ಬೆಂಗಳೂರು: ಜಿಬಿಎ ಮುಖ್ಯ ಆಯುಕ್ತರು - ನಗರ ಪಾಲಿಕೆಗಳ ಆಯುಕ್ತರ ಹೆಸರಿನಲ್ಲಿ ವಂಚನೆ: ಸಹಾಯವಾಣಿ ಪರಿಚಯ
Bengaluru: ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು - ನಗರ ಪಾಲಿಕೆಗಳ ಆಯುಕ್ತರ ಹೆಸರಿನಲ್ಲಿ ವಂಚನೆ ಪ್ರಯತ್ನ ನಡೆಯುತ್ತಿರುವುದರಿಂದ ಸಹಾಯವಾಣಿ ಪರಿಚಯಿಸಲಾಗಿದೆ. ಜಿಬಿಎ ಮುಖ್ಯ ಆಯುಕ್ತರು ಹಾಗೂ ನಗರ ಪಾಲಿಕೆಗಳ ಆಯುಕ್ತರುಗಳ ಹೆಸರಿನಲ್ಲಿ ವಾಟ್ಸ್ಆ್ಯಪ್ ಮೂಲಕ ವಂಚನೆ ಯತ್ನ ನಡೆಯುತ್ತಿರುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮುಂದಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತರು ಹಾಗೂ ನಗರ ಪಾಲಿಕೆಗಳ ಆಯುಕ್ತರ ಹೆಸರು, ಹುದ್ದೆ ಮತ್ತು ಭಾವಚಿತ್ರಗಳನ್ನು ದುರುಪಯೋಗಪಡಿಸಿಕೊಂಡು ವಾಟ್ಸ್ಆ್ಯಪ್ ಮೂಲಕ ವಂಚನೆ ಯತ್ನಗಳು ನಡೆಯುತ್ತಿರುವ ಬಗ್ಗೆ ಎಚ್ಚರಿಕೆಯಿಂದಿರಲು ಅಧಿಕಾರಿಗಳು ಹಾಗೂ ನಾಗರಿಕರಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮನವಿ ಮಾಡಿದೆ.

ಕಳೆದ ಕೆಲವು ದಿನಗಳಿಂದ ವಂಚಕರು ಜಿಬಿಎ ಮುಖ್ಯ ಆಯುಕ್ತರು ಹಾಗೂ ನಗರ ಪಾಲಿಕೆಗಳ ಆಯುಕ್ತರ ಭಾವಚಿತ್ರಗಳನ್ನು ಹೊಂದಿರುವ ವಾಟ್ಸ್ಆ್ಯಪ್ ಖಾತೆಗಳ ಮೂಲಕ ಅಧಿಕಾರಿಗಳಿಗೆ ನಾನಾ ರೀತಿಯಲ್ಲಿ ಸಂದೇಶಗಳನ್ನು ಕಳುಹಿಸಿ ಹಣಕಾಸು ಸಹಾಯ ಕೇಳುತ್ತಿರುವುದು ಗಮನಕ್ಕೆ ಬಂದಿದೆ. ಈ ಸಂಬಂಧ ಸೈಬರ್ ಅಪರಾಧ ಪೊಲೀಸ್ ಠಾಣೆಗಳಲ್ಲಿ ತಕ್ಷಣ ದೂರು ದಾಖಲಿಸಿ ಎಫ್.ಐ.ಆರ್ ದಾಖಲಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
* ಜಿಬಿಎ ಮುಖ್ಯ ಆಯುಕ್ತರು: 15-04-2026 ಹಾಗೂ 17-04-2026 ರಂದು ದೂರುಗಳು ದಾಖಲಿಸಲಾಗಿದೆ
* ಉತ್ತರ ನಗರ ಪಾಲಿಕೆ ಆಯುಕ್ತರು: 22-04-2026 ರಂದು ದೂರು ದಾಖಲಿಸಲಾಗಿದೆ
* ಪೂರ್ವ ನಗರ ಪಾಲಿಕೆ ಆಯುಕ್ತರು: 23-04-2026 ರಂದು ದೂರು ದಾಖಲಿಸಲಾಗಿದೆ
* ಕೇಂದ್ರ ನಗರ ಪಾಲಿಕೆ ಆಯುಕ್ತರು: 23-04-2026 ರಂದು ದೂರು ದಾಖಲಿಸಲಾಗಿದೆ
* ದಕ್ಷಿಣ ನಗರ ಪಾಲಿಕೆ ಆಯುಕ್ತರು: ದೂರು ದಾಖಲಿಸಲು ಕ್ರಮವಹಿಸಲಾಗುತ್ತಿದೆ.
