VIP Number Plate: 2.08 ಕೋಟಿ ರೂಪಾಯಿಗೆ ದುಬಾರಿ ನೋಂದಣಿ ಸಂಖ್ಯೆ ಖರೀದಿಸಿದ ಆಂಧ್ರಪ್ರದೇಶದ ಉದ್ಯಮಿ
ಈಗಿನ ಯುವಕರಿಗೆ ಕಾರ್ ಅಂದ್ರೇನೆ ಕ್ರೇಜ್. ತನ್ನ ಕನಸಿನ ಕಾರು ಖರೀದಿಸಿ, ಅದರಲ್ಲಿ ಸುತ್ತಾಡಬೇಕು ಅನ್ನೋ ಆಸೆ ಇಟ್ಟುಕೊಂಡಿರುತ್ತಾರೆ. ಅದಕ್ಕಾಗಿ ಹಗಲಿರುಳೆನ್ನದೆ ಕಷ್ಟ ಕೂಡ ಪಡ್ತಾರೆ. ಅಷ್ಟರಮಟ್ಟಿಗೆ ಕಾರುಗಳ ಮೇಲಿನ ಕ್ರೇಜ್ ಬಹುತೇಕರಲ್ಲಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಭಾರತದ ವಾಹನ ನಂಬರ್ ಪ್ಲೇಟ್ ಹರಾಜು ಇತಿಹಾಸದಲ್ಲೇ ಹೊಸ ಮೈಲಿಗಲ್ಲು ನಿರ್ಮಾಣವಾಗಿದೆ. ಆಂಧ್ರಪ್ರದೇಶದ ಉದ್ಯಮಿಯೊಬ್ಬರು ಬರೋಬ್ಬರಿ 2.08 ಕೋಟಿ ರೂಪಾಯಿ ನೀಡಿ ನೋಂದಣಿ ಸಂಖ್ಯೆ ಖರೀದಿಸಿದ್ದಾರೆ.
ದೇಶದ ಹೆಸರಾಂತ ಲಕ್ಸುರಿ ಕಾರು ಡೀಲರ್‌ಶಿಪ್ ಆಗಿರುವ ಬಿಗ್ ಬಾಯ್ ಟಾಯ್ಸ್ ಆಯೋಜಿಸಿದ್ದ ವಿಶೇಷ ಹರಾಜಿನಲ್ಲಿ, ವಿಐಪಿ ನಂಬರ್ ಪ್ಲೇಟ್ 'DDC 001' ಈ ದುಬಾರಿ ಮೊತ್ತಕ್ಕೆ (₹2.08 ಕೋಟಿ) ಮಾರಾಟವಾಗಿದೆ. ಈ ನಂಬರ್ ಪ್ಲೇಟ್ ಅನ್ನು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಉದ್ಯಮಿ ಕಿರಣ್ ಕೊಲ್ಪಕುಲಾ ಖರೀದಿಸಿದ್ದಾರೆ ಎಂದು ನ್ಯೂಸ್-18 ವರದಿ ಮಾಡಿದೆ. ಈ ಹರಾಜು ಬಿಗ್ ಬಾಯ್ ಟಾಯ್ಸ್ ಸಂಸ್ಥೆಯ ಹೊಸ ಯೋಜನೆಯ ಲಾಂಚ್ ಕಾರ್ಯಕ್ರಮದ ಭಾಗವಾಗಿ ಆಯೋಜಿಸಲಾಗಿತ್ತು. ಹೈ-ವ್ಯಾಲ್ಯೂ ಲಕ್ಸುರಿ ಕಲೆಕ್ಟಿಬಲ್ಸ್‌ಗಳಿಗಾಗಿ ರೂಪಿಸಲಾದ ಈ ವೇದಿಕೆಯು ಭಾರತದಲ್ಲೇ ಮೊದಲನೆಯದು ಎಂದು ಈ ಸಂಸ್ಥೆ ಹೇಳಿಕೊಂಡಿದೆ.

ಹರಾಜಿಗೆ ಇಡಲಾಗಿದ್ದ "DDC 001" ನಂಬರ್ ಪ್ಲೇಟ್ ಬಿಗ್ ಬಾಯ್ ಟಾಯ್ಸ್ ಸಂಸ್ಥೆಯ ಸ್ಥಾಪಕ ಜತಿನ್ ಅಹುಜಾ ಅವರ ವೈಯಕ್ತಿಕ ಸ್ವತ್ತಾಗಿತ್ತು. ನಿರೀಕ್ಷೆಗೂ ಮೀರಿದ ಹರಾಜಿನ ಬಳಿಕ ಈ ವಿಐಪಿ ನಂಬರ್ ಪ್ಲೇಟ್ ಬರೋಬ್ಬರಿ ₹2.08 ಕೋಟಿಗೆ ಮಾರಾಟವಾಗಿ, ಇದುವರೆಗೆ ದೇಶದಾದ್ಯಂತ ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ವಾಹನ ನಂಬರ್ ಪ್ಲೇಟ್‌ಗಳಲ್ಲಿ ಒಂದು ಎಂದು ದಾಖಲಾಗಿದೆ. ಈ ಕುರಿತು ಬಿಗ್ ಬಾಯ್ ಟಾಯ್ಸ್ ಸಂಸ್ಥೆ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, "ನಾವು ಇದನ್ನು ನಿರೀಕ್ಷಿಸಿರಲಿಲ್ಲ. ಇತಿಹಾಸ ನಿರ್ಮಾಣವಾಗಿದೆ" ಎಂದು ಹೇಳಿದೆ.
