Vani Vilasa Sagara Dam: ವಾಣಿ ವಿಲಾಸ ಸಾಗರ ಡ್ಯಾಂ ಭರ್ತಿಗೆ ಕ್ಷಣಗಣನೆ ಬಾಕಿ-ನೀರಿನ ಮಟ್ಟ ಎಷ್ಟಿದೆ?
Vani Vilasa Sagara Dam: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮಾರಿಕಣಿವೆ ಡ್ಯಾಂ ಭರ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಕೋಡಿ ಬೀಳುವುದು ಬಹುತೇಕ ಖಚಿತವಾಗಿದೆ. ಎರಡು ಅಡಿ ನೀರು ಜಲಾಶಯಕ್ಕೆ ಹರಿದು ಬಂದರೆ ಜಲಾಶಯ ಕೋಡಿ ಬೀಳುವುದನ್ನು ಕಣ್ತುಂಬಿಕೊಳ್ಳಲು ರೈತರು ಕಾತುರದಿಂದ ಕಾಯುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸಪುರ ಬಳಿ ವೇದಾವತಿ ನದಿಗೆ ಅಡ್ಡಲಾಗಿ 1907ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅಣೆಕಟ್ಟು ಕಟ್ಟಿಸಿದ್ದಾರೆ. 1917 ರಲ್ಲಿ 120.60 ಅಡಿ, 1918ರಲ್ಲಿ 121.30 ಅಡಿ, 1919ರಲ್ಲಿ 128.30, 1920ರಲ್ಲಿ 125.50, 1932ರಲ್ಲಿ 125.50, ಅಡಿ, 1933ರಲ್ಲಿ 135.25 ಅಡಿ, 1934ರಲ್ಲಿ 130.24 ಅಡಿ ನೀರು ಸಗ್ರಹವಾಗಿತ್ತು.

1935ರಲ್ಲಿ 123,22 ಅಡಿ, 1956ರಲ್ಲಿ 125 ಅಡಿ, 1957ರಲ್ಲಿ 125.05 ಅಡಿ, 1958ರಲ್ಲಿ 124.50 ಅಡಿ, 2000ರಲ್ಲಿ 122.50ಅಡಿ, 2021ರಲ್ಲಿ 125.50 ಅಡಿ, 2022ರಲ್ಲಿ 135 ಅಡಿ, 2024 ( ಈ ವರ್ಷ)ರಲ್ಲಿ 128.05 ಅಡಿ ನೀರು ಸಂಗ್ರಹವಾಗಿದೆ. 1933ರಲ್ಲಿ ಮೊದಲ ಬಾರಿಗೆ ಕೋಡಿ ಬಿದ್ದಿತ್ತು. ನಂತರ 2022ರಲ್ಲಿ ಎರಡನೇ ಬಾರಿಗೆ ಡ್ಯಾಂ ಮೈದುಂಬಿ, ಸುಮಾರು ಎರಡು ತಿಂಗಳ ಕಾಲ ನಿರಂತರವಾಗಿ ವೇದಾವತಿ ನದಿ ಹರಿದಿತ್ತು. ಇದೀಗ ಮೂರನೇ ಬಾರಿಗೆ ಕೋಡಿ ಬೀಳಲು ಡ್ಯಾಂ ಸಿದ್ಧವಾಗಿದೆ.
