ಸಿಐಡಿ ಅರಣ್ಯ ಘಟಕದಿಂದ ಕಾಡಮ್ಮೆ ಕೊಂಬು ವಶ !
ಬೆಂಗಳೂರು, ಡಿಸೆಂಬರ್ 18: ವಿಶೇಷ ಕಾರ್ಯಾಚರಣೆ ನಡೆಸಿದ ಬೆಂಗಳೂರು ಸಿಐಡಿ ಅರಣ್ಯ ಘಟಕದ ಪೊಲೀಸರು ಕಾಡಮ್ಮೆ ಕೊಂಬು ವಶಪಡಿಸಿಕೊಂಡಿದ್ದಾರೆ. ಕಾಡಮ್ಮೆ ಕೊಂಬು ಮಾರಲು ಯತ್ನಿಸುತ್ತಿದ್ದ ಆರೋಪಿ ಬೈಕ್ ನಲ್ಲಿ ಪರಾರಿಯಾಗಿದ್ದಾನೆ.
ವನ್ಯ ಜೀವಿ ರಕ್ಷಣಾ ಕಾಯ್ದೆ ಉಲ್ಲಂಘಿಸಿ ಕಾಡಮ್ಮೆ ಕೊಂಬು ಮಾರಾಟ ಮಾಡುವ ಖಚಿತ ಮಾಹಿತಿ ಸಿಐಡಿ ಅರಣ್ಯ ಘಟಕದ ಪೊಲೀಸರಿಗೆ ಸಿಕ್ಕಿತ್ತು. ಮಾಹಿತಿ ಆಧರಿಸಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅಶೋಕ್ ಮತ್ತು ತಂಡ ರಾಮನಗರ ತಾಲೂಕಿನ ಬಿಡದಿ ಸಮೀಪ ಹಳ್ಳಿ ಬಳಿ ಕಾರ್ಯಾಚರಣೆಗೆ ಮುಂದಾಗಿದ್ದರು. ದ್ವಿಚಕ್ರ ವಾಹನದಲ್ಲಿ ಕಾಡಮ್ಮೆ ಕೊಂಬು ತಂದಿದ್ದ ಆರೋಪಿ ಪೊಲೀಸರ ಬಗ್ಗೆ ಸಂಶಯಗೊಂಡು ರಸ್ತೆ ಬದಿ ಚೀಲ ಬಿಸಾಡಿ ಪರಾರಿಯಾಗಿದ್ದಾನೆ. ಬ್ಯಾಗ್ ಪರಿಶೀಲಿಸಿದರೆ ಅದು ಕಾಡು ಕೊಂಬು ಪತ್ತೆಯಾಗಿದ್ದು, ರಾಮನಗರ ವಿಭಾಗದ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ.
ಕಾಡು ಎಮ್ಮೆ ಕೊಂಬಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದುಬಾರಿ ಬೆಲೆ ಇದೆ. ಅದರಲ್ಲೂ ಭಾರತದ ಕಾಡಮ್ಮೆ ಕೊಂಬುಗಳಿಗೆ ಬಹುಬೇಡಿಕೆ. ಐಶರಾಮಿ ಜೀವನ ನಡೆಸುವರು ಮನೆಯಲ್ಲಿ ಇಟ್ಟುಕೊಳ್ಳಲು ಲಕ್ಷಾಂತರ ರೂಪಾಯಿ ಕೊಟ್ಟು ಅಸಲಿ ಕಾಡಮ್ಮೆ ಕೊಂಬು ಖರೀದಿಸುತ್ತಾರೆ. ಇದಕ್ಕಾಗಿ ವನ್ಯ ಜೀವಿಗಳನ್ನು ಕೊಂದು ಅವನ್ನು ಕಾನೂನು ಬಾಹಿರವಾಗಿ ವಿದೇಶಗಳಿಗೆ ರವಾನೆ ಮಾಡುತ್ತಾರೆ.