ಹೊಗಳಿಕೆ ಟೀಕೆ ಅಪಹಾಸ್ಯಕ್ಕೀಡಾದ ರೆಡ್ಡಿ ಮಗಳ ಮದುವೆ!

By: ರೋಹಿಣಿ
Subscribe to Oneindia Kannada

ಬೆಂಗಳೂರು, ನವೆಂಬರ್ 17 : ಬೆಂಗಳೂರು ಅರಮನೆಯಲ್ಲಿ 'ಕುಬೇರ' ಜನಾರ್ದನ ರೆಡ್ಡಿಯ ಮಗಳು ಬ್ರಹ್ಮಿಣಿಯ ಮದುವೆ ಹೈದರಾಬಾದಿನ ರಾಜೀವ್ ರೆಡ್ಡಿಯೊಡನೆ ವೈಭವೋಪೇತವಾಗಿ ನಡೆದಿದೆ. ಈ ಮದುವೆ ಹೊಗಳಿಕೆಗೆ, ತೆಗಳಿಕೆಗೆ ಅಷ್ಟೇ ಏಕೆ ನಾನಾ ಕಾರಣಗಳಿಂದಾಗಿ ಅಪಹಾಸ್ಯಕ್ಕೂ ಈಡಾಗಿದೆ.

ಡೈಲಾಗ್ ಕಿಂಗ್ ಸಾಯಿಕುಮಾರ್ ನಿರ್ದೇಶನದಲ್ಲಿ ಸಿನಿಮೀಯ ರೀತಿಯಲ್ಲಿ ಆಮಂತ್ರಣದ ವಿಡಿಯೋ ಚಿತ್ರಿಸಲಾಯಿತು. ಬನ್ನಿ ಬನ್ನಿ ಅಂತ ಇಡೀ ರೆಡ್ಡಿ ಕುಟುಂಬವೇ ಮದುವೆಗೆ ಆಹ್ವಾನ ನೀಡಿತ್ತು. ಅಂದಾಜು 500ರಿಂದ 1000 ಕೋಟಿ ರುಪಾಯಿ ವೆಚ್ಚದಲ್ಲಿ ಮದುವೆ ಜರುಗಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ.

ಗಣಿ ಹಗರಣದಲ್ಲಿ ಜೈಲು ಸೇರಿ ಸಾಕಷ್ಟು ಆಸ್ತಿ ಕಳೆದುಕೊಂಡ ಮೇಲೂ ಇಷ್ಟೊಂದು ದುಡ್ಡು ರೆಡ್ಡಿ ಬಳಿಗೆ ಎಲ್ಲಿಂದ ಬಂತು ಎಂದು ಆಮ್ ಆದ್ಮಿ ಪಕ್ಷ ತಗಾದೆ ಎತ್ತಿತು. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಗಪ್ ಚುಪ್ ಆಗಿದ್ದರು. ಇದೇ ಸಂಗತಿ ಬುಧವಾರ ರಾಜ್ಯಸಭೆಯಲ್ಲಿಯೂ ಚರ್ಚೆಗೊಳಗಾಯಿತು. [ಗಾಲಿ ರೆಡ್ಡಿ ಮಗಳ ಮದುವೆಯಲ್ಲಿ ಕಂಡ ಮುಖಗಳು]

ಹೋಗಬೇಡಿ ಎಂಬ ಕಿವಿಮಾತು ಹೇಳಿದರೂ

ಹೋಗಬೇಡಿ ಎಂಬ ಕಿವಿಮಾತು ಹೇಳಿದರೂ

ಭೂಮಿಯನ್ನು ಬಗೆದು ಕೋಟಿ ಕೋಟಿ ಲೂಟಿ ಮಾಡಿ ಕಳಂಕ ಹೊತ್ತುಕೊಂಡಿರುವ ಗಣಿಧಣಿಯ ಮಗಳ ಮದುವೆಗೆ ಹೋಗದಿರಿ ಎಂದು ಕಿವಿಮಾತು ಹೇಳಿದರೂ, ಈಕಡೆಯಿಂದ ಕೇಳಿ ಆಕಡೆಯಿಂದ ಬಿಟ್ಟು ಹಲವಾರು ಬಿಜೆಪಿ ನಾಯಕರು ಬ್ರಹ್ಮಿಣಿ ಮತ್ತು ರಾಜೀವ್ ದಂಪತಿಗಳಿಗೆ ಮನಃಪೂರ್ವಕವಾಗಿ ಆಶೀರ್ವದಿಸಿ ಬಂದರು. [ಮದುವೆ ಚಿತ್ರಸಂಪುಟ]

ವಿಡಂಬನೆ ಅಂದರೆ ಇದೇ ಅಲ್ಲವೆ?

