Vani Vilasa Sagara: ಮುಂದಿನ ವಾರದೊಳಗೆ 120 ಅಡಿ ತಲುಪುತ್ತಾ ವಿವಿ ಸಾಗರ ಜಲಾಶಯದ ನೀರಿನ ಮಟ್ಟ?-ಈಗಿನ ಒಳಹರಿವು ಎಷ್ಟಿದೆ?
Vani Vilasa Sagara Dam: ರಾಜ್ಯದ ಬಹುತೇಕ ಭಾಗಗಳಲ್ಲಿ ವರುಣನ ಹಬ್ಬರ ಜೋರಾಗಿದ್ದು, ಇತ್ತ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಏಕೈಕ ಜೀವನಾಡಿಯಾಗಿರುವ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯಕ್ಕೆ ಪ್ರಸಕ್ತ ಸಾಲಿನಲ್ಲಿ ಮೊದಲ ಬಾರಿಗೆ 3,800 ಕ್ಯೂಸೆಕ್ ಒಳಹರಿವು ನೀರು ಸಂಗ್ರಹವಾಗಿದೆ. ಹಾಗಾದರೆ ಇದೀಗ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚಿಕ್ಕಮಂಗಳೂರು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ನೀರು ಹರಿದು ಬರಲು ಸಾಧ್ಯವಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಶನಿವಾರ ರಾತ್ರಿ ಜಿಲ್ಲೆಯಲ್ಲಿ ಅಬ್ಬರಿಸಿದ ಕೃತಿಕಾ ಮಳೆಯಿಂದ ಹೊಸದುರ್ಗ ತಾಲೂಕಿನ ಕೆಲ್ಲೋಡ್ ಚೆಕ್ ಡ್ಯಾಂ ಒಂದೇ ದಿನಕ್ಕೆ ಭರ್ತಿಯಾಗಿ ನೀರು ವಿವಿ ಸಾಗರ ಜಲಾಶಯದ ಕಡೆಗೆ ಹರಿದು ಬಂದಿತ್ತು. ಈ ನಿಟ್ಟಿನಲ್ಲಿ ಜಲಾಶಯಕ್ಕೆ 3,800 ಕ್ಯೂಸೆಕ್ ಒಳಹರಿವು ನೀರು ಸಂಗ್ರಹವಾಗಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 112 ಅಡಿ ನೀರು ತಲುಪಿದೆ. 0.55 ಅರ್ಧ ಅಡಿ ನೀರು ಸಂಗ್ರಹವಾಗಿದೆ. ಇನ್ನು ವಿವಿ ಸಾಗರ ಡ್ಯಾಂ 30 ಟಿಎಂಸಿ ನೀರಿನ ಸಾಮರ್ಥ್ಯ ಹೊಂದಿದೆ.
ಕಳೆದ 2022ರಲ್ಲಿ ಜಲಾಶಯಕ್ಕೆ 135 ಅಡಿಗೂ ಹೆಚ್ಚು ನೀರು ಸಂಗ್ರಹವಾಗುವ ಮೂಲಕ ಎರಡನೇ ಬಾರಿಗೆ ಜಲಾಶಯ ಕೊಡಿ ಬಿದ್ದಿತ್ತು. 2023ರಲ್ಲಿ ಮಳೆ ಇಲ್ಲದ ಕಾರಣ ಜಲಾಶಯಕ್ಕೆ ಯಾವುದೇ ಹೇಳಿಕೊಳ್ಳುವಂತಹ ಒಳಹರಿವು ನೀರು ಸಂಗ್ರಹವಾಗಿರಲಿಲ್ಲ. ಇದೀಗ ಆರಂಭದಲ್ಲಿಯೇ ಜಲಾಶಯಕ್ಕೆ ಒಳಹರಿವು ಹರಿದು ಬರುತ್ತಿದ್ದು, ಈ ಭಾಗದ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ. ಇದೇ ರೀತಿ ಇನ್ನೊಂದು ವಾರದಲ್ಲಿ ಹೆಚ್ಚು ಮಳೆ ಬಂದು ಜಲಾಶಯಕ್ಕೆ ನೀರು ಹರಿದು ಬಂದರೆ ಜಲಾಶಯದ ನೀರಿನ ಮಟ್ಟ 120 ಅಡಿ ತಲುಪುವ ಸಾಧ್ಯತೆ ಇರುತ್ತದೆ.
ತಾಲೂಕುವಾರು ಮಳೆ ವಿವರ: ಇನ್ನು ಹಿರಿಯೂರು ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ತಾಲೂಕಿನ ಸೂಗೂರು -52.4, ಇಕ್ಕನೂರು -26.0, ಈಶ್ವರಗೆರೆ -21.8, ಬಬ್ಬೂರು -14.4, ಹಾಗೂ ಹಿರಿಯೂರಿನಲ್ಲಿ 11.4 ಮಿಲಿ ಮೀಟರ್ ಮಳೆಯಾಗಿದೆ. ಅಲ್ಲದೆ, ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿಯೂ ಮಳೆಯಾಗಿದೆ. ಇಂದು ಕೂಡ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಉಂಟಾಗಿದ್ದು, ಸಂಜೆ ವೇಳೆಗೆ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ.












Click it and Unblock the Notifications