B Khata to A Khata: ಬಿ ಖಾತಾದಿಂದ ಎ ಖಾತಾಗೆ ಬದಲಾವಣೆ ಈಗ ಸುಲಭ: ಹೊಸ ಗೈಡ್‌ಲೈನ್ಸ್ ವ್ಯಾಲ್ಯೂ ನಿಯಮ ಏನು?
B Khata to A Khata: ಬೆಂಗಳೂರಿನ ಆಸ್ತಿದಾರರಿಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಬಿ ಖಾತಾ ಆಸ್ತಿ ಹೊಂದಿರುವವರಿಗೆ ಗುಡ್‌ನ್ಯೂಸ್ ಕೊಡಲಾಗಿದೆ. ಬಿ ಖಾತಾದಿಂದ ಎ ಖಾತಾ ಪರಿವರ್ತನೆಯ ಗೈಡ್‌ಲೈನ್ಸ್ ವ್ಯಾಲ್ಯೂ ಪ್ರಮಾಣವನ್ನು ಶೇ5ರಿಂದ ಶೇ 2ಕ್ಕೆ ಇಳಿಕೆ ಮಾಡಲಾಗಿದೆ. ಹಾಗಾದರೆ ಏನಿದು ಬಿ ಖಾತಾದಿಂದ ಎ ಖಾತಾ ಪರಿವರ್ತನೆಯಲ್ಲಿನ ಪ್ರಕ್ರಿಯೆ ಹಾಗೂ ಗೈಡ್‌ಲೈನ್ಸ್ ವ್ಯಾಲ್ಯೂ ಲೆಕ್ಕಾಚಾರ ಹೇಗೆ ನಡೆಯುತ್ತದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬಿ ಖಾತಾದಿಂದ ಎ ಖಾತಾ ಪರಿವರ್ತನೆಗೆ ಕರ್ನಾಟಕ ಸರ್ಕಾರವು ಅವಕಾಶ ಮಾಡಿಕೊಟ್ಟಿದೆಯಾದರೂ, ಈ ಹಿಂದೆ ಖಾತಾ ಪರಿವರ್ತನೆಗೆ ಬರೋಬ್ಬರಿ ಆಸ್ತಿಯ ಶೇ 5ರಷ್ಟು ಗೈಡ್‌ಲೈನ್ಸ್ ವ್ಯಾಲ್ಯೂ ಕೊಡಬೇಕಾಗಿತ್ತು. ಗೈಡ್‌ಲೈನ್ಸ್ ವ್ಯಾಲ್ಯೂ (Guidance Value) ಎಂದರೆ ಕರ್ನಾಟಕ ಸರ್ಕಾರವು ಆಸ್ತಿ ನೋಂದಣಿ (Registration) ಮತ್ತು ಮುದ್ರಾಂಕ ಶುಲ್ಕಕ್ಕಾಗಿ (Stamp duty) ನಿಗದಿಪಡಿಸಿರುವ ಆಸ್ತಿಯ ಕನಿಷ್ಠ ಮೌಲ್ಯವಾಗಿದೆ.

ಬಿ ಖಾತಾ ಆಸ್ತಿ ಎ ಖಾತಾಗೆ ಪರಿವರ್ತಿಸುವ ಶುಲ್ಕ ಲೆಕ್ಕಾಚಾರ ಹೇಗಿದೆ
ಸರ್ಕಾರದ ಹೊಸ ನಿಯಮಾವಳಿಗಳ ಪ್ರಕಾರ, ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸಲು ಆಸ್ತಿಯ ಒಟ್ಟು ಗೈಡ್‌ಲೈನ್ಸ್ ವ್ಯಾಲ್ಯೂ ಮೇಲೆ ಶೇ. 2% ದಂಡ / ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಶುಲ್ಕವನ್ನು ಆಸ್ತಿಯ ಒಟ್ಟು ವಿಸ್ತೀರ್ಣ - ಪ್ರತಿ ಚದರ ಅಡಿಗೆ ಸರ್ಕಾರದ ಗೈಡ್‌ಲೈನ್ಸ್‌ವ್ಯಾಲ್ಯೂ = ಆಸ್ತಿಯ ಒಟ್ಟು ಮೌಲ್ಯ.