ಈ ಹರಾಜಿನ ಕುರಿತು ಪ್ರತಿಕ್ರಿಯಿಸಿದ ಜತಿನ್ ಅಹುಜಾ, "ಇಂತಹ ಮೌಲ್ಯದ ಆಸ್ತಿಗಳನ್ನು ಹಸ್ತಾಂತರಿಸುವಾಗ ಪಾರದರ್ಶಕತೆ ಮತ್ತು ಪರಿಶೀಲನೆ ಅತ್ಯಂತ ಮುಖ್ಯ. ₹2.08 ಕೋಟಿ ಮೌಲ್ಯದ 'DDC 001' ಹರಾಜು, ದೇಶದ ಯಾವುದೇ ಭಾಗದಿಂದ ಬಂದರೂ ನಂಬಿಕೆಗೆ ತಕ್ಕ ವೇದಿಕೆ ಅಗತ್ಯವಿದೆ ಎಂಬುದನ್ನು ಸಾಬೀತುಪಡಿಸಿದೆ" ಎಂದು ಹೇಳಿದ್ದಾರೆ. 2022ರ ಡಿಸೆಂಬರ್‌ನಲ್ಲಿ ಜತಿನ್ ಅಹುಜಾ ಅವರು ತಮ್ಮ ಹೊಸ ವಾಹನದೊಂದಿಗೆ ಇದೇ ವಿಐಪಿ ನಂಬರ್ ಪ್ಲೇಟ್ ಹೊಂದಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಸೆಲೆಬ್ರಿಟಿಗಳ ಲಕ್ಸುರಿ ಆಸ್ತಿಗಳೂ ಹರಾಜು
ಬಿಗ್ ಬಾಯ್ ಟಾಯ್ಸ್ ಸಂಸ್ಥೆಯು ಹಲವಾರು ಖ್ಯಾತ ಸೆಲೆಬ್ರಿಟಿಗಳ ಲಕ್ಸುರಿ ವಾಹನಗಳನ್ನೂ ಹರಾಜಿಗೆ ಇಟ್ಟಿದೆ. ಅವುಗಳಲ್ಲಿ, ನಟಿ ಶಿಲ್ಪಾ ಶೆಟ್ಟಿ ಅವರ ಮರ್ಸಿಡಿಸ್-ಮೇಬ್ಯಾಕ್ ಜಿಎಲ್ಎಸ್ 600, ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮರ್ಸಿಡಿಸ್-ಬೆನ್ಜ್ ಸಿಎಲ್ಎ 200ಡಿ, ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರ ರೇಂಜ್ ರೋವರ್ ಸ್ಪೋರ್ಟ್ ಎಸ್‌ವಿಆರ್ ಸೇರಿ ದುಬಾರಿ ವಾಹನಗಳು ಕೂಡ ಸೇರಿವೆ.
ಈ ವೇದಿಕೆಯಲ್ಲಿ ವಾಹನ ನಂಬರ್ ಪ್ಲೇಟ್‌ಗಳ ಜೊತೆಗೆ, "CHE78", "HR59 0001" ಮುಂತಾದ ಅಪರೂಪದ ವಿಂಟೇಜ್ ನಂಬರ್ ಪ್ಲೇಟ್‌ಗಳು, "999999999X", "888888888X" ಎಂಬ ವಿಶಿಷ್ಟ ಮೊಬೈಲ್ ನಂಬರ್‌ಗಳು, ಹಬ್ಲಾಟ್ ಕಿಂಗ್ ಗೋಲ್ಡ್ ಸ್ಕೆಲಿಟನ್ ಕ್ರೊನೊಗ್ರಾಫ್ ಮತ್ತು ರೋಲೆಕ್ಸ್ ಡೇಟೋನಾ ಮುಂತಾದ ಲಕ್ಸುರಿ ವಾಚ್‌ಗಳನ್ನೂ ಹರಾಜಿಗೆ ಇಡಲಾಗಿದೆ.
ಹಿಂದಿನ ಹರಾಜಿನ ದಾಖಲೆಗಳು
ಕಳೆದ ವರ್ಷ "HR 88 B 8888" ಎಂಬ ವಿಐಪಿ ವಾಹನ ನಂಬರ್ ಪ್ಲೇಟ್ ₹1.17 ಕೋಟಿಗೆ ಹರಾಜಾಗಿತ್ತು. ಆದರೆ ನಿಗದಿತ ಅವಧಿಯಲ್ಲಿ ಹಣ ಪಾವತಿಸದ ಕಾರಣ ಆ ವ್ಯವಹಾರ ರದ್ದುಗೊಂಡಿತ್ತು. ಬಳಿಕ ನಡೆದ ಮರು ಹರಾಜಿನಲ್ಲಿ ಅದೇ ನಂಬರ್ ಪ್ಲೇಟ್ ₹26.7 ಲಕ್ಷಕ್ಕೆ ಮಾರಾಟವಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ 'DDC 001' ನಂಬರ್ ಪ್ಲೇಟ್ ₹2.08 ಕೋಟಿಗೆ ಮಾರಾಟವಾಗಿರುವುದು ಭಾರತದ ವಿಐಪಿ ನಂಬರ್ ಪ್ಲೇಟ್ ಹರಾಜು ಮಾರುಕಟ್ಟೆಯಲ್ಲೇ ಹೊಸ ಅಧ್ಯಾಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications