ಕೆನಡಾದ ಐಷಾರಾಮಿ ಜೀವನ ಬಿಟ್ಟು ಪೋಷಕರಿಗಾಗಿ ಬೆಂಗಳೂರಿಗೆ ಮರಳಿದ ಟೆಕ್ಕಿ: 6 ವರ್ಷಗಳ ನಂತರ ತಮ್ಮ ನಿರ್ಧಾರದ ಬಗ್ಗೆ ಹೇಳಿದ್ದೇನು?
ಒಳ್ಳೆಯ ಭವಿಷ್ಯ, ಕೈತುಂಬಾ ಸಂಬಳ ಮತ್ತು ಐಷಾರಾಮಿ ಜೀವನಬೇಕು ಎಂದು ವಿದೇಶಕ್ಕೆ ಹೋಗುವವರೇ ಹೆಚ್ಚಿರುವ ಈ ಕಾಲದಲ್ಲಿ, ವಯಸ್ಸಾದ ತಮ್ಮ ಪೋಷಕರನ್ನು ನೋಡಿಕೊಳ್ಳುವುದಕ್ಕಾಗಿ ವಿದೇಶದ ಕೆಲಸವನ್ನು ಬಿಟ್ಟು ತವರಿಗೆ ಮರಳುವುದು ಅಷ್ಟು ಸುಲಭದ ಮಾತಲ್ಲ. ಆದರೆ, ಕಾರ್ಸೆಂಟ್ರಿಕ್ ಎಂಬ ಐಟಿ ಕಂಪನಿಯಲ್ಲಿ ಎಂಜಿನಿಯರಿಂಗ್ ವಿಭಾಗದ ನಿರ್ದೇಶಕರಾಗಿರುವ ರಮೇಶ್ ಎನ್.ಎನ್. ಎನ್ನುವ ಟೆಕ್ ಎಕ್ಸಿಕ್ಯೂಟಿವ್ ತಮ್ಮ ವಯಸ್ಸಾದ ಪೋಷಕರಿಗಾಗಿ ಕೆನಡಾದಿಂದ ಬೆಂಗಳೂರಿಗೆ ಮರಳಿದ್ದಾರೆ.
ಸುಮಾರು 6 ವರ್ಷಗಳ ಹಿಂದೆ ಅವರು ತೆಗೆದುಕೊಂಡ ಈ ನಿರ್ಧಾರ ಕುರಿತು ಹಾಗೂ ತವರಿಗೆ ಮರಳಿದ ನಂತರದ ಅವರ ಅನುಭವವನ್ನ ಇತ್ತೀಚೆಗೆ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೆನಡಾದಿಂದ ಬೆಂಗಳೂರಿಗೆ: ಈ ನಿರ್ಧಾರದ ಹಿಂದಿನ ಕಥೆ
ವಿದೇಶದಲ್ಲಿ ನೆಲೆಸಿರುವ ಬಹುತೇಕ ಭಾರತೀಯರನ್ನ ಕಾಡುವುದೆನೆಂದರೆ, ವಯಸ್ಸಾಗುತ್ತಿರುವ ಪೋಷಕರನ್ನ ಯಾರು ನೋಡಿಕೊಳ್ಳುತ್ತಾರೆ ಎನ್ನುವುದು. ರಮೇಶ್ ಅವರಿಗೂ ಇದೇ ಪ್ರಶ್ನೆ ಎದುರಾಗಿತ್ತು. "ಸುಮಾರು ಆರು ವರ್ಷಗಳ ಹಿಂದೆ ನಾನು ಕೆನಡಾದಿಂದ ಮತ್ತೆ ಭಾರತಕ್ಕೆ ಬರಬೇಕು ಎನ್ನುವ ನಿರ್ಧಾರ ಮಾಡಿದೆ. ಇದು ಖಂಡಿತ ಅಷ್ಟು ಸುಲಭದ ನಿರ್ಧಾರವಾಗಿರಲಿಲ್ಲ. ಆದ್ರೆ ನನಗೆ ನನ್ನ ಕಣ್ಣೆದುರು ಎರಡು ಆಯ್ಕೆಗಳಿದ್ದವು. ಒಂದು ಕಡೆ ಐಷಾರಾಮಿ ಜೀವನವಿದ್ದರೆ ಮತ್ತೊಂದು ಕಡೆ ಬಾಂಧವ್ಯವಿತ್ತು.
