35 ಸಾವಿರ ರೂ. ಸಂಬಳ ಕೇಳಿದ ಉದ್ಯೋಗಿಗೆ 50 ಸಾವಿರ ಕೊಟ್ಟ IIT ಸಂಸ್ಥಾಪಕ; ಕಾರಣವೇನು? ಇಲ್ಲಿದೆ ನೋಡಿ
ಸಾಮಾನ್ಯವಾಗಿ ಕಾರ್ಪೊರೇಟ್ ಜಗತ್ತಿನಲ್ಲಿ ಕಂಪನಿಗಳು ಉದ್ಯೋಗಿಗಳಿಗೆ ಆದಷ್ಟು ಕಡಿಮೆ ಸಂಬಳ ನೀಡಲು ಪ್ರಯತ್ನಿಸುತ್ತವೆ. ಅಭ್ಯರ್ಥಿಯ ಹಿಂದಿನ ವೇತನದ ಆಧಾರದ ಮೇಲೆ ಚೌಕಾಸಿ ಮಾಡುವುದು, ಬಜೆಟ್ ಹೆಚ್ಚಿದ್ದರೂ ಕಡಿಮೆ ಸಂಬಳಕ್ಕೆ ನೇಮಕಾತಿ ಮಾಡಿಕೊಳ್ಳುವುದು ನಾವು ಪ್ರತಿದಿನ ನೋಡುವ ಸಾಮಾನ್ಯ ಪ್ರಕ್ರಿಯೆ. ಆದರೆ, ಈ ಎಲ್ಲಾ ಸಾಮಾನ್ಯ ನಿಯಮಗಳನ್ನು ಬದಿಗೊತ್ತಿ, ಉದ್ಯೋಗಿಯೊಬ್ಬ ಕೇಳಿದ್ದಕ್ಕಿಂತ ಹೆಚ್ಚಿನ ಸಂಬಳ ನೀಡುವ ಮೂಲಕ ಐಐಟಿ ಪದವೀಧರರು ಆರಂಭಿಸಿರುವ ಸ್ಟಾರ್ಟ್‌ಅಪ್ ಕಂಪನಿಯೊಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ತಮ್ಮ ಮುಂದಿನ ವೃತ್ತಿಜೀವನಕ್ಕಾಗಿ ಸಂದರ್ಶನಕ್ಕೆ ಬಂದಿದ್ದ ಇಂಜಿನಿಯರಿಂಗ್ ಅಭ್ಯರ್ಥಿಯೊಬ್ಬರು ತಿಂಗಳಿಗೆ ಕೇವಲ 35,000 ರೂ. ವೇತನ ಕೇಳಿದ್ದರು. ಆದರೆ, ಆ ಕಂಪನಿಯ ಸಂಸ್ಥಾಪಕರು ಆತನಿಗೆ ತಿಂಗಳಿಗೆ ಬರೋಬ್ಬರಿ 50,000 ರೂ. ಸಂಬಳ ನೀಡಿ ಕೆಲಸಕ್ಕೆ ತೆಗೆದುಕೊಂಡಿದ್ದಾರೆ. ಈ ಅಪರೂಪದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಸಂಸ್ಥಾಪಕರ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.

"ಅಭ್ಯರ್ಥಿಯು ತಿಂಗಳಿಗೆ 35 ಸಾವಿರ ರೂ. ಕೇಳಿದ್ದ, ಆದರೆ ನಾವು ಆತನಿಗೆ 50 ಸಾವಿರ ರೂ. ಆಫರ್ ಮಾಡಿದೆವು. ಏಕೆಂದರೆ ಆ ನಿರ್ದಿಷ್ಟ ಹುದ್ದೆಗೆ ನಾವು ಮೊದಲೇ 50 ಸಾವಿರ ರೂ. ಬಜೆಟ್ ಅನುಮೋದನೆ ಮಾಡಿದ್ದೆವು" ಎಂದು ಸಂಸ್ಥಾಪಕರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. "ಐಐಟಿ ಕೆ 4 ಲೌಂಡೆ" (IIT Ke 4 Launde) ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಪುಟದಲ್ಲಿ ವೀಡಿಯೋ ಹಂಚಿಕೊಂಡಿರುವ ಅವರು, ತಮ್ಮ ಈ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ವಿವರಿಸಿದ್ದಾರೆ.
ವೀಡಿಯೋದಲ್ಲಿ ಮಾತನಾಡಿರುವ ಸಂಸ್ಥಾಪಕರೊಬ್ಬರು, "ನಾವು ಇಂಜಿನಿಯರ್ ಒಬ್ಬರನ್ನು ನೇಮಿಸಿಕೊಳ್ಳುತ್ತಿದ್ದೆವು. ಆತನ ಹಿಂದಿನ ಸಂಬಳ ಸುಮಾರು 30,000ರೂ. ಇತ್ತು. ಹೀಗಾಗಿ ಆತ ನಮ್ಮಲ್ಲಿ 35,000 ರೂ. ಕೇಳಿದ. ಆದರೆ ಆ ಹುದ್ದೆಗಾಗಿ ಮ್ಯಾನೇಜ್ಮೆಂಟ್ 50,000 ರೂ. ಬಜೆಟ್ ಮೀಸಲಿಟ್ಟಿತ್ತು. ಹಾಗಾಗಿ ನಾವು ಆತನಿಗೆ ಅದೇ ಮೊತ್ತವನ್ನು ಪಾವತಿಸಲು ನಿರ್ಧರಿಸಿ ಕೆಲಸಕ್ಕೆ ಸೇರಿಸಿಕೊಂಡೆವು" ಎಂದಿದ್ದಾರೆ.
