ಬಿಜೆಪಿ ಮಾಡಿಟ್ಟ ಅದ್ವಾನ ಸರಿಹೋಗಲು ಸಮಯ ಹಿಡಿಯುತ್ತೆ: ಡಿಕೆಶಿ ಹೇಳಿಕೆಗೆ ಕಾಂಗ್ರೆಸ್ ಸಮರ್ಥನೆ
"ಆ ಮೇಲಿರೋ ಭಗವಂತ ಇಳಿದು ಬಂದ್ರೂ ಇನ್ನು ಎರಡು ಮೂರು ವರ್ಷ ಬೆಂಗಳೂರಿನ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ" ಎಂದಿದ್ದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಎಲ್ಲೆಡೆ ಟೀಕೆ ವ್ಯಕ್ತವಾಗುತ್ತಿದೆ. ಬ್ರ್ಯಾಂಡ್ ಬೆಂಗಳೂರು ಮಾಡ್ತೀವಿ ಎಂದು ಬೊಬ್ಬೆ ಹೊಡೆದವರು, ಈಗ ಭಗವಂತ ಬಂದ್ರೂ ಏನೂ ಮಾಡೋಕಾಗಲ್ಲ ಅಂತಿದ್ದಾರೆ ಎಂದು ಬಿಜೆಪಿ ನಾಯಕರು ಕೂಡ ಡಿಕೆಶಿಗೆ ಕೌಂಟರ್ ಕೊಡುತ್ತಿದ್ದಾರೆ. ಕಾಂಗ್ರೆಸ್ ಕೂಡ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ.
ಅಸಮರ್ಥ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕೆಲಸಗಳನ್ನು ಮಾಡುವುದಿಲ್ಲ ಎಂದು ಒಪ್ಪಿಕೊಂಡ ಡಿಸಿಎಂ ಎಂದು ಬಿಜೆಪಿ ಹಂಚಿಕೊಂಡಿದ್ದ ವಿಡಿಯೋಗೆ ಎಕ್ಸ್‌ನಲ್ಲೇ ತಿರುಗೇಟು ನೀಡಿರುವ ಕಾಂಗ್ರೆಸ್, ಡಿಯರ್ ಬಿಜೆಪಿ ಪಂಚ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದು, ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಗುರಿಯಾಗಿಸಿ ಅಪಪ್ರಚಾರ ನಡೆಸುವುದು, ಸುಳ್ಳು, ಆರೋಪಗಳನ್ನು ಮಾಡುವುದೇ ನಿಮ್ಮ ಪೂರ್ಣಾವಧಿ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದೆ.

ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಡಿ ಬೆಂಗಳೂರು ನಗರವನ್ನು ವಿಶ್ವದರ್ಜೆಯ ನಗರವಾಗಿಸುವ, ಬೆಂಗಳೂರಿಗೆ ಹೊಸ ರೂಪನೀಡುವ ದೂರದೃಷ್ಟಿಯ ಹಲವು ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುತ್ತಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ನಿಮಗಿಲ್ಲ ಎಂದು ಗುಡುಗಿದೆ. ಅಧಿಕಾರದುದ್ದಕ್ಕೂ ಭ್ರಷ್ಟಾಚಾರ, ಕಮಿಷನ್ ಮಾಫಿಯಾ, ವರ್ಗಾವಣೆ ದಂಧೆ ನಡೆಸಿದ ನಿಮ್ಮ ಕರ್ಮಕಾಂಡಗಳಿಗೆ ರಾಜ್ಯದ ಜನ ತಕ್ಕ ಶಾಸ್ತಿ ಮಾಡಿ, ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಎಷ್ಟಾದರೂ ಕೋವಿಡ್ ಹೆಣದ ಮೇಲೆ ಹಣ ಲೂಟಿ ಮಾಡಿದ ರಣಹದ್ದುಗಳ ಪರಂಪರೆಯಲ್ಲವೇ ನಿಮ್ಮದು? ಎಂದು ವ್ಯಂಗ್ಯವಾಡಿದೆ.
