Bengaluru Second Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಎದುರಾಯ್ತು 3 ಸವಾಲು!
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಾಲು ಸಾಲು ಸವಾಲುಗಳು ಎದುರಾಗಿವೆ. ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಇದೀಗ ಎರಡು ಜಾಗಗಳು ಶಾರ್ಟ್ ಲಿಸ್ಟ್ ಆಗಿವೆ. ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೆಚ್ಚು ನಿರೀಕ್ಷೆ ಇರಿಸಿಕೊಂಡಿದ್ದ ಬಿಡದಿ ಸಹ ಲಿಸ್ಟ್‌ನಿಂದ ಔಟ್ ಆಗುತ್ತಿದೆ. ಇನ್ನು ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕನಕಪುರ ರಸ್ತೆಯಲ್ಲಿರುವ ಎರಡು ಜಾಗಗಳನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಸದಸ್ಯರು ಮಂಗಳವಾರ ಪರಿಶೀಲನೆ ನಡೆಸಿದ್ದಾರೆ. ನಂತರ ತಂಡದ ಸದಸ್ಯರು ಸಚಿವ ಎಂ.ಬಿ ಪಾಟೀಲ್ ಅವರೊಂದಿಗೆ ಚರ್ಚೆ ಮಾಡಿದ್ದಾರೆ. ಮುಂದಿನ ಹಂತಗಳು ಸವಾಲಿನಿಂದ ಕೂಡಿವೆ.
ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಮುಖವಾಗಿ ಮೊದಲ ಹಂತದಲ್ಲಿ ಮೂರು ಸವಾಲುಗಳು ಎದುರಾಗಿವೆ. ಆ ಮೂರು ಪ್ರಮುಖ ಸವಾಲುಗಳು ಏನು ಎನ್ನುವ ವಿವರ ಇಲ್ಲಿದೆ. ಇನ್ನು ಯಾವುದೇ ಕಾಮಗಾರಿ ಅಥವಾ ಯೋಜನೆಗಳು ಅನುಷ್ಠಾನವಾಗುವ ಸಂದರ್ಭದಲ್ಲೂ ಸವಾಲುಗಳು ಇರುತ್ತವೆ. ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಯು ಬೃಹತ್ ಯೋಜನೆಗಳಲ್ಲಿ ಒಂದಾಗಿದೆ. ಹೀಗಾಗಿ ಸವಾಲುಗಳು ಸಹ ದೊಡ್ಡದಾಗಿದೆ.

4,000 ಸಾವಿರದಿಂದ 5,000 ಸಾವಿರ ಎಕರೆ ಬೇಕು!
ಇನ್ನು ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬರೋಬ್ಬರಿ 4,000 ಸಾವಿರದಿಂದ 5,000 ಸಾವಿರ ಎಕರೆ ಜಾಗದ ಅವಶ್ಯಕತೆ ಇದೆ. ಈ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಬೇಕಿದೆ. ವಿಮಾನಗಳ ನಿಲುಗಡೆ, ರನ್ ವೇ ಹಾಗೂ ಪ್ರಯಾಣಿಕರಿಗೆ ಸೌಕರ್ಯ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಬೇಕಿದೆ. ಅಲ್ಲದೇ ವಿಮಾನ ನಿಲ್ದಾಣದ ರನ್‌ವೇಯ ಸುತ್ತಮುತ್ತ ನಿರ್ದಿಷ್ಟ ಜಾಗದಲ್ಲಿ ಖಾಲಿ ಇರಬೇಕಾಗುತ್ತದೆ. ಇದೀಗ ಬಿಡದಿಯಲ್ಲಿ ಅಷ್ಟೊಂದು ಜಾಗವಿಲ್ಲ ಎಂದು ಹೇಳಲಾಗಿದೆ.