ವಿಡಂಬನೆ ಅಂದರೆ ಇದೇ ಅಲ್ಲವೆ?

ತಮಾಷೆ ಅಂದ್ರೆ, ಅರಮನೆ ಮೈದಾನದ ಹೊರಗಡೆ ಹಲವಾರು ಕಾಂಗ್ರೆಸ್ ಕಾರ್ಯಕರ್ತರು 'ಕಪ್ಪು ಹಣ' ಭಿತ್ತಿಪತ್ರ ಹೊತ್ತು ಪ್ರತಿಭಟಿಸುತ್ತಿದ್ದರೆ, ಶ್ರೀಕೃಷ್ಣದೇವರಾಯನ ಅರಮನೆಯನ್ನೂ ಮೀರಿಸುವ ವೈಭೋಗದ ಸೆಟ್ಟಿಂಗ್ ನಲ್ಲಿ ಹಲವಾರು ಕಾಂಗ್ರೆಸ್ ನಾಯಕರೇ ಹೂಗುಚ್ಛ ನೀಡಿ, ಭರ್ತಿ ಊಟ ಜಡಿದು ಬಂದಿದ್ದಾರೆ. ವಿಡಂಬನೆ ಅಂದರೆ ಇದೇ ಅಲ್ಲವೆ?

ರಿಟರ್ನ್ ಉಡುಗೊರೆ ಕೊಡಲೇಬೇಕಲ್ಲ?

ರಿಟರ್ನ್ ಉಡುಗೊರೆ ಕೊಡಲೇಬೇಕಲ್ಲ?

ಇಷ್ಟೊಂದೆಲ್ಲ ಖರ್ಚು ಮಾಡಿದ ಮೇಲೆ ಬಂದ ಗಣ್ಯರಿಗೆಲ್ಲ ರಿಟರ್ನ್ ಉಡುಗೊರೆ ಕೊಡಲೇಬೇಕಲ್ಲ? ಅದಾದರೂ ಯಾವುದು? ಮರುಬಳಕೆ ಮಾಡುವ ಕಾಗದದ ಪಾಕೆಟ್ ನಲ್ಲಿ ಶ್ರೀಗಂಧದ ಮತ್ತು ಶ್ರೀತುಳಸಿ ಸಸಿಗಳು! ಭೂಮಿಯನ್ನು ಬಗೆದು, ಪರಿಸರವನ್ನೆಲ್ಲ ಸಾಕಷ್ಟು ಹಾಳು ಮಾಡಿದವನಿಂದ ಪ್ರರಿಸರ ಪ್ರೇಮ ಪ್ರತಿನಿಧಿಸುವ ಸಸಿಗಳು, ಎಂದು ಕೆಲವರು ಕುಹಕವಾಡಿದ್ದಾರೆ.

ರೆಡ್ಡಿ ಹಣ ತಂದಿದ್ದು ಎಲ್ಲಿಂದ

ರೆಡ್ಡಿ ಹಣ ತಂದಿದ್ದು ಎಲ್ಲಿಂದ

ಕರ್ನಾಟಕದಲ್ಲಿ ಜನ ಒಂದೊಂದು ಪೈಸೆಗೂ ಒದ್ದಾಡುತ್ತಿದ್ದಾರೆ. ಬ್ಯಾಂಕಿನಲ್ಲಿ ವಿನಿಮಯ ಮಾಡಿಕೊಳ್ಳಲು, ಎಟಿಎಂನಿಂದ ಹಣ ತೆಗೆದುಕೊಳ್ಳಲು ಹೆಣಗಾಡುತ್ತಿದ್ದಾರೆ. ಅಂಥದ್ದರಲ್ಲಿ ಸಾವಿರಾರು ಕೋಟಿ ವ್ಯಯಿಸಲು ರೆಡ್ಡಿ ಹಣ ತಂದಿದ್ದು ಎಲ್ಲಿಂದ, 500 ಮತ್ತು 1000 ನೋಟುಗಳನ್ನು ಹೇಗೆ ವಿನಿಮಯ ಮಾಡಿಕೊಂಡರು ಎಂದು ಟ್ವಿಟ್ಟಿಗರೊಬ್ಬರು ಅಮಾಯಕವಾಗಿ ಕೇಳಿದ್ದಾರೆ.

