ಆದಾಯವಿಲ್ಲದಿದ್ದರೂ ಸಿಗಲಿದೆ ಕ್ರೆಡಿಟ್ ಕಾರ್ಡ್: FD ಆಧಾರಿತ ಕ್ರೆಡಿಟ್ ಕಾರ್ಡ್‌ಗಳ ಲಾಭ-ನಷ್ಟಗಳೇನು? ಇಲ್ಲಿದೆ ಮಾಹಿತಿ
ನಿರಂತರ ಆದಾಯ ಅಥವಾ ದೀರ್ಘಕಾಲೀನ ಉತ್ತಮ ಕ್ರೆಡಿಟ್ ಇತಿಹಾಸ ಇಲ್ಲದಿದ್ದರೆ ಹೊಸ ಕ್ರೆಡಿಟ್ ಕಾರ್ಡ್ ಪಡೆಯುವುದು ಸವಾಲಿನ ಕೆಲಸ ಎನ್ನುವುದು ಎಲ್ಲರಿಗೂ ತಿಳಿದಿದೆ. ಇಂತಹ ಸನ್ನಿವೇಶಗಳನ್ನು ನಿಭಾಯಿಸಲು, ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್ (FD) ಆಧಾರಿತ ಕ್ರೆಡಿಟ್ ಕಾರ್ಡ್‌ಗಳನ್ನು ನೀಡುತ್ತವೆ. ಇವುಗಳನ್ನು ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್‌ಗಳು (Secured Credit cards) ಎಂದೂ ಸಹ ಕರೆಯಲಾಗುತ್ತದೆ.
ತಮ್ಮಲ್ಲಿರುವ ನಿಶ್ಚಿತ ಠೇವಣಿಯನ್ನು ಅಡಮಾನವಾಗಿಟ್ಟು, ಅದರ ಆಧಾರದ ಮೇಲೆ ಸಾಲ ಸೌಲಭ್ಯವನ್ನು ಪಡೆಯಲು ಇವು ಪ್ರಾಯೋಗಿಕ ಪರಿಹಾರಗಳನ್ನು ಒದಗಿಸುತ್ತವೆ. ಆದರೂ, ಇಂತಹ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆಯುವುದು ನಿಜಕ್ಕೂ ಯೋಗ್ಯವೇ? ಅವುಗಳ ಕಾರ್ಯವಿಧಾನವೇನು? ಮತ್ತು 2026ರಲ್ಲಿ ಲಭ್ಯವಿರುವ ಅತ್ಯುತ್ತಮ ಆಯ್ಕೆಗಳು ಯಾವುವು? ಎಂಬ ಪ್ರಶ್ನೆಗಳಿಗೆ ಆರ್ಥಿಕ ತಜ್ಞರು ವಿಸ್ತೃತವಾದ ಮಾಹಿತಿ ನೀಡಿದ್ದಾರೆ.

ಎಫ್‌ಡಿ ಆಧಾರಿತ ಕ್ರೆಡಿಟ್ ಕಾರ್ಡ್‌ಗಳೆಂದರೆ ಏನು?
