ಕಠಿಣ ಯೋಗಾಸನ ಮಾಡಿದ 9 ತಿಂಗಳ ಗರ್ಭಿಣಿ: ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ

ಬೆಂಗಳೂರು ಮೂಲದ ಯೋಗ ಶಿಕ್ಷಕಿಯೊಬ್ಬರು 39 ವಾರಗಳ ಗರ್ಭಿಣಿಯಾಗಿದ್ದಾಗ ಕಠಿಣ ಯೋಗಾಸನಗಳನ್ನು ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಯೋಗಾಭ್ಯಾಸವು ಅವರ ದೈಹಿಕ ಶಕ್ತಿ ಮತ್ತು ಶಿಸ್ತನ್ನು ತೋರಿಸುತ್ತದೆಯೇ ಅಥವಾ ಅನಗತ್ಯ ಅಪಾಯವನ್ನು ತಂದೊಡ್ಡುತ್ತದೆಯೇ ಎಂಬ ಬಗ್ಗೆ ನೆಟ್ಟಿಗರು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ವೃತ್ತಿಯಲ್ಲಿ ಯೋಗ ಶಿಕ್ಷಕಿಯಾಗಿರುವ ಶಶಿ ಪ್ರಭಾ ದ್ವಿವೇದಿ ಅವರು ತಮ್ಮ ಗರ್ಭಾವಸ್ಥೆಯ ಕೊನೆಯ ಹಂತದಲ್ಲಿ ಸೀರೆಯುಟ್ಟು ಯೋಗಾಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಚಕ್ರಾಸನ ಸೇರಿದಂತೆ ಹಲವು ಕಠಿಣ ಆಸನಗಳನ್ನು ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ 21 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು ಪಡೆದು ವೈರಲ್ ಆಗಿದೆ.

Bengaluru Pregnant Woman

ವಿಡಿಯೋದ ಜೊತೆಗೆ ಬರೆದುಕೊಂಡಿರುವ ಶಶಿ ಪ್ರಭಾ ದ್ವಿವೇದಿ, ತಮ್ಮ ಈ ಯೋಗಾಭ್ಯಾಸವು ವರ್ಷಗಳ ಕಠಿಣ ತರಬೇತಿಯ ಫಲಿತಾಂಶವಾಗಿದೆ ಮತ್ತು ಇದನ್ನು ಇತರರಿಗೆ ಸಲಹೆಯಾಗಿ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

"39 ವಾರಗಳು. 9 ತಿಂಗಳು. ಮತ್ತು ಇದು ನನ್ನ ವಾಸ್ತವ. ಕೆಲವರು ಕೇವಲ ಭಂಗಿಗಳನ್ನು ನೋಡುತ್ತಾರೆ. ಆದರೆ, ನನ್ನ ದೇಹದ ಶಕ್ತಿ, ಅರಿವು, ತಾಳ್ಮೆ ಮತ್ತು ನಂಬಿಕೆಯನ್ನು ಬೆಳೆಸಿಕೊಳ್ಳಲು ನಾನು ಕಳೆದ ವರ್ಷಗಳನ್ನು ಅವರು ನೋಡುವುದಿಲ್ಲ" ಎಂದು ಅವರು ಹೇಳಿದ್ದಾರೆ.

"ಗರ್ಭಾವಸ್ಥೆಯು ಏನನ್ನಾದರೂ ಸಾಧಿಸಿ ತೋರಿಸುವ ಸಮಯವಲ್ಲ. ಇದು ನನಗೆ ಇಷ್ಟವಾಗುವ ರೀತಿಯಲ್ಲಿ ಸಕ್ರಿಯವಾಗಿರುವುದರ ಬಗ್ಗೆಯಷ್ಟೇ ಆಗಿದೆ." ಎಂದು ಅವರು ತಿಳಿಸಿದ್ದಾರೆ. ಜೊತೆಗೆ, ಪ್ರತಿಯೊಬ್ಬರ ಗರ್ಭಧಾರಣೆಯೂ ಭಿನ್ನವಾಗಿರುತ್ತದೆ ಎಂದು ವೀಕ್ಷಕರಿಗೆ ಎಚ್ಚರಿಕೆ ನೀಡಿರುವ ಅವರು, ಯಾವುದೇ ವ್ಯಾಯಾಮವನ್ನು ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಿ ಎಂದು ಸಲಹೆ ನೀಡಿದ್ದಾರೆ.

