ಜಿಮ್‌ಗೆ ಹೋಗ್ಬೇಕು ಬೆಳಗ್ಗೆ 9 ಗಂಟೆಗೆ ಕೋರ್ಟ್‌ಗೆ ಬರಲ್ಲ ಎಂದ GenZ ಇಂಟರ್ನ್: ಲಾಯರ್‌ ಪೋಸ್ಟ್ ವೈರಲ್

ಇತ್ತೀಚಿನ ದಿನಗಳಲ್ಲಿ ಕಚೇರಿಗಳಲ್ಲಿ ಜೆನ್ ಜೀ ಪೀಳಿಗೆಯವರು ಕೆಲಸದ ಮಾಡುವ ಶೈಲಿಯ ಸುತ್ತಾ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಯುವಜನತೆ ವೃತ್ತಿಗಿಂತ ವೈಯಕ್ತಿಕ ಜೀವನಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ ಎಂಬ ಮಾತುಗಳು ಕಾರ್ಪೊರೇಟ್ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ.

ಇದೀಗ ದೆಹಲಿಯ ವಕೀಲೆಯೊಬ್ಬರು ತಮ್ಮ ಇಂಟರ್ನ್ ಬಗ್ಗೆ ಹಂಚಿಕೊಂಡಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಬೆಳಗ್ಗೆ 9 ಗಂಟೆಗೆ ಕೋರ್ಟ್‌ಗೆ ಬರುವಂತೆ ಸೂಚಿಸಿದ ವಕೀಲರಿಗೆ ಆತ ನೀಡಿದ ಉತ್ತರ ಇದೀಗ ಹೊಸದೊಂದು ಚರ್ಚೆಗೆ ಕಾರಣವಾಗಿದೆ. ಇದು ಕೇವಲ ಒಬ್ಬ ಇಂಟರ್ನ್ ಕಥೆಯಲ್ಲ, ಇಂದಿನ ಯುವ ಪೀಳಿಗೆಯ ವೃತ್ತಿಪರತೆಯ ಮನಸ್ಥಿತಿಯನ್ನ ಪ್ರತಿಬಿಂಬಿಸುತ್ತಿದೆ.

Gen Z

ಜೆನ್ ಜೀ ಇಂಟರ್ನ್ ಹೇಳಿದ್ದೇನು?

ದೆಹಲಿ ಮೂಲದ ವಕೀಲೆಯೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಈ ಘಟನೆಯನ್ನ ಹಂಚಿಕೊಂಡಿದ್ದಾರೆ. ಪ್ರಮುಖ ಕೆಲಸವೊಂದರ ನಿಮಿತ್ತ ಮರುದಿನ ಬೆಳಗ್ಗೆ 9 ಗಂಟೆಗೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಅವರು ತಮ್ಮ ಜೆನ್ ಜೀ ಇಂಟರ್ನ್‌ಗೆ ಸೂಚಿಸಿದ್ದರು. ಆದರೆ, ಆತ ತನಗೆ ಬೆಳಗ್ಗೆ ಜಿಮ್‌ಗೆ ಹೋಗುವ ಅಭ್ಯಾಸವಿದ್ದು, ಆ ಸಮಯಕ್ಕೆ ಕೋರ್ಟ್‌ಗೆ ಬರಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾನೆ.

ಸ್ವಲ್ಪ ಹೊತ್ತಿನ ನಂತರ, "ಇದೊಂದು ಬಾರಿ ಮಾತ್ರ ನಿಮಗೆ ವಿನಾಯಿತಿ ನೀಡುತ್ತಿದ್ದೇನೆ, ನಾಳೆ ಕೋರ್ಟ್‌ಗೆ ಬರುತ್ತೇನೆ" ಎಂದು ಹೇಳಿ ಆತ ಒಪ್ಪಿಕೊಂಡಿದ್ದಾನೆ. ಇದರಿಂದ ದಂಗಾದ ವಕೀಲೆ, "ಅವನ ಮಾತನ್ನು ಕೇಳಿದರೆ, ನಾನು ಅವನ ಸೀನಿಯರಾ, ಜೂನಿಯರಾ ಅಥವಾ ಆತನ ವೈಯಕ್ತಿಕ ಸಹಾಯಕಿನಾ ಎಂಬ ಗೊಂದಲ ಮೂಡುತ್ತಿದೆ" ಎಂದು ಬೇಸರ ಮತ್ತು ತಮಾಷೆ ಬೆರೆಸಿ ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್ ಕೆಲವೇ ಗಂಟೆಗಳಲ್ಲಿ 2.78 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದು ವೈರಲ್ ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ

