ಎಲ್ಲೆಡೆ ನೋಟ್ ಬಂದ್: ಹುಬ್ಬಳ್ಳಿಯಲ್ಲಿ ಗ್ಯಾಸ್ ಬಂದ್
ಹುಬ್ಬಳ್ಳಿ, ನವೆಂಬರ್ 25: ಕಾಲವೊಂದಿತ್ತು ಮನೆ ಬಳಕೆಯ ಗ್ಯಾಸ್ ಸಿಲಿಂಡರ್ ಗಾಗಿ ದಿನಗಟ್ಟಲೇ ಸರತಿ ಸಾಲಿನಲ್ಲಿ ನಿಂತಿದ್ದ ದಿನಗಳು ಈಗಿಲ್ಲ. ಏಕೆಂದರೆ ಈಗೆಲ್ಲಾ ಡಿಜಿಟಲ್ ಯುಗ. ಎಲ್ಲ ಗ್ಯಾಸ್ ಸಿಲಿಂಡರ್ ಕಂಪನಿಗಳು ಎಸ್ಸೆಂಸ್ ಮೂಲಕ ಗ್ಯಾಸ್ ಬುಕ್ಕಿಂಗ್ ಮಾಡಿಕೊಳ್ಳುತ್ತಿವೆ.
ಕೆಲವೊಂದು ಕಂಪನಿಗಳು ಆಪ್ ಗಳು ಮೂಲಕ ಗ್ಯಾಸ್ ಬುಕ್ ಮಾಡಿಕೊಂಡು ಕೇವಲ ಎರಡೇ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಗಳನ್ನು ಮನೆಗೆ ತಲುಪಿಸುತ್ತಿದ್ದರು. ಆದರೆ ಈಗ ಜನರು ನೋಟಿಗಾಗಿ ಬ್ಯಾಂಕ್ ಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ಬಂದಿದೆ. ಇತ್ತ ಗ್ಯಾಸ್ ಕಂಪನಿಗಳು ಗ್ಯಾಸ್ ವಿತರಿಸುತ್ತಿಲ್ಲ. ಕೇಳಿದರೆ ಇಲ್ಲಿಯೇ ಬಂದು ತೆಗೆದುಕೊಳ್ಳಿ ಎಂದು ಹೇಳುತ್ತಿವೆ. ಗ್ಯಾಸ್ ಕಂಪನಿಯ ಏಜೆನ್ಸಿಯವರು 500 ಮತ್ತು 1000 ರೂ. ನೋಟು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಇದುವರೆಗೂ ಗ್ಯಾಸ್ ವಿತರಿಸಿಲ್ಲ ಎಂದು ಸಿದ್ಧಾರೂಢಮಠದ ಕಾರ್ಯಕಾರಿ ಮಂಡಳಿಯ ಸದಸ್ಯೆ ಮತ್ತು ಸಮಾಜ ಸೇವಕಿ ಜ್ಯೋತಿ ದೂರುತ್ತಾರೆ.[ನೋಟಿಗಾಗಿ ಸಾಲಿನಲ್ಲಿ ನಿಂತಾಗ ಮಾಡಬಹುದಾದ 12 ಕೆಲಸಗಳು]
ಈಗಾಗಲೇ ಕೇವಲ 12 ಗ್ಯಾಸ್ ಗಳನ್ನು ಬಳಸಬೇಕಾದ ಅನಿವಾರ್ಯತೆ ಇದೆ. ಹೀಗಿದ್ದಾಗ ನಾವು ಉಳಿತಾಯ ಮಾಡಿಯೇ ಗ್ಯಾಸ್ ಬಳಸುತ್ತಿದ್ದೇವೆ. ಆದರೆ ಗ್ಯಾಸ್ ಖಾಲಿ ಆದ ಮೇಲೆ ಮುಂದೇನು ಮಾಡಬೇಕು ಎಂದು ತೋಚುತ್ತಿಲ್ಲ ಎಂದು ಜ್ಯೋತಿ ನೊಂದು ನುಡಿಯುತ್ತಾರೆ.['ಬ್ಯಾಂಕಿಗೆ ಹಣ ಹಾಕಬಹುದು, ಆದ್ರೆ ವಾಪಸ್ ತಗಳಂಗಿಲ್ಲ' - ತಕ್ಕಳಪ್ಪ!]
ಹೀಗಾಗಿ ಎಷ್ಟೊ ಜನ ಹೆಂಸಗರು ಚಿಲ್ಲರೆ ಕಾಸಿಗಾಗಿ ಎಟಿಎಂ ಗಳ ಮುಂದೆ ಸರತಿಯಲ್ಲಿ ನಿಲ್ಲಬೇಕಾಗಿ ಬಂದಿದೆ. ಕೆಲವೆಡೆ ಮನೆಯಲ್ಲಿ ಗ್ಯಾಸ್ ಇಲ್ಲದೇ ಹೊರಗಡೆ ಊಟ ತರಲು ದುಡ್ಡಿಲ್ಲದೇ ತಣ್ಣೀರು ಬಟ್ಟೆ ಹಾಕುವ ಪರಿಸ್ಥಿತಿ ಬಂದಿದೆ ಎನ್ನುತ್ತಾರೆ ಆಟೋ ಡ್ರೈವರ್ ಮಹಾದೇವ.
