Pink Line ಲೋಕಾರ್ಪಣೆಯೊಂದಿಗೆ 100 ಕಿಮೀ ಗಡಿ ದಾಟಿದ ನಮ್ಮ ಮೆಟ್ರೋ ಜಾಲ! ಮುಂಬೈ, ದೆಹಲಿ ನಗರಗಳು ಎಷ್ಟು ಮುಂದಿವೆ?
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪಿಂಕ್ ಲೈನ್ ಲೋಕಾರ್ಪಣೆ ಆಗುವ ಮೂಲಕ ನಮ್ಮ ಮೆಟ್ರೋ ಜಾಲವು ಇದೀಗ 15 ವರ್ಷದ ಬಳಿಕ 100 ಕಿಲೋ ಮೀಟರ್ ದಾಟಿದೆ. ದೇಶದ ಇತರ ನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ಅತ್ಯಂತ ವಿಳಂಬವಾಗಿ ಮೆಟ್ರೋ ವಿಸ್ತರಣೆ ಮಾಡಿರುವುದು ಗೊತ್ತಾಗುತ್ತದೆ.,ತೀವ್ರ ನಿರ್ಲಕ್ಷ್ಯ, ಕ್ರೇಡಿಟ್ ಪಾಲಿಟಿಕ್ಸ್ ಹಾಗೂ ಇತರ ಕಾರಣಗಳಿಂದ ಜನರು ಸಂಚಾರ ದಟ್ಟಣೆಯಲ್ಲಿ ಓಡಾಡುವಂತಾಗಿದೆ. ಹಾಗಾದರೆ ಬೆಂಗಳೂರಿಗೆ ಹೋಲಿಕೆ ಮಾಡಿದರೆ ಇತರ ನಗರಗಳು ಎಷ್ಟು ಮುಂದಿವೆ. ಅವುಗಳ ಜಾಲ ಎಷ್ಟಿದೆ, ಬೆಂಗಳೂರು ಮೆಟ್ರೋ ಯಾವ ಮಾರ್ಗ ಎಷ್ಟು ವರ್ಷ ತಡವಾಗಿ ಲೋಕಾರ್ಪಣೆ ಆಗಿವೆ ಎಂಬ ಮಾಹಿತಿ ಇಲ್ಲಿದೆ.
ಕಾಳೇನ ಅಗ್ರಹಾರ-ತಾವರೆಕೆರೆ ವರೆಗಿನ 7.5 ಕಿ.ಮೀ. ಗುಲಾಬಿ ಮೆಟ್ರೋ ಮಾರ್ಗವನ್ನು ಇಂದು ಪ್ರಧಾನಿ ಮೋದಿಯವರು ಉದ್ಘಾಟಿಸಿದ್ದಾರೆ. ಇದರಿಂದ 96 ಕಿಮೀ. ಇದ್ದ ಜಾಲ ನೂರರ ಗಡಿ ದಾಟಿದೆ. ಇನ್ನೂ ನೀಲಿ ಮಾರ್ಗ, ಉಳಿದ ಭೂಗತ ಗುಲಾಬಿ ಮಾರ್ಗ ತೆರೆಯುವುದು ಬಾಕಿ ಇದೆ. ಇತರ ನಗರಗಳಿಗೆ ಹೋಲಿಸಿದರೆ ದೆಹಲಿ ಮೆಟ್ರೋ ಜಾಲ ವಿಸ್ತರಣೆಯು ವೇಗವಾಗಿದ್ದು, ಅತೀ ನಿಧಾನವಾಗಿ ಬೆಂಗಳೂರು ಮೆಟ್ರೋ ವಿಸ್ತರಣೆ ಆಗಿದೆ.

ದೆಹಲಿ, ಮುಂಬೈ, ಹೈದರಾಬಾದ್ ಮೆಟ್ರೋ ಜಾಲ!
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 2002ರಲ್ಲಿ ಆರಂಭವಾದ ಮೆಟ್ರೋ ಜಾಲವು ಈವರೆಗೆ 2026ರ ಹೊತ್ತಿಗೆ ಸುಮಾರು 394 ಕಿ.ಮೀ.ಜಾಲ ವ್ಯಾಪ್ತಿಸಿದೆ. ಅಷ್ಟರ ಮಟ್ಟಿಗೆ ಕಡಿಮೆ ಸಮಯದಲ್ಲಿ ವೇಗವಾಗಿ ಮೆಟ್ರೋ ಜಾಲ ವಿಸ್ತರಣೆ ಆಗಿದೆ. ಮೊದಲ 12 ವರ್ಷಗಳಲ್ಲೇ 194 ಕಿ.ಮೀ. ಮಾರ್ಗ ನಿರ್ಮಿಸಿದ್ದು, ದಾಖಲೆ ಪಟ್ಟಿ ಸೇರಿದೆ.
