ಕೋಚಿಂಗ್ ಸಂಸ್ಥೆಗೆ ಸೇರಲು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮನೆಯಿಂದ ಕೋಟಾಗೆ ಹೋದರು. ಕೋಚಿಂಗ್ ಸಂಸ್ಥೆಗೆ ಪ್ರವೇಶವನ್ನು ಪಡೆಯಲು ಸಾಧ್ಯವಾಗದಿದ್ದಾಗ, ಮುಂದೇನು ಎನ್ನುವ ಪ್ರಶ್ನೆ ಮೂಡಿತ್ತು. ಕೋಚಿಂಗ್ ಸಂಸ್ಥೆಗೆ ಪ್ರವೇಶ ಸಿಗದಿದ್ದರೆ ಅವರು ಬೇರೆ ಮಾರ್ಗಗಳನ್ನು ಕಂಡುಕೊಂಡರು.

ಸ್ಟಾರ್ಟ್‌ಅಪ್ ಪ್ರಯೋಗಗಳನ್ನು ಪ್ರಾರಂಭಿಸಿದರು. ಅಂತಿಮವಾಗಿ ಸ್ಕಿಲ್ಜೊ (SkillJo) ಎನ್ನುವ ಅಪ್ಲಿಕೇಷನ್ ಶುರು ಮಾಡಿದರು. ಇದು ವಿದ್ಯಾರ್ಥಿಗಳಿಗೆ ಕೌಶಲ್ಯ, ಮಾರ್ಗದರ್ಶನ ಮತ್ತು ಅವಕಾಶಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುವ ಅಪ್ಲಿಕೇಷನ್ ಆಗಿದೆ. ಆದರ್ಶ್ ಪರಿಚಯಿಸಿದ ಈ ಅಪ್ಲಿಕೇಷನ್ ಸುಮಾರು 20,000 ವಿದ್ಯಾರ್ಥಿಗಳಿಗೆ ನೆರವಾಗಿದೆ.
ಸ್ಕಿಲ್ಜೊ ಎನ್ನುವ ಅಪ್ಲಿಕೇಷನ್ ಪ್ರಾರಂಭ ಮಾಡುವುದರೊಂದಿಗೆ ಆದರ್ಶ್ ತನಗಾಗಿ ಅವಕಾಶಗಳನ್ನು ಹುಡುಕುವುದನ್ನು ಮುಂದುವರೆಸಿದರು. ಅವರು ವಿದ್ಯಾರ್ಥಿವೇತನಗಳನ್ನು ಗಿಟ್ಟಿಸಿಕೊಂಡರು. ಅಲ್ಲದೆ ಗೂಗಲ್ ಯುವ ಸಲಹೆಗಾರರಾದರು, ಅಂತರರಾಷ್ಟ್ರೀಯ ಉದ್ಯಮಶೀಲತಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು ಮತ್ತು ಜಾಗತಿಕ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಜಾಗತಿಕ ವಿದ್ಯಾರ್ಥಿ ಪ್ರಶಸ್ತಿ ಗೆದ್ದ ಆದರ್ಶ್
2025ರಲ್ಲಿ 148 ದೇಶಗಳಲ್ಲಿ ಸುಮಾರು 11,000 ನಾಮನಿರ್ದೇಶನಗಳಿಂದ ಆಯ್ಕೆಯಾದ ನಂತರ ಆದರ್ಶ್ ಜಾಗತಿಕ ವಿದ್ಯಾರ್ಥಿ ಪ್ರಶಸ್ತಿಯನ್ನು ಗೆದ್ದರು. ಈ ಪ್ರಶಸ್ತಿಯು ಅವರ ಹೊಸ ಆವಿಷ್ಕಾರಗಳ ಬಗ್ಗೆ ಜನರ ಗಮನ ಸೆಳೆಯುವಂತೆ ಮಾಡಿತು. ಜನರು ಮತ್ತು ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸಲು ಅವರಿಗೆ ಸಹಾಯ ಮಾಡಿತು.