ನಿಮ್ಮ ಸರ್ಕಾರವಿದ್ದಾಗ ಒಂದೂ ಜನಪರ ಯೋಜನೆ ತರದ, ಅಭಿವೃದ್ಧಿ ಕೆಲಸಗಳನ್ನು ಮಾಡದ, ಜನರಿಂದ ತಿರಸ್ಕೃತರಾದ ನಿಮಗೆ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಕಾರ್ಯಗಳ ಬಗ್ಗೆ ಅಸೂಯೆ ಅತ್ಯಂತ ಸಹಜ. ಟ್ರಾಫಿಕ್ ದಟ್ಟಣೆ ನಿವಾರಣೆ ಸೇರಿದಂತೆ ಬ್ರ್ಯಾಂಡ್ ಬೆಂಗಳೂರು ಸಾಕಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳು ಎಂದು ಪಟ್ಟಿ ಕೂಡ ಮಾಡಿದೆ.
35,000 ಕೋಟಿ ವೆಚ್ಚದಲ್ಲಿ ಸುರಂಗ ರಸ್ತೆಗಳು, ಸದ್ಯದಲ್ಲೇ ಉತ್ತರ-ದಕ್ಷಿಣ ಕಾರಿಡಾರ್ ಟೆಂಡರ್, 15,000 ಕೋಟಿ ವೆಚ್ಚದಲ್ಲಿ 150 ಕಿಮೀ ಫ್ಲೈಓವರ್‌ಗಳು, 5000 ಕೋಟಿ ವೆಚ್ಚದ ಡಬಲ್ ಡೆಕ್ಕರ್, 5000 ಕೋಟಿ ವೆಚ್ಚದ, 300 ಕಿಮೀ ಬಫರ್ ರಸ್ತೆಗಳು, 500 ಕೋಟಿಗಳ ಸ್ಕೈ ಡೆಕ್ ನಿರ್ಮಾಣ, 500 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಲೈಟಿಂಗ್‌ಗಳು, 10,000 ಕೋಟಿ ವೆಚ್ಚದ ಕಾವೇರಿ 6ನೇ ಹಂತದ ಯೋಜನೆ, 5,000 ಕೋಟಿಗಳ ವೆಚ್ಚದಲ್ಲಿ ಕೆರೆಗಳ ನಡುವೆ ಇಂಟರ್ ಲಿಂಕಿಂಗ್, 26,000 ಕೋಟಿ ವೆಚ್ಚದಲ್ಲಿ ಪೆರಿಫೆರಲ್ ರಿಂಗ್ ರೋಡ್, 10,000 ಕೋಟಿ ವೆಚ್ಚದಲ್ಲಿ 1,000 ಕಿಮೀ ಕಾಂಕ್ರೀಟ್ ರಸ್ತೆಗಳು, 145 ಕಿಮೀ ಕಾಂಕ್ರೀಟ್ ರಸ್ತೆ, 400 ಕಿಮೀ ರಿಸರ್ಫೇಸಿಂಗ್ ರಸ್ತೆ, ಬಿಬಿಎಂಪಿ ದಾಖಲೆಗಳ ಡಿಜಿಟಲೀಕರಣ, ರಸ್ತೆ ಅಭಿವೃದ್ಧಿಯ ಮಾರ್ಗದರ್ಶಿ 'ನಮ್ಮ ರಸ್ತೆ' ಕೈಪಿಡಿ ಎಂದು ಪಟ್ಟಿ ಹಂಚಿಕೊಂಡಿದೆ.
ಭವಿಷ್ಯದಲ್ಲಿ ಬೆಂಗಳೂರಿಗೆ ಅತ್ಯುತ್ತಮ ಮೂಲಸೌಕರ್ಯ ಕಲ್ಪಿಸುವ, ಅಂತರರಾಷ್ಟ್ರೀಯ ಮನ್ನಣೆ ದೊರಕಿಸಿಕೊಡುವ, ಬೆಂಗಳೂರಿನ ಗತ ವೈಭವವನ್ನು ಮರಳಿಸುವ ನಮ್ಮ ಸಂಕಲ್ಪ ಅಚಲ. ಕೈಲಾಗದಿದ್ದವನು ಮೈಪರಚಿಕೊಳ್ಳುವ ಸ್ಥಿತಿಯಲ್ಲಿರುವ ನಿಮ್ಮ ಅಸೂಯೆಗೆ ಮದ್ದಿಲ್ಲ ಎಂದು ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ಕಾಂಗ್ರೆಸ್ ನೀಡಿದೆ.












Click it and Unblock the Notifications