ಪಾಕಿಸ್ತಾನ್ ಜಿಂದಾಬಾದ್: ಅಮೂಲ್ಯ ಲಿಯೋನಾ ಮನೆ ಮೇಲೆ ಕಲ್ಲುತೂರಾಟ
ಚಿಕ್ಕಮಗಳೂರು, ಫೆಬ್ರವರಿ.21: ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಅಮೂಲ್ಯ ಲಿಯೋನಾಳ ನಿವಾಸದ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಶಿವಪುರ ಗ್ರಾಮದಲ್ಲಿ ಇರುವ ಅಮೂಲ್ಯ ಲಿಯೋನಾ ತಂದೆ ವಾಜಿ ಕುಟುಂಬದವರು ವಾಸವಿರುವ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದು, ಮನೆಯ ಕಿಟಕಿ ಗಾಜುಗಳು ಒಡೆದಿವೆ ಎಂದು ತಿಳಿದು ಬಂದಿದೆ.
ವಿಡಿಯೋ: "ಪಾಕಿಸ್ತಾನ್ ಜಿಂದಾಬಾದ್ ಎಂದವಳ ಕೈ-ಕಾಲು ಮುರಿಯಿರಿ"
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಟಿಪ್ಪು ಸುಲ್ತಾನ್ ಯುನೈಟೆಡ್ ಫ್ರೆಂಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಅಮೂಲ್ಯ ಲಿಯೋನಾಳನ್ನು ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಅಮೂಲ್ಯ ಲಿಯೋನಾ ವಿರುದ್ಧ ದೇಶದ್ರೋಹಿ ಪ್ರಕರಣ:
ಫ್ರೀಡಂ ಪಾರ್ಕ್ ನಲ್ಲಿ ನಡೆದ ಸಿಎಎ ಮತ್ತು ಎನ್ ಆರ್ ಸಿ ವಿರೋಧಿ ಕಾರ್ಯಕ್ರಮದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ವಿರುದ್ಧ ನಗರದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 124ಎ 153 ಎ ಮತ್ತು 153 ಬಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.
ಇನ್ನು ಗುರುವಾರ ನಡೆದ ಕಾರ್ಯಕ್ರಮದ ಸಂಪೂರ್ಣ ವಿಡಿಯೋವನ್ನು ಚಿತ್ರೀಕರಣ ಮಾಡಲಾಗಿದೆ. ಇದನ್ನು ಪರಿಶೀಲಿಸಿ ಅಮೂಲ್ಯ ಲಿಯೋನಾಗೆ ಪಾಕಿಸ್ತಾನ ಪರ ಘೋಷಣೆ ಕೂಗಲು ಪ್ರಚೋದನೆ ನೀಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications