ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಮರ: ಚಿಕ್ಕಮಗಳೂರು-ಶೃಂಗೇರಿ ಹೆದ್ದಾರಿ ಬಂದ್
ಚಿಕ್ಕಮಗಳೂರು, ಜುಲೈ 21: ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟಕ್ಕೆ ಜನರು ತತ್ತರಿಸಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಮರ ಬಿದ್ದು, ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.
ಜಿಲ್ಲೆಯ ಎನ್‌ಆರ್ ಪುರ ತಾಲೂಕಿನ ಬಾಳೆಹೊನ್ನೂರು ಬಳಿಯ ಭದ್ರಾ ಕಾಫಿ ಸ್ಟಾಪ್ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಮೇಲೆ ಮರ ಬಿದ್ದ ಶಬ್ದಕ್ಕೆ ಸ್ಥಳೀಯರು ಓಡೋಡಿ ಬಂದಿದ್ದು, ಪ್ರಯಾಣಿಕರನ್ನು ರಕ್ಷಿಸಿ ಕಾರಿನ ಮೇಲಿಂದ ಮರ ತೆರವುಗೊಳಿಸಿದ್ದಾರೆ.

ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಘಟನೆಯಲ್ಲಿ ಕಾರಿನ ಮುಂದಿನ ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಮರ ಬಿದ್ದ ಘಟನೆಯಿಂದಾಗಿ ಚಿಕ್ಕಮಗಳೂರು ಹಾಗೂ ಶೃಂಗೇರಿ ಹೆದ್ದಾರಿ ಸದ್ಯ ಬಂದ್ ಆಗಿದೆ.
ವರುಣನ ಆರ್ಭಟ: ಚಿಕ್ಕಮಗಳೂರು ಜಿಲ್ಲೆಯಲ್ಲಿ 158 ಅಪಾಯಕಾರಿ ಸ್ಥಳ ಗುರುತು
ಇನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಮಳೆ ಆರ್ಭಟ ಜೋರಾಗಿದ್ದು, ಜಿಲ್ಲೆಯ ಅನೇಕ ಭಾಗಗಳಲ್ಲಿ ಭೂ ಕುಸಿತ ಉಂಟಾಗಿದೆ. ಜಿಲ್ಲೆಯ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿದ್ದು, ಎಲ್ಲೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

ಜುಲೈ ಕೊನೆಯ ವಾರ ಹಾಗೂ ಆಗಸ್ಟ್ ತಿಂಗಳಲ್ಲಿ ಮತ್ತಷ್ಟು ಮಳೆಯಾಗುವ ಮುನ್ಸೂಚನೆ ಸಿಕ್ಕಿದ್ದು, ಚಿಕ್ಕಮಗಳೂರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.
ಚಿಕ್ಕಮಗಳೂರಿನಲ್ಲಿ ಮಳೆಯಿಂದ ಅಪಾಯ ಸಂಭವಿಸಬಹುದಾದ ಸ್ಥಳಗಳನ್ನು ಗುರುತು ಮಾಡಲಾಗಿದೆ. ಒಟ್ಟು 158 ಅಪಾಯಕಾರಿ ಸ್ಥಳಗಳನ್ನು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗುರುತು ಮಾಡಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಅಪಾಯಕಾರಿ ಜಾಗಗಳ ಗುರುತು ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಸೂಚನೆ ಹಿನ್ನಲೆಯಲ್ಲಿ ಅಧಿಕಾರಿಗಳು ಈಗಲೇ ಮುನ್ನೆಚ್ಚರಿಕೆಯನ್ನು ಕೈಗೊಳ್ಳುತ್ತಿದ್ದಾರೆ.












Click it and Unblock the Notifications