ಬೆಂಗಳೂರಿನ ಗುತ್ತಿಗೆದಾರರಿಗೆ ಸರ್ಕಾರದಿಂದ ಗುಡ್‌ನ್ಯೂಸ್!
ಬೆಂಗಳೂರಿನ ಗುತ್ತಿಗೆದಾರರಿಗೆ ಗುಡ್‌ನ್ಯೂಸ್ ಕೊಡುವುದಕ್ಕೆ ಸರ್ಕಾರ ಹಾಗೂ ಬಿಬಿಎಂಪಿಯು ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಗುತ್ತಿಗೆದಾರರಿಗೆ ಸರಿಯಾಗಿ ಹಣ ಬಿಡುಗಡೆ ಮಾಡುತ್ತಿಲ್ಲ ಹಾಗೂ ಕಾಮಗಾರಿಗಳಿಗೆ ನಿರ್ದಿಷ್ಟ ದರ ಮೊತ್ತ ನಿಗದಿಯಾಗಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹೊಸ ದರಪಟ್ಟಿಯನ್ನು ನಿಗದಿ ಮಾಡಲು ಮುಂದಾಗಿದೆ.
ಹೌದು ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಬೆಲೆ ಏರಿಕೆಯ ಸಮರ ನಿರಂತರವಾಗಿ ಮುಂದುವರಿದಿದೆ. ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹ ವಿವಿಧ ಟ್ಯಾಕ್ಸ್‌ಗಳನ್ನು ಬೆಂಗಳೂರಿಗರ ಮೇಲೆ ಹಾಕುತ್ತಿದೆ. ಇದರ ನಡುವೆಯೇ ಬೆಂಗಳೂರು ನಗರಕ್ಕೆ ನಿರ್ದಿಷ್ಟ ದರಗಳ ಪಟ್ಟಿಯನ್ನು ರೂಪಿಸಲು ತಜ್ಞರ ಸಮಿತಿಯನ್ನು ರಚನೆ ಮಾಡಿದೆ. ಇನ್ನು ಈಚೆಗೆ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರದ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಹಲವು ಪ್ರಮುಖ ವಿಷಯಗಳನ್ನು ಚರ್ಚೆ ಮಾಡಲಾಗಿತ್ತು. ಇದರಿಂದ ಕಾಮಗಾರಿಗಳ ಮೊತ್ತ ಹೆಚ್ಚಳವಾಗುವ ಸಾಧ್ಯತೆ ಇದೆ. ಪರೋಕ್ಷವಾಗಿ ಇದು ಜನರ ಮೇಲೆ ಬೀಳುವ ಸಾಧ್ಯತೆಯೂ ಇದೆ.

ಬೃಹತ್ ಮೂಲಸೌಕರ್ಯ ಯೋಜನೆಗಳೊಂದಿಗೆ ಬೆಂಗಳೂರು ನಗರವು ಪರಿವರ್ತನೆಗೆ ಸಾಕ್ಷಿಯಾಗಲಿದೆ. ಯೋಜನೆಗಳಿಗೆ ನಿಖರವಾದ ಅಂದಾಜುಗಳು, ಆಧುನಿಕ ತಂತ್ರಜ್ಞಾನಗಳು, ನವೀನ ವಿನ್ಯಾಸಗಳು, ವಿಶೇಷ ಕಟ್ಟಡ ರಚನೆ ಯೋಜನೆಗಳು ಮತ್ತು ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿ ಮತ್ತು ಇದರ ವಿಧಾನಗಳನ್ನು ಬಳಸಿಕೊಂಡು ಸಾರ್ವಜನಿಕರ ಜೀವನದ ಗುಣಮಟ್ಟವನ್ನು ಹೆಚ್ಚಿಸಬೇಕಾಗಿದೆ ಎಂದು ಸಭೆಯಲ್ಲಿ ಚರ್ಚೆ ಮಾಡಲಾಗಿತ್ತು.
