50:50 ಅಲ್ಲ, 54:46 ನೆನಪಿಡಿ! ಸಿಎಂ ಡಿಕೆಶಿ ₹77,891 ಕೋಟಿ ಹೇಳಿಕೆಗೆ ಲೆಕ್ಕ ಸಮೇತ ತೇಜಸ್ವಿ ಸೂರ್ಯ ತಿರುಗೇಟು!
ಬೆಂಗಳೂರು: ಬೆಂಗಳೂರು ' ನಮ್ಮ ಮೆಟ್ರೋ' ಯೋಜನೆಯ ಕ್ರೆಡಿಟ್ ವಾರ್ ಇದೀಗ ಅಂಕಿ ಸಂಖ್ಯೆ ಸಹಿತ ಅನುದಾನ ಹಂಚಿಕೆ ತೀವ್ರ ವಾಕ್ಸಮರವಾಗಿ ಮುಂದುವರಿದಿದೆ. ಅನುದಾನ 50:50ನು ಅಲ್ಲ, 20:20:60 ನು ಅಲ್ಲ, ಬದಲಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ದಿಂದ ಕ್ರಮವಾಗಿ 54 :46 ಅನುಪಾತದಡಿ ಅನುದಾನ ನೀಡಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಅವರು ಲೆಕ್ಕ ನೀಡಿದ್ದಾರೆ. ಈ ಮೂಲಕ ಕೇಂದ್ರ ಕಡಿಮೆ ಅನುದಾನ ನೀಡಿ ಮೈಲೇಜ್ ತೆಗೆದುಕೊಳ್ಳುತ್ತಿದೆ ಎಂದ ಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಇತರ ಕಾಂಗ್ರೆಸ್ ನಾಯಕರಿಗೆ ಸಂಸದ ಟಾಂಗ್ ನೀಡಿದ್ದಾರೆ.
ನಮ್ಮ ಮೆಟ್ರೋ ಯೋಜನೆಯಲ್ಲಿ ಅನುದಾನ ನೀಡುವುದಾಗಿ ಪ್ರಚಾರ ಪಡೆಯುತ್ತಿರುವ ಕೇಂದ್ರ ಸರ್ಕಾರ ನೀಡುತ್ತಿರುವ ಪಾಲು ಶೇ. 16.2 ಮಾತ್ರ, ಉಳಿದ 84% ಪಾಲು ರಾಜ್ಯ ಸರ್ಕಾರದ್ದು ಎಂದು ಸಿಎಂ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕರು ತಿಳಿಸಿದ್ದರು. ಪಿಂಕ್ ಲೈನ್ ಉದ್ಘಾಟನೆಗೆ ಪ್ರಚಾರ ಪಡೆಯಲಾಗುತ್ತಿದೆ ಎಂಬ ಆರೋಪದ, ಜಟಾಪಟಿ ಇದೀಗ ಯಾರ ಅನುದಾನ ಪಾಲು ಎಷ್ಟಿದೆ ಎಂದು ಉಭಯ ನಾಯಕರು ಲೆಕ್ಕ ನೀಡುವ ಮೂಲಕ ಸಮರ್ಥನೆಗೆ ಇಳಿದಿದ್ದಾರೆ.

ಇದೀಗ ಸಂಸದ ತೇಜಸ್ವಿ ಸೂರ್ಯ ಎಕ್ಸ್ ಮೂಲಕ ಮಾಹಿತಿ ನೀಡಿದ್ದು, ಕೇಂದ್ರದ್ದು 54% ಮತ್ತು ಕರ್ನಾಟಕ ಸರ್ಕಾರ 46% ಎಂದು ಲೆಕ್ಕ ನೀಡಿದ್ದಾರೆ. ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅನುಮೋದಿತ ಹಣಕಾಸು ಯೋಜನೆಯಲ್ಲಿ ನಮ್ಮ ಮೆಟ್ರೋ ನಿಧಿಯ ವಿಭಜನೆ ಇಲ್ಲಿದೆ!
ಯೋಜನಾ ವೆಚ್ಚ ಲೆಕ್ಕ ಹೀಗಿದೆ..
ಒಟ್ಟು ₹77,891 ಕೋಟಿ ಒಟ್ಟು ಯೋಜನಾ ವೆಚ್ಚದಲ್ಲಿ ಕೇಂದ್ರ ಸರ್ಕಾರದ್ದು 54% ಪಾಲು ಎಂದರೆ ಬರೋಬ್ಬರಿ ₹41,558 ಕೋಟಿ. ಇದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸೇರಿದೆ. ವಿದೇಶಿ ಸಾಲಗಳಿಗೆ ₹28,958 ಕೋಟಿ ಸಾರ್ವಭೌಮ ಬೆಂಬಲವು ಇದರಲ್ಲಿದೆ ಎಂದಿದ್ದಾರೆ.
ಇನ್ನೂ ರಾಜ್ಯ ಸರ್ಕಾರದ್ದು 46% ಪಾಲು, ಅಂದರೆ ₹36,333 ಕೋಟಿ ಇದೆ. ಇಲ್ಲಿ ಯಾರದ್ದು ಎಷ್ಟು ಪಾಲು ಅನುದಾನ ಎಂಬ ವ್ಯತ್ಯಾಸವನ್ನು ಗಮನಿಸಬೇಕು. ಈ ವಿದೇಶಿ ಸಾಲಗಳನ್ನು ಕೇಂದ್ರದ ಮೂಲಕ ವ್ಯವಸ್ಥೆ ಮಾಡಲಾಗುತ್ತದೆ. BMRCL ಒಪ್ಪಂದದ ಬೆಂಬಲ ವ್ಯವಸ್ಥೆಗಳಿಗೆ ಒಳಪಟ್ಟು ಸೇವೆ ಸಲ್ಲಿಸುತ್ತದೆ. ಆದರೆ ಇದೆಲ್ಲವು ಕರ್ನಾಟಕ ಸರ್ಕಾರದ ಬಜೆಟ್‌ನಿಂದ ನೇರವಾಗಿ ಹಂಚಿಕೆ ಆಗುವ ಅನುದಾನದಿಂದಲ್ಲ ಎಂದು ಅವರು ವಿವರಿಸಿದ್ದಾರೆ. 'ಈ ಸಂಖ್ಯೆಗಳನ್ನು ನೆನಪಿಡಿ 54:46' ಎಂದು ತಿಳಿಸಿದ್ದಾರೆ.