ಮುಂದೇನಾಯ್ತು?
ಕೆಲಸಕ್ಕೆ ಸೇರಿದ ಕೆಲವೇ ದಿನಗಳ ನಂತರ ಆ ಅಭ್ಯರ್ಥಿ ಸಂಸ್ಥಾಪಕರ ಬಳಿ ಬಂದು, "ನಾನು ಕೇಳಿದ್ದಕ್ಕಿಂತ ಹೆಚ್ಚಿನ ಸಂಬಳ ನೀಡಲು ನೀವು ಏಕೆ ಒಪ್ಪಿಕೊಂಡಿರಿ?" ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ಸಂಸ್ಥಾಪಕರು, "ನಾನು ಯಾಕೆ ನೀಡಬಾರದು? ಆ ಹುದ್ದೆಯ ಬಜೆಟ್ ಅನ್ನು ನಾನು ಒಪ್ಪಿಕೊಂಡಿದ್ದೇನೆ. ನನ್ನ ಪ್ರಕಾರ ಆ ಕೆಲಸಕ್ಕೆ ಅಷ್ಟು ಮೌಲ್ಯವಿದೆ. ನಿಮ್ಮ ಆರ್ಥಿಕ ಸಮಸ್ಯೆಯನ್ನು ನಾನು ಬಗೆಹರಿಸಿದರೆ, ನೀವು ೩೦ ಸಾವಿರವೋ, ೩೫ ಸಾವಿರವೋ ಎಂದು ಚಿಂತಿಸದೆ ನೆಮ್ಮದಿಯಿಂದ ಕೆಲಸ ಮಾಡಬಹುದು. ಹೀಗಾಗಿ ಆ ಸಮಸ್ಯೆಯನ್ನು ನಾನು ಬಗೆಹರಿಸಬೇಕು ಎನಿಸಿತು" ಎಂದು ಉತ್ತರಿಸಿದ್ದಾರೆ.
ಇದೇ ವೇಳೆ ಮಧ್ಯಪ್ರವೇಶಿಸಿದ ಮತ್ತೊಬ್ಬ ಸಂಸ್ಥಾಪಕ, "ಜನರಿಗೆ ಇದರ ಅರಿವಿಲ್ಲ, ಆದರೆ ಈ ವ್ಯಕ್ತಿ ಕಳೆದ ೩ ವರ್ಷಗಳಿಂದ ನಮ್ಮೊಂದಿಗಿದ್ದಾನೆ. ಒಂದು ವೇಳೆ ಆತ ಮಧ್ಯದಲ್ಲೇ ಕೆಲಸ ಬಿಟ್ಟು ಹೋಗಿದ್ದರೆ, ಹೊಸಬರನ್ನು ಹುಡುಕಿ ತರಬೇತಿ ನೀಡುವ ವೆಚ್ಚವು ನಮಗೆ ಬಹಳ ದುಬಾರಿಯಾಗುತ್ತಿತ್ತು. ಇದು ನಮ್ಮ ಕೆಲಸದ ಶೈಲಿ. ನಾವು ಯಾವಾಗಲೂ ವೆಚ್ಚ ಕಡಿತಕ್ಕಿಂತ ಗುಣಮಟ್ಟಕ್ಕೆ (Quality) ಹೆಚ್ಚಿನ ಆದ್ಯತೆ ನೀಡುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಏನು?
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಬಳಕೆದಾರರೊಬ್ಬರು "ಇವರೇ ನೋಡಿ ಡ್ರೀಮ್ ರಿಕ್ರೂಟರ್ಸ್" ಎಂದು ಬರೆದಿದ್ದಾರೆ. ಮತ್ತೊಬ್ಬರು "ನಾನೊಬ್ಬ ಹೆಚ್‌ಆರ್ ಆಗಿ ಇದನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ, ಆದರೆ ನನ್ನ ಕಂಪನಿ ನನಗೆ ಈ ರೀತಿ ಮಾಡಲು ಎಂದಿಗೂ ಬಿಡುವುದಿಲ್ಲ" ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇನ್ನೊಬ್ಬರು "ಕಂಪನಿಯಲ್ಲಿ ಅನುಮೋದಿತ ಬಜೆಟ್ ಅನ್ನು ಉದ್ಯೋಗಿಗೆ ಪ್ರಾಮಾಣಿಕವಾಗಿ ನೀಡುವುದು ನಿಜಕ್ಕೂ ಅತ್ಯುತ್ತಮ ಬೆಳವಣಿಗೆ" ಎಂದು ಶ್ಲಾಘಿಸಿದ್ದಾರೆ. ಒಟ್ಟಿನಲ್ಲಿ ಉದ್ಯೋಗಿಗಳ ಶ್ರಮಕ್ಕೆ ತಕ್ಕ ಬೆಲೆ ನೀಡಿದ ಈ ಐಐಟಿ ಸಂಸ್ಥಾಪಕರ ನಡೆ ಎಲ್ಲರಿಗೂ ಮಾದರಿಯಾಗಿದೆ.












Click it and Unblock the Notifications