ಅವರು ಈ ಸ್ಪಷ್ಟನೆ ನೀಡಿದ್ದರೂ ಸಹ, ಗರ್ಭಾವಸ್ಥೆಯಲ್ಲಿನ ಫಿಟ್‌ನೆಸ್ ಬಗ್ಗೆ ವ್ಯಾಪಕ ಚರ್ಚೆಗಳು ಶುರುವಾಗಿವೆ. ಹೆರಿಗೆಯ ಸನಿಹದಲ್ಲಿ ಇಂತಹ ಕಠಿಣ ಆಸನಗಳು ಸುರಕ್ಷಿತವೇ ಎಂದು ಹಲವು ಬಳಕೆದಾರರು ಪ್ರಶ್ನಿಸಿದ್ದಾರೆ. "ಇದು ಮಗುವಿಗೆ ಸುರಕ್ಷಿತವೇ? ಕೇವಲ ವೀಕ್ಷಣೆಗಾಗಿ ಇದನ್ನು ಮಾಡಬೇಡಿ; ನಿಮ್ಮ ಮಗುವಿನ ಬಗ್ಗೆ ಯೋಚಿಸಿ" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು, "ನಾನು ನಿಮ್ಮ ಪ್ರತಿಭೆಯನ್ನು ಗೌರವಿಸುತ್ತೇನೆ, ಆದರೆ ಸುಂದರವಾದ ಗರ್ಭಧಾರಣೆಯನ್ನು ಜಗತ್ತಿಗೆ ಪ್ರದರ್ಶಿಸುವುದು ನನಗೆ ಇಷ್ಟವಿಲ್ಲ. ಒಬ್ಬ ಗರ್ಭಿಣಿಯಾಗಿ, ನಾನು ಇದನ್ನು ತೀವ್ರ ಅಗೌರವ ಎಂದು ಭಾವಿಸುತ್ತೇನೆ" ಎಂದಿದ್ದಾರೆ. "ಇಂತಹ ಕಠಿಣ ಆಸನಗಳನ್ನು ಮಾಡುವ ಹೆಚ್ಚಿನವರು ಅತೀ ಕಷ್ಟದ ಹೆರಿಗೆಯನ್ನು ಎದುರಿಸುತ್ತಾರೆ. ದೈಹಿಕ ಆರೋಗ್ಯ ಮುಖ್ಯ, ಆದರೆ ಮಗುವಿಗಿಂತ ಹೆಚ್ಚಲ್ಲ" ಎಂದು ಇನ್ನೊಬ್ಬ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಚರ್ಚೆ 'ಎಕ್ಸ್' ವೇದಿಕೆಗೂ ಹರಡಿದ್ದು, ವಿಮರ್ಶಕರು ಯೋಗ ಶಿಕ್ಷಕಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಬಹುಶಃ ಇತರರು ಶಕ್ತಿ ಮತ್ತು ದೈಹಿಕ ಸಾಮರ್ಥ್ಯವನ್ನು ನೋಡಬಹುದು. ಆದರೆ, 39 ವಾರಗಳ ಗರ್ಭಿಣಿಯೊಬ್ಬಳು ಎಚ್ಚರಿಕೆಗಿಂತ ಕಂಟೆಂಟ್‌ಗೆ ಆದ್ಯತೆ ನೀಡುವುದನ್ನು ನಾನು ನೋಡುತ್ತಿದ್ದೇನೆ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. "ಇದು ಹಾಸ್ಯಾಸ್ಪದ. ಕೆಲವು ವೀಕ್ಷಣೆಗಳಿಗಾಗಿ ಸುರಕ್ಷತೆಯನ್ನು ಕಡೆಗಣಿಸಲಾಗುತ್ತಿದೆ. ಗರ್ಭಧಾರಣೆಯ ಈ ಹಂತದಲ್ಲಿ ಅವರು ಮಾಡಿರುವುದು ಸುರಕ್ಷಿತವಲ್ಲ. ಯಾವುದೇ ತಾಯಿ ತನ್ನ ಮಗುವನ್ನು ಇಂತಹ ಅಪಾಯಕ್ಕೆ ದೂಡುವುದಿಲ್ಲ" ಎಂಬ ಕಠಿಣ ಕಾಮೆಂಟ್‌ಗಳೂ ಬಂದಿವೆ.