22 ವಿಶ್ವವಿದ್ಯಾಲಯಗಳಿಂದ ರಿಜೆಕ್ಟ್ ಆಗಿದ್ದ ಆದರ್ಶ್
ಆದಾಗ್ಯೂ ಆದರ್ಶ್ ಅವರು ವಿಶ್ವವಿದ್ಯಾಲಯ ಪ್ರವೇಶ ಮಾಡುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಕಾರ್ನೆಲ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿನಿ ಜೋನ್ ಲಿಯು ಸ್ಥಾಪಿಸಿದ ಸೆಕೆಂಡ್ ಚಾನ್ಸ್‌ಗೆ ದಾಖಲಾಗುವ ಮೊದಲು ಆದರ್ಶ್ 22 ವಿಶ್ವವಿದ್ಯಾಲಯಗಳಿಂದ ರಿಜೆಕ್ಟ್ ಆಗಿದ್ದರು.
ಜಾರ್ಜ್‌ಟೌನ್‌ನಿಂದ ಇಮೇಲ್
ಆದರ್ಶ್ ತನ್ನ ತಾಯಿ ಅವರ ಜೊತೆಗಿದ್ದಾಗ ಜಾರ್ಜ್‌ಟೌನ್ ಪ್ರವೇಶ ಆಯ್ಕೆಯ ಸುದ್ದಿ ಬಂತು. ನಾನು ಇಮೇಲ್ ಸ್ವೀಕರಿಸಿದಾಗ ನಾನು ನನ್ನ ತಾಯಿಯೊಂದಿಗೆ ಕುಳಿತಿದ್ದೆ ಎಂದು ಆದರ್ಶ್ ಹೇಳಿದ್ದಾರೆ. ನಾನು ತುಂಬಾ ಉತ್ಸುಕನಾಗಿದ್ದೆ ಮತ್ತು ನಾನು ಓದುತ್ತಿರುವುದನ್ನು ನಂಬಲು ಸಾಧ್ಯವಾಗಲಿಲ್ಲ ಎಂದು ನನಗೆ ನೆನಪಿದೆ. ಪ್ರವೇಶ ಪ್ರಕ್ರಿಯೆಯ ಸಮಯದಲ್ಲಿ ನಡೆದ ಎಲ್ಲ ಸಂಕಷ್ಟಗಳ ನಂತರ ಕತಾರ್‌ನಲ್ಲಿರುವ ಜಾರ್ಜ್‌ಟೌನ್ ವಿಶ್ವವಿದ್ಯಾಲಯವು ಪೂರ್ಣ ವಿದ್ಯಾರ್ಥಿವೇತನದೊಂದಿಗೆ ನೀಡುವುದನ್ನು ನೋಡುವುದು ತುಂಬಾ ಭಾವನಾತ್ಮಕ ಕ್ಷಣವಾಗಿತ್ತು ಎಂದು ಆದರ್ಶ್ ಎನ್ನುವವರು ಹೇಳಿಕೊಂಡಿದ್ದಾರೆ.
ಈ ಇಡೀ ಪ್ರಯಾಣದುದ್ದಕ್ಕೂ ನನ್ನೊಂದಿಗೆ ಇದ್ದದ್ದು ನನ್ನ ತಾಯಿ ಮಾತ್ರ. ಅವಳ ಪ್ರತಿಕ್ರಿಯೆಯನ್ನು ನೋಡಿದಾಗ ಆ ಕ್ಷಣ ಇನ್ನಷ್ಟು ವಿಶೇಷವಾಯಿತು ಎನ್ನುತ್ತಾರೆ ಆದರ್ಶ್. ಆದರ್ಶ್‌ಗೆ ಈ ವಿದ್ಯಾರ್ಥಿವೇತನವು ವಿಶೇಷ ಮಹತ್ವದ್ದಾಗಿದೆ ಏಕೆಂದರೆ ಅವರ ಸ್ವಂತ ಶಿಕ್ಷಣದಲ್ಲಿ ವಿದ್ಯಾರ್ಥಿವೇತನಗಳು ಮತ್ತು ಇತರರಿಂದ ಬೆಂಬಲವು ಪ್ರಮುಖ ಪಾತ್ರ ವಹಿಸಿದೆ. ಜಾರ್ಜ್‌ಟೌನ್‌ನಲ್ಲಿ ಆದರ್ಶ್ ಮುಖ್ಯವಾಗಿ ರಾಜಕೀಯ ವಿಜ್ಞಾನ, ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧಗಳನ್ನು ಅಧ್ಯಯನ ಮಾಡಲು ನಿರ್ಧರಿಸಿದ್ದಾರೆ.


Click it and Unblock the Notifications
