ಪಂಜಾಬ್ ಮುಖ್ಯ ಚುನಾವಣಾಧಿಕಾರಿಗೆ ಕೊರೊನಾ ಸೋಂಕು
ಚಂಡೀಗಢ, ಜನವರಿ 10: ಪಂಜಾಬ್‌ನ ಮುಖ್ಯ ಚುನಾವಣಾಧಿಕಾರಿ ಎಸ್ ಕರುಣಾ ರಾಜುಗೆ ಕೊರೊನಾ ಸೋಂಕು ತಗುಲಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಪಂಜಾಬ್‌ನ 117 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 14 ಒಂದೇ ಹಂತದ ಮತದಾನ ನಡೆಯಲಿದೆ.
ಪಂಜಾಬ್ ಸೇರಿದಂತೆ ಒಟ್ಟು ಐದು ರಾಜ್ಯಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿ ಒಂದು ದಿನದ ಬಳಿಕ ಇವರಿಗೆ ಸೋಂಕು ತಗುಲಿದೆ. ಪಂಜಾಬ್ ವಿಧಾನಸಭಾ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಶನಿವಾರ ಘೋಷಿಸಿದೆ.
ಗೋವಾ, ಪಂಜಾಬ್, ಮಣಿಪುರ್, ಉತ್ತರಾಖಂಡ್ ಹಾಗೂ ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳಿಗೆ ಚುನಾವಣಾ ದಿನಾಂಕವನ್ನು ಘೋಷಿಸಲಾಗಿದೆ. ಪಂಜಾಬ್ ವಿಧಾನಸಭಾ ಚುನಾವಣೆಯು ಫೆಬ್ರವರಿ 14ರಂದು ಸೋಮವಾರ ನಡೆಯಲಿದೆ. ಒಟ್ಟು ಏಳು ಹಂತಗಳಲ್ಲಿ ಪಂಚರಾಜ್ಯ ಚುನಾವಣೆ ನಡೆಯಲಿದೆ.

ಜನವರಿ 15ರವರೆಗೆ ಯಾವುದೇ ರೋಡ್ ಶೋ, ಸೈಕಲ್ ಜಾಥಾ ಸೇರಿದಂತೆ ಯಾವುದೇ ಮೆರವಣಿಗೆಯನ್ನು ಮಾಡುವಂತಿಲ್ಲ, ಹಾಗೆಯೇ ರಾತ್ರಿ 8ರಿಂದ ಬೆಳಗ್ಗೆ 8 ಗಂಟೆಯವರೆಗೆ ಯಾವುದೇ ಮೆರವಣಿಗೆ, ಸಭೆಗಳನ್ನು ನಡೆಸುವಂತಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.
ನಾಮಪತ್ರ ಸಲ್ಲಿಸಲು ಜನವರಿ 28 ಕೊನೆಯ ದಿನಾಂಕ
ಜನವರಿ 21ರಂದು ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಜನವರಿ 28 ಕೊನೆಯ ದಿನಾಂಕವಾಗಿರುತ್ತದೆ, ಜನವರಿ 29ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ, ನಾಮಪತ್ರ ಹಿಂಪಡೆಯಲು ಜನವರಿ 31 ಕೊನೆಯ ದಿನಾಂಕವಾಗಿರುತ್ತದೆ.
ಸುವಿಧಾ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ನಾಮಪತ್ರ ಸಲ್ಲಿಕೆ ಮಾಡಬಹುದು. 5 ರಾಜ್ಯಗಳ ಚುನಾವಣಾ ನೀತಿಸಂಹಿತೆ ಇಂದಿನಿಂದಲೇ ಜಾರಿ ಆಗಲಿದೆ. ಚುನಾವಣಾ ಸಿಬ್ಬಂದಿ 2 ಡೋಸ್ ಲಸಿಕೆ ಪಡೆದಿರಬೇಕು ಎಂದು ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ.
ಚುನಾವಣೆಗೆ 900 ವೀಕ್ಷಕರ ನೇಮಕ ಮಾಡಲಾಗುವುದು. ಅಭ್ಯರ್ಥಿಗಳು ತಮ್ಮ ಅಪರಾಧ ಹಿನ್ನೆಲೆಯನ್ನು ತಿಳಿಸಬೇಕು. ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿ ಬಗ್ಗೆ ಪಕ್ಷ ಕಾರಣ ನೀಡಬೇಕು. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನಾಮಪತ್ರವನ್ನು ಸಲ್ಲಿಸಬಹುದು.
ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಮಾಹಿತಿ ಪ್ರಕಟಿಸಬೇಕು. ಆಯಾ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಬೇಕು. KNOW YOUR CANDIDATE ಆ್ಯಪ್‌ನಲ್ಲಿ ಮಾಹಿತಿ ನೀಡಬೇಕು.
ಪಕ್ಷದ ವೆಬ್ಸೈಟ್ನ ಮುಖಪುಟದಲ್ಲಿ ಮಾಹಿತಿ ನೀಡಬೇಕು. ಗೋವಾ, ಮಣಿಪುರದಲ್ಲಿ ಚುನಾವಣಾ ವೆಚ್ಚ 28 ಲಕ್ಷ ರೂ. ಆಗಿರಲಿದೆ. ಉತ್ತರಾಖಂಡ್, ಉತ್ತರ ಪ್ರದೇಶ, ಪಂಜಾಬ್ನಲ್ಲಿ 40 ಲಕ್ಷ ಆಗಿರಲಿದೆ ಎಂದು ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚವನ್ನು ಆಯೋಗ ಮಿತಿಗೊಳಿಸಿದೆ.
ಚುನಾವಣೆಯಲ್ಲಿ ಒಟ್ಟು 18.34 ಕೋಟಿ ಮತದಾರರು ಮತದಾನ ಮಾಡಲಿದ್ದಾರೆ. 24.9 ಲಕ್ಷ ಜನರು ಮೊದಲ ಬಾರಿ ಮತ ಚಲಾಯಿಸ್ತಿದ್ದಾರೆ. ಕೊರೊನಾ ಮಾರ್ಗಸೂಚಿ ಪಾಲಿಸಿ ಚುನಾವಣೆ ನಡೆಸುತ್ತೇವೆ. ಮತಗಟ್ಟೆಗಳನ್ನು ಗ್ರೌಂಡ್ ಫ್ಲೋರ್‌ನಲ್ಲಿ ಸ್ಥಾಪಿಸಲಾಗುತ್ತದೆ. ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ.
5 ರಾಜ್ಯಗಳಲ್ಲಿ 2,15,368 ಮತಗಟ್ಟೆ ಸ್ಥಾಪಿಸಲಾಗುವುದು. ಪ್ರತಿ ಮತಗಟ್ಟೆಯಲ್ಲಿ 1,250 ಜನ ಮತ ಚಲಾಯಿಸಬಹುದು. 80 ವರ್ಷ ಮೇಲ್ಪಟ್ಟವರು, ವಿಕಲ ಚೇತನರು, ಕೊರೊನಾ ಸೋಂಕಿತರಿಗೆ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮಾಹಿತಿ ನೀಡಿದ್ದಾರೆ.












Click it and Unblock the Notifications