ರಮೇಶ್ ಜಾರಕಿಹೊಳಿ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ಭವನದೆದುರು ಪ್ರತಿಭಟನೆ
ಬೆಂಗಳೂರು, ಮಾರ್ಚ್ 28: ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಭವನದೆದುರು ಪ್ರತಿಭಟನೆ ನಡೆಸಿದರು.
ರಾಜ್ಯ ಬಿಜೆಪಿ ಸರ್ಕಾರ ಎಸ್ ಐಟಿ ಮೂಲಕ ಅತ್ಯಾಚಾರ ಪ್ರಕರಣದ ತನಿಖೆಯ ದಿಕ್ಕನ್ನು ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ರಮೇಶ್ ಜಾರಕಿಹೊಳಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ, ಕೂಡಲೇ ಬಂಧಿಸುವಂತೆ ಆಗ್ರಹಿಸಿದರು.
ಹಿಂದೆಲ್ಲ ಆರೋಪಿಗಳನ್ನ ಹಿಡಿಯಲು ಪೊಲೀಸರ ತಂಡ ರಚನೆಯಾಗುತ್ತಿತ್ತು ಆದರೆ ಅತ್ಯಾಚಾರ ಆರೋಪಿಯ ರಕ್ಷಣೆಗಾಗಿಯೇ SIT ಎನ್ನುವ ಪೊಲೀಸರ ತಂಡ ಸೃಷ್ಟಿಯಾಗಿದ್ದು ಈ ದೇಶದ ಇತಿಹಾಸದಲ್ಲಿ ಇದೇ ಮೊದಲೇನೋ, ಬಿಜೆಪಿ ಆಡಳಿತದಲ್ಲಿ ಅತ್ಯಾಚಾರಿಯೊಬ್ಬನನ್ನು ರಕ್ಷಣೆ ಮಾಡುವ ಕಳಂಕ ಕರ್ನಾಟಕಕ್ಕೆ ಅಂಟಿಕೊಂಡಿದೆ ಎಂದು ಆರೋಪಿಸಿದೆ.

ಅತ್ತ ಬೆಳಗಾವಿಯ ಗೋಕಾಕ್ ನಲ್ಲಿ ಡಿಕೆ ಶಿವಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ರಮೇಶ್ ಜಾರಕಿಹೊಳಿ ಪರ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಅಣಕು ಶವಯಾತ್ರೆ ನಡೆಸಿ, ಅದನ್ನು ದಹಿಸಿದ ಪ್ರತಿಭಟನಾಕಾರರು, ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ರೂಪಿಸಿರುವ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸಿ.ಡಿ. ಪ್ರಕರಣದಲ್ಲಿರುವ ಯುವತಿ ಪೋಷಕರು ಡಿ. ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಇಡೀ ಪ್ರಕರಣದಲ್ಲಿ ಷಡ್ಯಂತ್ರ ರೂಪಿಸಿದ ನಾಯಕ ಯಾರು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಹೀಗಾಗಿ ಶಿವಕುಮಾರ್ ನೈತಿಕ ಹೊಣೆ ಹೊತ್ತು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಡಿ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಅನ್ವಯ ಕೂಡಲೇ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿ ಯುವ ಕಾಂಗ್ರೆಸ್ ಇಂದೂ ಕೂಡ ಪ್ರತಿಭಟನೆ ಮುಂದುವರೆಸಿತು.












Click it and Unblock the Notifications