ಡ್ರಗ್ ಪೆಡ್ಲರ್ ಜತೆ ನಿಕಟ ಸಂಪರ್ಕ ಹೊಂದಿದ್ದ ಸೆಲಿಬ್ರಿಟಿಗಳ ಮನೆಗಳ ಮೇಲೆ ದಾಳಿ
ಬೆಂಗಳೂರು, ಆ. 30 : ಮಾದಕ ಲೋಕಕ್ಕೂ ಹಾಗೂ ಸೆಲಿಬ್ರಿಟಿಗಳ ನಡುವಿನ ನಂಟು ಸದ್ಯಕ್ಕೆ ಕಳಚುವಂತೆ ಕಾಣುತ್ತಿಲ್ಲ. ಸ್ಯಾಂಡಲ್ ವುಡ್ ನಟಿಯರ ಡ್ರಗ್ ಡೀಲ್ ಪ್ರಕರಣದಲ್ಲಿ ಸಿಎಎಫ್ಎಸ್‌ಎಲ್ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಬೆನ್ನಲ್ಲೇ ಗೋವಿಂದಪುರ ಪೊಲೀಸರು ದಾಖಲಿಸಿರುವ ಸೆಲಿಬ್ರಿಟಿಗಳ ಡ್ರಗ್ ಡೀಲ್ ಪ್ರಕರಣ ಮತ್ತೆ ಸದ್ದು ಮಾಡಿದೆ. ಬಂಧಿತ ಡ್ರಗ್ ಕಿಂಗ್ ಪಿನ್ ಥಾಮಸ್ ಜತೆ ನಂಟು ಹೊಂದಿದ್ದ, ಡ್ರಗ್ ಪಾರ್ಟಿ ಮಾಡುತ್ತಿದ್ದ ಆರೋಪದ ಮೇಲೆ ಸೆಲಿಬ್ರಿಟಿ ಮಾಡಲ್ ಮನೆ ಸೇರಿದಂತೆ ಪೂರ್ವ ವಿಭಾಗದ ವಿಶೇಷ ತಂಡಗಳು ಮೂರು ಕಡೆ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿವೆ.
ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್ ಥಾಮಸ್‌ನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಈತನ ಜತೆ ಸಂಪರ್ಕ ಹೊಂದಿದ್ದ ತೆಲುಗು ಸಿನಿಮಾ ನಟ, ಸ್ಯಾಂಡಲ್ ವುಡ್ ಸೆಲಿಬ್ರಿಟಿಗಳನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಬಂಧಿತ ಆರೋಪಿ ಥಾಮಸ್ ಜತೆ ಸಂಪರ್ಕದಲ್ಲಿದ್ದ, ಆತನಿಂದ ಡ್ರಗ್ ಖರೀದಿ ಮಾಡಿ ಪಾರ್ಟಿ ಮಾಡುತ್ತಿದ್ದ ಸೆಲಿಬ್ರಿಟಿ ಮಾಡಲ್ ಸೋನಿಯಾ ಅಗರ್ ವಾಲ್ , ಸೆಲಿಬ್ರಿಟಿ ಭರತ್ ಮನೆ ಸೇರಿದಂತೆ ಮೂರು ಕಡೆ ಪೊಲೀಸರು ಸೋಮವಾರ ಬೆಳಗ್ಗೆ ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆ.