ಆದರೆ ಆ ಸಮಯದಲ್ಲಿ ನನಗೆ ಜಾಗತಿಕ ಮಟ್ಟದ ವೃತ್ತಿ ಅವಕಾಶಗಳಿಗಿಂತ, ನನ್ನ ಜವಾಬ್ದಾರಿ ಮತ್ತು ಪೋಷಕರೇ ನನಗೆ ಮುಖ್ಯವೆನಿಸಿತು. ಬಹಳ ದಿನಗಳ ಕಾಲ ವೃತ್ತಿ ಮತ್ತು ಕುಟುಂಬ ಎರಡನ್ನೂ ಸರಿದೂಗಿಸಲು ಪ್ರಯತ್ನಿಸಿದೆ. ಆದರೆ, ಕುಟುಂಬದ ಜೊತೆ ಕಳೆಯುವ ಸಮಯವನ್ನ ಕಳೆಯಬೇಕು ಎನ್ನುವುದನ್ನಾ ಮುಂದೂಡಲು ಸಾಧ್ಯವಿಲ್ಲ ಎಂಬುದು ಅರಿವಾಯಿತು" ಎಂದು ರಮೇಶ್ ಬರೆದುಕೊಂಡಿದ್ದಾರೆ.
ವಿಡಿಯೋ ಕಾಲ್ ಬದಲು ನೇರ ಉಪಸ್ಥಿತಿ ಮುಖ್ಯ
ವಿದೇಶದಲ್ಲಿದ್ದಾಗ ಪೋಷಕರ ಜೊತೆ ಕೇವಲ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದ ರಮೇಶ್ ಅವರಿಗೆ, ಈಗ ಪ್ರತಿದಿನ ಅವರೊಟ್ಟಿಗೆ ಕಾಲ ಕಳೆಯುತ್ತಿರುವುದು ತುಂಬ ತೃಪ್ತಿಯಿದೆ. "ಪ್ರತಿದಿನ ವಿಡಿಯೋ ಕಾಲ್‌ನಲ್ಲಿ ಮುಖ ನೋಡುವುದಕ್ಕೂ, ಅವರು ಕಾಯಿಲೆಯಿಂದಿದ್ದಾಗ ಅಥವಾ ಅವರಿಗೆ ಅಗತ್ಯವಿದ್ದಾಗ ಅವರ ಜೊತೆಯಲ್ಲೇ ಅವರ ಜೊತೆ ಇರುವುದಕ್ಕೂ ಬಹಳ ವ್ಯತ್ಯಾಸವಿದೆ. ಭಾರತಕ್ಕೆ ಮರಳಿದ ನಂತರ ನನ್ನ ದೃಷ್ಟಿಕೋನವೇ ಬದಲಾಗಿದೆ. ಈ ಅನುಭವವು ನಾನು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಖುಷಿ ಹಾಗೂ ನೆಮ್ಮದಿಯನ್ನು ನೀಡಿದೆ. ಇದು ಪರಿಪೂರ್ಣವಾಗಿರದಿದ್ದರೂ, ಅತೀವ ತೃಪ್ತಿ ತಂದಿದೆ" ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಕೆನಡಾದಿಂದ ಭಾರತಕ್ಕೆ ಮರಳಿದರೆ ವೃತ್ತಿಜೀವನದಲ್ಲಿ ಹಿನ್ನಡೆಯಾಗಬಹುದು ಎಂಬ ಆತಂಕವನ್ನ ಬೆಂಗಳೂರಿನ ಐಟಿ ವಲಯ ಸುಳ್ಳು ಮಾಡಿದೆ. "ವೃತ್ತಿಪರ ದೃಷ್ಟಿಯಿಂದ ನೋಡಿದರೂ ಬೆಂಗಳೂರು ನನಗೆ ಹೊಸ ಚೈತನ್ಯ ನೀಡಿದೆ. ಇಲ್ಲಿನ ವೇಗ, ಪ್ರತಿಭೆಗಳು