ಮೇಲ್ಕಂಡಂತೆ, ಕೆಲ ಅಪರಿಚಿತ ವ್ಯಕ್ತಿಗಳು ಜಿಬಿಎ ಮುಖ್ಯ ಆಯುಕ್ತರ ಹೆಸರಿನಲ್ಲಿ ಭಾರತೀಯ ಮೊಬೈಲ್ ಸಂಖ್ಯೆ +91 7631678095 ಹಾಗೂ ಅಂತರರಾಷ್ಟ್ರೀಯ ಸಂಖ್ಯೆ +62 815580651 ರಿಂದ ಸಂದೇಶಗಳನ್ನು ಕಳುಹಿಸಿರುವುದು ತಿಳಿದುಬಂದಿದೆ. ಅದೇ ರೀತಿ ಪೂರ್ವ ನಗರ ಪಾಲಿಕೆ ಆಯುಕ್ತರ ಹೆಸರಿನಲ್ಲಿ +62 85124911356 ಸಂಖ್ಯೆಯಿಂದ, ಉತ್ತರ ನಗರ ಪಾಲಿಕೆ ಆಯುಕ್ತರ ಹೆಸರಿನಲ್ಲಿ +62 81913935100 ಸಂಖ್ಯೆಯಿಂದ ಹಾಗೂ ಕೇಂದ್ರ ಮತ್ತು ದಕ್ಷಿಣ ನಗರ ಪಾಲಿಕೆ ಆಯುಕ್ತರ ಹೆಸರಿನಲ್ಲಿ +62 83197536332 ಸಂಖ್ಯೆಗಳಿಂದಲೂ ಅಧಿಕಾರಿಗಳಿಗೆ ಸಂದೇಶಗಳು ಕಳುಹಿಸಲಾಗುತ್ತಿದೆ.
ಜಿಬಿಎ ಹಾಗೂ ನಗರ ಪಾಲಿಕೆಗಳ ಅಧಿಕಾರಿಗಳು/ಸಿಬ್ಬಂದಿಗಳು ಮತ್ತು ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ, ಅನಧಿಕೃತ ಸಂಖ್ಯೆಗಳಿಂದ ವಾಟ್ಸಾಪ್ ಸಂದೇಶಗಳು ಬಂದಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗಳಿಗೆ ದೂರು ಸಲ್ಲಿಸಬೇಕು. ಜೊತೆಗೆ ಇಂತಹ ಸಂದೇಶಗಳನ್ನು ನಂಬಿ ಯಾವುದೇ ರೀತಿಯ ಹಣ ವರ್ಗಾವಣೆ ಮಾಡಬಾರದು. ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
ಸಾರ್ವಜನಿಕರಲ್ಲಿ ಮನವಿ
ಅಪರಿಚಿತರ ಸಂಖ್ಯೆಯಿಂದ ಬರುವ ಕರೆಗಳು ಅಥವಾ ಸಂದೇಶಗಳಿಗೆ ಪ್ರತಿಕ್ರಿಯೆ ನೀಡದೇ, ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡುವಂತೆ ಅಧಿಕಾರಿಗಳು ಹಾಗೂ ನಾಗರಿಕರಲ್ಲಿ ಮನವಿ ಮಾಡಲಾಗಿದೆ. ವಾಟ್ಸಾಪ್ ಅಥವಾ ಯಾವುದೇ ಸಾಮಾಜಿಕ ಜಾಲತಾಣಗಳಿಂದ ಅನುಮಾನಾಸ್ಪದ ಕರೆಗಳು ಅಥವಾ ಸಂದೇಶಗಳು ಬಂದಲ್ಲಿ ಜಿಬಿಎ ಸಹಾಯವಾಣಿ ಸಂಖ್ಯೆ 1533 ಗೆ ಕರೆ ಮಾಡಿ ಮಾಹಿತಿ ನೀಡಲು ಕೋರಲಾಗಿದೆ.












Click it and Unblock the Notifications