ಕೇವಲ 14 ಕಿ.ಮೀ.ಗೆ ಬರೋಬ್ಬರಿ 4000 ರೂ. ಬಾಡಿಗೆ! ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಮಹಿಳೆಗೆ ಕ್ಯಾಬ್ ಡ್ರೈವರ್ ವಂಚನೆ
ಭಾರತದ ಐಟಿ ರಾಜಧಾನಿ ಬೆಂಗಳೂರಿಗೆ ದೇಶ ವಿದೇಶಗಳಿಂದ ಪ್ರತಿದಿನ ಸಾವಿರಾರು ಮಂದಿ ಆಗಮಿಸುತ್ತಾರೆ. ಆದರೆ, ಇಲ್ಲಿಗೆ ಬರುವ ಹೊಸಬರನ್ನ ಗುರಿಯಾಗಿಸಿಕೊಂಡು ವಂಚಿಸುವ ಜಾಲಗಳು ಕೂಡ ಸಕ್ರಿಯವಾಗಿವೆ. ಇದೀಗ ಯುನೈಟೆಡ್ ಕಿಂಗ್‌ಡಮ್‌ನಿಂದ ಮೂರು ವರ್ಷಗಳ ನಂತರ ಭಾರತಕ್ಕೆ ಮರಳಿದ ಮಹಿಳೆಯೊಬ್ಬರಿಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕನೊಬ್ಬ ಭಾರಿ ವಂಚನೆ ಮಾಡಿದ್ದಾನೆ.
ಹೌದು, ಕೇವಲ 14 ಕಿಲೋಮೀಟರ್ ದೂರದ ಪ್ರಯಾಣಕ್ಕೆ ಬರೋಬ್ಬರಿ 4,000 ರೂಪಾಯಿಗಳ ಬಾಡಿಗೆ ಪಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ವಂಚನೆಗೊಳಗಾದ ಮಹಿಳೆಯನ್ನ ಅಬೀಷ್ನಾ. ಎನ್ ಎಂದು ಗುರುತಿಸಲಾಗಿದೆ. ಇವರು ವೃತ್ತಿಯಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ. ಅವರು ತಮ್ಮ ಲಿಂಕ್ಡ್‌ಇನ್ ಖಾತೆಯಲ್ಲಿ ಈ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.
"ನಾನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಂಚನೆಗೊಳಗಾದೆ. ಮೂರು ವರ್ಷಗಳ ನಂತರ ನಾನು ಭಾರತಕ್ಕೆ ಮರಳಿದ್ದೆ. ಬೆಂಗಳೂರು ನನಗೆ ಸಂಪೂರ್ಣವಾಗಿ ಹೊಸ ನಗರವಾಗಿತ್ತು. ಸುಮಾರು 10 ವರ್ಷಗಳ ಹಿಂದೆ ಒಮ್ಮೆ ಮಾತ್ರ ಇಲ್ಲಿಗೆ ಬಂದಿದ್ದೆ. ಹೀಗಾಗಿ ಇಲ್ಲಿನ ಟ್ಯಾಕ್ಸಿ ದರಗಳ ಬಗ್ಗೆ ನನಗೆ ಗೊತತಿರಲಿಲ್ಲ" ಎಂದು ಅವರು ಬರೆದುಕೊಂಡಿದ್ದಾರೆ.
ಟ್ಯಾಕ್ಸಿ ಹತ್ತುವ ಮುನ್ನ ಅವರು ದರದ ಬಗ್ಗೆ ಚಾಲಕನನ್ನ ಕೇಳಿದ್ದಾರೆ. ಅದಕ್ಕೆ ಚಾಲಕ 'ಮೀಟರ್ ಚಾರ್ಜ್' ಪ್ರಕಾರ ಹಣ ಪಡೆಯುವುದಾಗಿ ನಂಬಿಸಿದ್ದಾನೆ. ಇದನ್ನು ನಂಬಿ ಟ್ಯಾಕ್ಸಿ ಹತ್ತಿದ ಮಹಿಳೆ, ಕೇವಲ 14 ಕಿ.ಮೀ. ಪ್ರಯಾಣಿಸಿದ ನಂತರ, ಚಾಲಕ 4,000 ರೂಪಾಯಿ ಎಂದು ಬರೆದಿದ್ದ ನಕಲಿ ರಶೀದಿಯನ್ನ ನೀಡಿದ್ದಾನೆ.