ಬಿ ಟು ಎ ಖಾತಾ ಪರಿವರ್ತನಾ ಶುಲ್ಕ: ಆಸ್ತಿಯ ಒಟ್ಟು ಮೌಲ್ಯ X 0.02 (2%). ಉದಾಹರಣೆಗೆ: ನಿಮ್ಮ ಆಸ್ತಿಯ ಒಟ್ಟು ಗೈಡ್‌ಲೈನ್ಸ್ ಮೌಲ್ಯವು 50 ಲಕ್ಷ ಆಗಿದ್ದರೆ, ಅದಕ್ಕೆ ಶೇ2% ರಷ್ಟು ಲೆಕ್ಕ ಹಾಕಿದರೆ 1 ಲಕ್ಷ ಪರಿವರ್ತನಾ ಶುಲ್ಕವಾಗುತ್ತದೆ.
ಇನ್ನು ಬಿ ಖಾತಾದಿಂದ ಎ ಖಾತಾ ಪರಿವರ್ತನೆಯೊಂದಿಗೆ ಇತರ ಶುಲ್ಕಗಳು ಸಹ ಅನ್ವಯಿಸುತ್ತದೆ. ಪರಿವರ್ತನಾ ಶುಲ್ಕದ ಜೊತೆಗೆ ಆನ್‌ಲೈನ್ ಅರ್ಜಿ ಶುಲ್ಕ, ಅಭಿವೃದ್ಧಿ ಶುಲ್ಕ (Betterment charges) ಹಾಗೂ ಇತರೆ ಸರ್ಕಾರಿ ಶುಲ್ಕಗಳು ಅನ್ವಯಿಸುತ್ತವೆ. ಅರ್ಹ ಆಸ್ತಿಯನ್ನು ಬಿ ಖಾತಾದಿಂದ ಎ ಖಾತಾಗೆ ಬದಲಾಯಿಸಲು ಆನ್‌ಲೈನ್ ಮೂಲಕ ಗ್ರೇಟರ್ ಬೆಂಗಳೂರು ಪ್ರಾಧಿಕಾರದ B to A Khata ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
B Khata to A Khata:ಬಿ ಖಾತಾ ಮತ್ತು ಎ ಖಾತಾ ಎಂದರೇನು
ಎ ಖಾತಾ (A Khata): ಎ ಖಾತಾ ಆಸ್ತಿ ಎಂದರೆ ಅದು ಕಾನೂನುಬದ್ಧವಾದ ಆಸ್ತಿಯಾಗಿದೆ. ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸಿದೆ ಮತ್ತು ಈ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ - ಇಂದಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸಿದ್ದಿರಿ ಹಾಗೂ ಎಲ್ಲವೂ ಕಾನೂನಿನ ಪ್ರಕಾರ ಇದೆ ಎನ್ನುವುದು ಎ ಖಾತಾ ಆಸ್ತಿಯ ಸಂಕೇತವಾಗಿದೆ.
ಬಿ ಖಾತಾ (B Khata): ಬಿ ಖಾತಾ ಎನ್ನುವುದು ತೆರಿಗೆ ಪಾವತಿಗಾಗಿ ನೀಡುವ ತಾತ್ಕಾಲಿಕ ದಾಖಲೆಯಾಗಿದೆ. ಆದರೆ, ಈ ಆಸ್ತಿಗಳಲ್ಲಿ ದಾಖಲೆಗಳ ಕೊರತೆ, ನಿಯಮ ಉಲ್ಲಂಘನೆ ಅಥವಾ ಅನಧಿಕೃತ ಬಡಾವಣೆಗಳ ಸಮಸ್ಯೆಗಳನ್ನು ಒಳಗೊಂಡಿರುತ್ತವೆ. ನಿಮ್ಮ ಆಸ್ತಿಯ ನಿಖರವಾದ ಗೈಡೆನ್ಸ್ ಮೌಲ್ಯವನ್ನು ತಿಳಿಯಲು https://kaveri.karnataka.gov.in/landing-page ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.














Click it and Unblock the Notifications