ಎಫ್‌ಡಿ ಆಧಾರಿತ ಕ್ರೆಡಿಟ್ ಕಾರ್ಡ್‌ಗಳು ಒಂದು ರೀತಿಯ ಸುರಕ್ಷಿತ ಕ್ರೆಡಿಟ್ ಕಾರ್ಡ್‌ಗಳಾಗಿದ್ದು, ಹಣಕಾಸು ಸಂಸ್ಥೆಗಳಲ್ಲಿ ಗ್ರಾಹಕರು ಇಟ್ಟಿರುವ ನಿಶ್ಚಿತ ಠೇವಣಿಗಳ ಆಧಾರದ ಮೇಲೆ ಇವುಗಳನ್ನು ವಿತರಿಸಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ, ನಿಮ್ಮ ನಿಶ್ಚಿತ ಠೇವಣಿಯು ಭದ್ರತೆಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಒಂದೆಡೆ ನಿಮಗೆ ಬಡ್ಡಿಯನ್ನು ತಂದುಕೊಟ್ಟರೆ, ಮತ್ತೊಂದೆಡೆ ಸಾಲದ ಮಿತಿಯನ್ನು ನಿಗದಿಪಡಿಸಲು ಸೂಕ್ತ ಅಡಿಪಾಯವನ್ನು ಒದಗಿಸುತ್ತದೆ. ಸಾಮಾನ್ಯವಾಗಿ, ನಿಮ್ಮ ಒಟ್ಟು ಠೇವಣಿ ಮೊತ್ತದ ಶೇ. 75 ರಿಂದ ಶೇ. 90 ರಷ್ಟು ಮೊತ್ತವನ್ನು ಸಾಲದ ಮಿತಿಯಾಗಿ ನೀಡಲಾಗುತ್ತದೆ. ಜವಾಬ್ದಾರಿಯುತವಾಗಿ ಬಳಸಿದರೆ, ಉತ್ತಮ ಕ್ರೆಡಿಟ್ ಇತಿಹಾಸವನ್ನು ನಿರ್ಮಿಸಲು ಹಾಗೂ ಬಲಿಷ್ಠ ಕ್ರೆಡಿಟ್ ಸ್ಕೋರ್ (Credit Score) ಪಡೆಯಲು ಈ ಕಾರ್ಡ್‌ಗಳು ತುಂಬಾ ಸಹಕಾರಿಯಾಗಿವೆ.
ಈ ಕ್ರೆಡಿಟ್ ಕಾರ್ಡ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?
ನೀವು ಹೊಸ ನಿಶ್ಚಿತ ಠೇವಣಿ (FD) ಖಾತೆಯನ್ನು ತೆರೆದು, ಅದರ ಮೇಲೆ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದಾಗ, ಆ ಠೇವಣಿಯು ಭದ್ರತೆಯಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ, ನೀವು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು ವಿಫಲರಾದರೆ, ಹಣಕಾಸು ಸಂಸ್ಥೆಯು ನೀವು ಅಡಮಾನವಿಟ್ಟ ನಿಶ್ಚಿತ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಂಡು ತನ್ನ ಬಾಕಿಯನ್ನು ವಸೂಲಿ ಮಾಡುವ ಸಂಪೂರ್ಣ ಹಕ್ಕನ್ನು ಹೊಂದಿರುತ್ತದೆ.
ಇದಲ್ಲದೆ, ನಿಮಗೆ ನೀಡಲಾದ ಕ್ರೆಡಿಟ್ ಕಾರ್ಡ್ ನಿಯಮಿತ ಕ್ರೆಡಿಟ್ ಕಾರ್ಡ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ನಿಗದಿತ ದಿನಾಂಕದೊಳಗೆ ನೀವು ಸರಿಯಾಗಿ ಬಿಲ್ ಪಾವತಿಸಿದರೆ, ಭವಿಷ್ಯದಲ್ಲಿ ಉತ್ತಮ ವೈಯಕ್ತಿಕ ಸಾಲಗಳು, ಗೃಹ ಸಾಲಗಳು ಮತ್ತು ಪ್ರೀಮಿಯಂ ಕ್ರೆಡಿಟ್ ಕಾರ್ಡ್‌ಗಳನ್ನು ಸುಲಭವಾಗಿ ಹಾಗೂ ಆಕರ್ಷಕ ಬಡ್ಡಿ ದರಗಳಲ್ಲಿ ಪಡೆಯಲು ಇದು ದಾರಿ ಮಾಡಿಕೊಡುತ್ತದೆ.
