ಪ್ರಧಾನಿ ಮೋದಿ ಯುದ್ಧ ವಿಮಾನ ಏರೋದಿಲ್ವೇ?
ಬೆಂಗಳೂರು, ಫೆ.8: ಯಲಹಂಕ ವಾಯು ನೆಲೆಯಲ್ಲಿ ಫೆ.18ರಿಂದ ನಡೆಯಲಿರು ಏರೋ ಇಂಡಿಯಾ 2015 ಶೋ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುವುದು ಖಾತ್ರಿಯಾಗಿದೆ. ಅದರೆ, ವೈಮಾನಿಕ ಪ್ರದರ್ಶನದ ವೇಳೆ ಮೋದಿ ಅವರು ಯುದ್ಧವಿಮಾನ ಏರಿ ಹಾರಾಟ ನಡೆಸುವುದಿಲ್ಲ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ಮೇಕ್ ಇನ್ ಇಂಡಿಯಾ ಥೀಮ್ ನೊಂದಿಗೆ ನಡೆಯಲಿರುವ ಏರೋ ಇಂಡಿಯಾ ಶೋನಲ್ಲಿ ಜಾಗತಿಕ ಮಟ್ಟದ ರಕ್ಷಣಾ, ವಿಮಾನಯಾನ ಹಾಗೂ ಬಾಹ್ಯಾಕಾಶದ ಕಂಪೆನಿಗಳು ಭಾಗವಹಿಸುತ್ತಿರುವುದರಿಂದ ಬಂಡವಾಳ ಆಕರ್ಷಿಸಲು ಪ್ರಧಾನಿಯವರು ಆಗಮಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಯುದ್ಧ ವಿಮಾನ ಹಾರಾಟ: ಏರೋ ಇಂಡಿಯಾ ಉದ್ಘಾಟನೆ ಬಳಿಕ ಫ್ರಾನ್ಸ್ ಮೂಲದ ಜೆಟ್ ಫೈಟರ್ ವಿಮಾನ ಡಸಾಲ್ಟ್ ರಾಫೆಲ್ ದಲ್ಲಿ ಮೋದಿ ಹಾರಾಟ ನಡೆಸುವ ಸಾಧ್ಯತೆಯಿದೆ. ಈ ಹಾರಾಟ ನಡೆದರೆ ಜೆಟ್ ಫೈಟರ್ ಯುದ್ಧ ವಿಮಾನದಲ್ಲಿ ಪ್ರಯಾಣಿಸಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರವಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. [2013: ಏರೋ ಇಂಡಿಯಾ ಅಂತಿಮ ಚಿತ್ರಗಳು]
ಅದರೆ,ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಧಾನಿ ಕಾರ್ಯಾಲಯ, ರಕ್ಷಣಾ ಇಲಾಖೆ ಅಧಿಕಾರಿಗಳು ಯುದ್ಧ ವಿಮಾನದಲ್ಲಿ ಮೋದಿ ಅವರು ಹಾರಾಟದ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ.

ಈ ಹಿಂದೆ ನಡೆದ ಏರೋ ಇಂಡಿಯಾ ಶೋಗಳಲ್ಲಿ ಜಾರ್ಜ್‌ಫರ್ನಾಂಡೀಸ್, ಎ.ಕೆ.ಆಂಟನಿ, ಸುಖೋಯ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸುವ ಮೂಲಕ ಗಮನ ಸೆಳೆದಿದ್ದರು. ಇದಲ್ಲದೆ ರತನ್ ಟಾಟಾ ಎಫ್-16 ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಕೂಡಾ ಯುದ್ಧ ವಿಮಾನ ಏರಿದ್ದರು. ['ಏರೋ ಇಂಡಿಯಾ' ದಲ್ಲಿ 'ಮೇಕ್ ಇನ್ ಇಂಡಿಯಾ']]
1996ರಿಂದ ನಿರಂತರವಾಗಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಏರೋ ಇಂಡಿಯಾ ಒಂದಲ್ಲ ಒಂದು ರೀತಿಯಲ್ಲಿ ಗಮನ ಸೆಳೆಯುತ್ತದೆ. ಈ ಬಾರಿ ಫೆ.18ರಿಂದ 22ರವರೆಗೆ ನಡೆಯಲಿರುವ ಪ್ರದರ್ಶನದಲ್ಲಿ ದೇಶ-ವಿದೇಶಗಳ 750ಕ್ಕೂ ಹೆಚ್ಚು ಕಂಪೆನಿಗಳು ಇಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿವೆ. ಇದಲ್ಲದೆ 180ಕ್ಕೂ ಹೆಚ್ಚು ರಾಷ್ಟ್ರಗಳ ಸಚಿವರ ನಿಯೋಗ, ರಕ್ಷಣಾ ಸಚಿವಾಲಯ ಹಾಗೂ ಕಾರ್ಯದರ್ಶಿ ಮಟ್ಟದ ನಿಯೋಗಗಳು ಆಗಮಿಸುತ್ತಿವೆ.
ಅಮೆರಿಕದಿಂದ ಎಫ್-18, ಎಫ್-16ಸೇರಿದಂತೆ ಕೆಲವು ಯುದ್ಧ ವಿಮಾನಗಳು ಕೂಡ ಭಾರತದ ವಾಯುಪಡೆ ಬತ್ತಳಿಕೆಗೆ ಸೇರುವ ನಿರೀಕ್ಷೆ ಹೆಚ್ಚಿದೆ. ಫ್ರಾನ್ಸಿನ ರಾಫೆಲ್ ವಿಮಾನ ಖರೀದಿಗೆ ಕಳೆದ ಯುಪಿಎ ಸರ್ಕಾರದಲ್ಲೇ ಒಂಡಂಬಡಿಕೆಯಾಗಿದೆ. ಹೀಗಾಗಿ ಈ ಬಗ್ಗೆ ಅಂತಿಮ ಅಂಕಿತ ಬೀಳುವ ಸಾಧ್ಯತೆಯಿದೆ.
ಸುಮಾರು 1.50ಲಕ್ಷ ವಾಣಿಜ್ಯ ವ್ಯವಹಾರಿಕ ಪ್ರತಿನಿಧಿಗಳು 3ಲಕ್ಷಕ್ಕೂ ಹೆಚ್ಚು ಸಾರ್ವಜನಿಕರು ಈ ಬಾರಿ ಏರೋ ಇಂಡಿಯಾ ಪ್ರದರ್ಶನವನ್ನು ವೀಕ್ಷಿಸುವ ನಿರೀಕ್ಷೆಯಿದೆ. ಟಿಕೆಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications