ಭದ್ರಾದಿಂದ ವಾಣಿ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಜನವರಿವರೆಗೂ ನೀರು ಹರಿಸುವಂತೆ ಆದೇಶ
Vani Vilasa Sagara Dam: ಇಡೀ ಕೋಟೆನಾಡು ಚಿತ್ರದುರ್ಗ ಜಿಲ್ಲೆಗೆ ನೀರುಣಿಸುವ ಏಕೈಕ ಜೀವನಾಡಿ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ಆಗಿದೆ. ಇನ್ನು ಭದ್ರಾ ಜಲಾಶಯದಿಂದ ವಿವಿ ಸಾಗರ ಜಲಾಶಯಕ್ಕೆ 2025ರ ಜನವರಿವರೆಗೂ ನೀರು ಹರಿಸುವುದನ್ನು ಮುಂದುವರಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಹಾಗಾದರೆ ಎಷ್ಟು ಟಿಎಂಸಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಭದ್ರಾ ಜಲಾಶಯದಿಂದ ಭದ್ರಾ ಮೇಲ್ದಂಡೆ ಯೋಜನೆಗಾಗಿ ಹಂಚಿಕೆಯಾದ 12.50 ಟಿಎಂಸಿ ನೀರಿನ ಪೈಕಿ, ತರೀಕೆರೆ ನೀರಾವರಿ ಯೋಜನೆಗೆ 1.47 ಟಿಎಂಸಿ ಹಾಗೂ ವಾಣಿ ವಿಲಾಸ ಸಾಗರಕ್ಕೆ ಎರಡು ಟಿಎಂಸಿಯಂತೆ 3.4 ಟಿಎಂಸಿನಂತೆ ನೀರನ್ನು ಎತ್ತಲು ಅನುಮತಿ ನೀಡಲಾಗಿತ್ತು.

ಇದೀಗ ಮುಂದುವರೆದು ತರೀಕೆರೆ ಏತ ನೀರಾವರಿ ಯೋಜನೆಗೆ ಸೌಲಭ್ಯ ಕಲ್ಪಿಸಲು ಹಾಗೂ ವಾಣಿ ವಿಲಾಸ ಸಾಗರ ಜಲಾಶಯದಲ್ಲಿ ನೀರು ಸಂಗ್ರಹಿಸುವ ಸಲುವಾಗಿ ಇನ್ನುಳಿದ 9.03 ಟಿಎಂಸಿ ನೀರಿನ ಮಿತಿಯಲ್ಲಿ ಪ್ರತಿದಿನ 700 ಕ್ಯೂಸೆಕ್ ನೀರನ್ನು ಜನವರಿ 2025ರ ವರೆಗೆ ಮಾತ್ರ ಹರಿಸಲು ಅನುಮತಿ ನೀಡಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವನಿತಾಮಣಿ ತಿಳಿಸಿದ್ದಾರೆ.
ಜಲಾಶಯದ ನೀರಿನ ಮಟ್ಟ ಎಷ್ಟು?: ಇದೀಗ ಭದ್ರಾ ಜಲಾಶಯದಿಂದ ನಾಲೆಯ ಮೂಲಕ ವಾಣಿ ವಿಲಾಸ ಸಾಗರ ಜಲಾಶಯಕ್ಕೆ 462 ಕ್ಯೂಸೆಕ್ ಒಳಹರಿವು ನೀರು ಹರಿದು ಬರುತ್ತಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 128.40 ಅಡಿಗೆ ತಲುಪಿದ್ದು, ಡ್ಯಾಂ ಕೋಡಿ ಬೀಳಲು ಕೇವಲ 1.60 ಅಡಿ ನೀರು ಬರಬೇಕಿದೆ. ಇಷ್ಟು ನೀರು ಬಂದರೆ ಡ್ಯಾಂ ಮೂರನೇ ಬಾರಿಗೆ ಕೋಡಿ ಬೀಳಲಿದೆ.
