ಚಿತ್ರದುರ್ಗದಲ್ಲಿ ಸರಣಿ ಅಪಘಾತ; ಓರ್ವ ಸಾವು, ನಾಲ್ವರಿಗೆ ಗಂಭೀರ ಗಾಯ
ಚಿತ್ರದುರ್ಗ, ನವೆಂಬರ್ 4: ಲಾರಿ ಮತ್ತು ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಸೇರಿದಂತೆ ನಾಲ್ಕು ಜನರಿಗೆ ಗಂಭೀರವಾಗಿ ಗಾಯಗಳಾಗಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನಲ್ಲಿ ಬುಧವಾರ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಹಳೇಹಳ್ಳಿ ಬಳಿ ಎರಡು ಕಾರುಗಳಲ್ಲಿ ಲಕ್ಕವಳ್ಳಿ ಕಡೆ ಒಂದೇ ಕುಟುಂಬದವರು ತೆರಳುತ್ತಿದ್ದರು. ಇದೇ ಸಮಯ ಹೊಳಲ್ಕೆರೆ ಕಡೆಯಿಂದ ಚಿತ್ರದುರ್ಗದ ಕಡೆಗೆ ಲಾರಿ ಬರುತ್ತಿದ್ದು, ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಲಕ್ಕವಳ್ಳಿಯ ಶಂಭಪ್ಪ (48) ಎಂಬುವರು ಮೃತಪಟ್ಟಿದ್ದಾರೆ. ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ರಭಸಕ್ಕೆ ಎರಡು ಕಾರುಗಳು ನುಜ್ಜುಗಜ್ಜಾಗಿವೆ. ಸ್ಥಳಕ್ಕೆ ಹೊಳಲ್ಕೆರೆ ಸಿಪಿಐ ರವೀಶ್ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರುಗಳಲ್ಲಿ ತರೀಕೆರೆ ತಾಲೂಕಿನ ಲಕ್ಕವಳ್ಳಿಯಿಂದ ಹೊಳಲ್ಕೆರೆ ತಾಲೂಕಿನ ಕೊಂಡಾಪುರ ಗ್ರಾಮಕ್ಕೆ ಹೆಣ್ಣು ನೋಡಲು ಹೋಗುತ್ತಿದ್ದರು ಎಂದು ತಿಳಿದುಬಂದಿದೆ.












Click it and Unblock the Notifications