ರಾಜ್ಯದಲ್ಲಿ ಭೀಕರ ಬರಗಾಲ, ಆದರೂ

ರಾಜ್ಯದಲ್ಲಿ ಭೀಕರ ಬರಗಾಲ, ಆದರೂ

ರಾಜ್ಯದಲ್ಲಿ ಭೀಕರ ಬರಗಾಲ ಬಿದ್ದಿದೆ, ನೀರಿಲ್ಲದೆ ರೈತರು ಮೇವಿಗಾಗಿ ಕೈಚಾಚಿ ನಿಂತಿದ್ದಾರೆ. ಇಂಥ ಸಮಯದಲ್ಲಿ ಬಡವರ ಕಪಾಳಕ್ಕೆ ಹೊಡೆಯುವಂತೆ ಸಾವಿರಾರು ಕೋಟಿ ರುಪಾಯಿ ವ್ಯಯಿಸಿ ಇಂಥ ವೈಭವೋಪೇತ ಮದುವೆ ಮಾಡುವ ಅಗತ್ಯವಿತ್ತೆ. ಈ ಹಣದಲ್ಲಿ ಒಂದಿಷ್ಟಾದರೂ ಜನರಿಗೆ ನೀಡಿ ಮಾನವೀಯತೆ ಮೆರೆಯಬಹುದಿತ್ತಲ್ಲ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.

ಮೋದಿ ಸಮರಕ್ಕೆ ರೆಡ್ಡಿ ಸೆಡ್ಡು

ಮೋದಿ ಸಮರಕ್ಕೆ ರೆಡ್ಡಿ ಸೆಡ್ಡು

ಹೀಗೆಲ್ಲ ದುಂದುವೆಚ್ಚ ಮಾಡಿ, ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ವಿರುದ್ಧ, ಕಾಳಧನಿಕರ ವಿರುದ್ಧ ಸಾರಿರುವ ಸಮರಕ್ಕೆ ರೆಡ್ಡಿ ಸೆಡ್ಡು ಹೊಡೆದಿದ್ದಾರೆ. ರೆಡ್ಡಿಯ ವಿರುದ್ಧ ಐಟಿ ಇಲಾಖೆಯಲ್ಲಿ ದೂರು ಕೂಡ ದಾಖಲಾಗಿದೆ. ರೆಡ್ಡಿ ವಿರುದ್ಧ ಆದಾಯ ತೆರಿಗೆ ಇಲಾಖೆ ಕ್ರಮ ತೆಗೆದುಕೊಳ್ಳುವುದಾ? ರೆಡ್ಡಿಯನ್ನು ಕೂಡಲೆ ಬಂಧಿಸಬೇಕೆಂದು ಆಪ್ ಕೂಡ ಆಗ್ರಹಿಸಿದೆ.

ಇವರೆಲ್ಲ ಹಾರೈಸಲು ಬಂದಿದ್ದರು

ಇವರೆಲ್ಲ ಹಾರೈಸಲು ಬಂದಿದ್ದರು

ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್, ಸಿಟಿ ರವಿ, ರಾಜ್ಯಪಾಲ ವಜುಭಾಯ್ ವಾಲಾ, ಜಮೀರ್ ಅಹ್ಮದ್, ಚೆಲುವರಾಯಸ್ವಾಮಿ, ಡಿಕೆ ಶಿವಕುಮಾರ್, ಜಿ ಪರಮೇಶ್ವರ, ಯುಟಿ ಖಾದರ್, ರೇಣುಕಾಚಾರ್ಯ, ಎಚ್ ಕೆ ಪಾಟೀಲ್, ಕೋಗಿಲೆ ಕಂಠದ ಸಾಧು ಕೋಕಿಲಾ, ಅಂಬರೀಶ್ ದಂಪತಿ, ಯಶ್... ಪಟ್ಟಿ ಇನ್ನೂ ದೊಡ್ಡದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lavish wedding of Janardhana Reddy's daughter Brahmani's wedding with Rajeev Reddy of Hyderabad has been appreciated, criticized and mocked on the social media. People are asking when everyone is struggling to get their earned money, how Reddy spent crores of rupees without single exchange.
Please Wait while comments are loading...