ಅಣೆಕಟ್ಟಿನ ಎಡ ಮತ್ತು ಬಲ ಭಾಗದಲ್ಲಿ ಕಪ್ಪುಶಿಲೆಯ ಅಪರೂಪದ ಸುಂದರ ಮಂಟಪಗಳಿಗೆ. ಇಲ್ಲಿ ಫೋಟೋ ಕ್ಲಿಕ್ಕಿಸಲು ವಿಶೇಷ ಕೋನಗಳು ಸಿಗುತ್ತವೆ. ಕಮಾನು ದ್ವಾರದಿಂದ ಹಸಿರುಟ್ಟ ಬೆಟ್ಟಗಳ ಸೌಂದರ್ಯವನ್ನು ಕ್ಲಿಕ್ಕಿಸುವ ಸೊಬಗೇ ಅದ್ಭುತವಾಗಿರುತ್ತದೆ. ಗುಡ್ಡಗಳ ಸಂಕೀರ್ಣ ಜಲಾಶಯದ ಸುತ್ತ ಒಮ್ಮೆ ಕಣ್ಣಾಡಿಸಿದರೆ, ಅಚ್ಚಹಸಿರಿನಿಂದ ಕಂಗೊಳಿಸುವ ದೃಶ್ಯವನ್ನು ಕಾಣಬಹುದಾಗಿದೆ. ಜಲಾಶಯದ ಮೇಲೆ ನಿಂತು ಮತ್ತೊಮ್ಮೆ ಕಣ್ಣಾಡಿಸಿದರೆ ಅಡಿಕೆ, ತೆಂಗು, ತೋಟಗಳ ಸೌಂದರ್ಯ ನಯನ ಮನೋಹರವಾಗಿ ಕಾಣುತ್ತದೆ.
ಇಂತಹ ಸುಂದರವಾದ ಸನ್ನಿವೇಶ ಇದುದರಿಂದ ನಾಗರಹಾವು, ಕೃಷ್ಣ, ಹುಚ್ಚ ಸೇರಿದಂತೆ ಇನ್ನಿತರ ಚಲನಚಿತ್ರಗಳ ಚಿತ್ರಿ ಕರಿಸಲಾಗಿದೆ. ಜಲಾಶಯದ ಮತ್ತೊಂದು ತುದಿಯಲ್ಲಿ ನಿಂತರೆ, "ಭಾರತ ಭೂಪಟದ ಆಕಾರ" ಹೊಂದುವ ದೃಶ್ಯವನ್ನು ಕಾಣಬಹುದಾಗಿದೆ. ಸೂರ್ಯಾಸ್ತ ಇಲ್ಲಿನ ಮತ್ತೊಂದು ವಿಶೇಷ.
ಜಲಾಶಯದ ಎಡ ಭಾಗದ ಉತ್ತೆರಿಗುಡ್ಡ ಹಾಗೂ ಬಲ ಭಾಗದ ಛತ್ರಿಗುಡ್ಡಗಳ ನಡುವೆ ಮರೆಯಾಗುವ ಸೂರ್ಯನನ್ನು ಕಣ್ತುಂಬಿಸಿಕೊಳ್ಳಬಹುದು. ಸಂಜೆ 4 ಯಿಂದ 5ರೊಳಗೆ ಜಲಾಶಯದಲ್ಲಿದ್ದರೇ ಸೂರ್ಯಾಸ್ತವನ್ನು ಮೊಬೈಲ್, ಕ್ಯಾಮೆರಾದಲ್ಲಿ ಸೆರೆ ಹಿಡಿಯಬಹುದಾಗಿದೆ. ಇನ್ನು ಬೆಂಗಳೂರಿನಿಂದ ಹಿರಿಯೂರಿನ ಮೂಲಕ ಪ್ರಯಾಣ ಬೆಳೆಸಿದರೆ ವಾಣಿ ವಿಲಾಸ ಜಲಾಶಯ ನೋಡಬಹುದು. ನಂತರ ಹಿರಿಯೂರು ಮಾರ್ಗವಾಗಿ ಎಡಭಾಗಕ್ಕೆ ಚಿತ್ರದುರ್ಗ ತಲುಪಿ ಕೋಟೆ, ಜೋಗಿ ಮಟ್ಟಿ, ಚಂದ್ರವಳ್ಳಿ ತೋಟದ ಸೌಂದರ್ಯವನ್ನು ಸವಿಯಬಹುದಾಗಿದೆ.












Click it and Unblock the Notifications