ಅಲ್ಲದೇ ಅನುಷ್ಠಾನಗೊಳಿಸುವ ಸಂಸ್ಥೆಗಳು ಗುತ್ತಿಗೆದಾರರೊಂದಿಗೆ ಸಮಾಲೋಚನಾ ಸಭೆಗಳನ್ನು ನಡೆಸಲಾಗಿದೆ. ಈ ಬಗ್ಗೆ ಹಾಲಿ ಇರುವ ಸಾಮಾನ್ಯ ದರಪಟ್ಟಿಗಳು ಬೆಂಗಳೂರಿನ ಸಂಕೀರ್ಣತೆಗಳಿಗೆ ನಿರ್ದಿಷ್ಟವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿಗೆ ನೀಡಲಾದ ಪ್ರದೇಶದ ವಾಹನಗಳ ಸಂಖ್ಯೆಯನ್ನು ಪರಿಗಣಿಸಲಾಗಿರುವುದಿಲ್ಲ ಹಾಗೂ ಅನೇಕ ನಗರದ ವಿಶಿಷ್ಟ ಸವಾಲುಗಳನ್ನು ಗಣನೆಗೆ ತೆಗೆದುಕೊಳ್ಳಲು ವಿಫಲವಾಗಿದೆ. ಮೂಲಸೌಕರ್ಯ ಯೋಜನೆಗಳಿಗೆ ಅಸಮರ್ಪಕ ಬೆಲೆ ನಿಗದಿ, ಸಂಚಾರ ದಟ್ಟಣೆ, ಕಾರ್ಮಿಕ ವರ್ಗದ ವಸತಿಯ ತೊಂದರೆ, ಸೀಮಿತ ಅವಧಿಯ ಕೆಲಸ, ಭಾರೀ ಮತ್ತು ಸರಕು ವಾಹನಗಳ ನಿರ್ಬಂಧ ಪ್ರವೇಶ, ಭೂಮಿಯ ಲಭ್ಯತೆಯ ಕೊರತೆ ಮತ್ತು ಕಟ್ಟಡ ನಿರ್ಮಾಣ ಭಗ್ನಾವಶೇಷಗಳ ವಿಲೇವಾರಿಗೆ ಕೆಲಸವನ್ನು ನಿರ್ವಹಿಸಲು ತೊಂದರೆ ಆಗುತ್ತಿದೆ ಎಂದು ಹೇಳಲಾಗಿದೆ.
ಮೇಲಿನ ಸಮಸ್ಯೆಗಳನ್ನು ಪರಿಹರಿಸಲು ಬೆಂಗಳೂರು ನಗರಕ್ಕೆ ನಿರ್ದಿಷ್ಟ ಮತ್ತು ಹೆಚ್ಚು ವಾಸ್ತುವಂಶವುಳ್ಳ ದರಗಳ ಪಟ್ಟಿಯನ್ನು / ಶುಲ್ಕ ಅನುಷ್ಠಾನಗೊಳಿಸಲು ಸಂಸ್ಥೆಗಳು ಬಹಳ ಹಿಂದಿನಿಂದಲೂ ವಿನಂತಿಸುತ್ತಿವೆ. ಅನುಷ್ಠಾನ ಸಂಸ್ಥೆಗಳಿಂದ ಪಡೆದ ಒಳಹರಿವಿನ ಆಧಾರದ ಮೇಲೆ, ಸಾಮಾನ್ಯ ದರಗಳ ಪಟ್ಟಿಯ ಕುರಿತು ಸಲಹೆ / ಅಭಿಪ್ರಾಯ ಪಡೆಯಲು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಲಾಗಿತ್ತು.
ಬೆಂಗಳೂರು ಮಹಾನಗರದಲ್ಲಿ ತಾಂತ್ರಿಕ ಪ್ರಗತಿ, ಭೌಗೋಳಿಕ ಪ್ರದೇಶ, ಜನಸಂಖ್ಯೆ, ವಾಹನಗಳ ಸಂಖ್ಯೆ, ಸೀಮಿತ ಕೆಲಸದ ಅವಧಿ, ಕಾರ್ಮಿಕ ವರ್ಗದ ಲಭ್ಯತೆ ಸೇರಿದಂತೆ ಬೆಂಗಳೂರು ನಗರಕ್ಕೆ ಪ್ರತ್ಯೇಕ ದರಗಳ ಪಟ್ಟಿಯನ್ನು ತಯಾರಿಸಲು ನಿರ್ದಿಷ್ಟ ಅಭಿಪ್ರಾಯಗಳನ್ನು ಪಡೆಯಲು ಬಿಬಿಎಂಪಿಯ ನಿವೃತ್ತ ಮುಖ್ಯ ಎಂಜಿನಿಯರ್ ಅವರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಲು ಸರ್ಕಾರ ಸೂಚನೆ ನೀಡಿದೆ. ಇನ್ನೊಂದು ಪ್ರಮುಖ ಅಂಶವೆಂದರೆ ಇತ್ತೀಚೆಗೆ "ನಮ್ಮ ರಸ್ತೆ ಕೈಪಿಡಿಯನ್ನು" ಹೊರತರಲಾಗಿದೆ. ಅವರ ವಿನ್ಯಾಸವನ್ನು ಅಧ್ಯಯಾನ ಮಾಡಿ ನಗರಕ್ಕೆ ಪ್ರತ್ಯೇಕ ದರಪಟ್ಟಿ ತರಬೇಕಾಗಿರುವುದು ಅನಿವಾರ್ಯವಾಗಿರುತ್ತದೆ ಎಂದು ಬಿಬಿಎಂಪಿಯು ತನ್ನ ಆದೇಶದಲ್ಲಿ ಹೇಳಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಕಾಮಗಾರಿ ದರ ವ್ಯತ್ಯಾಸವಾಗುವ ಸಾಧ್ಯತೆ ಇದೆ.












Click it and Unblock the Notifications