ಲಿಂಕ್ಡ್‌ಇನ್ ಪೋಸ್ಟ್ ಮಾಡಿದ ಮಹಿಳೆ
ತಾನು ವಂಚನೆಗೆ ಒಳಗಾಗಿದ್ದೇನೆ ಎಂಬುದು ಆ ಕ್ಷಣದಲ್ಲಿ ಮಹಿಳೆಗೆ ಅರಿವಾಗಿರಲಿಲ್ಲ. "ಆ ಸಮಯದಲ್ಲಿ ನಾನು ವಂಚನೆಗೊಳಗಾಗುತ್ತಿದ್ದೇನೆ ಎಂದು ನನಗೆ ತಿಳಿದಿರಲಿಲ್ಲ. ಬೆಂಗಳೂರಿನಲ್ಲಿ ವಿಮಾನ ನಿಲ್ದಾಣದ ಟ್ಯಾಕ್ಸಿಗಳು ಹೀಗೆಯೇ ಕಾರ್ಯನಿರ್ವಹಿಸುತ್ತವೆ ಎಂದು ನಾನು ಭಾವಿಸಿದ್ದೆ. ಮೂರು ವರ್ಷಗಳ ನಂತರ ಹಿಂದಿರುಗಿದ ನನಗೆ, ಅಪರಿಚಿತ ನಗರದಲ್ಲಿದ್ದ ಕಾರಣ ಸುಲಭವಾಗಿ ಗುರಿಯಾದೆ" ಎಂದು ಅವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.
"4,000 ರೂ. ಕಳೆದುಕೊಂಡಿರುವುದು ಸಹಜವಾಗಿಯೇ ಬೇಸರ ತರಿಸಿದೆ. ಆದರೆ, ಹೊಸ ಜಾಗದ ಬಗ್ಗೆ ನಮಗೆ ಅರಿವಿಲ್ಲದಿದ್ದಾಗ ಜನರು ಎಷ್ಟು ಸುಲಭವಾಗಿ ನಮ್ಮನ್ನು ವಂಚಿಸುತ್ತಾರೆ ಎಂಬುದು ಹೆಚ್ಚು ಕಾಡುತ್ತಿದೆ. ಹೊಸ ನಗರಕ್ಕೆ ಹೋದಾಗ ಟ್ಯಾಕ್ಸಿ ಹತ್ತುವ ಮುನ್ನ ದರ ಹಾಗೂ ಲಭ್ಯವಿರುವ ಇತರ ಆಯ್ಕೆಗಳನ್ನ ಪರಿಶೀಲಿಸುವುದು ಕಡ್ಡಾಯ ಎಂಬುದನ್ನು ನಾನು ಕಲಿತಿದ್ದೇನೆ" ಎಂದಿದ್ದಾರೆ.
'ಬೆಂಗಳೂರು ಏರ್‌ಪೋರ್ಟ್ ಟ್ಯಾಕ್ಸಿ' ವ್ಯವಸ್ಥೆ ವಿರುದ್ಧ ಆಕ್ರೋಶ
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಹಲವರು ತಮ್ಮದೇ ಆದ ಕಹಿ ಅನುಭವಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಅಬೀಷ್ನಾ ಅವರು ಕೆಲಸ ಮಾಡುತ್ತಿರುವ ಕಂಪನಿಯ ಸಂಸ್ಥಾಪಕರು ಕೂಡ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. "ಬೆಂಗಳೂರು ಏರ್‌ಪೋರ್ಟ್ ಟ್ಯಾಕ್ಸಿಗಳು ಅತ್ಯಂತ ಕೆಟ್ಟದಾಗಿವೆ. ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುವುದು ಹಾಗೂ ನಕಲಿ ಬಿಲ್ ನೀಡುವುದು ವರ್ಷಗಳಿಂದ ನಡೆಯುತ್ತಲೇ ಇದೆ. ಆದರೆ, ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Click it and Unblock the Notifications