2026ರ ಅತ್ಯುತ್ತಮ ಎಫ್‌ಡಿ ಆಧಾರಿತ ಕ್ರೆಡಿಟ್ ಕಾರ್ಡ್‌ಗಳ ಪಟ್ಟಿ:
1. ಎಸ್‌ಬಿಐ ಕಾರ್ಡ್ ಉನ್ನತಿ (SBI Card Unnati): ಕನಿಷ್ಠ 25,000 ರೂ. ಎಫ್‌ಡಿ ಅಗತ್ಯವಿದೆ. ಮೊದಲ 4 ವರ್ಷ ವಾರ್ಷಿಕ ಶುಲ್ಕ ಇರುವುದಿಲ್ಲ (5ನೇ ವರ್ಷದಿಂದ 499 ರೂ.). 18-70 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು.
2. ಐಡಿಎಫ್‌ಸಿ ಫಸ್ಟ್ ವಾವ್ ಕಾರ್ಡ್ (IDFC FIRST WOW): ಕನಿಷ್ಠ 20,000 ರೂ. ಎಫ್‌ಡಿ ಅಗತ್ಯವಿದ್ದು, ಯಾವುದೇ ಸೇರ್ಪಡೆ ಶುಲ್ಕವಿಲ್ಲ. 18-70 ವರ್ಷ ವಯೋಮಿತಿ ನಿಗದಿಯಾಗಿದೆ.
3. ಆಕ್ಸಿಸ್ ಬ್ಯಾಂಕ್ ಇನ್‌ಸ್ಟಾ ಈಸಿ (Axis Insta Easy): ಕನಿಷ್ಠ 15,000 ರೂ. ಎಫ್‌ಡಿ ಇರಬೇಕು. 500 ರೂ. ಶುಲ್ಕವಿರುತ್ತದೆ (ಷರತ್ತುಬದ್ಧ ಮನ್ನಾ ಲಭ್ಯ).
4. ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ (AU NOMO): 20,000 ರೂ. ಎಫ್‌ಡಿ ಕಡ್ಡಾಯ. 499 ರೂ. ಜೊತೆಗೆ ಜಿಎಸ್‌ಟಿ ಶುಲ್ಕ.
5. ಕೋಟಕ್ 811 ಡ್ರೀಮ್ ಡಿಫರೆಂಟ್: ಕೇವಲ 10,000 ರೂ. ಎಫ್‌ಡಿ ಮೂಲಕ ಪಡೆಯಬಹುದು, ಯಾವುದೇ ಶುಲ್ಕವಿಲ್ಲ. 18-75 ವರ್ಷ ವಯೋಮಿತಿ.
6. ಬ್ಯಾಂಕ್ ಆಫ್ ಬರೋಡಾ ಪ್ರೈಮ್: 15,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ಎಫ್‌ಡಿ ಅಗತ್ಯವಿದ್ದು, ಶುಲ್ಕ ಮುಕ್ತವಾಗಿದೆ.
7. ಎಸ್‌ಬಿಎಂ ಬ್ಯಾಂಕ್ (SBM Step UP): ಕೇವಲ 2,000 ರೂ. ಎಫ್‌ಡಿ ಮೂಲಕ ಪಡೆಯಬಹುದು (5000 ರೂ. ಮೀರಿದ ಎಫ್‌ಡಿಗೆ ಶುಲ್ಕವಿಲ್ಲ).
