ಜೀವಕ್ಕೆ ಕುತ್ತು ತಂದ ಟೆಸ್ಟ್ ಡ್ರೈವ್, ಉದ್ಯಮಿ ಸಾವು, ನಾಲ್ವರಿಗೆ ಗಾಯ
ಬೆಂಗಳೂರು, ಮಾರ್ಚ್ 27: ಟೆಸ್ಟ್ ಡ್ರೈವ್ ಮಾಡಲು ಹೋಗಿ ಉದ್ಯಮಿಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ನಡೆದಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಆಯತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು ಕಾರು 20 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ಸ್ಥಳದಲ್ಲೇ ಉದ್ಯಮಿ ಮೃತಪಟ್ಟಿದ್ದು, ಅವರ ಪತ್ನಿ, ಪುತ್ರ, ಸ್ನೇಹಿತ ಹಾಗೂ ಶೋ ರೂಂ ಸಿಬ್ಬಂದಿ ಗಾಯಗೊಂಡಿದ್ದಾರೆ.
ಗಿರಿನಗರ ನಿವಾಸಿ ಇಂಟೀರಿಯರ್ ಡಿಸೈನಿಂಗ್ ಉದ್ಯಮಿ ಸಾಗರ್ (31) ಮೃತಪಟ್ಟ ಉದ್ಯಮಿ. ಸಂಧ್ಯಾ (28), ಸಮರ್ಥ (6), ಸ್ನೇಹಿತ ಗೌತಮ್30) ಹಾಗೂ ಶೋ ರೂಮ್ ನೌಕರ ಶಿವಕುಮಾರ್ ಗಾಯಗೊಂಡವರು.

ನೈಸ್ ರಸ್ತೆಯ ಹೊಸಕೆರೆಹಳ್ಳಿ ಸುಂಕ ಸಂಗ್ರಹ ಕೇಂದ್ರದ ಬಳಿ ಪಿಇಎಸ್ ಕಾಲೇಜು ಸಮೀಪ ಮಂಗಳವಾರ ಮಧ್ಯಾಹ್ನ 3.15ರಲ್ಲಿ ಅಪಘಾತ ಸಂಭವಿಸಿದೆ.
ಸಾಗರ್ ಅವರ ಉದ್ಯಮದಲ್ಲಿ ಗೌತಮ್ ಪಾಲುದಾರಿಕೆ ಹೊಂದಿದ್ದರು. ರೇಂಜ್ ರೋವರ್ ಕಾರು ಖರೀದಿಸಲು ಹೊಸೂರು ಮುಖ್ಯರಸ್ತೆ ರೂಪೇನ ಅಗ್ರಹಾರದಲ್ಲಿರುವ ಮಾರ್ಕ್ ಲ್ಯಾಂಡ್ ಶೋ ರೂಮ್ ಗೆ ಪತ್ನಿ, ಪುತ್ರ ಮತ್ತು ಸ್ನೇಹಿತನ ಜತೆ ತೆರಳಿದ್ದರು.
ಕಾರಿನ ಟೆಸ್ಟ್ ಡ್ರೈವ್ ಗಾಗಿ ಶೋ ರೂಮ್ ನೌಕರನ ಜತೆ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ನೈಸ್ ರಸ್ತೆಗೆ ಬಂದಿದ್ದರು. ಸ್ವಲ್ಪ ದೂರದವರೆಗೆ ಸಾಗರ್ ಕಾರು ಚಲಾಯಿಸಿದ್ದರು. ನಂತರ ಸ್ನೇಹಿತ ಗೌತಮ್ ಪಡೆದು ಕಾರು ಚಲಾಯಿಸಿದ್ದಾರೆ.
ಹಿಂಬದಿ ಸೀಟಿನಲ್ಲಿ ಸಾಗರ್, ಅವರ ಪತ್ನಿ ಮತ್ತು ಪುತ್ರ ಕುಳಿತಿದ್ದರು. ಚಾಲಕನ ಪಕ್ಕದ ಸೀಟಿನಲ್ಲಿ ಶಿವಕುಮಾರ್ ಕುಳಿತಿದ್ದರು. ಹೊಸಕೆರೆಹಳ್ಳಿ ಟೋಲ್ ಸಮೀಪ ಗೌತಮ್ ವೇಗವಾಗಿ ಕಾರು ಚಾಲನೆ ಮಾಡಿದ್ದು, ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.
ನಂತರ ಉರುಳಿ 20 ಅಡಿ ಅಳದ ಕೆಳಗಿದ್ದ ಮೈದಾನಕ್ಕೆ ಬಿದ್ದಿದೆ. ಸ್ಥಳೀಯರು ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದ ವೇಳೆ ಸಾಗರ್ ಮೃತಪಟ್ಟಿದ್ದಾರೆ. ಇತರ ಗಾಯಾಳುಗಳನ್ನು ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.











Click it and Unblock the Notifications