ಈ ವೈರಲ್ ಪೋಸ್ಟ್‌ಗೆ ನೆಟ್ಟಿಗರು ಪರ ವಿರೋಧ ಚರ್ಚೆ ಮಾಡುತ್ತಿದ್ದಾರೆ. ಒಂದು ವರ್ಗದ ಜನರು ಇಂಟರ್ನ್ ಈ ವರ್ತನೆಯನ್ನ ಕಟುವಾಗಿ ಟೀಕಿಸಿದ್ದಾರೆ. ವೃತ್ತಿಪರ ಜಗತ್ತಿನಲ್ಲಿ ಕೆಲಸಕ್ಕೆ ಮೊದಲ ಆದ್ಯತೆ ನೀಡಬೇಕು. ಅದರಲ್ಲೂ ನ್ಯಾಯಾಲಯದಂತಹ ಪ್ರಮುಖ ಹಾಗೂ ಜವಾಬ್ದಾರಿಯುತ ಕೆಲಸಗಳಿಗೆ ಹಿರಿಯರು ಸೂಚಿಸಿದಾಗ, ವೈಯಕ್ತಿಕ ದಿನಚರಿಯನ್ನ ಮುಂದಿಟ್ಟು ನಿರಾಕರಿಸುವುದು ಸರಿಯಲ್ಲ ಎಂದು ವಾದಿಸಿದ್ದಾರೆ. ಇಂತಹ ಮನಸ್ಥಿತಿ ಭವಿಷ್ಯದ ವೃತ್ತಿಜೀವನಕ್ಕೆ ಮಾರಕ ಎಂಬುದು ಹಲವರ ಅಭಿಪ್ರಾಯ.

ಆದರೆ, ಮತ್ತೊಂದು ವರ್ಗದ ನೆಟ್ಟಿಗರು ಇಂಟರ್ನ್ ಬೆಂಬಲಕ್ಕೆ ನಿಂತಿದ್ದಾರೆ. ಕಚೇರಿ ಸಮಯದ ಹೊರತಾಗಿ ಉದ್ಯೋಗಿಗಳಿಗೆ ತಮ್ಮದೇ ಆದ ವೈಯಕ್ತಿಕ ಬದುಕಿರುತ್ತದೆ. ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸ್ಪಷ್ಟವಾದ ಗಡಿ ಇರುವುದು ತಪ್ಪಲ್ಲ. ಅನಿಯಮಿತ ಸಮಯದವರೆಗೆ ಕೆಲಸ ಮಾಡಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ ಎಂದು ಜೆನ್ ಜೀ ಪರವಾಗಿ ಬ್ಯಾಟ್ ಬೀಸಿದ್ದಾರೆ.

ವೈರಲ್ ಪೋಸ್ಟ್ ಬಗ್ಗೆ ವಕೀಲೆಯ ಸ್ಪಷ್ಟನೆ

ಚರ್ಚೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ವಕೀಲೆ ಮತ್ತೊಂದು ಪೋಸ್ಟ್ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. "ನಮ್ಮ ಕಚೇರಿಯಲ್ಲಿ ಕೆಲಸ ಮಾಡುವ ಯಾವುದೇ ಇಂಟರ್ನ್ ಉಚಿತವಾಗಿ ಕೆಲಸ ಮಾಡುತ್ತಿಲ್ಲ, ಅವರಿಗೆ ತಕ್ಕುದಾದ ಮತ್ತು ಸರಿಯಾಗಿ ಸಂಭಾವನೆ ನೀಡಲಾಗುತ್ತಿದೆ. ಉದ್ಯೋಗಿಗಳು ತಮ್ಮ ವೈಯಕ್ತಿಕ ಜೀವನವನ್ನ ಸಂಪೂರ್ಣವಾಗಿ ತ್ಯಾಗ ಮಾಡಬೇಕು ಎಂಬುದು ನನ್ನ ಉದ್ದೇಶವಲ್ಲ. ಆದರೆ, ಒಂದು ಜವಾಬ್ದಾರಿಯನ್ನ ಒಪ್ಪಿಕೊಂಡ ಮೇಲೆ, ಅದರ ಬಗ್ಗೆ ವೃತ್ತಿಪರತೆ ತೋರುವುದು ಅತಿ ಮುಖ್ಯ" ಎಂದು ಅವರು ಹೇಳಿದ್ದಾರೆ.

ಒಟ್ಟಾರೆಯಾಗಿ, ಕಾರ್ಪೊರೇಟ್ ಜಗತ್ತಿನಲ್ಲಿ ಹಳೆಯ ತಲೆಮಾರಿನ ವೃತ್ತಿಪರತೆ ಹಾಗೂ ಇಂದಿನ ಯುವಜನತೆಯ ವರ್ಕ್-ಲೈಫ್ ಬ್ಯಾಲೆನ್ಸ್ ನಡುವಿನ ಸಂಘರ್ಷಕ್ಕೆ ಈ ಘಟನೆ ಮತ್ತೊಂದು ಉತ್ತಮ ಉದಾಹರಣೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+