ಎಫ್‌ಡಿ ಆಧಾರಿತ ಕ್ರೆಡಿಟ್ ಕಾರ್ಡ್‌ನ ಪ್ರಮುಖ ಪ್ರಯೋಜನಗಳು
ಈ ಕಾರ್ಡ್‌ಗಳಿಗೆ ನಿಶ್ಚಿತ ಠೇವಣಿಯ ಭದ್ರತೆ ಇರುವುದರಿಂದ ಕನಿಷ್ಠ ದಾಖಲಾತಿಗಳೊಂದಿಗೆ ಸುಲಭವಾಗಿ ಅನುಮೋದನೆ ದೊರೆಯುತ್ತದೆ. ಕ್ರೆಡಿಟ್ ಇತಿಹಾಸವನ್ನು ಸುಧಾರಿಸಲು ಮತ್ತು ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ. ಉತ್ತಮ ಕ್ರೆಡಿಟ್ ಸ್ಕೋರ್ ಪಡೆದ ನಂತರ, ಇತರ ವಿಶಿಷ್ಟ ಸಾಲದ ಕೊಡುಗೆಗಳು ಮತ್ತು ಪ್ರೀಮಿಯಂ ಕಾರ್ಡ್‌ಗಳಿಗೆ ನೀವು ಅರ್ಜಿ ಸಲ್ಲಿಸಬಹುದು. ಈ ಕಾರ್ಡ್‌ಗಳು 48 ರಿಂದ 55 ದಿನಗಳ ಬಡ್ಡಿ-ಮುಕ್ತ ಅವಧಿಯನ್ನು ನೀಡುತ್ತವೆ. ಠೇವಣಿದಾರರಿಗೆ ಎರಡು ಲಾಭ ಸಿಗುತ್ತದೆ; ಒಂದೆಡೆ ಎಫ್‌ಡಿ ಮೇಲೆ ಬಡ್ಡಿ ಜಮೆಯಾದರೆ, ಮತ್ತೊಂದೆಡೆ ಕ್ರೆಡಿಟ್ ಕಾರ್ಡ್ ಬಳಕೆಯ ಲಾಭ ಸಿಗುತ್ತದೆ.
ಇದರಲ್ಲಿರುವ ಅಪಾಯಗಳು ಹಾಗೂ ನಷ್ಟಗಳೇನು?
ಕ್ರೆಡಿಟ್ ಕಾರ್ಡ್ ಬಾಕಿ ಪಾವತಿಯಾಗುವವರೆಗೂ ಎಫ್‌ಡಿ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ (ಹಣ ಲಾಕ್ ಆಗಿರುತ್ತದೆ). ಬಿಲ್ ಪಾವತಿಯ ಗಡುವನ್ನು ಮೀರಿದರೆ ಹೆಚ್ಚಿನ ಬಡ್ಡಿ ದರ ಹಾಗೂ ತಡವಾದ ಪಾವತಿ ಶುಲ್ಕವನ್ನು ವಿಧಿಸಲಾಗುತ್ತದೆ. ಸಾಮಾನ್ಯವಾಗಿ ಒಟ್ಟು ಎಫ್‌ಡಿ ಮೊತ್ತದ ಕೇವಲ 75-90% ನಷ್ಟು ಮಾತ್ರ ಕ್ರೆಡಿಟ್ ಮಿತಿ ಸಿಗುತ್ತದೆ. ನೀವು ಪಾವತಿಸಲು ವಿಫಲರಾದರೆ ಎಫ್‌ಡಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಪಾಯವಿರುತ್ತದೆ, ಅಲ್ಲದೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗಬಹುದು. ಪ್ರೀಮಿಯಂ ಅನ್‌ಸೆಕ್ಯೂರ್ಡ್ ಕಾರ್ಡ್‌ಗಳಿಗೆ ಹೋಲಿಸಿದರೆ ಇದರಲ್ಲಿ ರಿವಾರ್ಡ್ ಪಾಯಿಂಟ್‌ಗಳು ಮತ್ತು ಆಫರ್‌ಗಳು ಕಡಿಮೆ ಇರುತ್ತವೆ. ಆರ್ಥಿಕ ಅಶಿಸ್ತು ತೋರಿದರೆ, ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರಿ, ಒಟ್ಟಾರೆ ಆರ್ಥಿಕ ಪ್ರೊಫೈಲ್ ಹಾಳಾಗುವ ಅಪಾಯವಿರುತ್ತದೆ.












Click it and Unblock the Notifications