ಮತ್ತು ಐಟಿ ವಾತಾವರಣವು ಹೊಸ ಅವಕಾಶಗಳನ್ನು ತೆರೆದಿಟ್ಟಿದೆ. ನಾನಿಲ್ಲಿ ವೃತ್ತಿಜೀವನದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದೇನೆಯೇ ಹೊರತು, ಹಿಂದೆ ಸರಿದಿಲ್ಲ ಎನಿಸುತ್ತಿದೆ" ಎಂದು ರಮೇಶ್ ಹೇಳಿದ್ದಾರೆ. ಆದರೆ ಇಲ್ಲಿನ ಜೀವನಶೈಲಿಗೆ ಹೊಂದಿಕೊಳ್ಳುವಾಗ ಕೆಲವು ಸವಾಲುಗಳನ್ನು ಎದುರಿಸಬೇಕಾಯಿತಾದರೂ, ಅದರಿಂದ ಸಿಕ್ಕ ಲಾಭಗಳ ಮುಂದೆ ಆ ಸವಾಲುಗಳು ತೀರಾ ಚಿಕ್ಕವು ಎನ್ನುತ್ತಾರೆ ರಮೇಶ್.
"ಯಶಸ್ಸು ಎಂದರೆ ಕೇವಲ ನೀವು ಪ್ರಪಂಚದ ಯಾವ ಮೂಲೆಯಲ್ಲಿದ್ದೀರಿ ಎಂಬುದಲ್ಲ, ನಿಮ್ಮ ಅಗತ್ಯ ಎಲ್ಲಿದೆಯೋ ಅಲ್ಲಿರುವುದು ಹಾಗೂ ನಿಮ್ಮವರೊಂದಿಗೆ ಜೊತೆಯಲ್ಲಿರುವುದು" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸೋಷಿಯಲ್ ಮೀಡಿಯಾ ಪ್ರತಿಕ್ರಿಯೆ
ರಮೇಶ್ ಅವರ ಈ ಲಿಂಕ್ಡ್‌ಇನ್ ಪೋಸ್ಟ್ ವೈರಲ್ ಆಗಿದ್ದು, ಅನೇಕರು ತಮ್ಮ ಅನುಭವಗಳನ್ನ ಹಂಚಿಕೊಂಡಿದ್ದಾರೆ. "ನಾನು ಕೂಡ 2015ರಲ್ಲಿ ಅಮೆರಿಕಾದಿಂದ ಭಾರತಕ್ಕೆ ಮರಳಿದೆ. ಮೊದಲ ವರ್ಷ ಬಹಳ ಕಷ್ಟವಾಯಿತು, ಎಲ್ಲವನ್ನೂ ಅಲ್ಲಿಗೆ ಹೋಲಿಕೆ ಮಾಡುತ್ತಿದ್ದೆ. ಆದರೆ, ಈಗ ನೆಮ್ಮದಿಯಾಗಿದ್ದೇನೆ. ಪೋಷಕರ ಜೊತೆ ಕಳೆಯುವ ಸಮಯಕ್ಕೆ ಬೆಲೆ ಕಟ್ಟಲಾಗದು" ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. "ಯಶಸ್ಸು ಎನ್ನುವುದು ಕೇವಲ ನಾವು ಇರುವ ಸ್ಥಳದ ಮೇಲೆ ನಿರ್ಧಾರವಾಗುವುದಿಲ್ಲ, ನಾವು ಕಟ್ಟಿಕೊಳ್ಳುವ ಸಂಬಂಧಗಳ ಮೇಲೆಯೂ ಅವಲಂಬಿಸಿರುತ್ತದೆ" ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Click it and Unblock the Notifications