ಕನಕಪುರದ ಎರಡು ಜಾಗಗಳನ್ನು ಗುರುತು ಮಾಡಲಾಗಿದೆ. ಈ ಭಾಗದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು. ಕೃಷಿ ಭೂಮಿಯನ್ನೇ ಅವಲಂಬಿಸಿದ್ದಾರೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಪಾರ ಪ್ರಮಾಣದ ಭೂಮಿಯ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಇಲ್ಲಿನ ರೈತರು ಯಾವ ರೀತಿ ರಿಯಾಕ್ಟ್ ಮಾಡಲಿದ್ದಾರೆ ಎನ್ನುವ ಪ್ರಶ್ನೆ ಎದುರಾಗಿದೆ. ಅಲ್ಲದೇ ರೈತರು ಕೃಷಿ ಭೂಮಿಯನ್ನು ಬಿಟ್ಟುಕೊಡುವುದಿಲ್ಲ. ಇದರಿಂದ ಸಮಸ್ಯೆ ಆಗಲಿದ್ದು ಅದನ್ನು ನಿಭಾಯಿಸುವುದೇ ಇದೀಗ ರಾಜ್ಯ ಸರ್ಕಾರ ಮುಂದೆ ಇರುವ ಬಹುದೊಡ್ಡ ಸವಾಲಾಗಿದೆ.
ಹೂಡಿಕೆದಾರರನ್ನು ಹುಡುಕಬೇಕು: ಇನ್ನು ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಕೋಟ್ಯಾಂತರ ರೂಪಾಯಿ ಖರ್ಚಾಗಲಿದೆ. ಇಷ್ಟೊಂದು ದೊಡ್ಡ ಮಟ್ಟದ ಹಣವನ್ನು ಸರ್ಕಾರ ಹೂಡಿಕೆ ಮಾಡಲ್ಲ. ಬದಲಾಗಿ ಸರ್ಕಾರವು ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾದರಿಯಲ್ಲೇ ಹೂಡಿಕೆದಾರರನ್ನು ಹುಡುಕಲಿದೆ. ಬೃಹತ್ ಮಟ್ಟದ ಹೂಡಿಕೆದಾರರನ್ನು ಹುಡುಕುವುದು ಸವಾಲಾಗಿದೆ. ಆದರೆ, ಬೆಂಗಳೂರಿನ ಬ್ರ್ಯಾಂಡ್ ಹಾಗೂ ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭಾರೀ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಇದು ಸವಾಲಿನ ಕೆಲಸವೇನು ಅಲ್ಲ ಅಂತಲೂ ಹೇಳಲಾಗುತ್ತಿದೆ.
ಕನಿಷ್ಠ ಮೂಲಸೌಕರ್ಯ ಅಭಿವೃದ್ಧಿ: ಬೆಂಗಳೂರು ಈಗಾಗಲೇ ಅಭಿವೃದ್ಧಿಯಾಗಿದೆ. ಆದರೆ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ (ಹೊರ ವಲಯಗಳಲ್ಲಿ) ಇನ್ನೂ ಮೂಲಸೌಕರ್ಯ ಕೊರತೆ ಇದೆ. ಎರಡನೇ ವಿಮಾನ ನಿಲ್ದಾಣಕ್ಕೆ ಜಾಗ ಫೈನಲ್ ಮಾಡುವ ಮೊದಲು ಅಥವಾ ಮಾಡಿದ ಮೇಲೆ ಸರ್ಕಾರ ಆದ್ಯತೆಯ ಮೇಲೆ ರಸ್ತೆ ಸೇರಿದಂತೆ ಕನಿಷ್ಠ ಮೌಲಸೌಕರ್ಯಗಳನ್ನು ಅಭಿವೃದ್ಧಿ ಮಾಡಬೇಕಿದೆ. ಆಗಷ್ಟೇ ಸರ್ಕಾರಕ್ಕೆ ಹೂಡಿಕೆದಾರರನ್ನು ಹುಡುಕುವುದು ಸುಲಭವಾಗಲಿದೆ.












Click it and Unblock the Notifications