ವಾಣಿಜ್ಯ ನಗರಿ ಮುಂಬೈ ನಲ್ಲಿ ಬೆಂಗಳೂರಿನ ನಂತರ ಅಂದರೆ 2014ರಲ್ಲಿ 80ಕ್ಕೂ ಅಧಿಕ ಕಿಲೋ ಮೀಟರ್ ಜಾಲ ವಿಸ್ತರಣೆ ಆಗಿತ್ತು. ಬಳಿಕ 5-6 ವರ್ಷಗಳಲ್ಲಿ ನೂತನ ಮಾರ್ಗಗಳನ್ನು ವೇಗವಾಗಿ ನಿರ್ಮಿಸುವ ಮೂಲಕ ಇತರ ನಗರಗಳಿಗೆ ತೀವ್ರ ಪೈಪೋಟಿ ನೀಡಿತು.
ಇನ್ನೂ ಹೈದರಾಬಾದ್ ನಗರ ನೋಡುವುದಾದರೆ, ಅಲ್ಲಿ 2017ರಲ್ಲಿ ಸುಮಾರು ಗರಿಷ್ಠ 69 ಕಿಲೋ ಮೀಟರ್ ನಷ್ಟು ಜಾಲ ವಿಸ್ತರಣೆ ಆಗಿದೆ. ಖಾಸಗಿ ಸಹಭಾಗಿತ್ವದಲ್ಲಿಅತೀ ಕಡಿಮೆ ಅವಧಿಯಲ್ಲಿ ಬೃಹತ್ ಜಾಲವನ್ನು ಸೃಷ್ಟಿಸಿಕೊಳ್ಳುವಲ್ಲಿ ಅಲ್ಲಿನ ಸರ್ಕಾರ ಯಶಸ್ವಿಯಾಗಿದೆ. ಇತ್ತ ಚೆನ್ನೈನಲ್ಲೂ ಒಂದಷ್ಟು ಸಮಸ್ಯೆಗಳಿಂದಾಗಿ ಅಲ್ಲಿನ ಮೆಟ್ರೋ ಜಾಲವು ಇಂದಿಗೆ 54 ಕಿಲೋ ಮೀಟರ್ ನಷ್ಟು ವಿಸ್ತರಣೆ ಆಗಿದೆ.
ಬೆಂಗಳೂರೂ ಮೆಟ್ರೋ ಮಾರ್ಗಗಳ ವಿಳಂಬ
ನೇರಳೆ ಮಾರ್ಗ (Purple Line): ವೈಟ್‌ಫೀಲ್ಡ್-ಚಲ್ಲಘಟ್ಟದವರೆಗಿನ 32.6 ಕಿ.ಮೀ ಉದ್ದದ ನೇರಳೆ ಮಾರ್ಗವು 2003ರಲ್ಲಿ ಸಿದ್ಧವಾಗಿತ್ತು. ಯೋಜನೆಯ ಪ್ರಕಾರ 2010ರಲ್ಲಿ ಪೂರ್ಣಗೊಳಿಸುವ ಗುರಿ ಇದ್ದರೂ, ಉದ್ದೇಶಿತ ಪೂರ್ಣ ಮಾರ್ಗ 2023ರಲ್ಲಿ ಸೇವೆಗೆ ಲಭ್ಯವಾಯಿತು. ನಿರ್ಮಾಣಕ್ಕೆ 20 ವರ್ಷಕ್ಕೂ ಅಧಿಕ ಸಮಯ ಪಡೆಯಿತು.
ಹಸಿರು ಮಾರ್ಗ (Green Line): ತುಮಕೂರು ರಸ್ತೆ ಕಡೆಗೆ ಸಾಗುವ 24.2 ಕಿ.ಮೀ ಉದ್ದದ ಹಸಿರು ಮಾರ್ಗಕ್ಕೂ 2003ರಲ್ಲಿ ಡಿಪಿಆರ್ ತಯಾರಿಸಿ ನಂತರ ಕಾಮಗಾರಿ ಆರಂಭಿಸಲಾಯಿತು. 2010ರ ಮಾರ್ಚ್‌ನಲ್ಲಿ ಕೆಲಸ ಮುಗಿಸಬೇಕಿತ್ತು. ಆದರೆ 2014ರಲ್ಲಿಮೊದಲ ಸಂಚಾರ ಆರಂಭವಾಯಿತು. ಅಲ್ಲಿಂದ ಗುರಿ ಮುಟ್ಟಲು 2017ರವರೆಗೂ ಸಮಯ ಹಿಡಿಯಿತು. ಈ ಮಾರ್ಗದ ಇಂದಿನ ಉದ್ದದ ನೆರವೇರಲು 14 ವರ್ಷ ಬೇಕಾಯಿತು.