ಪ್ರಮುಖ ಡ್ರಗ್ ಪೆಡ್ಲರ್ ಥಾಮಸ್ ಜತೆ ನಿಕಟ ಸಂಪರ್ಕ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಮಹಿಳೆ ಸೇರಿದಂತೆ ಮೂರು ಕಡೆ ದಾಳಿ ಮಾಡಲಾಗಿದೆ. ಬನಶಂಕರಿ, ರಾಜಾಜಿನಗರ ಹಾಗೂ ಬೆನ್ಸನ್ ಟೌನ್‌ನಲ್ಲಿ ಮೂರು ವಿಶೇಷ ತಂಡಗಳು ದಾಳಿ ನಡೆಸಿ ಶೋಧ ನಡೆಸುತ್ತವೆ ಎಂದು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅವರು ತಿಳಿಸಿದ್ದಾರೆ. ದಾಳಿ ವೇಳೆ ಡ್ರಗ್ ಖರೀದಿ ಹಾಗೂ ಸೇವನೆಗೆ ಸಂಬಂಧಸಿದಂತೆ ಹಲವು ಮಹತ್ವದ ದಾಖಲೆಗನ್ನು ಕಲೆ ಹಾಕಿದ್ದಾರೆ. ಮಾತ್ರವಲ್ಲ, ಡ್ರಗ್ ಕಿಂಗ್ ಪಿನ್ ಥಾಮಸ್ ಜತೆ ನಿಕಟ ಸಂಪರ್ಕ ಹೊಂದಿರುವ ಬಗ್ಗೆ ತಾಂತ್ರಿಕ ಸಾಕ್ಷಾಧಾರಗಳ ಜತೆ ಸಾಂದರ್ಭಿಕ ಸಾಕ್ಷಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಯಾರು ಈ ಥಾಮಸ್ :
ಗೋವಿಂದಪುರ ಪೊಲೀಸರು ಈ ಹಿಂದೆ ದಾಖಲಿಸಿದ್ದ ಡ್ರಗ್ ಪ್ರಕರಣ ಸಂಬಂಧ ಆ. 12 ರಂದು ಡ್ರಗ್ ಕಿಂಗ್ ಪಿನ್ ಥಾಮಸ್ ಎಂಬಾತನನ್ನು ಬಂಧಿಸಿದ್ದರು. ನೈಜೀರಿಯಾ ಮೂಲದ ಥಾಮಸ್ ಎಚ್ಆರ್‌ಬಿಆರ್ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಥಾಮಸ್ ಕಲು ಮನೆ ಮೇಲೆ ದಾಳಿ ಮಾಡಿದಾಗ ಹದಿನೈದು ಲಕ್ಷ ರೂ. ಮೌಲ್ಯದ 403 ಎಕ್ಸಟೆಸಿ ಪಿಲ್ಸ್ ಹಾಗೂ ಕೊಕೇನ್ ವಶಪಡಿಸಿಕೊಂಡಿದ್ದರು. ಕೇವಲ 350 ರೂ.ಗೆ ತರಿಸುತ್ತಿದ್ದ ಎಕ್ಸಟೆಸಿ ಒಂದು ಮಾತ್ರೆಯನ್ನು 3 ಸಾವಿರಕ್ಕೆ ಮಾರಾಟ ಮಾಡಿದ್ದ ಸಂಗತಿ ಪೊಲೀಸರ ದಾಳಿ ವೇಳೆ ಬೆಳಕಿಗೆ ಬಂದಿತ್ತು. ಇನ್ನು ಒಂದು ಗ್ರಾಂ ಕೊಕೈನ್ 15 ಸಾವಿರ ರೂ.ಗೆ ಮಾರಾಟ ಮಾಡಿದ್ದ. ಅದರಲ್ಲೂ ಪ್ರಮುಖವಾಗಿ ಸೆಲಿಬ್ರಿಟಿಗಳಿಗೆ ಡ್ರಗ್ ನೀಡುತ್ತಿದ್ದ ಎಂಬ ಸಂಗತಿ ದಾಳಿ ವೇಳೆ ಬೆಳಕಿಗೆ ಬಂದಿತ್ತು. ಇದೀಗ ಈತನ ಜತೆ ನಿರಂತರ ಸಂಪರ್ಕ ಸಾಧಿಸಿ ಡ್ರಗ್ ಖರೀದಿ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ನಿಕಟವರ್ತಿಗಳ ಮನೆಗಳ ಮೇಲೂ ದಾಳಿ ನಡೆಸಿದ್ದಾರೆ. ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ ಹಾಗೂ ಸೆಲಿಬ್ರಿಟಿಗಳಿಗೆ ಡ್ರಗ್ ಮಾರಾಟ ಮಾಡಿದ್ದ ಥಾಮಸ್‌ನ ಸಂಪಕದಲ್ಲಿದ್ದವರಿಗೆ ಇದೀಗ ಕಂಟಕ ಎದುರಾಗಿದೆ.