ಡಿಕೆ ಶಿವಕುಮಾರ್ ಕೊಟ್ಟ ಲೆಕ್ಕ
ಕೇಂದ್ರವು ಪ್ರತಿ ಒಂದು ರೂಪಾಯಿಗೆ ಕರ್ನಾಟಕ 5 ರೂ. ನೀಡುತ್ತದೆ. ಮೆಟ್ರೋ ಯೋಜನೆಯಲ್ಲಿ ಕರ್ನಾಟಕ ಸರ್ಕಾರ 65,291 ಕೋಟಿ ರೂಪಾಯಿ ಅತ್ಯಧಿಕ ಹಣ ನೀಡಿದೆ. ಕೇಂದ್ರ ಕೇವಲ 16ರಷ್ಟು ಅಂದರೆ 12,600 ಕೋಟಿ ರೂಪಾಯಿ ಮಾತ್ರ ಎಂದು ಸಿಎಂ ಡಿಕೆ ಶಿವಕುಮಾರ್ ಲೆಕ್ಕ ನೀಡಿದ್ದರು. ಅದಕ್ಕೀಗ ತೇಜಸ್ವಿ ಸೂರ್ಯ ಅವರು ಪ್ರತಿಕ್ರಿಯಿಸಿದ್ದಾರೆ.
12 ವರ್ಷ ಕಾಂಗ್ರೆಸ್ ಅಧಿಕಾರ, ವರ್ಷಕ್ಕೆ 700 ಮೀ. ಮಾತ್ರ ನಿರ್ಮಾಣ
ಜನವರಿ 2014ರಲ್ಲಿ ಬೆಂಗಳೂರಿನ 'ಪಿಂಕ್ ಲೈನ್' ಮೆಟ್ರೋ ಯೋಜನೆಗೆ ಅನುಮೋದನೆ ನೀಡಲಾಯಿತು. ಅಲ್ಲಿಂದ ಈವರೆಗಿನ 12 ವರ್ಷಗಳಲ್ಲಿ ಸುಮಾರು 9 ವರ್ಷಗಳ ಕಾಲ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರ ನಡೆಸಿದೆ.
ಈ ಸುದೀರ್ಘ ಅವಧಿಯಲ್ಲಿ, ಕೇವಲ 7.5 ಕಿ.ಮೀ ಉದ್ದದ ಮೊದಲ ಹಂತವು ಕಾರ್ಯಾರಂಭ ಮಾಡಲು ಬರೋಬ್ಬರಿ 12 ವರ್ಷಗಳನ್ನೇ ತೆಗೆದುಕೊಂಡಿದೆ. ಅಂದರೆ, ವರ್ಷಕ್ಕೆ ಸರಾಸರಿ ಕೇವಲ 700 ಮೀಟರ್‌ಗಳಷ್ಟು ಮಾತ್ರ ಕೆಲಸವಾಗಿದೆ!. ಇದು ಕಾಂಗ್ರೆಸ್ ಸರ್ಕಾರ ಆಡಳಿತ ವೈಖರಿ ಎಂದು ಅವರು ಲೇವಡಿ ಮಾಡಿದ್ದಾರೆ.
Centre : Government of Karnataka54 : 46That's the Namma Metro funding split in BMRCL's approved financing plan!For a total project cost of ₹77,891 crore:54% - ₹41,558 crore attributed to the Centre, including ₹28,958 crore in sovereign-backing for foreign loans.46% - ₹36,333 crore attributed to the Government of Karnataka.The distinction matters. These foreign loans are arranged through the Centre, availed by BMRCL and serviced by BMRCL, subject to contractual support arrangements. They are not direct expenditure from the Government of Karnataka's budget.Remember the numbers: 54:46.
— Tejasvi Surya (@Tejasvi_Surya) November 12, 2026
ಗುತ್ತಿಗೆ ಪ್ರಕ್ರಿಯೆಯಲ್ಲಿನ ವಿಳಂಬ, ಟೆಂಡರ್‌ಗಳ ರದ್ದು ಮತ್ತು ಪದೇ ಪದೇ ಎದುರಾದ ಅಡೆತಡೆಗಳು ಸಹ ಬೆಂಗಳೂರು ಮೆಟ್ರೋ ಯೋಜನೆಯನ್ನು ವಿಳಂಬಗೊಳಿಸಿವೆ. ತಮ್ಮ ಆಡಳಿತಾವಧಿಯಲ್ಲಿ ಉಂಟಾದ ಈ ವಿಳಂಬಗಳಿಗೆ ಕಾಂಗ್ರೆಸ್ ಪಕ್ಷವು ಇತರರ ಮೇಲೆ ಹೊಣೆ ಹೊರಿಸುವ ಬದಲು, ತಾನೇ ಉತ್ತರಿಸಬೇಕಾಗಿದೆ ಎಂದು ಅವರು ಸವಾಲು ಹಾಕಿದ್ದಾರೆ.


Click it and Unblock the Notifications