ಹಿರಿಯೂರು ನಗರದಿಂದ ಹೊಸದುರ್ಗ ರಸ್ತೆಯ 18 ಕಿಲೋ ಮೀಟರ್ ಕ್ರಮಿಸಿ, ಎಡಭಾಗಕ್ಕೆ ಚಲಿಸಿದರೆ ವಾಣಿ ವಿಲಾಸ ಜಲಾಶಯ ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ. ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಪುರ ಬಳಿ ವೇದಾವತಿ ನದಿಗೆ ಅಡ್ಡಲಾಗಿ ವಿವಿ ಸಾಗರ ಡ್ಯಾಂ ನಿರ್ಮಾಣ ಮಾಡಲಾಗಿದೆ. 1907ರಲ್ಲಿ ಡ್ಯಾಂ ನಿರ್ಮಾಣ ಮಾಡಲಾಗಿದೆ. ಜಲಾಶಯ ಒಟ್ಟು 135 ಅಡಿ ಎತ್ತರದ ಹೊಂದಿದ್ದು, 130 ಅಡಿಗೆ ಡ್ಯಾಂ ಕೋಡಿ ಬೀಳುತ್ತದೆ.
ಪ್ರಸಕ್ತ ಸಾಲಿನ ಸುಮಾರು ಸುಮಾರು 16 ಅಡಿಗಳಷ್ಟು ನೀರು ಬಂದಿದೆ. ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚು ಇರುವುದರಿಂದ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ಜನತೆಗೆ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ. ಬೇಸಿಗೆ ಹಂಗಾಮಿನಲ್ಲಿ ಎಡ ಮತ್ತು ಬಲನಾಲೆ ಮೂಲಕ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳಿಗೆ ನೀರು ಹರಿಸಲಾಗುತ್ತದೆ.
ಹಳೇ ಅಣೆಕಟ್ಟುಗಳಲ್ಲಿ ವಾಣಿ ವಿಲಾಸ ಸಾಗರ ಡ್ಯಾಂ ಕೂಡ ಒಂದಾಗಿದೆ ಎನ್ನಬಹುದು. 1907ರಲ್ಲಿ ನಿರ್ಮಾಣ ಆಗಿರುವ ಈ ಡ್ಯಾಂಗೆ ಸುಮಾರು 117 ವರ್ಷಗಳ ಕಾಲ ಇತಿಹಾಸವಿದೆ. 1935ರಲ್ಲಿ ಜಲಾಶಯಕ್ಕೆ 135.25 ಅಡಿ ನೀರು ಸಂಗ್ರಹವಾಗುವ ಮೂಲಕ ಮೊದಲ ಬಾರಿಗೆ ಡ್ಯಾಂ ಕೋಡಿ ಬಿದ್ದು, ಇತಿಹಾಸ ಸೃಷ್ಟಿಸಿತ್ತು.
ಬಳಿಕ ಕಳೆದ ವರ್ಷ 2022ರಲ್ಲಿ ಎರಡನೇ ಬಾರಿಗೆ 135 ಅಡಿ ನೀರು ಸಂಗ್ರಹವಾಗಿ ಡ್ಯಾಂ ಕೋಡಿ ಬಿದ್ದು ಐತಿಹಾಸಿಕ ಸಾಧನೆಗೆ ಕಾರಣವಾಗಿತ್ತು. ಈ ವರ್ಷದಲ್ಲಿ ಒಂದೂವರೆ ಅಡಿ ನೀರು ಬಂದರೆ ಡ್ಯಾಂ ಕೋಡಿ ಬೀಳಲಿದೆ.
ಯಾವ್ಯಾವ ವರ್ಷ ಎಷ್ಟು ನೀರು ಸಂಗ್ರಹ?: 1917ರಲ್ಲಿ 120.60 ಅಡಿ, 1918ರಲ್ಲಿ 121.30, 1919ರಲ್ಲಿ 128.30, 1920ರಲ್ಲಿ 125.50, 1932ರಲ್ಲಿ 125.50, ಅಡಿ, 1933ರಲ್ಲಿ 135.25 ಅಡಿ, 1934ರಲ್ಲಿ 130.24 ಅಡಿ, 1935ರಲ್ಲಿ 123,22 ಅಡಿ, 1956ರಲ್ಲಿ 125 ಅಡಿ, 1957ರಲ್ಲಿ 125.05 ಅಡಿ, 1958ರಲ್ಲಿ 124.50 ಅಡಿ, 2000ರಲ್ಲಿ 122.50 ಅಡಿ, 2021ರಲ್ಲಿ 125.50 ಅಡಿ, 2022ರಲ್ಲಿ 135 ಅಡಿ, 2024 ಅಂದರೆ ಈ ವರ್ಷ 128.40 ಅಡಿ ನೀರು ಸಂಗ್ರಹವಾಗಿದೆ.












Click it and Unblock the Notifications