Recommended Video
ಉದ್ಯಮಿ ಭರತ್ ಮತ್ತು ಸೋನಿಯಾ ಅಗರ್ ವಾಲ್ ಮನೆ ಮೇಲೆ ದಾಳಿ: ಸೆಲಿಬ್ರಿಟಿ ಮಾಡಲ್ ಎನ್ನಲಾದ ಸೋನಿಯಾ ಅಗರ್ ವಾಲ್, ಡಿಜೆ ವಚನ್ ಚನ್ನಪ್ಪ ಅವರ ಮನೆಗಳ ಮೇಲೆ ದಾಳಿ ನಡೆದಿದೆ. ಬನಶಂಕರಿಯ ಬುಲ್ದೋಟಾ ಅಪಾರ್ಟ್ ಮೆಂಟ್‌ನಲ್ಲಿ ವಾಸವಾಗಿರುವ ಭರತ್ , ತನ್ನ ಪ್ಲಾಟ್ ನಲ್ಲಿ ಐಷಾರಾಮಿ ಡ್ರಗ್ ಪಾರ್ಟಿ ಆಯೋಜಿಸುತ್ತಿದ್ದ ಎನ್ನಲಾಗಿದೆ. ಈತನ ಐಷಾರಾಮಿ ಪ್ಲಾಟ್ ನಲ್ಲಿ ಡ್ರಗ್ ಪಾರ್ಟಿಗೆ ಬಂಧಿತ ಥಾಮಸ್ ಡ್ರಗ್ ಪೂರೈಕೆ ಮಾಡುತ್ತಿದ್ದ. ಅಪಾರ್ಟ್ ಮೆಂಟ್‌ನಲ್ಲಿ ಡ್ರಗ್ ಪಾರ್ಟಿ ಆಯೋಜನೆ ಮೂಲಕ ಸ್ಥಳೀಯರಿಗೆ ತೊಂದರೆ ನೀಡಿದ್ದ. ಗುಂಪು - ಗುಂಪಾಗಿ ಸ್ನೇಹಿತರನ್ನು ಕರೆತಂದು ಪಾರ್ಟಿ ಮಾಡುತ್ತಿದ್ದ ಭರತ್ ಹಾಗೂ ಸ್ಥಳೀಯ ಅಪಾರ್ಟ್ ನೆಂಟ್ ನಿವಾಸಿಗಳು ಜಗಳ ಮಾಡಿಕೊಂಡಿದ್ದರು. ಇದೀಗ ಭರತ್ ಅಪಾರ್ಟ್ ಮೆಂಟ್‌ನಲ್ಲಿ ದಾಳಿ ನಡಿಸಿದ್ದು, ಉದ್ಯಮಿಗಾಗಿ ಪೊಲೀಸರು ಶೋಧ ಮುಂದುವರೆಸುತ್ತಿದ್ದಾರೆ. ಇನ್ನು ಮನೆಯಲ್ಲಿ ಇರದ ಸೋನಿಯಾ ಅಗರ್ ವಾಲ್‌ಗೆ ಆಕೆಯ ತಂದೆಯ ಪೋನ್‌ನಿಂದ ಕರೆ ಮಾಡಿಸಿ ವಿಚಾರಣೆಗೆ ಹಾಜರಾಗಲು ಸೂಚಿಸಾಗಿದೆ. ಮಧ್ಯಾಹ್ನದ ವೇಳೆಗೆ ಪೊಲೀಸರ ಮುಂದೆ ಹಾಜರಾಗುವುದಾಗಿ ಸೋನಿಯಾ ಅಗರ್ ವಾಲ್ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಸೆಲಿಬ್ರಿಟಿಗಳಿಗೂ ಡ್ರಗ್ ಪಾರ್ಟಿಗಳಿಗೂ ಇರುವ ಜಾಲವನ್ನು ಪತ್ತೆ ಮಾಡುವ ಪೊಲೀಸರ ಕಾರ್ಯ ಮುಂದುವರೆದಿದೆ.












Click it and Unblock the Notifications