ಈ ಬಗ್ಗೆ ಗ್ಯಾಸ್ ವಿತರಕನ್ನು ಕೇಳಿದರೆ ಅವರ ಉತ್ತರ ಮಾತ್ರ ದೊಡ್ಡ ನೋಟು ತೆಗೆದುಕೊಳ್ಳುವುದಿಲ್ಲ ಎಂದು. ನಮಗೆ ಸರಕಾರವೇನೂ ದುಡ್ಡು ತೆಗೆದುಕೊಳ್ಳಿ ಎಂದು ಹೇಳಿಲ್ಲ ಎಂದು ಖಡಾಖಂಡಿತವಾಗಿ ಮುಖಕ್ಕೆ ಹೊಡೆದಂಗೆ ಹೇಳುತ್ತಾರೆ.
ಸರಕಾರ ತನ್ನ ಬಿಲ್ಲುಗಳನ್ನು ತುಂಬಿಸಿಕೊಳ್ಳಲು ಪ್ರಕಟಣೆ ಹೊರಡಿಸುತ್ತದೆ. ಆದರೆ ನಿತ್ಯ ಜೀವನದ ಅತ್ಯವಶ್ಯಕವಾದ ಗ್ಯಾಸ್ ಸಿಲಿಂಡರ್ ಗೆ ಮಾತ್ರ ಈ ತಾರತಮ್ಯ ಏಕೆ ಎಂಬುದು ಬಡಬಗ್ಗರ ಮಾತಾಗಿದೆ.
ಇನ್ನು ಇದ್ನನೇ ಲಾಭ ಮಾಡಿಕೊಳ್ಳುತ್ತಿರುವ ಖಾಸಗಿ ಕಂಪನಿಯ ಗ್ಯಾಸ್ ಏಜೆನ್ಸಿಗಳವರು 350 ರೂ.ಗೆ ಇದ್ದ ಗ್ಯಾಸ್ ಸಿಲಿಂಡರ್ ಗಳನ್ನು 500 ರೂ. ನೋಟು ಪಡೆದುಕೊಂಡು ಚಿಲ್ಲರೆ ಕೊಡದೇ ಹೆಚ್ಚಿನ ಬೆಲೆಗೆ ಕೊಡುತ್ತಿದ್ದಾರೆ. ಆದರೆ ಅನಿವಾರ್ಯವಾಗಿ ಕೆಲವರು ಗ್ಯಾಸ್ ಪಡೆದುಕೊಳ್ಳುತ್ತಿದ್ದಾರೆ. ಇಂಥಹವರಲ್ಲಿ ರಸ್ತೆ ಬದಿಯ ಅಂಗಡಿಗಳವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಕಾನೂನು ಪ್ರಕಾರ ಮನೆ ಬಳಕೆಯ ಗ್ಯಾಸ್ ಸಿಲಿಂಡರ್ ನ್ನು ವ್ಯಾಪಾರಕ್ಕಾಗಿ ಬಳಸುವುದು ಶಿಕ್ಷಾರ್ಹ ಅಪರಾಧ. ಮನೆ ಬಳಕೆಯ ಗ್ಯಾಸ್ ಸಿಲಿಂಡರ್ ಬಳಸಿ ಹಳೇಹುಬ್ಬಳ್ಳಿ ಪೊಲೀಸ್ ಸ್ಟೇಷನ್ ಹತ್ತಿರದ ಇಂಡಿ ಪಂಪ್ ಬಳಿ ಬಾರೊಂದರ ಪಕ್ಕ ಚಿಕನ್ ಅಂಗಡಿ ಮತ್ತು ಫಿಶ್ ಅಂಗಡಿ ನಡೆಸುತ್ತಿರುವ ವ್ಯಾಪಾರಿಗಳು ಏನು ಮಾಡೋದ್ರಿ ವ್ಯಾಪಾರಾನೇ ಇಲ್ಲ.ಅನಿವಾರ್ಯವಾಗಿ ಖಾಸಗಿ ಸಿಲಿಂಡರ್ ಬಳಸಬೇಕಾಗಿದೆ ಎಂದು ತಮ್ಮ ನೋವು ತೋಡಿಕೊಳ್ಳುತ್ತಾರೆ.
ಒಟ್ಟಿನಲ್ಲಿ ನೋಟು ರದ್ದಾದ ದಿನದಿಂದ ಆಗುತ್ತಿರುವ ತೊಂದರೆಗಳು ಈಗ ಮನೆ ಅಡುಗೆ ಮನೆಗೂ ಸಮಸ್ಯೆ ಸೃಷ್ಟಿಸುತ್ತಿರುವುದು ಗೃಹಿಣಿಯರಿಗೆ ತಲೆ ನೋವಾಗಿದೆ.