ಹಳದಿ ಮಾರ್ಗ (Yellow Line): ನಮ್ಮ ಮೆಟ್ರೋ ಜಾಲದ ಮೂರನೇ ಹಳದಿ ಮಾರ್ಗ (ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ) 18.8 ಕಿಲೋ ಮೀಟರ್ ಉದ್ದದ ಹಳದಿ ಮಾರ್ಗವು 2016ರ ಹೊತ್ತಿಗೆ ಪೂರ್ಣಗೊಂಡು ಸೇವೆಗೆ ಸಿದ್ಧವಾಗಬೇಕಿತ್ತು. ಆದರೆ ಅನೇಕ ಕಾರಣಗಳಿಂದ, ರೈಲು ಪೂರೈಕೆ, ಕೊರೋನಾ ಕಾರಣದಿಂದ ಈ ಮಾರ್ಗವು 2025ರ ಆಗಸ್ಟ್ 11ಕ್ಕೆ ಪ್ರಧಾನಿ ಮೋದಿಯವರಿಂದ ಲೋಕಾರ್ಪಣೆ ಆಗಿ ಸೇವೆಗೆ ಲಭಿಸಿತು. ಇದಕ್ಕೂ 14 ವರ್ಷ ಹಿಡಿಯಿತು.
ಪಿಂಕ್ ಲೈನ್ (Pink Line): ನೂತನ 7.5 ಕಿಲೋ ಮೀಟರ್ ಗುಲಾಬಿ ಮಾರ್ಗವು 2011ರಲ್ಲಿ ರೂಪಿಸಲಾದ ಯೋಜನೆಯಾಗಿದೆ. 2016ರಲ್ಲಿ ನಿರ್ಮಿಸಿ ಸಂಚಾರಕ್ಕೆ ಮುಕ್ತಗೊಳಿಸುವ ಪ್ಲ್ಯಾನ್ ಮಾಡಲಾಗಿತ್ತು. ಆದರೆ ಅರ್ಧ ಮಾರ್ಗ ಮಾತ್ರ ಬರೋಬ್ಬರಿ 15 ವರ್ಷಕ್ಕೂ ಅಧಿಕ ಸಮಯ ಬಳಿಕ ಇಂದು ( 2026 ನವೆಂಬರ್ 13) ಲೋಕಾರ್ಪಣೆಗೊಂಡಿದೆ. ಬಾಕಿ ಪಿಂಕ್ ಲೈನ್ ಮಾರ್ಗ, ನೀಲಿ ಮಾರ್ಗ 2027ರಲ್ಲಿ ಸೇವೆಗೆ ಸಿಗಲಿವೆ.
ಬೆಂಗಳೂರು ಮೆಟ್ರೋ ಆಮೆಗತಿಗೆ ಕಾರಣಗಳು..
ಬೆಂಗಳೂರಲ್ಲಿ ಅತೀವ ಜನದಟ್ಟಣೆ, ಕಾನೂನು ತೊಡಕುಗಳು, ಪರಿಸರ ಕಾಳಜಿ, ಭೂ ಸ್ವಾಧೀನ ಸಮಸ್ಯೆಗಳಿಂದ ಕಾಮಗಾರಿ ವಿಳಂಬವಾಗುತ್ತಾ ಬಂದಿದೆ. ಅಲ್ಲದೇ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳು ಅಧಿಕಾರದಲ್ಲಿದ್ದಾಗಲೂ ನಿರೀಕ್ಷಿತ ವೇಗ ಪಡೆಯಲಿಲ್ಲ. ಮಾರ್ಗ ನಿರ್ಮಾಣವಾದಾಗ ಯೋಜನೆ ಕ್ರೆಡಿಟ್ ತೆಗೆದುಕೊಳ್ಳುವ ಆಸಕ್ತಿ ಹೊಂದಿರುವ ನಾಯಕರು, ಕಾಮಗಾರಿಗೆ ವೇಗ ನೀಡಲು, ತ್ವರಿತವಾಗಿ, ಇಟ್ಟುಕೊಂಡ ಗುರಿಯಂತೆ ಕೆಲಸ ಮುಗಿಸುವಲ್ಲಿ ತೋರಿಸದೇ ಇರುವುದು ಮೆಟ್ರೋ ನಿಧಾನಗತಿ ವಿಸ್ತರಣೆಗೆ ಕಾರಣವಾಗಿದೆ.




Click it and Unblock the Notifications