ಆದಾಗ್ಯೂ, ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ದ್ವಿವೇದಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಅನುಭವಿ ಅಥ್ಲೀಟ್‌ಗಳು ಮತ್ತು ಫಿಟ್‌ನೆಸ್ ವೃತ್ತಿಪರರು ಸೂಕ್ತ ಮಾರ್ಗದರ್ಶನದಲ್ಲಿ ಗರ್ಭಾವಸ್ಥೆಯುದ್ದಕ್ಕೂ ವ್ಯಾಯಾಮವನ್ನು ಮುಂದುವರಿಸುತ್ತಾರೆ ಎಂದು ಅವರು ವಾದಿಸಿದ್ದಾರೆ. "ಅವರು ವೃತ್ತಿಪರರಾಗಿರಬೇಕು. 39 ವಾರಗಳಲ್ಲಿ ವರ್ಕೌಟ್ ಮಾಡುವುದು ಮತ್ತು ವೇಟ್ ಲಿಫ್ಟ್ ಮಾಡುವುದು ಕೂಡ ಸಂಪೂರ್ಣವಾಗಿ ಸಹಜ. ಕಂಟೆಂಟ್ ವಿಚಾರವು ಚರ್ಚಾಸ್ಪದವಾಗಿರಬಹುದು, ಆದರೆ ಇದರಿಂದ ಸ್ಫೂರ್ತಿ ಪಡೆಯುವ ಜನರೂ ಇರಬಹುದು" ಎಂದು ಬೆಂಬಲ ಸೂಚಿಸಿದ್ದಾರೆ. "ಯೋಗಾಸನಗಳಲ್ಲಿ ಆರಾಮದಾಯಕವಾಗಿರುವವರೆಗೆ ಗರ್ಭಿಣಿಯರಿಗೆ ಯೋಗ ಮಾಡುವುದು ಉತ್ತಮ" ಎಂದು ಟ್ವಿಟರ್‌ನಲ್ಲಿ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ 1,81,000 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಶಶಿ ಪ್ರಭಾ ದ್ವಿವೇದಿ, ನಿಯಮಿತವಾಗಿ ತಮ್ಮ ಯೋಗಾಭ್ಯಾಸ ಮತ್ತು ಫಿಟ್‌ನೆಸ್ ಪ್ರಯಾಣದ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಅವರು ಬೆಂಗಳೂರಿನ ವರ್ತೂರು ರಸ್ತೆಯಲ್ಲಿ ಯೋಗ ಸ್ಟುಡಿಯೋವೊಂದನ್ನು ನಡೆಸುತ್ತಿದ್ದು, ಅಲ್ಲಿ ಆರೋಗ್ಯಕರ ಜೀವನಶೈಲಿಯ ಭಾಗವಾಗಿ ಯೋಗವನ್ನು ಕಲಿಸುತ್ತಾರೆ ಮತ್ತು ಉತ್ತೇಜಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+